ಗುರುವಾರ , ಮೇ 6, 2021
33 °C

ಅಹಿಂಸೆ ಮನುಷ್ಯನ ಪ್ರಬಲ ಅಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಅಹಿಂಸೆ ಎಂಬುದು ಮನುಷ್ಯನ ಮೂಲ ಮಂತ್ರವಷ್ಟೇ ಅಲ್ಲ ಪ್ರಬಲ ಅಸ್ತ್ರವೂ ಹೌದು. ಅಹಿಂಸೆಯ ಮೇಲೆ ವಿಶ್ವಾಸವಿಲ್ಲ ಎನ್ನುವವರಿಗೆ ಕೈಲಾಗದವರು ಅಥವಾ ಮೂಲ ಮನುಷ್ಯತ್ವ ಇಲ್ಲದವರು ಎನ್ನಬೇಕಾಗುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಶಿವಾನಂದ ಶೆಟ್ಟರ ಹೇಳಿದರು.ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಮಹದೇವ ಸಿದ್ದೇಶ್ವರ ಕೇಸರಿ ದತ್ತಿ ಕಾರ್ಯಕ್ರಮದ ಅಂಗವಾಗಿ ಕಾನೂನು ವಿದ್ಯಾರ್ಥಿಗಳಿಗೆ ಅಹಿಂಸಾತ್ಮಕ ಸತ್ಯಾಗ್ರಹದ ಮೂಲಕ ಶಾಸನ ರಚನೆಗೆ ಆಗ್ರಹಿಸುವುದು ಸಂವಿಧಾನ ಬಾಹಿರವೇ? ಎಂಬ ವಿಷಯ ಕುರಿತು ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.ಹಿಂಸೆಯಿಂದ ಏನನ್ನೂ ಸಾಧಿಸಿದ ಇತಿಹಾಸವಿಲ್ಲ. ಸಾಧಿಸಿದ್ದು ಇದ್ದರೆ ಅದು ಅತ್ಯಂತ ಅಲ್ಪ ಅವಧಿಯದ್ದಾಗಿರುತ್ತದೆ ಎಂಬುದನ್ನು ಜಗತ್ತಿನ ಇತಿಹಾಸದಿಂದ ತಿಳಿದುಕೊಳ್ಳಬಹುದು. ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರುದ್ಧ ನಡೆಸಿದ ಹೋರಾಟದಲ್ಲಿ ಜಗತ್ತು ಗಮನಿಸುವ ರೀತಿಯಲ್ಲಿ ಯುವಕರು ಭಾಗವಹಿಸಿದ್ದರು.ಎಲ್ಲಿಯೂ ಹಿಂಸೆಯ ಘಟನೆಗಳು ಆಗದಿರುವುದನ್ನು ನೋಡಿದರೆ ಭಾರತದ ಜನರು ಅಹಿಂಸೆಯಲ್ಲಿ ಪ್ರಬಲವಾದ ನಂಬಿಗೆಯನ್ನು ಇಂದಿಗೂ ಹೊಂದಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದರು.

ಇಂದು ದೇಶದ ಯುವಕರು ಜಗತ್ತಿಗೆ ಮಾದರಿಯಾಗುವ ರೀತಿಯಲ್ಲಿ ತಮ್ಮ ಸಂಯಮತೆಯನ್ನು ಪ್ರದರ್ಶಿಸುತ್ತಿದ್ದಾರೆ.ಹೊರಗಿನ ಶಕ್ತಿಗಳು ಹಿಂಸೆಯನ್ನು ಪ್ರಚೋದಿಸುತ್ತಿದ್ದರೂ ಅದನ್ನು ಮೆಟ್ಟಿನಿಂತು ಶಾಂತಿಯನ್ನು ಸಾರುವ ಮನೋಭಾವನೆ ಹೊಂದಿದ್ದು ನಮ್ಮ ದೇಶದ ನಿಜವಾದ ಶಕ್ತಿಯಾಗಿದೆ. ಅಣ್ಣಾ ಹಜಾರೆಯವರಂಥ ನಿಷ್ಕಲ್ಮಷ ಮನಸ್ಸುಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಲಿ ಎಂದು ಆಶಿಸಿದರು.ಭಾಷಣ ಸ್ಪರ್ಧೆಯಲ್ಲಿ ಚಿಕ್ಕೋಡಿ, ಬೆಳಗಾವಿ, ಗದಗ ಹಾಗೂ ಧಾರವಾಡದ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಶಾ ಪ್ರಳಯಕಲ್ಮಠ, ಕೆ.ಎಸ್.ಕೋರಿಶೆಟ್ಟರ, ಅಖಿಲಾ ಪಂಡೀತ ನಿರ್ಣಾಯಕರಾಗಿದ್ದರು. ಬೆಳಗಾವಿಯ ಆರ್‌ಎಲ್‌ಎಸ್ ಕಾನೂನು ಕಾಲೇಜಿನ ಸವಿತಾ ಚಿಕ್ಕನಗೌಡರ ಪ್ರಥಮ, ಗದಗನ ಎಸ್.ವಿ.ಮಾನ್ವಿ ಕಾಲೇಜಿನ ಶಿಲ್ಪಾ ಶೆಟ್ಟರ ದ್ವಿತೀಯ ಹಾಗೂ ಶೇಣಿಕಕುಮಾರ ಅಂತಣ್ಣವರ ತೃತೀಯ ಸ್ಥಾನ ಪಡೆದರು.ನಿಂಗಣ್ಣ ಕುಂಟಿ ಅಧ್ಯಕ್ಷತೆ ವಹಿಸಿದ್ದರು. ಬಸವಪ್ರಭು ಹಹೊಸಕೇರಿ, ಪ್ರರಕಾಶ ಉಡಿಕೇರಿ, ಮೋಹನ ನಾಗಮ್ಮನವರ, ಸಿದ್ಧಲಿಂಗ ದೇಸಾಯಿ ಭಾಗವಹಿಸಿದ್ದರು. ಶಂಕರ ಹಲಗತ್ತಿ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.