ಬುಧವಾರ, ಮೇ 18, 2022
27 °C

ಆಂಧ್ರ: ಜಗನ್ ಗೆ ಅನುಕಂಪದ ಅಲೆ: 14 ಸ್ಥಾನಗಳಲ್ಲಿ ಗೆಲುವು, ಕಾಂಗ್ರೆಸ್ ಗೆ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಂಧ್ರ: ಜಗನ್ ಗೆ ಅನುಕಂಪದ ಅಲೆ: 14 ಸ್ಥಾನಗಳಲ್ಲಿ ಗೆಲುವು, ಕಾಂಗ್ರೆಸ್ ಗೆ ಮುಖಭಂಗ

ಹೈದರಾಬಾದ್ (ಐಎಎನ್ಎಸ್/ ಪಿಟಿಐ): ನಾಯಕ ವೈ.ಎಸ್. ಜಗನ್ ಮೋಹನ ರೆಡ್ಡಿ ಅವರ ಬಂಧನದ ಹಿನ್ನೆಲೆಯಲ್ಲಿ ಅನುಕಂಪದ ಅಲೆಯನ್ನು ಏರಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷವು (ವೈಎಸ್ಆರ್ ಸಿಪಿ) 18 ವಿಧಾನಸಭಾ ಸ್ಥಾನಗಳ ಪೈಕಿ 14 ಸ್ಥಾನಗಳನ್ನು ಗೆದ್ದು, ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಪ್ರತಿಸ್ಪರ್ಧಿಗಳು ನೆಲಕಚ್ಚುವಂತೆ ಮಾಡಿದೆ. ಇದರ ಜೊತೆ ನೆಲ್ಲೂರು ಲೋಕಸಭಾ ಕ್ಷೇತ್ರದಲ್ಲೂ ಮುನ್ನಡೆಯಲ್ಲಿದೆ.ಇದರೊಂದಿಗೆ ವೈಎಸ್ ಆರ್ ಎಂದೇ ಜನಪ್ರಿಯರಾಗಿದ್ದ ದಿವಂಗತ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರ ಜಗನ್ ಮೋಹನ ರೆಡ್ಡಿ ಅವರು ಹುಟ್ಟುಹಾಕಿದ ವೈಎಸ್ಆರ್ ಕಾಂಗ್ರೆಸ್ ಪಕ್ಷವು 18 ವಿಧಾನಸಭಾ ಕ್ಷೇತ್ರಗಳು ಮತ್ತು ನೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ವಿಜಯಸಾಧನೆಯ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದೆ.ಆಳುವ ಕಾಂಗ್ರೆಸ್ ಪಕ್ಷವು ಒಂದು ಸ್ಥಾನವನ್ನು ಗೆದ್ದುಕೊಂಡು ಇನ್ನೊಂದರಲ್ಲಿ ಮುನ್ನಡೆಯಲ್ಲಿದ್ದರೆ, ತೆಲಂಗಾಣ ರಾಷ್ಟ್ರ ಸಮಿತಿಯು (ಟಿಆರ್ ಎಸ್) ತೆಲಂಗಾಣದಲ್ಲಿ ಚುನಾವಣೆ ನಡೆದ ಏಕೈಕ ಕ್ಷೇತ್ರ ಪರ್ಕಳದಲ್ಲಿ ಮುನ್ನಡೆಯಲ್ಲಿದೆ.ಬಿಗಿ ಭದ್ರತೆಯ ಮಧ್ಯೆ ಶುಕ್ರವಾರ ಮುಂಜಾನೆ 8 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಮಂಗಳವಾರ ನಡೆದ ಚುನಾವಣೆಯಲ್ಲಿ  12 ಜಿಲ್ಲೆಗಳಲ್ಲಿ ವ್ಯಾಪಿಸಿರುವ 18 ಕ್ಷೇತ್ರಗಳಲ್ಲಿ ಶೇಕಡಾ 80ರಷ್ಟು ಮತ್ತು ನೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 70 ರಷ್ಟು ಮತದಾನ ನಡೆದಿತ್ತು.ಸಂಸತ್ತಿನ ಒಬ್ಬ ಸದಸ್ಯನ ರಾಜೀನಾಮೆ ಹಾಗೂ ಜಗನ್ ಪಕ್ಷದ ಕಡೆಗೆ ಒಲವು ಬದಲಾಯಿಸಿದ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದಿಂದ 17 ಶಾಸಕರನ್ನು ಅನರ್ಹಗೊಳಿಸಿದ ಪರಿಣಾಮವಾಗಿ ಈ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.