ಶನಿವಾರ, ಫೆಬ್ರವರಿ 22, 2020
19 °C

ಅಸಾಧಾರಣ ಪ್ರತಿಭೆಯ ‘ನಮ್ಮ ರಾಜಾರಾವ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಸಾಧಾರಣ ಪ್ರತಿಭೆಯ ‘ನಮ್ಮ ರಾಜಾರಾವ್’


‘ಭಾರತೀಯ ಇಂಗ್ಲಿಷ್‌ ಸಾಹಿತ್ಯ’ದ ಸವ್ಯಸಾಚಿಗಳಲ್ಲಿ ಹಾಸನದ ರಾಜಾರಾವ್‌ ಪ್ರಮುಖರು. ಅವರು ಸೃಷ್ಟಿಸಿದ ‘ಕಾಂತಾಪುರ’ ಇಂಗ್ಲಿಷ್‌ನಲ್ಲಿದ್ದರೂ, ಅದು ಅಪ್ಪಟ ಕನ್ನಡ ಮಣ್ಣಿನ ಕೃತಿ. ಬರುವ ಜುಲೈ 8ಕ್ಕೆ ರಾಜಾರಾಯರು ನಿಧನರಾಗಿ ಹತ್ತು ವರ್ಷ ತುಂಬುತ್ತದೆ.

ಭಾರತದ  ಸಮಕಾಲಿನ ಇಂಗ್ಲಿಷ್ ಕಾದಂಬರಿಕಾರರಲ್ಲಿ ಅತಿ ಮುಖ್ಯರಾದವರು ನಮ್ಮವರೇ ಆದ ರಾಜಾರಾವ್. ಹಾಸನದ (ಹಳೇ ಮೈಸೂರು ಸಂಸ್ಥಾನದ) ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ (ನ. 8, 1908) ಅವರು, ತಮ್ಮ ತಾತನವರ ಅಪಾರವಾದ ಸಂಸ್ಕೃತ ವಿದ್ವತ್ತನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ರೂಢಿಸಿಕೊಂಡವರು. ಅಧ್ಯಾತ್ಮದಲ್ಲಿ ಅಚಲ ನಂಬಿಕೆಯನ್ನಿಟ್ಟು ಅದನ್ನೇ ತಮ್ಮ ಕೃತಿಗಳ ತಳಹದಿ ಎಂದು ಭಾವಿಸಿದ್ದರು.

ಹೈದರಾಬಾದ್ ಮತ್ತು ಆಲಿಗಢದಲ್ಲಿ ಅಭ್ಯಾಸ ಮಾಡಿ, 1929ರಲ್ಲಿ ಪದವಿ ಪಡೆದ ಮೇಲೆ ‘ಏಷ್ಯಾಟಿಕ್ ಸ್ಕಾಲರ್‌ಶಿಪ್’ ಪಡೆದ ರಾಜಾರಾವ್‌ ಅವರು, ಉನ್ನತ ವಿದ್ಯಾಭ್ಯಾಸಕ್ಕಾಗಿ ಫ್ರಾನ್ಸ್‌ಗೆ ತೆರಳಿದರು. ಅವರನ್ನು ಸರ್ ಪ್ಯಾಟ್ರಿಕ್ ಗಿಡಿಸ್ ಅವರು ಮಾಂಟಪಲಿಯರ್ ವಿಶ್ವವಿದ್ಯಾಲಯಕ್ಕೆ ಬರ ಮಾಡಿಕೊಂಡರು. ಅವರು ಅನಂತರ ಹೆಸರಾಂತ ಸೋರ್ಬಾನ್‌ನಲ್ಲಿ ವ್ಯಾಸಂಗ ಮಾಡಿದರು.

ಅಂದಿನ ದಿನಗಳಲ್ಲಿ ಕನ್ನಡದಲ್ಲಿ ಬರವಣಿಗೆ ಮಾಡುತ್ತಿದ್ದ ರಾಜಾರಾಯರು, ತಮ್ಮ ಪ್ರಖ್ಯಾತ ಕಥೆಗಳಾದ ‘ಅಕ್ಕಯ್ಯ’ ಮತ್ತು ‘ಜಾವ್ನಿ’ಗಳನ್ನು ಫ್ರೆಂಚ್‌ನಲ್ಲಿ ಪ್ರಕಟಿಸಿದರು. ಅವರ ಕೆಲವು ಕಥೆಗಳು ಅಂತರರಾಷ್ಟ್ರೀಯ ಪುರವಣಿಗಳಲ್ಲಿ ಪ್ರಕಟಗೊಂಡವು.

1938ರಲ್ಲಿ ಅವರ ಮೊದಲನೆ ಕಾದಂಬರಿ ‘ಕಾಂತಾಪುರ’ ಹೊರಬಂದಿತು. ಮತ್ತೆ 1960ರಲ್ಲಿ ಅವರ ಪ್ರಖ್ಯಾತ ಪುಸ್ತಕ ‘The Serpent and the Rope’ ಪ್ರಕಟವಾಗುವವರೆಗೂ ಬೇರೆ ಯಾವ ಕೃತಿಯೂ ಹೊರಬರಲಿಲ್ಲ. ಅದು ಅವರ ಅಧ್ಯಾತ್ಮ ಚಿಂತನೆಯ ಗುರುವಿನ ಅನ್ವೇಷಣೆಗೆ ಮೀಸಲಾಯಿತು. ರಮಣ ಮಹರ್ಷಿ, ಪಂಡಿತ ತಾರಾನಾಥ್ ಹಾಗೂ ಅರವಿಂದರನ್ನು ಭೇಟಿ ಮಾಡಿ, ಗಾಂಧೀಜಿಯ ಸೇವಾಗ್ರಾಮದಲ್ಲಿ ಇದ್ದರೂ ಗುರುವಿನ ಅನುಗ್ರಹ ಆಗಲಿಲ್ಲ.

ಕಡೆಗೆ 1943ರಲ್ಲಿ ಅವರ ಗುರುಗಳಾದ ಶ್ರೀ ಆತ್ಮಾನಂದರನ್ನು ತಿರುವಾಂಕೂರಿನಲ್ಲಿ ದರ್ಶನ ಮಾಡಿ, ಜೀವನವಿಡೀ ಗುರುಕೃಪೆಗೆ ಪಾತ್ರರಾದರು. ಬರವಣಿಗೆಯನ್ನು ನಿಲ್ಲಿಸಬೇಕು ಎಂದುಕೊಂಡಿದ್ದ ರಾಜಾರಾವ್ ಅವರಿಗೆ, ಬರವಣಿಗೆ ಮುಂದುವರೆಸಲು ಗುರುಗಳು ಉಪದೇಶ ಮಾಡಿದರು. ಹಾಗಾಗಿ ‘The Cow of the Barricades’ ಮತ್ತು ‘The Serpent and the Rope’ ಹೊರಬಂದವು. ‘The Cat and Shakespeare’ 1976ರಲ್ಲಿ  ಪ್ರಕಟವಾಯಿತು. 

ಟೆಕ್ಸಾಸ್ ವಿಶ್ವವಿದಲಯಾದಲ್ಲಿ ಪ್ರಾಧ್ಯಾಪಕರಾಗಿ 1980ರವರೆಗೂ ಸೇವೆ ಸಲ್ಲಿಸಿದ್ದ ರಾಜಾರಾವ್, ಆ ಸಮಯದಲ್ಲೇ ‘The Chessmaster and His moves’ (1988) ಪ್ರಕಟಿಸಿದರು. ಪ್ರತಿಷ್ಠಿತ ನ್ಯೂಸ್‌ಡಾಟ್ ಪ್ರಶಸ್ತಿ ಅವರಿಗೆ ಲಭಿಸಿತು.

ರಾಜಾರಾವ್ ಅವರ ಮೊದಲ ಕಾದಂಬರಿ ‘ಕಾಂತಾಪುರ’ (1938) ಒಂದು ಪವಾಡಸದೃಶ ಕೃತಿ.  26ನೇ ವಯಸ್ಸಿನ ಲೇಖಕ ಇಡೀ ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಕತೆಯ ರೂಪದಲ್ಲಿ ನಿರೂಪಿಸಿರುವುದು ಕಡಿಮೆ ಸಾಧನೆಯಲ್ಲ. ಹಳ್ಳಿ ಜೀವನದ ಸೊಗಡು, ಆಳವಾಗಿ ಬೇರು ಬಿಟ್ಟ ಸಂಸ್ಕೃತಿಯ ಶಕ್ತಿ, ಸಾಂಪ್ರಾದಾಯಿಕ ಜೀವನ, ವ್ಯಕ್ತಿಚಿತ್ರಗಳು, ಪ್ರಕೃತಿ, ಕೆರೆ ಕಟ್ಟೆ, ನದಿ, ದೇವಸ್ಥಾನ ಅರಳಿಕಟ್ಟೆ. ಮಹಿಳಾವಿಕಾಸ– ಏನೆಲ್ಲವನ್ನು ಆಡುಭಾಷೆಯಲ್ಲಿ, ಇಂಗ್ಲಿಷ್ ಅನ್ನುವುದು ಕನ್ನಡವೇನೋ ಅಂದುಕೊಳ್ಳಬಹುದಾದ ಶೈಲಿಯಲ್ಲಿ ಬರೆದಿದ್ದಾರೆ. 

‘ಕಾಂತಾಪುರ’ ಭಾರತದ ಎಲ್ಲಾ ಹಳ್ಳಿಗಳ, ಹಳ್ಳಿಜೀವನದ ಪ್ರತೀಕ. ಜಾತಿಪದ್ಧತಿ, ಅಸಮಾನತೆ, ಪೊಲೀಸರ ದುರ್ನಡತೆ, ಬ್ರಿಟಿಷ್ ಸರ್ಕಾರದ ದಬ್ಬಾಳಿಕೆ– ಇವೆಲ್ಲವೂ ನಿತ್ಯ ಜೀವನದ ಅನುಭವಗಳಾಗಿದ್ದರೂ ಸ್ವಾತಂತ್ರ್ಯದ ಕ್ರಾಂತಿಯಿಂದ ಒಗ್ಗಟ್ಟಿನ ಭಾವನೆ ಜನಜೀವನದಲ್ಲಿದೆ. ಹಳ್ಳಿಗಾಡಿನ ಪ್ರಕೃತಿಸೌಂದರ್ಯದ ವಿವರಣೆ, ಅಲ್ಲಿ ಬರುವ ಪಾತ್ರಗಳ ವೈವಿಧ್ಯ (ಭಟ್ಟ, ಬಡೆಖಾನ್, ರಂಗೇಗೌಡ, ಮೂರ್ತಿ, ರತ್ನ, ಮೂಗು ತುರಿಸಿಕೊಳ್ಳುವ ನಂಜಮ್ಮ, ಜಲಪಾತದ ಜಯಮ್ಮ) ಕಾಂತಾಪುಕ್ಕೆ ಅಪೂರ್ವ ಶೋಭೆ ತಂದುಕೊಟ್ಟಿದೆ.

‘The Serpent and the Rope’ ವಿಸ್ತಾರವಾದ ನಕ್ಷೆಯುಳ್ಳ ಕೃತಿ. ಪೂರ್ವ ಪಶ್ಚಿಮಗಳ ಮಿಲನ, ಹೆಣ್ಣು–ಗಂಡು ಸಂಬಂಧ, ಜೀವನದ ಮೌಲ್ಯಗಳು, ಪುರುಷಾರ್ಥಗಳ ಅನ್ವೇಷಣೆ ಈ ಕೃತಿಯ ಕೇಂದ್ರಬಿಂದು. ರಾಮ–ಮ್ಯಾಡಲೀನ್, ಪುರುಷ–ಪ್ರಕೃತಿ, ಹಾವು–ಹಗ್ಗ, ಸತ್ಯ–ಮಿಥ್ಯೆ, ವಾರಣಾಸಿ–ಪ್ಯಾರಿಸ್, ವೈರಾಗ್ಯ–ಇಂದ್ರಿಯ ಬಂಧನ, ಮುಂತಾದ ವೈರುಧ್ಯಗಳು ಈ ಕೃತಿಯಲ್ಲಿವೆ.

ಜೀವನದ ಯಾತ್ರಿಕನಾದ ರಾಮ ಈ ಕಾದಂಬರಿಯಲ್ಲಿ ಹೇಗೆ ಸಾಧಕನಾಗುತ್ತಾನೆ ಎಂಬುದನ್ನು ನಾವು ಕಾದಂಬರಿಯುದ್ದಕ್ಕೂ ಗಮನಿಸಬೇಕಾದ್ದು,  ಈ ಮಾರ್ಗ ಬಹಳ ಕಠಿಣವಾದುದ್ದು ಎಂದು ತಿಳಿದೇ ಕೊನೆಗೆ ತಿರುವಾಂಕೂರಿನಲ್ಲಿ ತನ್ನ ಗುರುವಿನ ಸಾನ್ನಿಧ್ಯಕ್ಕೆ ತೆರಳುತ್ತಾನೆ.  ಈ ಕಾದಂಬರಿ ಎಷ್ಟು ಪ್ರಭಾವಶಾಲಿ ಎಂದರೆ, ನಮ್ಮ ಪುರಾತನ ಸಂಸ್ಕೃತಿಯ ಒಳ ಅರ್ಥ ಪಾಶ್ಚಿಮಾತ್ಯ ಓದುಗನಿಗೆ ಮಾತ್ರ ಅಲ್ಲ, ನಮ್ಮ ಓದುಗರಿಗೇ ಬೇಕಾದ ಅವಶ್ಯಕತೆಯನ್ನು ಬಹಳ ಮಟ್ಟಿಗೆ ಪೂರೈಸಿತು.

Lawrence Durrell ಎಂಬ ಬರಹಗಾರ ರಾಜಾರಾವ್ ಅವರಿಗೆ ಪತ್ರ ಬರೆದು: ‘ನೀವು ಇಂಗ್ಲಿಷ್ ಭಾಷೆಯನ್ನೇ ಸಮೃದ್ಧಿ ಮಾಡಿದ್ದೀರಿ’ ಎಂದು ಪ್ರಶಂಸಿಸಿದ್ದಾರೆ. ಆದರೆ ರಾಜಾರಾವ್ ಅವರೇ ಸ್ವತಃ ಈ ಕೃತಿಯನ್ನು ಅಷ್ಟಾಗಿ ಮೆಚ್ಚಿಕೊಂಡಿರಲಿಲ್ಲ. ಒಂದು ದಿನ ನಮ್ಮಲ್ಲಿ ತಂಗಿದ್ದಾಗ ರಾಜಾರಾವ್ ನನ್ನನ್ನು ಕೇಳಿದರು: ‘The Cat and Shakespeare ಓದಿದ್ದಿಯಾ?’. ಸದ್ಯ, ನಾನು ಆಗಷ್ಟೇ ಆ ಕೃತಿಯನ್ನು ಓದಿ ಮುಗಿಸಿದ್ದೆ.

‘ಆ ಕೃತಿಯ ಬಗ್ಗೆ ನಿನಗೆ ಏನು ಅನ್ನಿಸುತ್ತೆ?’ ಅಂದರು. ಅಷ್ಟು ಹಿರಿಯ ಸಾಹಿತಿಗೆ ಹೇಗೆ ಪ್ರತಿಸ್ಪಂದಿಸಬೇಕೋ ಗೊತ್ತಾಗಲಿಲ್ಲ. ‘The Serpent and the Ropeಗಿಂತ  ಚೆನ್ನಾಗಿದೆ, ತುಂಬಾ ಡೆಪ್ತ್‌’ ಇದೆ ಎಂದು ಅಳುಕಿನಿಂದಲೇ ಹೇಳಿದೆ. ಅವರಿಗೆ ಬಹಗಳ ಖುಷಿಯಾಯಿತು. ‘ಹೌದು, ಹೌದು. The Serpent and the Rope ಎಷ್ಟೇ ಆಗಲಿ Juvenile ಕಣಯ್ಯ’ ಅಂದರು. 

‘The Serpent and the Rope’ನಲ್ಲಿ ಅಧ್ಯಾತ್ಮದ ಚರ್ಚೆಗಳು, ಸಂಭಾಷಣೆಗಳು ಬೇಕಾದಷ್ಟು ಅಲ್ಲಲ್ಲಿ ಬಂದು ಕಾದಂಬರಿಯ ಹುರಿಗಂಟನ್ನು ಸಡಿಲಗೊಳಿಸುತ್ತದೆ. ಅದು ಯಾವ ನಿರ್ಣಯವೂ ಇಲ್ಲದೆ ಬರೇ ಸಾಂಕೇತಿಕವಾಗಿ ಉಳಿಯುತ್ತದೆ. ಶಂಕರನ ಅದ್ವೈತ ಇಡೀ ಕೃತಿಯ ಸಾರವಾಗಿ ರಾಜಾರಾವ್ ಅವರ ವಿಶ್ವದೃಷ್ಟಿಯನ್ನು ಪೋಷಿಸಿರುವ ಶಕ್ತಿ. ರಾಮ ಇದರ ಪ್ರಜ್ಞೆಯನ್ನು ಹೊಂದಲು ತನ್ನ ಜೀವನವನ್ನೇ ಮುಡಿಪಾಗಿರುವ ಸಾಧಕ.

ಮ್ಯಾಡಲೀನ್ ಯಾವ ಹಿಂದೂ ಸನಾತನ ಭಾವನೆಗೆ ಮೊದಲು ಮಾರುಹೋಗಿರುತ್ತಾಳೋ ಅದನ್ನೇ ತ್ಯಜಿಸಿ ತಾಂತ್ರಿಕ ಬೌದ್ಧ ಸಿದ್ಧಾಂತವನ್ನು ಅನುಸರಿಸುತ್ತಾಳೆ. ಆದರೆ ಅವಳಲ್ಲಿ ರಾಮನ ಹಾಗೆ ಅನುಕಂಪವಿಲ್ಲ. ಒಟ್ಟಿನಲ್ಲಿ ‘The Serpent and the Rope’ ಒಂದು ಅಸಾಧಾರಣವಾದ, ಅನನ್ಯವಾದ ಕಾದಂಬರಿ.

‘The Cat and Shakespeare’ ಕೃತಿ ಹೆಸರಿಗೆ ತಕ್ಕಂತೆ ಪ್ರೌಢತೆ ಹೊಂದಿದೆ. ‘ಭಾಷೆ ಸರಳ, ಕಲ್ಪನೆ ಬ್ರಹ್ಮಾಂಡ’ ಎನ್ನಬಹುದಾದ  ಇದೊಂದು ಮಹತ್ತರವಾದ ಕಾದಂಬರಿ. ಚಿಕ್ಕದಾದರೂ ಬಹಳ ಪ್ರೌಢವಾದ, ಗಹನವಾದ ಗಂಭೀರ ಕೃತಿ. ಈ ಕಾದಂಬರಿಯ ಪೈ ಮೂರು ಅಂತಸ್ತಿನ ತನ್ನ ಮನೆ– ಅಂದರೆ, ತಾಮಸ, ರಾಜಸ, ಸಾತ್ವಿಕ ಎಂದೇ ಕಲ್ಪನೆ ಮಾಡುತ್ತಾನೆ. ಇದೊಂದು ಕೊನೆ ಇಲ್ಲದ ಕಥೆ.  ಇಲ್ಲಿ ಬ್ರಹ್ಮ ಜ್ಞಾನವನ್ನೇ ಆಗಲಿ, ಅಧ್ಯಾತ್ಮ ಪ್ರಜ್ಞೆಯನ್ನೇ ಆಗಲಿ ಹುಡುಕುವ ಆತಂಕವಿಲ್ಲ. ಬದಲಾಗಿ ಅದರ ಗಮನ– ಎಂದೆಂದೂ ಸಂಗೀತದಲ್ಲಿ ಶೃತಿ ಇದ್ದ ಹಾಗೆ, ದೂರದಲ್ಲಿರುವ ಸಮುದ್ರದ ಅಲೆಗಳ ನಾದ ಕೇಳಿದ ಹಾಗೆ.

ಈ ಶ್ರೇಷ್ಠ ಸಾಹಿತಿಯ ಸಂಪರ್ಕವಾದದ್ದು ನಮ್ಮ ಇಡೀ ಕುಟುಂಬದ ಪುಣ್ಯವೆಂದೇ ಹೇಳಬಹುದು. ನಮ್ಮ ತಂದೆ ಪ್ರೊಫೆಸರ್ ಸಿ.ಡಿ. ನರಸಿಂಹಯ್ಯನವರು ರಾಜಾರಾವ್ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅವರ ಕೃತಿಗಳ ಮೇಲೆ ವಿಮರ್ಶಾಗ್ರಂಥಗಳನ್ನು ಬರೆದಿದ್ದರು. ನಾನೂ ಸಹ ರಾಜಾರಾಯರ ಕೆಲವು ಕೃತಿಗಳನ್ನು ಅನುವಾದ ಮಾಡಿದ್ದೇನೆ. ನನ್ನ ತಂಗಿ ಡಾ. ರಾಗಿಣಿಯೂ ಅವರ ಕೃತಿಗಳನ್ನು ಕುರಿತು ವಿಮರ್ಶೆಯನ್ನು ಬರೆದಿದ್ದಾರೆ.  ನಾವೆಲ್ಲರೂ ಅವರ ಮೃದು ಸ್ವಭಾವ, ನವಿರಾದ ಮಾತು, ಕೃಶವಾದ ದೇಹವಾದರೂ ಕಾಂತಿಯುತ ಮುಖ, ವರ್ಚಸ್ಸು, ಗಾಂಭೀರ್ಯದಿಂದ ಮೂಕಸ್ಮಿತರಾಗಿದ್ದೇವೆ.

ನಾನು ಅನುವಾದ ಮಾಡಿದ ಅವರ ಅಪ್ರಕಟಿತ ‘ನಾರೀಗೀತ’ (Song of Woman) ಕಾದಂಬರಿಯ ಬಗ್ಗೆಯೂ ಕೆಲವು ಮಾತುಗಳನ್ನು ಹೇಳಬೇಕು. ಇದು ‘ಕಾಂತಾಪುರ’ದ ಶೈಲಿಯಲ್ಲೇ ಬರೆದ ಕೃತಿ. ಸುಮಾರು 1940ರ ದಶಕದಲ್ಲಿ ಮಹಾಯುದ್ಧ ನಡೆಯುವಾಗ ಬರೆದ ಕೃತಿ. ಹಳ್ಳಿಯ ಸೊಗಸಿನ–ಸೊಬಗಿನ ಜೀವನ, ರಾಮಪ್ಪ–ಕೃಷ್ಣಪ್ಪ ಸಹೋದರರ ಸಂಬಂಧ, ಒಟ್ಟು ಕುಟುಂಬದ ಸಂಸಾರ, ರಾಜಕೀಯ ಪ್ರಜ್ಞೆ, ಮನುಷ್ಯ–ಪ್ರಕೃತಿ ಸಂಬಂಧ ಮತ್ತು ಮಿಗಿಲಾಗಿ ಹೆಣ್ಣಿನ ಅಂತರಾಳದ ಪ್ರಪಂಚ, ಇವುಗಳನ್ನೆಲ್ಲ ರಾಜಾರಾವ್ ಅವರು ತಮ್ಮ ಅಪರೂಪದ ಶೈಲಿಯಲ್ಲಿ ಹೆಣೆದಿರುವ ಅಪರೂಪದ ಕಾದಂಬರಿ ‘ನಾರೀಗೀತ’. ಇಂಗ್ಲಿಷ್‌ನಲ್ಲಿ ಇದ್ದರೂ ಕನ್ನಡದ ಹೊಳಪಿನ ಕೃತಿಯಿದು.

ರಾಜಾರಾವ್ ಅವರು ನಮ್ಮನ್ನು ಅಗಲಿದ್ದು 2006ರ ಜುಲೈ 8ರಂದು, ಆಸ್ಟಿನ್‌ನಲ್ಲಿ. ಅವರ ಬಹು ಸೂಕ್ಷ್ಮಮತಿಯಾದ ಪತ್ನಿ ಸೂಸನ್ ಅವರು ರಾಜಾರಾಯರ ಕೃತಿಸಿರಿಯನ್ನು ವಿಂಗಡಿಸಿ, ಮುಂದೆ ಸಂಶೋಧನೆಗೆ ಅನುಕೂಲವಾಗಲೆಂದು ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ ಬಳುವಳಿಯಾಗಿ ಕೊಟ್ಟಿದ್ದಾರೆ. ರಾಜಾರಾವ್ ಅವರ ಅನೇಕ ಕೃತಿಗಳು, ಕಾದಂಬರಿಗಳು ಸಣ್ಣಕಥೆಗಳು ಅಧ್ಯಾತ್ಮಚಿಂತನದ ಲೇಖನಗಳು, ಪ್ರಪಂಚದ ಶ್ರೇಷ್ಠ ಸಾಹಿತಿಗಳು ಮತ್ತು ಯುಗ ಪುರುಷರಿಂದ ಬಂದ ಪತ್ರಗಳು (ಗಾಂಧೀಜಿ, ನೆಹರೂ, ಮಾಲ್ರೋ ಅವರಿಂದ ಇತ್ಯಾದಿ) ಈಗ ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿವೆ.

ಅಸಾಧಾರಣ ಪ್ರತಿಭೆಯುಳ್ಳ ರಾಜಾರಾವ್ ಕರ್ನಾಟಕದವರು ಎನ್ನುವುದು ನಮ್ಮ ಹೆಮ್ಮೆ. ಅಮೆರಿಕದಿಂದ ಭಾರತಕ್ಕೆ ಬಂದ ಸಂದರ್ಭದಲ್ಲಿ ‘ನಮ್ಮ ಮಣ್ಣನ್ನು ಬಾಯಿಗೆ ಹಾಕಿಕೊಳ್ಳಬೇಕು ಎನಿಸುತ್ತೆ’ ಎಂದಿದ್ದ ಅವರು, ತಮ್ಮ ಕೃತಿಗಳಲ್ಲಿ ಭಾರತೀಯ ಸಂಸ್ಕೃತಿಯ ಸೆಲೆಗಳನ್ನು ಚಿತ್ರಿಸಲು ಪ್ರಯತ್ನಿಸಿದರು. ಇಂತಹ ಅಪೂರ್ವ ಸಾಹಿತಿಯನ್ನು ಸಮಸ್ತ ಕನ್ನಡಿಗರಿಗೆ ಪರಿಚಯಿಸುವ ಕೆಲಸ ನಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜಾರಾವ್ ಅವರ ಎಲ್ಲ ಕೃತಿಗಳನ್ನು ಕನ್ನಡಕ್ಕೆ ತರಬೇಕಿದೆ. ಅಂತೆಯೇ ಮೈಸೂರಿನಲ್ಲೋ ಹಾಸನದಲ್ಲೋ ಅವರ ನೆನಪಿನ ಸ್ಮಾರಕ ರೂಪಿಸಲು ಸರ್ಕಾರ ಮನಸು ಮಾಡಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)