ಬುಧವಾರ, ಜನವರಿ 29, 2020
29 °C

ಆಟೊ ಪ್ರಯಾಣಿಕರಿಗೆ ಇನ್ನು ‘ಸುಗಮ ಸವಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರೆದ ಕಡೆ ಬಾರದ ಹಾಗೂ ಮೀಟರ್‌ಗಿಂತ ಹೆಚ್ಚಿನ ಪ್ರಯಾಣ ದರ ಕೇಳುವ ಆಟೊ ಚಾಲಕರ ವರ್ತನೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ನಗರ ಸಂಚಾರ ಪೊಲೀಸರು ‘ಸುಗಮ ಸವಾರಿ’ ಎಂಬ ಯೋಜನೆಯನ್ನು ನಗರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದಿದ್ದಾರೆ.ನಗರ ಸಂಚಾರ ಪೊಲೀಸರು ಕಬ್ಬನ್‌ ಉದ್ಯಾನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಜನೆಯ ರಾಯಭಾರಿಯೂ ಆಗಿರುವ ನಟ ಸುದೀಪ್‌ ‘ಸುಗಮ ಸವಾರಿ’ಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಸುದೀಪ್‌, ‘ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಬರುವವರ ಪೈಕಿ ಬಹುತೇಕ ಮಂದಿ ತಲುಪುಬೇಕಾದ ಸ್ಥಳಕ್ಕೆ ಹೋಗಲು ಆಟೊಗಳನ್ನೇ ನೆಚ್ಚಿಕೊಂಡಿರುತ್ತಾರೆ. ಪ್ರಯಾಣಿಕರೊಂದಿಗೆ ಸ್ನೇಹ–ಸೌಹಾರ್ದದಿಂದ ವರ್ತಿಸುವುದು ಚಾಲಕರ ಕರ್ತವ್ಯ. ಊರಿಗೆ ಹೊಸಬರು ಎಂಬ ಕಾರಣಕ್ಕೆ ದುಬಾರಿ ಹಣ ವಸೂಲಿ ಮಾಡುವುದು ಸರಿಯಲ್ಲ’ ಎಂದರು.‘ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸುವುದು ಪೊಲೀಸರ ಕರ್ತವ್ಯ. ಹೀಗಾಗಿ ಅನಗತ್ಯವಾಗಿ ದಂಡ ಹಾಕುತ್ತಾರೆ ಎಂದು ಆಟೊ ಚಾಲಕರು ಪೊಲೀಸರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ನೀವು ಕಾನೂನು ಬದ್ಧರಾಗಿ ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಂಡರೆ ಯಾರೂ ನಿಮ್ಮನ್ನು ಪ್ರಶ್ನಿಸುವುದಿಲ್ಲ’ ಎಂದು ಸಲಹೆ ನೀಡಿದರು.ನಂತರ ಮಾತನಾಡಿದ  ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್  ‘ನಗರದಲ್ಲಿರುವ ಬಹುತೇಕ ಆಟೊ ಚಾಲಕರು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಿ­ದ್ದಾರೆ. ಆದರೆ, ಕೆಲವು ಚಾಲಕರ ವರ್ತನೆಯಲ್ಲಿ ಬದಲಾವಣೆಯಾಗಬೇಕಿದೆ. ಚಾಲಕರು ಜವಾಬ್ದಾರಿ­ಯಿಂದ ವರ್ತಿಸಿ ತಾವು ಸಹ ಜನ­ರಕ್ಷಕರು ಎಂಬ ಭಾವನೆಯನ್ನು ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.‘ಮೃದು ಧೋರಣೆಯನ್ನು ಮೈಗೂಡಿಸಿಕೊಳ್ಳುವಂತೆ ಮಾಡುವುದು ಹಾಗೂ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಲು ಚಾಲಕರಿಗೆ ಅರಿವು ಮೂಡಿಸುವುದು ಕೂಡ ಈ ಯೋಜನೆಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ವಿಶೇಷ ತರಬೇತಿ ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುವುದು’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಬಿ,ದಯಾನಂದ್‌ ಹೇಳಿದರು.20 ಸಾವಿರ ಆಟೊಗಳಿಗೆ ಪರವಾನಗಿ ಇಲ್ಲ:

‘ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಆಟೊಗಳಿವೆ. ಈ ಪೈಕಿ 20 ಸಾವಿರ ಆಟೊಗಳು ಪರವಾನಗಿ ಪಡೆದಿಲ್ಲ’ ಎಂದು ಆಟೊ ಚಾಲಕರ ಸಂಘದ ದೂರಿದರು. ‘ಇದಕ್ಕೆ ಆದಷ್ಟು ಬೇಗ ಕಡಿವಾಣ ಹಾಕಲಾಗುವುದು. ಜತೆಗೆ ಮುಂಗಡ ಪಾವತಿ ನಿಲ್ದಾಣದ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಸಂಚಾರ ಪೊಲೀಸರು ಭರವಸೆ ನೀಡಿದರು.ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಕಮಲ್‌­ಪಂತ್, ಸಾರಿಗೆ ಆಯುಕ್ತ ಕೆ.

ಅಮರ­ನಾರಾಯಣ, ಸಂಚಾರ ವಿಭಾಗದ ಡಿಸಿಪಿಗಳಾದ ಎಸ್‌.ಗಿರೀಶ್‌ ಹಾಗೂ ಎಂ.ಬಿ.ರಾಜೇಂದ್ರ­ಪ್ರಸಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಏನಿದು ಸುಗಮ ಸವಾರಿ?

ಆಟೊ ಪ್ರಯಾಣದ ತಮ್ಮ ಅನುಭವ ಹಾಗೂ ಚಾಲಕರ ವರ್ತನೆ ಬಗ್ಗೆ ಪ್ರತಿಕ್ರಿಯಿಸಲು ನಾಗರಿಕರಿಗೆ ಅನುಕೂಲವಾಗಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಆ್ಯಂಡ್ರಾಯ್ಡ್‌ ಮೊಬೈಲ್ ಹೊಂದಿರುವ ಗ್ರಾಹಕರು ಗೂಗಲ್‌ ಪ್ಲೇನಿಂದ ‘ಹ್ಯಾಪಿ ಆಟೊ‘ ಎಂಬ ಆಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡು, ಅದರ ಮೂಲಕವೇ ದೂರುಗಳನ್ನು ರವಾನಿಸಬಹುದು.

ಚಾಲಕರು ಕರೆದೆಡೆ ಬಾರದಿದ್ದರೆ ಹಾಗೂ ದುಪ್ಪಟ್ಟು ಹಣ ಕೇಳಿದರೆ ಆ ಕ್ಷಣದಲ್ಲೇ ಮೊಬೈಲ್‌ ಆಪ್‌ ಮೂಲಕ ದೂರು ಕಳುಹಿಸಬಹುದು. ಜತೆಗೆ ಪ್ರಯಾಣದ ವೇಳೆ ಸನ್ನಡತೆಯಿಂದ ವರ್ತಿಸುವ ಚಾಲಕರ ಬಗ್ಗೆಯೂ ಪ್ರಶಂಸೆ ಮಾಡಿ ಸಂದೇಶ ರವಾನಿಸಬಹುದು. ಪ್ರಯಾಣಿಕರ ದೂರುಗಳು ಹಾಗೂ ಸಲಹೆಗಳನ್ನು ಪಡೆಯಲು ಶೀಘ್ರವೇ ಪ್ರತ್ಯೇಕ ಕೇಂದ್ರವೊಂದನ್ನು ತೆರೆಯಲಾಗುವುದು. ಇದಕ್ಕೆ ಆಟೊ ಸಂಘಗಳು ಸಹ ಒಪ್ಪಿಗೆ ನೀಡಿವೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.ಪ್ರಯಾಣಿಕರಿಂದ ಬಂದ ಪ್ರತಿಕ್ರಿಯೆಗಳನ್ನು ತುಲನೆ ಮಾಡಿ ಉತ್ತಮ ನಡತೆಯುಳ್ಳ ಚಾಲಕರನ್ನು ಗುರುತಿಸಲಾಗುವುದು. ಬಳಿಕ ಆ ಚಾಲಕರ ಆಟೊಗಳ ಮೇಲೆ ‘ಸುಗಮ ಸವಾರಿ’ ಎಂಬ ಸ್ಟಿಕ್ಕರ್‌ ಅಂಟಿಸಲಾಗುವುದು. ಪ್ರಯಾಣಿಕರು ಆದ್ಯತೆಯ ಮೇರೆಗೆ ಅಂತಹ ಆಟೊಗಳನ್ನು ಸುರಕ್ಷಿತ ಪ್ರಯಾಣಕ್ಕೆ ಆಯ್ದುಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.ಆಟೊ ಸಿಗದೆ ಜೀವ ಹೋಯ್ತು

‘ಇತ್ತೀಚೆಗೆ ಒಂದು ರಾತ್ರಿ ಪುಟ್ಟೇನಹಳ್ಳಿಯಲ್ಲಿ ಮಹಿಳೆಯೊಬ್ಬರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಯಿತು. ಈ ವೇಳೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬದವರ ಜತೆ ಸ್ಥಳೀಯರೂ ಮುಂದಾದರು. ಆದರೆ, ಅದೇ ಮಾರ್ಗವಾಗಿ ಬಂದ ಎಷ್ಟೊ ಆಟೊಗಳು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ನೆರವಾಗಲಿಲ್ಲ. ಚಾಲಕರು ಆ ಮಹಿಳೆಯ ನೋವಿಗೆ ಕಿವಿಗೊಡದೆ ಹೋಗಿದ್ದರಿಂದ ಅವರ  ಜೀವವೇ ಹೋಯಿತು’

– ಸುದೀಪ್‌, ನಟ

ಪ್ರತಿಕ್ರಿಯಿಸಿ (+)