ಗುರುವಾರ , ಜನವರಿ 30, 2020
22 °C

ಅಸ್ಸಾಂ: 1855 ಉಗ್ರರ ಶರಣಾಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ (ಪಿಟಿಐ): ಅಸ್ಸಾಂನ ಒಂಬತ್ತು ಉಗ್ರಗಾಮಿ ಸಂಘಟನೆಗಳಿಗೆ ಸೇರಿದ ಸುಮಾರು 1,855 ಉಗ್ರರು  ಮಂಗಳವಾರ ಗೃಹ ಸಚಿವ ಪಿ. ಚಿದಂಬರಂ ಅವರ ಮುಂದೆ ಶಸ್ತ್ರಾಸ್ತ್ರಗಳನ್ನು ತೊರೆದು ಶರಣಾಗಿದ್ದಾರೆ.ಉಗ್ರರ ಈ ಸಾಮೂಹಿಕ ಶರಣಾಗತಿಯಿಂದ  ಅಸ್ಸಾಂನಲ್ಲಿ ಶಾಂತಿ ಕಾಪಾಡಲು ಯತ್ನಿಸುತ್ತಿರುವ ಕೇಂದ್ರದ ಕ್ರಮಕ್ಕೆ ಜಯ ದೊರಕಿದಂತಾಗಿದೆ.ಹಿಂಸೆಯ ಮಾರ್ಗಕ್ಕೆ ವಿದಾಯ ಹೇಳುವ ಉಗ್ರರ ನಿರ್ಧಾರವನ್ನು ಸ್ವಾಗತಿಸಿದ ಚಿದಂಬರಂ,  `ಇದೊಂದು ಚಾರಿತ್ರಿಕ ಘಟನೆ. ಕೇಂದ್ರ ಮತ್ತು ಅಸ್ಸಾಂ ಸರ್ಕಾರಗಳೆರಡೂ ನಿಮ್ಮನ್ನು ಗೌರವದಿಂದ ಕಾಣಲಿವೆ~ ಎಂಬ ಭರವಸೆ ನೀಡಿದರು.`ಶರಣಾಗತಿಯ ಹಾದಿಯನ್ನು ತುಳಿದ ಉಗ್ರರ ನಿಲುವನ್ನು ನಾವು ಸ್ವಾಗತಿಸುತ್ತೇವೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಪ್ರತಿಯೊಬ್ಬರ ಅಭಿಪ್ರಾಯಕ್ಕೂ ಮನ್ನಣೆ ನೀಡಲಾಗುತ್ತದೆ. ಪ್ರತಿಯೊಬ್ಬರಿಗೂ ಗೌರವದಿಂದ ಬಾಳುವ ಹಕ್ಕು ಇದೆ~ ಎಂದರು.ಮಹಾತ್ಮ ಗಾಂಧಿ, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಸರ್ದಾರ್ ವಲ್ಲಭ ಭಾಯಿ ಪಟೇಲ್ ಮುಂತಾದವರ ಸಂದೇಶಗಳನ್ನು ಪ್ರಸ್ತಾಪಿಸಿ ಶರಣಾಗತರ್ಲ್ಲಲಿ ಹುರುಪು ಮೂಡಿಸಿದ ಚಿದಂಬರಂ,  `ನಿಮ್ಮ ಭವಿಷ್ಯ ಉಜ್ವಲವಾಗಿದೆ. ಮುಂಬರುವ ದಿನಗಳಲ್ಲಿ ಕುಟುಂಬದತ್ತ ಗಮನ ನೀಡಿ, ದೇಶ ಕಟ್ಟುವತ್ತ ಶ್ರಮಿಸಿ~ ಎಂದು ಧೈರ್ಯ ತುಂಬಿದರು.ಉಲ್ಫಾ ಮತ್ತು ಎನ್‌ಡಿಎಫ್‌ಬಿ ಸಂಘಟನೆಗಳು ಶಾಂತಿ ಮಾತುಕತೆಗೆ ಆಸಕ್ತಿ ತೋರಿಸಿವೆ ಎಂದ ಅವರು, ಉಳಿದ ಸಂಘಟನೆಗಳೂ ಈ ನಿಟ್ಟಿನಲ್ಲಿ ಗಮನ ನೀಡಿವೆ ಎಂದರು.`ಭಯೋತ್ಪಾದನೆಯಿಂದ ಯಾರಿಗೂ ಲಾಭವಿಲ್ಲ ಎಂಬ ಸಂದೇಶವನ್ನು ಈ ಶರಣಾಗತಿ ಸೂಚಿಸುತ್ತದೆ. ಪ್ರಜಾಪ್ರಭುತ್ವ ಮಾರ್ಗದ ಮೂಲಕ ಮಾತ್ರ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ ~ ಎಂದು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಅಭಿಪ್ರಾಯಪಟ್ಟರಲ್ಲದೆ ಶರಣಾಗತಿಯಲ್ಲಿ ಮುಖ್ಯ ಪಾತ್ರ ವಹಿಸಿದ ಸಂಘಟನೆಗಳ `ಕಮಾಂಡರ್~ಗಳನ್ನು ಅಭಿನಂದಿಸಿದರು.  ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್, ಸೇನೆಯ 3 ಮತ್ತು 4 ನೇ ತುಕಡಿಗಳ ಮುಖ್ಯಸ್ಥರು ಹಾಗೂ ಪೊಲೀಸ್ ಮಹಾನಿರ್ದೇಶಕ ಜಯಂತ್ ನಾರಾಯಣ್ ಚೌಧರಿ  ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಆದಿವಾಸಿ ಪೀಪಲ್ಸ್ ಆರ್ಮಿ (ಎಪಿಎ), ಆಲ್ ಆದಿವಾಸಿ ನ್ಯಾಷನಲ್ ಲಿಬರೇಶನ್ ಆರ್ಮಿ (ಎಎಎನ್‌ಎಲ್‌ಎ), ಸಂತಾಲ್ ಟೈಗರ್ ಫೋರ್ಸ್ (ಎಸ್‌ಟಿಎಫ್), ಬಿರ್ಸಾ ಕಮಾಂಡೊ ಫೋರ್ಸ್ (ಬಿಸಿಎಫ್), ಆದಿವಾಸಿ ಕೋಬ್ರಾ ಮಿಲಿಟರಿ ಆಫ್ ಅಸ್ಸಾಂ (ಎಸಿಎಂಎ), ಕುಕಿ ಲಿಬರೇಷನ್ ಆರ್ಮಿ (ಕೆಎಲ್‌ಎ), ಕುಕಿ ಲಿಬರೇಷನ್ ಆರ್ಗನೈಜೆಷನ್ (ಕೆಎಲ್‌ಒ), ಹಮಾರ್ ಪೀಪಲ್ಸ್ ಕನ್‌ವೆನ್ಶನ್ (ಎಚ್‌ಪಿಸಿ), ಯುನೈಟೆಡ್ ಕುಕಿಗಮ್ ಡಿಫೆನ್ಸ್ ಆರ್ಮಿ (ಯುಕೆಡಿಎ) ಮತ್ತು ಕುಕಿ ರೆವಲ್ಯೂಷನರಿ ಆರ್ಮಿ (ಕೆಆರ್‌ಎ) ಸಂಘಟನೆಗೆ ಸೇರಿದವರು ತಮ್ಮ  ನಾಯಕರ ಜತೆ ಬಂದು 201 ವಿಧದ ಆಯುಧಗಳೊಂದಿಗೆ ಶರಣಾಗತರಾದರು.

ಪ್ರತಿಕ್ರಿಯಿಸಿ (+)