ಸೋಮವಾರ, ಜನವರಿ 20, 2020
27 °C

ಅಸಮಾನತೆ ತೊಲಗಿಸದಿದ್ದರೆ ಅನೈಕ್ಯ-ಅಂಬೇಡ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೃಹತ್ ರಾಷ್ಟ್ರವಾದ ಭಾರತ 62 ವರ್ಷಗಳ ಹಿಂದೆ ಸರ್ವತಂತ್ರ ಸ್ವತಂತ್ರ ಗಣರಾಜ್ಯವಾಗಿ ತನ್ನದೇ ಆದ ಸಂವಿಧಾನವನ್ನು ರಚಿಸಿಕೊಂಡು ಜನವರಿ 26 2012ಕ್ಕೆ 62 ವರ್ಷಗಳನ್ನು ಪೂರೈಸಿ, 63ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಸಂವಿಧಾನದ ರಚನೆ, ಸ್ವರೂಪ  ಮತ್ತಿತರ ಅಂಶಗಳ ಬಗ್ಗೆ ಜನತೆ ನೆನಪು ಮಾಡಿಕೊಳ್ಳುವುದು ಕುತೂಹಲಕಾರಿ.ಸುಮಾರು ಎರಡು ಶತಮಾನಗಳ ಕಾಲ ಭಾರತವನ್ನಾಳಿದ ಬ್ರಿಟಿಷರು ಭಾರತದಲ್ಲಿ  ತಮ್ಮ ಆಳ್ವಿಕೆಯನ್ನು ಕೊನೆಗೊಳಿಸಲು 1947ರಲ್ಲಿ ಭಾರತದ ಸ್ವಾತಂತ್ರ ಶಾಸನವನ್ನು ರೂಪಿಸಿದರು.ಅದರ ಪ್ರಕಾರ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಗಿ ತಮ್ಮದೇ ಆದ ಸ್ವತಂತ್ರ ಸಂವಿಧಾನವನ್ನು ರಚಿಸಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಆದರೆ, ಭಾರತ ಈ ಕಾಯ್ದೆ ಬರುವ ಮೊದಲೇ ಅಂದರೆ 1946ರಲ್ಲಿಯೇ ತನ್ನ ಸಂವಿಧಾನ ರಚನಾ ಸಮಿತಿಯನ್ನು ರಚನೆ ಮಾಡಿಕೊಂಡಿತು. 1946ರಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಮಿಷನ್ ಪ್ಲಾನ್ ಪ್ರಕಾರ ದೇಶಕ್ಕೆ ಪ್ರತ್ಯೇಕ ಸಂವಿಧಾನವನ್ನು ರೂಪಿಸುವ ಈ ಸಮಿತಿಯ ಮೊದಲ ಸಮಾವೇಶ 1946 ಡಿಸೆಂಬರ್ 9ರಂದು, ಎರಡನೇ ಸಮಾವೇಶ 1947 ಆಗಸ್ಟ್ 14ರಂದು ನಡೆದವು. 1974ರ ನಂತರ ಸಂವಿಧಾನ ರಚನೆಯ ಮೂರು ವರ್ಷಗಳ ಅವಧಿಯಲ್ಲಿ  ಭಾರತ ಅನೇಕ ಅಡೆತಡೆಗಳನ್ನು ಎದುರಿಸಬೇಕಾಯಿತು.ಬ್ರಿಟಿಷ್ ಕ್ಯಾಬಿನೆಟ್ ಮಿಷನ್ ಭಾರತದ ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ರಚಿಸಿದ ಸಂವಿಧಾನ ರಚನಾ ಸಮಿತಿಗೆ ಪರೋಕ್ಷ ಚುನಾವಣೆಯ ಮುಖಾಂತರ ಸದಸ್ಯರನ್ನು ಭಾರತದ ವಿವಿಧ ಪ್ರಾಂತ್ಯಗಳ ಶಾಸನ ಸಭೆಗಳ ಪ್ರತಿನಿಧಿಗಳು ಆಯ್ಕೆ ಮಾಡಿದರು.ಬ್ರಿಟಿಷ್ ಭಾರತದ ಪ್ರಾಂತ್ಯಗಳಿಗೆ 296 ಸ್ಥಾನಗಳನ್ನು, ಸಂಸ್ಥಾನಿಕ ಪ್ರತಿನಿಧಿಗಳಿಗೆ 93 ಸ್ಥಾನಗಳನ್ನು ಮೀಸಲಿಡಲಾಯಿತು. ಒಟ್ಟು 389 ಸದಸ್ಯರನ್ನೊಳಗೊಂಡ ಸಂವಿಧಾನ ಸಮಿತಿ ರಚನೆಯಾಯಿತು.ಡಾ.ರಾಜೇಂದ್ರ ಪ್ರಸಾದ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ, ಟಿ.ಟಿ. ಕೃಷ್ಣಮಾಚಾರಿ ಮತ್ತು ಎಚ್.ಸಿ.ಮುಖರ್ಜಿ ಅವರನ್ನು ಉಪಾಧ್ಯಕ್ಷರನ್ನಾಗಿ, ಸರ್ದಾರ ವಲ್ಲಭ ಭಾಯಿ ಪಟೇಲರನ್ನು ಮೂಲಭೂತ ಹಕ್ಕುಗಳ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.ಅಂಬೇಡ್ಕರ್ ಮತ್ತು ಕರಡು ಸಮಿತಿ: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಗೆ ಪಶ್ಚಿಮ ಬಂಗಾಳದಿಂದ ಆಯ್ಕೆ ಮಾಡಲಾಯಿತು. ಕರಡು ಸಮಿತಿಯ ಸಲಹೆಗಾರರು ಬಿ.ಎನ್.ರಾವ್. ಕರಡು ಸಿದ್ಧಪಡಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಆಗಸ್ಟ್ 29, 1947ರಲ್ಲಿ ರಚಿಸಲಾಯಿತು.

 

ಮಹಾನ್ ಮೇಧಾವಿಯಾಗಿದ್ದ ಅಂಬೇಡ್ಕರ್ ಸಂವಿಧಾನದ ಕರಡು ಪ್ರತಿ ಸಿದ್ಧಪಡಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಕರಡು ಸಂವಿಧಾನವನ್ನು ಸಿದ್ಧಪಡಿಸಿದರು, ಹಾಗಾಗಿ ಅವರನ್ನು ಡಾ.ಎಂ.ವಿ. ಪೈಲಿ ಅವರು  `ಸಂವಿಧಾನದ ಜನಕ~ ಎಂದು ಕರೆದಿರುವುದು ಸಮಂಜಸವಾಗಿದೆ.ಅವರ ಜೊತೆಗೆ ಸುಚೇತಾ ಕೃಪಲಾನಿ, ವಿಜಯಲಕ್ಷ್ಮಿ ಪಂಡಿತ್, ಸರೋಜಿನಿ ನಾಯ್ಡು ಮತ್ತಿತರರು ಸೇವೆ ಸಲ್ಲಿಸಿದರು. ಸುಮಾರು ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳ ನಿರಂತರ ಶ್ರಮದಿಂದ ಸಂವಿಧಾನದ ಪ್ರಾಥಮಿಕ ಕರಡನ್ನು ಸಿದ್ಧಪಡಿಸಲಾಯಿತು.ಈ ಮೂರು ವರ್ಷಗಳ ಅವಧಿಯಲ್ಲಿ 6.4 ಕೋಟಿ ಹಣ ಇದಕ್ಕೆ ವೆಚ್ಚವಾಯಿತು. ಸುಮಾರು 114 ದಿನಗಳ ಕಾಲ ಕರಡು ಸಂವಿಧಾನದ ಬಗ್ಗೆ ಚರ್ಚೆ ನಡೆದು ನವೆಂಬರ್ 26, 1949ರಂದು ಅಂಗೀಕರಿಸಲಾಯಿತು.395 ವಿಧಿಗಳು, 8 ಅನುಸೂಚಿಗಳು, 22 ಅಧ್ಯಾಯಗಳಿಂದ ಕೂಡಿದ ಸಂವಿಧಾನವು ಜನವರಿ 26, 1950ರಂದು ಜಾರಿಗೆ ಬಂದಿತು. ಸಂವಿಧಾನ ಅಂಗೀಕರಿಸುವ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ದೇಶದ ಜನತೆಗೆ ಒಂದು ಸಂದೇಶ ಸಾರಿದರು:`ಇಂದು ನಮ್ಮ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಬಂದಿದೆ, ಗಣರಾಜ್ಯ ಸ್ಥಾಪನೆ ಆಗುತ್ತದೆ. ಕೆಲವರು ಸಂವಿಧಾನ ಒಳ್ಳೆಯದು ಎನ್ನುತ್ತಾರೆ, ಇನ್ನೂ ಕೆಲವರು ಒಳ್ಳೆಯದಲ್ಲ ಎನ್ನುತ್ತಾರೆ. ಒಂದು ಸಂವಿಧಾನ ಒಳ್ಳೆಯದು ಅಥವಾ ಕೆಟ್ಟದು ಆಗುವುದು, ಅದರಲ್ಲಿ ಏನು ಬರೆದಿದ್ದಾರೆ ಎನ್ನುವುದರಿಂದಲ್ಲ.ಅದು ಒಳ್ಳೆಯದು, ಕೆಟ್ಟದು ಆಗುವುದು ಅದನ್ನು ಆಚರಣೆಯಲ್ಲಿ ತರುವ ಜನರಿಂದ. ಅವರು ಒಳ್ಳೆಯವರಾದರೆ ಒಳ್ಳೆಯ ಸಂವಿಧಾನ, ಕೆಟ್ಟವರಾದರೆ ಕೆಟ್ಟ ಸಂವಿಧಾನ~ ಎಂಬುದು ಅವರ ಸಂದೇಶದ ಸಾರವಾಗಿತ್ತು.ವಿವಿಧ ರಾಷ್ಟ್ರಗಳ ಸಂವಿಧಾನದಿಂದ ಎರವಲು ಪಡೆದ ಅಂಶಗಳು ಹೀಗಿವೆ: ಮೂಲಭೂತ ಹಕ್ಕುಗಳು (ಅಮೆರಿಕಾ ಸಂವಿಧಾನ), ಸಂಸದೀಯ ಸರ್ಕಾರ ಪದ್ಧತಿ (ಇಂಗ್ಲೆಂಡ್), ರಾಜ್ಯ ನಿರ್ದೇಶಕ ತತ್ವಗಳು (ಐರ‌್ಲೆಂಡ್), ಮೂಲಭೂತ ಕರ್ತವ್ಯಗಳು (ರಷ್ಯ) ಮತ್ತು ಕೇಂದ್ರ ಸರ್ಕಾರ ವಿಭಜನೆ (ಕೆನಡಾ). 1949 ರಲ್ಲಿ ಅಂಬೇಡ್ಕರ್ ಅವರು ತಮ್ಮ ಕೊನೆಯ ಭಾಷಣದಲ್ಲಿ  ಮತ್ತೊಂದು ಎಚ್ಚರಿಕೆಯ ಮಾತನ್ನು ಹೇಳಿದ್ದರು: `ಬಹುಕಾಲದಿಂದ ನಾವು ಸ್ವತಂತ್ರರಾಗಿದ್ದೆವು. ಈಗ ಸ್ವಾತಂತ್ರ್ಯ ಪಡೆದಿದ್ದೇವೆ. ನನಗಿರುವ ಅಂಜಿಕೆ ಮತ್ತು ಸಂದೇಹ ಏನೆಂದರೆ ಈ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಳುತ್ತೇವೆಯೇ?

 

ನಾವು ಈ ದೇಶದಲ್ಲಿರುವ ಜಾತಿ, ಮತ, ಪಂಥ ಅಸಮಾನತೆಯನ್ನು ತೊಲಗಿಸದಿದ್ದರೆ ಅನೈಕ್ಯತೆ ಉಂಟಾಗಿ ಮತ್ತೆ ನಾವು ದಾಸ್ಯದಲ್ಲಿ ಬಿದ್ದು ಹೋದೇವು. ಅಂತಹ ಕಾಲ ಬಾರದಿರಲಿ ಎಂದು ನಾನು ಆಶಿಸುತ್ತೇನೆ~.ಇಂದು ಪ್ರತಿಯೊಬ್ಬ ಭಾರತೀಯ ವಿಚಾರವಂತ ಪ್ರಜೆ ನಮ್ಮ ದೇಶದ ಬಗ್ಗೆ ಚಿಂತಿಸಿ ಗಣರಾಜ್ಯದ ರಚನೆ ಮತ್ತು ರಚನೆಯಲ್ಲಿ ಶ್ರಮ ವಹಿಸಿದ ಆದರ್ಶ ವ್ಯಕ್ತಿಗಳ ತತ್ವ, ನಿಷ್ಠೆಗಳ ಬಗ್ಗೆ ಸಂವಿಧಾನದಲ್ಲಿ ಅಳವಡಿಸಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಚಿಂತಿಸಬೇಕಾಗಿದೆ.

ಪ್ರತಿಕ್ರಿಯಿಸಿ (+)