ಮಂಗಳವಾರ, ಮೇ 17, 2022
27 °C

ಆಟೊ ಪರ್ಮಿಟ್‌ಗೆ ಪ್ರತ್ಯೇಕ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಟೊ ಪರ್ಮಿಟ್‌ಗೆ ಪ್ರತ್ಯೇಕ ಕೇಂದ್ರ

ಬೆಂಗಳೂರು: `ಎಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳನ್ನು ಸಂಪೂರ್ಣ ಗಣಕೀಕೃತಗೊಳಿಸಿ ಕಾಗದಮುಕ್ತಗೊಳಿಸಲಾಗುವುದು. ಹಾಗೆಯೇ ನಗರದಲ್ಲಿ ಆಟೊರಿಕ್ಷಾ ಪರ್ಮಿಟ್ ವಿತರಣೆಗೆಂದೇ ಪ್ರತ್ಯೇಕ ಕೇಂದ್ರ ತೆರೆಯಲಾಗುವುದು~ ಎಂದು ಸಾರಿಗೆ ಸಚಿವ ಆರ್. ಅಶೋಕ ಹೇಳಿದರು.ಜಯನಗರ 4ನೇ ಬಡಾವಣೆಯಲ್ಲಿರುವ ಟಿಟಿಎಂಸಿ ಕಟ್ಟಡದ 2ನೇ ಮಹಡಿಗೆ ಸ್ಥಳಾಂತರಗೊಂಡ ದಕ್ಷಿಣ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.`ಆಟೊರಿಕ್ಷಾಗಳಿಗೆ ಪರ್ಮಿಟ್ ನೀಡಿಕೆಯಲ್ಲಿ ಮಧ್ಯವರ್ತಿಗಳು ರಿಕ್ಷಾ ಮಾಲೀಕರಿಂದ ಸುಮಾರು 25,000 ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ. ಇದರಲ್ಲಿ ಇಲಾಖೆಯ ಕೆಲ ಅಧಿಕಾರಿಗಳು ಶಾಮೀಲಾಗಿರುವುದು ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಎಲ್ಲ ಆಟೊರಿಕ್ಷಾಗಳಿಗೆ ಒಂದೇ ಕಡೆ ಪರ್ಮಿಟ್‌ಗಳನ್ನು ನೀಡುವ ಕೇಂದ್ರ ತೆರೆಯಲಾಗುವುದು. ಶಾಂತಿನಗರ ಬಸ್‌ನಿಲ್ದಾಣ ಪ್ರದೇಶದಲ್ಲೇ ಈ ಕೇಂದ್ರ ಆರಂಭವಾಗಲಿದೆ~ ಎಂದು ಅವರು ತಿಳಿಸಿದರು.`ಈ ವರ್ಷ 825 ಹೊಸ ಬಸ್‌ಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು.  ಇನ್ನು ಮುಂದೆ ಪರಿಸರ ಸ್ನೇಹಿ ಯುರೋ 4 ಮಾದರಿಯ ಬಸ್‌ಗಳನ್ನೇ ಖರೀದಿಸಲು ನಿರ್ಧರಿಸಲಾಗಿದೆ. ಅಲ್ಲದೇ ನಗರದ 24 ಕಡೆಗಳಿಂದ `ಮೆಟ್ರೊ~ ರೈಲು ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ 60 ಬಸ್‌ಗಳ ಸಂಚಾರ ಆರಂಭಿಸಲಾಗುವುದು~ ಎಂದರು.ವಿನೂತನ ಸೌಲಭ್ಯ: `ಸ್ಥಳಾಂತರಗೊಂಡ ದಕ್ಷಿಣ ಆರ್‌ಟಿಒ ಕಚೇರಿಯಲ್ಲಿ ಅತ್ಯಾಧುನಿಕವಾದಂಥ ಸೌಲಭ್ಯವಿದೆ. ಇಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ವಾಹನಗಳ ಅರ್ಹತಾ ಪತ್ರ ವಿತರಣೆ, ಅರ್ಹತಾ ಪತ್ರಗಳ ನವೀಕರಣ, ರಹದಾರಿ ಶುಲ್ಕ, ತೆರಿಗೆ ಇತರೆ ವಿವರವನ್ನು ಎಲ್‌ಸಿಡಿ ಪರದೆ ಮೂಲಕ ಪ್ರದರ್ಶಿಸಲಾಗುವುದು. ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರಸ್ತೆ ಸುರಕ್ಷತಾ ಜಾಗೃತಿ ಕೇಂದ್ರ ತೆರೆಯಲಾಗಿದೆ. ಟೋಕನ್ ಪದ್ಧತಿ ಜಾರಿಗೊಳಿಸುವ ಮೂಲಕ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು~ ಎಂದು ವಿವರಿಸಿದರು.`ನಗರದ ಸಿಂಗನಾಯಕನಹಳ್ಳಿ ಹಾಗೂ ಧಾರವಾಡ ಜಿಲ್ಲೆಯ ರಾಯಪುರ ಕೈಗಾರಿಕಾ ಪ್ರದೇಶದಲ್ಲಿ ಭಾರಿ ವಾಹನ ಚಾಲನಾ ತರಬೇತಿ ಶಾಲೆ ಸ್ಥಾಪಿಸಲಾಗುವುದು~ ಎಂದು ಹೇಳಿದರು.ವರ್ತುಲ ರೈಲು ಅಗತ್ಯ: ಸಂಸದ ಅನಂತಕುಮಾರ್ ಮಾತನಾಡಿ, `ಜನರಿಗೆ ಸುಧಾರಿತ ಸೌಲಭ್ಯ ಕಲ್ಪಿಸಬೇಕಾದರೆ ಬಹುವಿಧ ಸಾರಿಗೆ ವ್ಯವಸ್ಥೆ ಜಾರಿಗೊಳಿಸಬೇಕು. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವುದರಿಂದ ನಗರಕ್ಕೆ ವರ್ತುಲ ರೈಲು ಸಂಚಾರ ಅಗತ್ಯವಿದೆ. ಈ ಬಗ್ಗೆ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರೊಂದಿಗೆ ಚರ್ಚಿಸಲು ಸಾರಿಗೆ ಸಚಿವರ ನಿಯೋಗ ದೆಹಲಿಗೆ ಹೋಗುವುದಾದರೆ ನಾನು ಕೂಡ ಪಾಲ್ಗೊಳ್ಳುತ್ತೇನೆ~ ಎಂದುಅವರು ಹೇಳಿದರು.`ಆಟಿಒ ಕಚೇರಿಗಳಿಗೆ ಕರ್ನಾಟಕ ರಾಜ್ಯ ಸಾರಿಗೆ ಕೇಂದ್ರ ಅಥವಾ ಸಾರಿಗೆ ಸೇವಾ ಕೇಂದ್ರ ಎಂಬ ಹೆಸರನ್ನಿಡುವುದು ಸೂಕ್ತ. ಈ ಬಗ್ಗೆ ಸಚಿವರು ಗಮನ ಹರಿಸಬೇಕು~ ಎಂದು ಅವರು ನುಡಿದರು.ಶಾಸಕ ಬಿ.ಎನ್. ವಿಜಯಕುಮಾರ್, ಬಿಎಂಟಿಸಿ ಉಪಾಧ್ಯಕ್ಷರಾದ ಶಾಸಕ ಎಂ.ಕೃಷ್ಣಪ್ಪ, ಮಾಜಿ ಮೇಯರ್ ಎಸ್.ಕೆ. ನಟರಾಜ್, ಪಾಲಿಕೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ರಾಮಮೂರ್ತಿ, ಪಾಲಿಕೆ ಸದಸ್ಯರಾದ ಎನ್.ನಾಗರಾಜ್, ಬಿ.ಸೋಮಶೇಖರ್, ಎಲ್. ರಮೇಶ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇಗೌಡ, ಆಯುಕ್ತ ಟಿ. ಶಾಮಭಟ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.ಕೇಂದ್ರ ಸರ್ಕಾರದಿಂದ ದ್ರೋಹ: ಅನಂತಕುಮಾರ

`ಕೇಂದ್ರ ಯೋಜನಾ ಆಯೋಗವು ಬಡತನದ ಬಗ್ಗೆ ನೀಡಿರುವ ಹೊಸ ವ್ಯಾಖ್ಯಾನ ಹಾಸ್ಯಾಸ್ಪದವಾಗಿದ್ದು, ಆ ಮೂಲಕ ಕೇಂದ್ರದ ಯುಪಿಎ ಸರ್ಕಾರ ದೇಶದ ಜನತೆಗೆ ದ್ರೋಹ ಬಗೆದಿದೆ~ ಎಂದು ಸಂಸದ ಅನಂತಕುಮಾರ್ ಆರೋಪಿಸಿದರು. `ಏಳು ವರ್ಷಗಳ ಹಿಂದೆ ದೇಶದ ಸಾಮಾನ್ಯ ಜನರು ಹಾಗೂ ಬಡವರ ಹಿತ ಕಾಪಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಆ ವಾಗ್ದಾನ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಬೆಲೆ ಏರಿಕೆಯಿಂದ ಜನ ಪರದಾಡುತ್ತಿದ್ದಾರೆ~ ಎಂದರು.`ಹೀಗಿರುವಾಗ ಗ್ರಾಮಾಂತರ ಪ್ರದೇಶದಲ್ಲಿ ದಿನವೊಂದಕ್ಕೆ 26 ರೂಪಾಯಿ ಹಾಗೂ ನಗರಗಳಲ್ಲಿ ನಿತ್ಯ 35 ರೂಪಾಯಿಗಿಂತ ಕಡಿಮೆ ಆದಾಯ ಗಳಿಸುವವರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂಬುದಾಗಿ ಕೇಂದ್ರ ಯೋಜನಾ ಆಯೋಗವು ನೀಡಿರುವ ವ್ಯಾಖ್ಯಾನ ಹಾಸ್ಯಾಸ್ಪದ~ ಎಂದರು.`ದೇಶದ ಜನರಿಗೆ ಆಹಾರ, ಆರೋಗ್ಯ, ಸಾಮಾಜಿಕ ಭದ್ರತೆ ಕಲ್ಪಿಸುವ ಜತೆಗೆ ಶಿಕ್ಷಣ ಮತ್ತು ಉದ್ಯೋಗ ಅವಕಾಶ ಕಲ್ಪಿಸುವ ಸಲುವಾಗಿ ಸಮಗ್ರ ಯೋಜನೆ ರೂಪಿಸಬೇಕು~ ಎಂದರು.`2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವರಾದ ಪ್ರಣವ್ ಮುಖರ್ಜಿ ಹಾಗೂ ಪಿ.ಚಿದಂಬರಂ ನಡುವೆ ಭಿನ್ನಾಭಿಪ್ರಾಯವಿದೆ ಎಂಬುದನ್ನು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಒಪ್ಪಿಕೊಂಡಿದ್ದಾರೆ.ಇಷ್ಟಾದರೂ ಪ್ರಧಾನಿ ಡಾ.ಮನಮೋಹನ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇದನ್ನು ಒಪ್ಪುತ್ತಿಲ್ಲ. 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಚಿದಂಬರಂ ಪಾತ್ರ ಕುರಿತು ಸಿಬಿಐ ತನಿಖೆ ನಡೆಸಬೇಕು~ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.