ಅಸಂಘಟಿತ ಕಾರ್ಮಿಕರ ಒಗ್ಗೂಡುವಿಕೆ ಅಗತ್ಯ
ಚಿಕ್ಕಮಗಳೂರು: ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು ಸಂಘಟಿತರಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಬೇಕಾಗಿದೆ ಎಂದು ಸಿ.ಐ.ಟಿ.ಯು. ರಾಜ್ಯ ಘಟಕದ ಅಧ್ಯಕ್ಷ ವಿ.ಜೆ.ಕೆ.ನಾಯರ್ ಮನವಿ ಮಾಡಿದರು.ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿ.ಐ.ಟಿ.ಯು. 40ನೇ ವಾರ್ಷಿಕೋತ್ಸವ ಹಾಗೂ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕಾರ್ಮಿಕ ಚಳವಳಿ ಕುಸಿಯುತ್ತಿದೆ. ಸಮಾಜವಾದ ಸಡಿಲಗೊಳ್ಳುತ್ತಿದೆ ಎಂದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಆದರೆ ಕಾರ್ಮಿಕ ಚಳವಳಿ ಮತ್ತು ಸಮಾಜವಾದ ದೇಶದಲ್ಲಿ ಬಲಿಷ್ಠವಾಗುತ್ತಿದೆ ಎಂದು ತಿಳಿಸಿದರು.ಕಾರ್ಮಿಕ ಸಂಘಟನೆಗಳ ಮಾಲೀಕರ ಪರವಾಗಿ ಕೆಲಸ ಮಾಡಲಾರಂಭಿಸಿದಾಗ ಕಳೆದ 40 ವರ್ಷದ ಹಿಂದೆ ಸಿ.ಐ.ಟಿ.ಯು. ಸ್ಥಾಪನೆಗೊಂಡಿತು. ಕಾರ್ಮಿಕರ ಹಿತಕಾಪಾಡುವುದೇ ಕಾರ್ಮಿಕ ಸಂಘಟನೆಗಳ ಮುಖ್ಯ ಗುರಿಯಾಗಬೇಕು. ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದರಿಂದ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಮಿಕರ ಪರ ಕಾರ್ಯಕ್ರಮ ರೂಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿ, ಶೋಷಣೆ ಅಧಿಕಗೊಳ್ಳುತ್ತಿರುವುದರಿಂದ ಕಾರ್ಮಿಕ ಸಂಘಟನೆಗಳು ಜನಪರ ಹೋರಾಟಕ್ಕೆ ಮುಂದಾಗಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.ಕಾರ್ಮಿಕರ ಹಿತ ಕಾಪಾಡುವುದೇ ಕೆಂಬಾವುಟದ ಮುಖ್ಯ ಆಶಯ ಆದರೆ ಜಿಲ್ಲೆಯಲ್ಲಿ ಕೆಂಬಾವುಟ ಕಾರ್ಮಿಕರಿಗೆ ತುಂಬಾ ತೊಂದರೆಯನ್ನುಂಟು ಮಾಡುತ್ತಿದೆ ಎಂದು ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿದೆ ಇದರ ಬಗ್ಗೆ ಕಾರ್ಮಿಕರ ಎಚ್ಚರವಹಿಸಬೇಕೆಂದು ಸಲಹೆ ನೀಡಿದರು.
ದೇಶದಲ್ಲಿ ಸಮರ್ಪಕ ತೆರಿಗೆ ವಸೂಲಾತಿ ಆಗದೆ ಇರುವುದರಿಂದ ಶೇ. 45ರಷ್ಟು ಆದಾಯ ಬಂಡವಾಳ ಶಾಹಿಗಳ ಪಾಲಾಗುತ್ತಿದೆ. ಶೇ.12ರಷ್ಟು ಮಾತ್ರ ಕಾರ್ಮಿಕರ ಪಾಲಾಗಿದೆ. ಆದರೆ ಉಳಿದ ಶೇ.43ರಷ್ಟು ಆದಾಯ ಸಮಾಜದ ಉತ್ತಮ ಕೆಲಸಗಳಿಗೆ ವಿನಿಯೋಗವಾಗುತ್ತಿಲ್ಲ ಎಂದರು.
ರಾಜ್ಯ ಸರ್ಕಾರ 2 ರೂಪಾಯಿಗೆ ಬಡವರಿಗೆ ಅಕ್ಕಿ ನೀಡಲು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿ, ಸೂರು ಇಲ್ಲದವರಿಗೆ ಸೂರು ಕಲ್ಪಿಸಲು ಮುಂದಾಗಬೇಕಿದೆ ಎಂದು ಹೇಳಿದರು.
ಸಿ.ಐ.ಟಿ.ಯು. ಜಿಲ್ಲಾ ಘಟಕದ ಅಧ್ಯಕ್ಷ ವಿ.ಸುಕುಮಾರ್ ಮಾತನಾಡಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಡವರು ಬಡವರಾಗಿದ್ದಾರೆ. ಸಿರಿವಂತರು ಮತ್ತಷ್ಟು ಸಿರಿವಂತರಾಗಿದ್ದಾರೆ. ಸಮಾಜವಾದ ಸ್ಥಾಪನೆಯಿಂದ ಮಾತ್ರ ನೆಮ್ಮದಿ ಜೀವನ ಸಾಧ್ಯ. ಐಕ್ಯ ಹೋರಾಟದಿಂದ ಮಾತ್ರ ಕಾರ್ಮಿಕರ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಓ.ಎಲ್.ಮಹೇಂದ್ರ ಮಾತನಾಡಿ, ಅಸಮಾನತೆ, ಸಮಸ್ಯೆ ವಿರುದ್ಧದ ದನಿ ಕ್ಷೀಣಿಸಿರುವುದರಿಂದ ಸಮಾಜದಲ್ಲಿ ದೊಡ್ಡ ಅನಾಹುತ ಕಾದಿದೆ ಎಂದು ಎಚ್ಚರಿಸಿದರು. ಅನ್ಯಾಯದ ವಿರುದ್ಧ ಹೋರಾಟ ನಡೆಸುವ ಮನೋಭಾವ ಜನರಲ್ಲಿ ಇಲ್ಲವಾಗಿದೆ. ಹಾಗಾಗಿ ತೋರಿಕೆ ಹೋರಾಟಗಳಿಗೆ ಬೆಲೆ ಇಲ್ಲದಂತಾಗಿದೆ ಎಂದರು. ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಧರ್ಮೇಶ್, ಕಾರ್ಮಿಕ ಸಂಘಟನೆ ಮುಖಂಡ ವಿಶ್ವನಾಥ, ಧರಣೇಂದ್ರ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.