ಗುರುವಾರ , ಮೇ 19, 2022
20 °C

ಆಂಜನೇಯ ಪ್ರಸಿದ್ಧಿಯ ಕೊಕ್ಕನೂರು: ಸಮಸ್ಯೆ ನೂರಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ ತಾಲ್ಲೂಕು ಮಲೇಬೆನ್ನೂರಿನಿಂದ ಕೇವಲ 8ಕಿ.ಮೀ. ದೂರವಿರುವ ಈ ಊರು ಆಂಜನೇಯಸ್ವಾಮಿಯ ಪವಾಡಕ್ಕಾಗಿ ಪ್ರಸಿದ್ಧಿ. ಆ ಪ್ರಸಿದ್ಧಿಯ ಕಾರಣಕ್ಕಾಗಿಯೇ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರ ಮಹಾಪೂರವೇ ಇಲ್ಲಿಗೆ ಪ್ರತಿ ಏಪ್ರಿಲ್‌ನಲ್ಲಿ ಸಾಗರೋಪಾದಿಯಲ್ಲಿ ಹರಿದು ಬರುತ್ತದೆ.ಆಂಜನೇಯ ಸ್ವಾಮಿಯ ಪವಾಡದ ಪ್ರತೀಕ ಎಂಬಂತೆ ದೇವಸ್ಥಾನದ ತಿಜೋರಿ ಇಲ್ಲಿ ಸದಾ ಭರ್ತಿ!-ಇದು ಕೊಕ್ಕನೂರು. ಆದರೆ, ಸಮಸ್ಯೆಗಳು ಮಾತ್ರ ನೂರಾರು. ಒಂದು ಕಾಲದಲ್ಲಿ ಕೊಕ್ಕರೆಗಳ ತವರೂರು ಆಗಿದ್ದರಿಂದ ಕೊಕ್ಕನೂರು ಎಂಬ ಹೆಸರು ಬಂದಿರಬಹುದು ಎಂಬುದು ಊರಿನ ಹಿರಿಯರ ಅಭಿಪ್ರಾಯ. ಆದರೆ, ಸದ್ಯಕ್ಕೆ ಗ್ರಾಮದಲ್ಲಿ ಕೊಕ್ಕರೆಗಳ ಕಲರವ ಅಷ್ಟಾಗಿ ಕೇಳಿಬರುತ್ತಿಲ್ಲ.ಪ್ರಕೃತಿಯ ಮಡಿಲಲ್ಲಿ...

ಹರಿಹರ-ಶಿವಮೊಗ್ಗ ಹೆದ್ದಾರಿಯ ಮಧ್ಯದಲ್ಲಿರುವ ಕೊಕ್ಕನೂರು ಮಾರ್ಗದ ಅಕ್ಕಪಕ್ಕ ಹೊಲಗದ್ದೆಗಳದ್ದೇ ಕಾರುಬಾರು. ನೀರಾವರಿ ಕಾರಣದಿಂದ ಸದಾ ಹಸಿರಿನಿಂದ ನಳನಳಿಸುವ ಬತ್ತದ ಗದ್ದೆಗಳು. ಬಿರು ಬಿಸಿಲಿನಲ್ಲೂ ಮೈ-ಮನಕ್ಕೆ ತಂಪನೀಯುವ ತಂಗಾಳಿ, ಎತ್ತರದ ತೆಂಗು ಮತ್ತು ಅಡಿಕೆ ಮರಗಳ ಕಾರಣ ಕೊಕ್ಕನೂರು ಪ್ರಕೃತಿಯ ಮಡಿಲಿನ ಪುಟ್ಟ ಗ್ರಾಮವಾಗಿ ರೂಪುಗೊಂಡಿದೆ.ಇತಿಹಾಸದ ಪುಟಗಳಲ್ಲಿ

ಗ್ರಾಮದ ಪ್ರಾಚೀನ ಇತಿಹಾಸದ ಪುಟಗಳನ್ನು ತೆರೆದಾಗ, ಮೂರು ಮಹತ್ವದ ದಾಖಲೆಗಳು ದೊರೆಯುತ್ತವೆ. ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಅವರು ಮಂಡಿಸಿರುವ ಟಿಪ್ಟಣಿಯ ಪ್ರಕಾರ, ಬಿ.ಎಲ್. ರೈಸ್ ಕ್ರಿ.ಶ. 12ನೇ ಶತಮಾನದ ಒಂದು ಶಿಲಾಶಾಸನದಲ್ಲಿ `ಕೊಕ್ಕಲೂರು~ ಎಂಬ ಪದ ಕಂಡು ಬರುತ್ತದೆ. ಹಾಗಾಗಿ, ಈ ಗ್ರಾಮ 12ನೇ ಶತಮಾನಕ್ಕಿಂತಲೂ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂಬ ಪ್ರತೀತಿ ಇದೆ.ಮತ್ತೊಂದು ದಾಖಲೆಯ ಪ್ರಕಾರ ಪ್ರಸಿದ್ಧ ಕವಯತ್ರಿ ಹೆಳವನಕಟ್ಟೆ ಗಿರಿಯಮ್ಮ ರಚಿಸಿದ ಒಂದು ಕೀರ್ತನೆಯಲ್ಲಿ ಕೊಕ್ಕನೂರಿನ ಪ್ರಸ್ತಾಪ ಬರುತ್ತದೆ. ಸಾಂಸಾರಿಕ ಜೀವನದಿಂದ ಬೇಸತ್ತು, ಭಗವಂತನ ಸ್ಮರಣೆಯಲ್ಲಿ ತೊಡಗಿದ್ದ ಗಿರಿಯಮ್ಮ ಪುಣ್ಯಕ್ಷೇತ್ರ ಕೊಕ್ಕನೂರಿಗೆ ಭೇಟಿ ನೀಡಿ, ಆಂಜನೇಯ ಸ್ವಾಮಿಯೇ ತನ್ನ ಆರಾಧ್ಯದೈವ ಎಂದು ಮನಗಂಡು, ಆಂಜನೇಯನ ಗುಡಿಯಲ್ಲಿ ತಾನೇ ರಚಿಸಿದ ಕೀರ್ತನೆಯನ್ನು ಹಾಡಿ, ಭಕ್ತಿಯ ರಸಧಾರೆ ಹರಿಸಿದ್ದಾಳೆ.

 

ಇದು ಗಿರಿಯಮ್ಮನ ಕಾಲದಲ್ಲೇ ಕೊಕ್ಕನೂರು ಅಸ್ತಿತ್ವದಲ್ಲಿ ಇತ್ತೆಂಬುದುಕ್ಕೆ ಪುಷ್ಟಿ ನೀಡುತ್ತದೆ.

`ಲೆಕ್ಕವಿಲ್ಲದ ಖಳರ ಗೆಲಿದು ಬಂದು, ಕೊಕ್ಕನೂರಿನೊಳು ನಿಂತೆನು~ ಎಂದು ಹೆಳವನಕಟ್ಟೆ ಗಿರಿಯಮ್ಮ ಕೀರ್ತನೆಯೊಂದರಲ್ಲಿ ಹಾಡುತ್ತಾಳೆ ಎಂಬುದು ಇತಿಹಾಸ ತಜ್ಞರ ಅಭಿಮತ.ಇತಿಹಾಸ ಏನೇ ಇರಲಿ, ಗ್ರಾಮದಲ್ಲಿ ಅದ್ಭುತವಾದ ಪುಷ್ಕರಣಿಯೊಂದಿದೆ ವರ್ಷದ 365ದಿನಗಳಲ್ಲೂ ಈ ಪುಷ್ಕರಣಿ ತುಂಬಿ ತುಳುಕುತ್ತದೆ ಎಂಬುದೇ ಇದರ  ವಿಶೇಷ.  ಈಗ್ಗೆ ಕೆಲ ವರ್ಷಗಳ ಹಿಂದೆ ಬರಗಾಲದ ಛಾಯೆ ಆವರಿಸಿದಾಗ ಗ್ರಾಮಸ್ಥರೇ ಮನೆಗೊಂದು ಆಳಿನಂತೆ ನಿಂತು, ಪುಷ್ಕರಣಿಯನ್ನು ಸ್ವಚ್ಛಗೊಳಿಸಿ, ನೀರು ಸಂಗ್ರಹಕ್ಕೆ ಅನುಕೂಲ ಕಲ್ಪಿಸಿದ್ದಾರೆ.

 

ಅಲ್ಲದೇ, ಇದೇ ಪುಷ್ಕರಣಿಯ ನೀರನ್ನು ಗ್ರಾಮದೇವರು ಆಂಜನೇಯ ಸ್ವಾಮಿಯ ಮಜ್ಜನಕ್ಕೂ ಬಳಸಲಾಗುತ್ತಿದೆ. ಹಾಗಾಗಿ, ಪುಷ್ಕರಣಿಯ ಸುತ್ತಮುತ್ತ ಗಲೀಜು ಮಾಡುವಂತಿಲ್ಲ. ಭಕ್ತರು ಸ್ನಾನ ಮಾಡಿದರೂ ಸಾಬೂನು ಬಳಸುವಂತಿಲ್ಲ ಎಂಬುದು ಗ್ರಾಮಸ್ಥರೇ ಮಾಡಿರುವ ಅಲಿಖಿತ ನಿಯಮ.ಗ್ರಾಮದ ಪುರಾತನ ಆಂಜನೇಯ ಸ್ವಾಮಿಯ ಪವಾಡ ರಾಜ್ಯವಷ್ಟೇ ಅಲ್ಲ ಹೊರರಾಜ್ಯಗಳಲ್ಲೂ ಪ್ರಸಿದ್ಧಿ. ಹಾಗಾಗಿ, ಇಲ್ಲಿನ ಸೇವಾಪಟ್ಟಿಯಲ್ಲಿ ಹೊರ ರಾಜ್ಯದವರ ಹೆಸರನ್ನೂ ಕಾಣಬಹುದು. ಭಕ್ತರ ಹಣದಿಂದ ಗ್ರಾಮಸ್ಥರೇ ನೇತೃತ್ವ ವಹಿಸಿ, ವಿಶಾಲ-ಸುಂದರವಾದ ದೇವಸ್ಥಾನ ನಿರ್ಮಿಸಿದ್ದಾರೆ.

 

ಬೆಡಗಿನ ಗೋಪುರ, ಕಲಾನೈಪುಣ್ಯದ ಪ್ರಾಂಗಣ, ಭಕ್ತರಿಗಾಗಿ ಸಕಲ ಸೌಕರ್ಯವುಳ್ಳ ವಸತಿ ಗೃಹಗಳು,  ಪವನದೇವ ಕಲ್ಯಾಣಮಂಟಪ, ಅಂಜನಾದೇವಿ ಭೋಜನಾಲಯ ಇವು ಆಂಜನೇಯ ಸ್ವಾಮಿಯ ದೇವಾಲಯದ ಮುಖ್ಯ ಆಕರ್ಷಣೆ. ಪ್ರತಿ ಏಪ್ರಿಲ್‌ನಲ್ಲಿ ಸ್ವಾಮಿಯ ರಥೋತ್ಸವ ಜರುಗುತ್ತದೆ. ಕಾರ್ಣೀಕೋತ್ಸವ ಕೂಡಾ ಜೋರಾಗಿ ನಡೆಯುತ್ತದೆ. ಜಾತ್ರೆಯ ದಿನವಂತೂ ಸ್ವಾಮಿಯ ಉತ್ಸವ ಮೂರ್ತಿ ಹೂವಿಗಿಂತ ಹೆಚ್ಚಾಗಿ ಹಣದಿಂದಲೇ ಮುಚ್ಚಿಹೋಗಿರುತ್ತದೆಯಂತೆ!.ಸ್ವಾಮಿಯ `ಹೂ ಚೆಲ್ಲುವಿಕೆ~ ಪ್ರಕ್ರಿಯೆ ಭಕ್ತರ ಕೇಂದ್ರ ಬಿಂದು. ಸ್ವಾಮಿಯ ಗರ್ಭಗುಡಿಯಲ್ಲಿ ಗಂಟೆ ಬಾರಿಸಿ, ಒಳಿತು-ಕೆಡಕಿಗಾಗಿ ಎಡ-ಬಲ ಹೂವಿನ ಸೂಚನೆ ನೀಡಲು ಭಕ್ತರು ಬೇಡಿಕೊಳ್ಳುವುದು ವಾಡಿಕೆ. ಅಂತೆಯೇ ಸ್ವಾಮಿಯ ಸೂಚನೆಗೆ ವಿರುದ್ಧ ಹೋದವರು ಎಂದಿಗೂ ನೆಮ್ಮದಿ ಕಂಡಿಲ್ಲ. ಇದಕ್ಕೆ `ದೇವರ ಜಮೀನು~ ಪ್ರಕರಣವೇ ಉದಾಹರಣೆ ಎನ್ನುತ್ತಾರೆ ಗ್ರಾಮಸ್ಥರು.`ಉಳುವವನೇ ಹೊಲದೊಡೆಯ~ ಕಾನೂನಿನನ್ವಯ ದೇವಸ್ಥಾನಕ್ಕೆ ದಾನಕೊಟ್ಟಿದ್ದ ಜಮೀನನ್ನು ಪಡೆಯಲು ಬಯಸಿದವರ ಆಸೆ ಈಡೇರಲಿಲ್ಲ. ಇದಕ್ಕೆ ಸ್ವಾಮಿಯ ಸೂಚನೆಯೇ ಕಾರಣ. ಹಾಗಾಗಿ, ಯಾವ ವಕೀಲರಿಂದಲೂ ಈ ಪ್ರಕರಣ ಬಗೆ ಹರಿಸಲಾಗದೇ, ಕೊನೆಗೆ ಆ ಜಮೀನು `ದೇವರ ಜಮೀನು~ ಆಗಿ ಉಳಿದಿದೆ ಎನ್ನುವುದು ಗ್ರಾಮದಲ್ಲಿ ದಂತಕಥೆಯಂತೆ ಹಬ್ಬಿದೆ.ಊರು-ಕೇರಿ

ಇನ್ನು ಗ್ರಾಮದಲ್ಲಿ ವಿದ್ಯಾವಂತರ ಸಂಖ್ಯೆ ಈಚೆಗೆ ಹೆಚ್ಚಳವಾಗಿದೆ. ಮುಖ್ಯವಾಗಿ ಬಿ.ಇಡಿ ಪದವೀಧರರ ಸಂಖ್ಯೆಯೇ ಹೆಚ್ಚು. ಪೊಲೀಸ್ ಕಾನ್‌ಸ್ಟೇಬಲ್, ಶಿಕ್ಷಕರು, ಉಪನ್ಯಾಸಕರು, ಎಂಜಿನಿಯರ್‌ಗಳು, ವೈದ್ಯರು ಇದ್ದಾರೆ.ಗ್ರಾಮದಲ್ಲಿ ಅಂಗನವಾಡಿ ಕೇಂದ್ರ, ಪ್ರಾಥಮಿಕಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ, ಅಂಚೆ ಕಚೇರಿ, ಔಷಧಿ ಅಂಗಡಿ, ಗೊಬ್ಬರದ ಅಂಗಡಿಗಳು ಇವೆ. ಆಂಜನೇಯ ಸ್ವಾಮಿ ಹೊರತುಪಡಿಸಿ ಗ್ರಾಮದ ಮಧ್ಯದಲ್ಲಿ ದುರ್ಗಾಂಬಿಕಾ ದೇವಿ, ಈಶ್ವರ ದೇವಾಲಯವೂ ಇದೆ.ಗ್ರಾಮದ ಜನರು ಸ್ನೇಹಜೀವಿಗಳು. ಸಹಕಾರ ಮನೋಭಾವದವರು. ಗ್ರಾಮದಲ್ಲಿ ನಾಯಕ, ಕುರುಬ, ನೊಣಬ, ಗಂಗಾಮತಸ್ಥ, ಪರಿಶಿಷ್ಟ ವರ್ಗ ಮತ್ತು ಲಂಬಾಣಿ ಜನಾಂಗದವರಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟದಂತಿರುವ ಗ್ರಾಮದಲ್ಲಿ ಯಾವುದೇ ಅಹಿತಕರ ವಾತಾವರಣ, ಘಟನೆ ಕಂಡುಬಾರದು.ಗ್ರಾಮ ಪಂಚಾಯ್ತಿಯ ಸಣ್ಣಪುಟ್ಟ ರಾಜಕೀಯ ಇಲ್ಲಿ ಸಾಮಾನ್ಯ. ದಾವಣಗೆರೆ ಜಿಲ್ಲಾ ಪಂಚಾಯ್ತಿಯ ಪ್ರಥಮ ಅಧ್ಯಕ್ಷರಾಗಿ ಕೊಕ್ಕನೂರಿನ ಬಿ. ದ್ಯಾಮಪ್ಪ, ಹರಿಹರ ತಾಲ್ಲೂಕು ಪಂಚಾಯ್ತಿ ಪ್ರಥಮ ಅಧ್ಯಕ್ಷರಾಗಿ ಇದೇ ಊರಿನ ಎಚ್. ರಂಗಪ್ಪ ಆಯ್ಕೆಯಾಗಿದ್ದರು.ಗ್ರಾಮದ ತಮಟೆ ಕಲಾವಿದ ಎ.ಕೆ. ಲಕ್ಷ್ಮಣ ರಾಜ್ಯಮಟ್ಟದಲ್ಲಿ ಹೆಸರುವಾಸಿಯಗಿದ್ದು, `ಜಾನಪದ ಶ್ರೀ~ ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ಗ್ರಾಮದಲ್ಲಿ ಬೀರಲಿಂಗೇಶ್ವರ ಡೊಳ್ಳು ತಂಡ, ಇದು ಗ್ರಾಮದ ವಿಶೇಷತೆ ಎನ್ನುತ್ತಾರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಲಕ್ಷ್ಮಪ್ಪ.ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆ ಹದಗೆಟ್ಟಿದ್ದು, ಗ್ರಾಮಕ್ಕೆ ಉತ್ತಮ ರಸ್ತೆ ಸೌಲಭ್ಯ ಬೇಕು ಎನ್ನುತ್ತಾರೆ ಗ್ರಾಮದ ಯುವಕ ಶಶಿಕುಮಾರ್.ಗ್ರಾಮಕ್ಕೆ ಬರುವ ರಸ್ತೆ ಹಾಳಾಗಿದ್ದು, ಒಳಚರಂಡಿ ವ್ಯವಸ್ಥೆ ಇಲ್ಲ. ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಗ್ರಾಮಕ್ಕೆ ಸರ್ಕಾರಿ ಬಸ್‌ಸೌಲಭ್ಯ ಬೇಕು. ಗ್ರಾಮದಲ್ಲಿ ಶೌಚಾಲಯ ಕೊರತೆ ಇದ್ದು, ಶೇ. 60ರಷ್ಟು ಮಂದಿ ಇಂದಿಗೂ ಬಯಲು ಶೌಚಾಲಯವನ್ನೇ ಆಶ್ರಯಿಸಿದ್ದಾರೆ.

 

ಗ್ರಾಮದಲ್ಲಿ ನೆಪಕ್ಕೆ ಮಾತ್ರ ಗ್ರಂಥಾಲಯವಿದೆ. ಆದರೆ, ಅದು ಇದುವರೆಗೆ ತೆರೆದಿರುವುದನ್ನು ಯಾರೂ ನೋಡಿಯೇ ಇಲ್ಲ. ಕನಿಷ್ಠ ದಿನಪತ್ರಿಕೆಗಳನ್ನಾದರೂ ಓದಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಾರೆ ಗ್ರಾಮಸ್ಥರಾದ ಅಭಿನಂದನ್ ಪಾಟೀಲ್, ಗಣೇಶ್ ಮತ್ತಿತರರು.ಗ್ರಾಮ  ಹಿಂದೆ ನೇಕಾರರಿಗೆ ಹೆಸರುವಾಸಿಯಾಗಿತ್ತು. 70 ನೇಕಾರ ಕುಟುಂಬಗಳಿದ್ದವು. ಈಗ ಈ ಸಂಖ್ಯೆ ಕೇವಲ 10ಕ್ಕೆ ಕ್ಷೀಣಿಸಿದೆ ಎನ್ನುತ್ತಾರೆ ನೇಕಾರ ಮಾರುತಪ್ಪ.ಗ್ರಾಮದ ಪ್ರಾಥಮಿಕ ಶಾಲೆಯ ಕೊಠಡಿಯೊಂದು ಪೂರ್ಣ ಶಿಥಿಲಗೊಂಡಿದ್ದು, ಶಾಲಾ ಕಟ್ಟಡ ಪುರಾತನವಾದ್ದರಿಂದ ನೂತನ ಕೊಠಡಿ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲೇ ನೂತನ ಕೊಠಡಿ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯ ಅಂಜನಪ್ಪ.ಗ್ರಾಮ ಕಳೆದ ವರ್ಷ ಸುವರ್ಣ ಗ್ರಾಮ ಯೋಜನೆಗೆ ಆಯ್ಕೆಯಾಗಿದೆ. ಆದರೆ, ಇದುವರೆಗೆ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಉದ್ಯೋಗಖಾತ್ರಿ ಯೋಜನೆ ಅಡಿ ಜಾಬ್‌ಕಾರ್ಡ್ ನೀಡಲಾಗಿದೆ. ಆದರೆ, ಇದುವರೆಗೆ ಯಾರಿಗೂ ಕೆಲಸ ನೀಡಿಲ್ಲ. ಅಲ್ಲದೇ, ನಿರುದ್ಯೋಗಿ ಭತ್ಯೆಯನ್ನೂ ಕೊಟ್ಟಿಲ್ಲ.ಬಡವರಿಗೆ ಸೂರು ಕಲ್ಪಿಸುವ ಯೋಜನೆ ಉಳ್ಳವರಿಗೇ ಉಪಯೋಗವಾಗುತ್ತಿದೆ. ಗ್ರಾಮಸಭೆಯೂ ಅಷ್ಟಕ್ಕಷ್ಟೇ. ಯಾರಿಗೂ ಮಾಹಿತಿಯೇ ಇರುವುದಿಲ್ಲ. ಪಂಚಾಯ್ತಿಯವರು ಒಳಗಿಂದೊಳಗೇ ಎಲ್ಲವನ್ನೂ ಮಾಡಿ ಮುಗಿಸುತ್ತಾರೆ ಎಂದು ದೂರುತ್ತಾರೆ ಗ್ರಾಮಸ್ಥ ಮಾರುತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.