ಮಂಗಳವಾರ, ಮೇ 18, 2021
23 °C

ಅಸೈರಣೆಯ ಪರಮಾವಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಮಾರು 27 ಕೋಟಿ ಭಾರತೀಯರು ನಿತ್ಯ ಅರೆಹೊಟ್ಟೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಲಂಡನ್ ಮೂಲದ `ಆಕ್ಷನ್ ಏಡ್ಸ್~ ಸಂಸ್ಥೆ ಇತ್ತೀಚೆಗೆ ವರದಿ ಮಾಡಿತ್ತು. ಆಹಾರ ನೀತಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಂಸ್ಥೆಯ ವರದಿ ಪ್ರಕಾರ ಹಸಿವು ಮತ್ತು ಮಕ್ಕಳ ಅಪೌಷ್ಟಿಕತೆ ಎದುರಿಸುತ್ತಿರುವ ವಿಶ್ವದ 84 ದೇಶಗಳಲ್ಲಿ ಭಾರತ 67ನೇ ಸ್ಥಾನದಲ್ಲಿದೆ.

 

ಇದೇ ಭಾರತದಲ್ಲಿ ಹೊಟ್ಟೆ ತುಂಬಿದ ಇನ್ನೊಂದು ಜನವರ್ಗ ಆಹಾರ ಪದ್ಧತಿ ಯಾವುದು ಇರಬೇಕೆಂಬ ಕ್ಷುಲ್ಲಕ ವಿಷಯವನ್ನು ಮುಂದಿಟ್ಟುಕೊಂಡು ಹೊಡೆದಾಡುತ್ತಾ ಇರುತ್ತದೆ. ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದದ್ದು ಇಂತಹದ್ದೇ ಘಟನೆ. ಅಲ್ಲಿನ ವಿದ್ಯಾರ್ಥಿ ನಿಲಯಗಳಲ್ಲಿ ಜಾರಿಯಲ್ಲಿರುವ ಕಡ್ಡಾಯ ಸಸ್ಯಾಹಾರದ ಬಗ್ಗೆ ಅಸಮಾಧಾನ ಹೊಂದಿದ್ದ ವಿದ್ಯಾರ್ಥಿಗಳ ಒಂದು ವರ್ಗ ಭಾನುವಾರ `ದನದ ಮಾಂಸ ಉತ್ಸವ~ವನ್ನು ಏರ್ಪಡಿಸಿತ್ತು.

 

ಅದನ್ನು ಸಹಿಸದ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರು ಉತ್ಸವದ ಸ್ಥಳಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ, ಒಬ್ಬ ವಿದ್ಯಾರ್ಥಿಗೆ ಚೂರಿಯಿಂದ ಇರಿಯಲಾಗಿದೆ. ಇನ್ನೊಂದಿಷ್ಟು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇದು ಯಾವುದೋ ಹಳ್ಳಿಯಲ್ಲಿ ಅನಕ್ಷರಸ್ಥರ ನಡುವೆ ನಡೆದ ಘಟನೆ ಅಲ್ಲ, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದದ್ದು.ಆಹಾರ ಪದ್ಧತಿ ತೀರಾ ವೈಯಕ್ತಿಕ ವಿಚಾರ. ಆಹಾರವೂ ಸೇರಿದಂತೆ ಯಾರೂ ಯಾವುದನ್ನೂ ಮತ್ತೊಬ್ಬರ ಮೇಲೆ ಹೇರುವುದು ಇಲ್ಲವೇ  ಕಿತ್ತುಕೊಳ್ಳಲು ಹೋಗುವುದು ವೈಯಕ್ತಿಕ ಸ್ವಾತಂತ್ರ್ಯದ ಹರಣ. ಸಾಂಪ್ರದಾಯಿಕವಾಗಿ ಸಸ್ಯಾಹಾರಿಗಳಾಗಿದ್ದವರು ಮಾಂಸಾಹಾರಿಗಳಾಗಿ, ಅದೇ ರೀತಿ ಸಾಂಪ್ರದಾಯಿಕವಾಗಿ ಮಾಂಸಾಹಾರಿಗಳಾಗಿದ್ದವರು ಸಸ್ಯಾಹಾರಿಗಳಾಗಿ ಪರಿವರ್ತನೆಗೊಂಡಿರುವ ಲಕ್ಷಾಂತರ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.ಇದು ತಿನ್ನುವ ವ್ಯಕ್ತಿಗಳ ರುಚಿ ಮತ್ತು ಅಭಿರುಚಿಗೆ ಸಂಬಂಧಿಸಿದ್ದು. ಆಹಾರ ಪದ್ಧತಿ ವಿವಿಧ ಸಮುದಾಯಗಳ ಸಂಸ್ಕೃತಿಯ ಭಾಗ ಕೂಡಾ ಆಗಿದೆ. ಅದರಲ್ಲಿ ಮೇಲು-ಕೀಳು ಇರುವುದಿಲ್ಲ, ತಿನ್ನುವ ಆಹಾರ ಆರೋಗ್ಯಕರವಾಗಿರಬೇಕು ಅಷ್ಟೆ. ಆದರೆ ವಾಸ್ತವ ಸ್ಥಿತಿ ಹಾಗಿಲ್ಲ. ಇಲ್ಲಿ ಆಹಾರಕ್ಕೂ ಜಾತಿ-ಧರ್ಮ, ಮೇಲು-ಕೀಳು, ಗೌರವ-ಅಗೌರವ ಎಲ್ಲವೂ ಇದೆ.ಜತೆಗೆ ಆಗಾಗ ರಾಜಕೀಯದ ಬಣ್ಣವೂ ಸೇರಿಕೊಳ್ಳುತ್ತದೆ. ಸಮಾಜದ ಆರೋಗ್ಯವನ್ನು ಕೆಡಿಸುವುದು ಈ ರೀತಿಯ ಪೂರ್ವಗ್ರಹಗಳಿಂದ ಪೀಡಿತರಾದವರು. ಕನಿಷ್ಠ ಉನ್ನತ ಶಿಕ್ಷಣದ ಪೀಠದಲ್ಲಿ ಕೂತವರು ಇಂತಹ ಸಣ್ಣತನಕ್ಕೆ ಇಳಿಯಬಾರದು. ಜಾತಿ-ಧರ್ಮ ಮೂಲದ ತಾರತಮ್ಯವನ್ನು ಮೀರಬೇಕೆಂದು ಬಯಸುವವರೆಲ್ಲರೂ ಮತ್ತೊಬ್ಬರ ಆಹಾರ ಪದ್ಧತಿಯನ್ನು ಗೌರವಿಸುವ ಸ್ವಭಾವವನ್ನು ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳಬೇಕಾಗುತ್ತದೆ.ಆದರೆ ಮನಃಪರಿವರ್ತನೆ ಮೂಲಕವೇ ಸಾಮಾಜಿಕ ಬದಲಾವಣೆಯನ್ನು ತರುವುದು ಕಷ್ಟದ ಮತ್ತು ದೀರ್ಘಾವಧಿಯ ಕೆಲಸ ಎನ್ನುವುದು ನಮ್ಮ ಈ ವರೆಗಿನ ಅನುಭವ. ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ ಸೇರಿದಂತೆ ಬಹಳಷ್ಟು ಕಂದಾಚಾರಗಳು ಕಡಿಮೆಯಾಗಿರುವುದು ಕಾನೂನಿನ ಕಾರಣದಿಂದಾಗಿ.ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಮಾತ್ರವಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಸ್ವಾಮ್ಯದ ಎಲ್ಲ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಕಡ್ಡಾಯವಾಗಿ ಬಹು ಆಹಾರ ಪದ್ಧತಿಯನ್ನು ಜಾರಿಗೆ ತರಬೇಕು. ಇದರಿಂದ ಮಾತ್ರ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸಾಧ್ಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.