ಬುಧವಾರ, ಜೂಲೈ 8, 2020
28 °C

ಆಂಗ್ಲ ಭಾಷೆ ಶಿಕ್ಷಕರ ನೇಮಕಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ: ತಾಲ್ಲೂಕು ನಲ್ಲೂರು ಗ್ರಾಮದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಕೂಡಲೇ ಆಂಗ್ಲ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ಕನ್ನಡ ಜಾಗೃತಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಸೇರಿ ಬುಧವಾರ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಹಲವು ತಿಂಗಳಿಂದ  ಶಾಲೆಯಲ್ಲಿ ಆಂಗ್ಲ ಭಾಷೆಯ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿದ್ದರೂ ಕೂಡಾ ಶಿಕ್ಷಕರನ್ನು ನೇಮಕ ಮಾಡದೇ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.ಅದೇ ರೀತಿಯ ಈ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾರ್ಥಿವೇತನವನ್ನು ಕೊಡುವಾಗ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ರೂ 50ನ್ನು ಪಡೆದುಕೊಂಡು ಕೊಡುತ್ತಾರೆ. ಹಾಗೆಯೇ, ವಿದ್ಯಾರ್ಥಿಗಳಿಂದ ಕೊಠಡಿಗಳ ಕಸವನ್ನು ಗುಡಿಸಿಸುತ್ತಾರೆ. ಆದ್ದರಿಂದ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.ಪ್ರತಿಭಟನಾ ಸ್ಥಳಕ್ಕೆ ಬಿಇಒ ಜಿ.ಆರ್. ತಿಪ್ಪೇಶಪ್ಪ ಭೇಟಿ ಕೊಟ್ಟು, ಆದಷ್ಟು ಶೀಘ್ರದಲ್ಲಿ ಆಂಗ್ಲ ಶಿಕ್ಷಕರನ್ನು ನೇಮಕ ಮಾಡುವುದಾಗಿ ಆಶ್ವಾಸನೆ ನೀಡಿ, ವಿದ್ಯಾರ್ಥಿಗಳಿಂದ ಪಡೆದ ರೂ 50ನ್ನು ವಿದ್ಯಾರ್ಥಿಗಳಿಗೆ ವಾಪಸ್ ನೀಡಲು ಮುಖ್ಯ ಶಿಕ್ಷಕಿಗೆ ಆದೇಶ ಮಾಡಿದರು. ಮುಂದೆ ಇಂತಹ ಘಟನೆಗಳು ಮರುಕಳಿಸದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಜಾಗೃತಿ ಸಮಿತಿ ಗೌರವಾಧ್ಯಕ್ಷ ವೈ. ನಾಗರಾಜ್, ಬಿ.ಆರ್. ರುದ್ರೇಶ್ವರ್, ಆರ್. ಮಂಜಪ್ಪ, ಪಿ. ಕುಮಾರ್, ಗ್ರಾ.ಪಂ. ಸದಸ್ಯರಾದ ಪರಮೇಶ್, ನಾಗರಾಜ್, ರವಿಕುಮಾರ್, ರಂಗಪ್ಪ, ಅನಿಲ್, ರಂಗನಾಥ್, ಪ್ರಕಾಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.