ಬುಧವಾರ, ಮೇ 12, 2021
18 °C

ಅಷ್ಟೈಶ್ವರ್ಯ ರಕ್ಷಣೆಗೆ ಹೆಚ್ಚಿರುವ ಕುತೂಹಲ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇರಳದ ಅನಂತಪದ್ಮನಾಭ ದೇವಾಲಯದ ನೆಲಮಾಳಿಗೆಯ `ಬಿ~ ಕೋಣೆಯನ್ನು ತೆಗೆಯುವ ಸಂಬಂಧ ಸುಪ್ರೀಂ ಕೋರ್ಟಿಗೂ ಈಗ ಜಿಜ್ಞಾಸೆ. ಈಗಾಗಲೇ ಆರು ಕೋಣೆಗಳ ಪೈಕಿ ನಾಲ್ಕನ್ನು ಕೇರಳ ಹೈಕೋರ್ಟಿನ ಇಬ್ಬರು ನಿವೃತ್ತ ನ್ಯಾಯಾಧೀಶರ ಸಮ್ಮುಖದಲ್ಲಿ ತೆರೆದಾಗ ಬೆಲೆ ಬಾಳುವ ಅಪಾರ ಬಂಗಾರದ ದೇವರ ವಿಗ್ರಹಗಳು ಮತ್ತು ಆಭರಣಗಳು ದೊರೆತಿವೆ.

 

ಈಗ ಸಮಸ್ಯೆ ಇರುವುದು `ಬಿ~ ಕೋಣೆ ತೆರೆಯುವ ಪ್ರಶ್ನೆ. ಈ ಕೋಣೆಯಲ್ಲಿ ಮತ್ತಷ್ಟು ಬೆಲೆ ಬಾಳುವ ಬಂಗಾರದ ಸಂಪತ್ತು ಇದೆ ಎನ್ನುವ ಮಾತುಗಳಿವೆ.ಈ ಕೋಣೆಯನ್ನು ತೆರೆಯದಂತೆ ದೇವಾಲಯದ ಹಲವು ಭಕ್ತರ ಮನವಿ. ಈ ಕೋಣೆಯನ್ನು ತೆರೆದರೆ ಅನಾಹುತ ಆಗುವುದೆಂಬ ಭಯವನ್ನು ಹುಟ್ಟಿಸಲಾಗಿದೆ. ಈ ಮಧ್ಯೆ 18ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿದ ಮಾರ್ತಾಂಡ ವರ್ಮಾ ರಾಜ ಪರಿವಾರ ಅಷ್ಟಮಂಗಲ ಪ್ರಶ್ನೆ ನಡೆಸಿ ಸುಪ್ರೀಂ ಕೋರ್ಟಿನ ಕೆಂಗಣ್ಣಿಗೆ ಗುರಿಯಾಗಿದೆ.ದೇವಾಲಯದಲ್ಲಿರುವ ಅಷ್ಟೈಶ್ವರ್ಯದ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ನೇಮಿಸಿದ್ದ ತಜ್ಞ ಸಮಿತಿಯ ಶಿಫಾರಸ್ಸಿನ ಸಂಬಂಧ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಬುಧವಾರ ನೀಡುವುದಾಗಿ ಹೇಳಿದೆ. ಈ ಆದೇಶ ಏನು ಎಂಬ ಕುತೂಹಲ ಭಕ್ತ ಸಮೂಹದ್ದು.ಈ ದೇವಾಲಯವನ್ನು ಕೇರಳ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ಕೇರಳ ಹೈಕೋರ್ಟ್ ಈ ಹಿಂದೆಯೇ ತೀರ್ಪು ನೀಡಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ದೇವಾಲಯದ ನೆಲಮಾಳಿಗೆ ಕೋಣೆಗಳನ್ನು ತೆರೆಯುವಂತೆ  ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿರುವುದೇ ಈ ಬೆಳವಣಿಗೆಗೆ ಕಾರಣ.  ಆದರೆ `ಬಿ~ ಕೋಣೆಯನ್ನು ತೆರೆಯುವ ಬಗೆಗೆ ಸುಪ್ರೀಂಕೋರ್ಟ್ ನೀಡುವ ತೀರ್ಪು ಕುತೂಹಲ ಕೆರಳಿಸಿದೆ.`ದೇವಾಲಯದ ಸಂಪತ್ತು ದೇವಾಲಯದಲ್ಲಿಯೇ ಇರಬೇಕು~ ಎನ್ನುವುದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ನಿಲುವು. ಆದರೆ ಮಾಜಿ ಮುಖ್ಯಮಂತ್ರಿ ಅಚ್ಯುತಾನಂದನ್, `ದೇವಾಲಯವನ್ನು ಹೈಕೋರ್ಟಿನ ತೀರ್ಪಿನಂತೆ ರಾಜ್ಯ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಬೇಕು. ಅಲ್ಲಿನ ಆಸ್ತಿಪಾಸ್ತಿ, ಆಭರಣವನ್ನೆಲ್ಲ ಸರ್ಕಾರದ ಸುಪರ್ದಿನಲ್ಲಿ ಸಂರಕ್ಷಿಸಿಡಬೇಕು~ ಎನ್ನುತ್ತಾರೆ.ಕೆಲವೊಮ್ಮೆ ನಂಬಿಕೆಗಳಿಂದ ಒಳಿತಾಗುತ್ತದೆ. ಈ ಮಾತಿಗೆ ತಿರುವನಂತಪುರದ ಅರಸರ ಕುಲದೇವಸ್ಥಾನ ಆಗಿರುವ ಅನಂತ ಪದ್ಮನಾಭ ಸಾಕ್ಷಿ! ಪದ್ಮನಾಭ ಅನಂತ ಶಯನ! ಅನಂತ ಅಂದರೆ ನಾಗ! ಮೂಲತಃ ಇದು ನಾಗನ ಬನ ಇರುವ ಕ್ಷೇತ್ರ. ನಾಗನ ಪರ್ಯಾಯ ನಾಮ ಅನಂತ.ತಿರುವನಂತಪುರದ ರಾಜ ಪರಿವಾರದವರು ಈಗಲೂ ದಿನಾ ಈ ದೇವಸ್ಥಾನಕ್ಕೆ ಬೆಳಿಗ್ಗೆ 8ಗಂಟೆಯ ಮೊದಲು ಹೋಗಿ ಪೂಜೆ ಸಲ್ಲಿಸುವುದು ಪದ್ಧತಿ. ಸಾರ್ವಜನಿಕರು ಈ ದೇವಾಲಯಕ್ಕೆ ದರ್ಶನಾಕಾಂಕ್ಷಿಗಳಾಗಿ ಬರುವ ಮೊದಲು ಇವರು ಪೂಜೆ ಮುಗಿಸಿ ಮರಳುತ್ತಾರೆ. ಇದು ರಾಜ ಪರಿವಾರ ನಡೆಸಿಕೊಂಡು ಬಂದ ಪದ್ಧತಿ. ಬೆಳಿಗ್ಗೆ 8ಗಂಟೆಯ ಮೊದಲು ಇಲ್ಲಿ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ರಾಜಪರಿವಾರದವರು (ಇವರು ಅಳಿಯ ಸಂತಾನದವರು  ಮತ್ತು ಮಾತೃವಂಶೀಯರು) ಈಗಲೂ ಕೇರಳದ ಸಾಂಪ್ರದಾಯಕ ಉಡುಗೆಯಲ್ಲಿ ಮಹಿಳೆಯರು ಮತ್ತು ಪುರುಷರು ತಿರುವನಂತಪುರ ದೇವಸ್ಥಾನದ ಹೆಬ್ಬಾಗಿಲಿನಿಂದ ಪ್ರವೇಶಿಸಿ, ನೇರವಾಗಿ ಗರ್ಭಗುಡಿಯ ಎಡಭಾಗದ ಹಳೆಯ ಅರಮನೆಯ ಬಳಿ ಇರುವ, ನಾಗಬನಕ್ಕೆ (ಕಾವು) ತೆರಳಿ ಅಲ್ಲಿ ಮೊದಲು ಪೂಜೆ ನಡೆಸುತ್ತಾರೆ.ದಟ್ಟ ಗಿಡಬಳ್ಳಿಗಳ ನೋಡಲು ಕಾಡಿನಂತಿರುವ ಹಸಿರು ತುಂಬಿದ ಪುಟ್ಟ ವನ ಇದು. ಈ ಬನಕ್ಕೆ ಅರ್ಚಕ ಮತ್ತು ರಾಜ ಪರಿವಾರಕ್ಕೆ ಮಾತ್ರ ಪ್ರವೇಶ. ರಾಜ ಪರಿವಾರದವರು ಮೊದಲು ಇಲ್ಲಿ ಇರುವ ಕುಲನಾಗನಿಗೆ ಪೂಜೆ ಮುಗಿಸಿ ಬಳಿಕ ಅನಂತ ಪದ್ಮನಾಭನ ಬಳಿಗೆ ಹೋಗಿ ಪೂಜೆ ಮಾಡುತ್ತಾರೆ.ಕೇರಳದ ಅನೇಕ ಕಡೆ ಇರುವಂತೆ ಮೂಲತಃ ಇದು ಶಕ್ತಿ ಕ್ಷೇತ್ರ. ಅನಂತನ ಮೇಲೆ ಪದ್ಮನಾಭ ಪವಡಿಸಿದ್ದು ಅನಂತರದ ಬೆಳೆವಣಿಗೆ ಇರಬಹುದು. ಹೀಗಾಗಿ ಇಲ್ಲಿ ನಾಗನ ಮೇಲೆ ಭಕ್ತಿಯೂ ಇದೆ. ಭಯವೂ ಇದೆ. ಅನಂತ ಶಯನನ ಮುಂದೆ ನಿಂತು ಸ್ಥಳೀಯರು ಪ್ರಾರ್ಥಿಸುವುದು  `ಅಮ್ಮಾ ನಾರಯಣಿ, ಭಗವತಿ~ ಎಂದು.ನಾಗ ನಿಧಿಯ ರಕ್ಷಕ, ನಿಧಿಯ ಕಾವಲುಗಾರ ಎನ್ನುವುದು ಜನಪದ ನಂಬಿಕೆ. ನಾಗ ಇಂತಹ ಅಷ್ಟೈಶ್ವರ್ಯವನ್ನು ಅದರ ಸೂಕ್ತ ಅನುಭೋಗಿಗೆ ಮಾತ್ರ ಬಿಟ್ಟುಕೊಡಬಲ್ಲ. ಇಲ್ಲವಾದಲ್ಲಿ ನಾಗನ ಸಂಪತ್ತಿಗೆ ಕಣ್ಣುಹಾಕಿದವರ ಕಣ್ಣೂ ಉಳಿಯಲಾರದು ಎನ್ನುತ್ತದೆ ನಂಬಿಕೆ. ಇಂತಹ ನಂಬಿಕೆಗಳು ತಿರುವನಂತಪುರದಲ್ಲೂ ಇದೆ.ಅನಂತ ಪದ್ಮನಾಭನ ಹೆಸರಲ್ಲಿ ಅರಸರು ರಾಜ್ಯಭಾರಮಾಡುತ್ತಾರೆ. ಅನೇಕ ಅರಸರು ತಮ್ಮ ರಾಜ್ಯದ ದೇವರ ಹೆಸರಲ್ಲಿಯೇ ಹಸ್ತಾಕ್ಷರ ಮಾಡಿದುದನ್ನು ಸಂಶೋಧಕರು ತೋರಿಸಿಕೊಟ್ಟಿದ್ದಾರೆ. (ಉದಾ: ಹಂಪಿಯ ವಿರೂಪಾಕ್ಷನ ಹೆಸರಲ್ಲಿ ಮತ್ತು ಕಾಶಿಯ ವಿಶ್ವನಾಥನ ಹೆಸರಲ್ಲಿ ಅಂದಿನ ಅರಸರುಗಳು ರಾಜ್ಯಭಾರ ಮಾಡಿದ್ದರು) ಇದು ಅರಸರ ಖಜಾನೆ. ಈ ಐಶ್ಚರ್ಯವನ್ನು ರಕ್ಷಿಸಿಡಲು ದೇವಸ್ಥಾನ ಕಟ್ಟುವಾಗಲೇ ಅಂದಿನ ಅರಸರು ನೆಲಮಾಳಿಗೆ ನಿರ್ಮಿಸಿದ್ದರು.ಈಗಿನ ವಿವಾದದ ಹಿನ್ನೆಲೆಯಲ್ಲಿ `ದೇವಸ್ಥಾನದ ಸಂಪ್ರದಾಯ ಮತ್ತು ಭಕ್ತರ ನಂಬಿಕೆಯನ್ನು ಮಾನ್ಯ ಮಾಡಲಾಗುವುದು~ ಎಂದು ನ್ಯಾಯಾಲಯ ಹೇಳಿರು ವುದರಿಂದ ಭಕ್ತ ಸಮುದಾಯ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಬಹುದೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.