ಭಾನುವಾರ, ಏಪ್ರಿಲ್ 18, 2021
33 °C

ಆಟೋರಿಕ್ಷಾ ಬಿಡಿಭಾಗ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಪ್ರಾದೇಶಿಕ ಸಾರಿಗೆ ಕಚೇರಿ ಒಳಗೆ ನಿಲ್ಲಿಸಿದ್ದ ಆಟೋರಿಕ್ಷಾಗಳ ಬಿಡಿಭಾಗಗಳು, ಗ್ಯಾಸ್‌ಕಿಟ್‌ಗಳನ್ನು ಕಳವು ಮಾಡಿರುವ ಘಟನೆಯಿಂದ ರೊಚ್ಚಿಗೆದ್ದ ಆಟೋ ಚಾಲಕರು, ಮಾಲೀಕರು ದಿಢೀರ್ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ ಘಟನೆ ಗುರುವಾರ ನಡೆಯಿತು.

ಮೀಟರ್ ಅಳವಡಿಸದಿರುವುದು ಸೇರಿದಂತೆ ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಆಟೋಗಳನ್ನು ವಶಪಡಿಸಿಕೊಂಡು ಆರ್‌ಟಿಒ ಕಚೇರಿಯಲ್ಲಿ ನಿಲ್ಲಿಸಲಾಗಿತ್ತು. ಗುರುವಾರ ದಂಡ ಪಾವತಿಸಿ ತಮ್ಮ ಆಟೋಗಳನ್ನು ಬಿಡಿಸಿಕೊಳ್ಳಲು ಹೋದ ಆಟೋ ಚಾಲಕರಿಗೆ ಅಚ್ಚರಿ ಕಾದಿತ್ತು. ಆಟೋಗಳಲ್ಲಿನ ಸಾಮಗ್ರಿಗಳು, ಯಂತ್ರೋಪಕರಣಗಳು ನಾಪತ್ತೆಯಾಗಿದ್ದವು. ಆಟೋಗಳ ಬಿಡಿಭಾಗಗಳು, ಗ್ಯಾಸ್ ಕಿಟ್‌ಗಳು ಮತ್ತು ಯಂತ್ರೋಪಕರಣಗಳನ್ನು ಕಳವು ಮಾಡಲಾಗಿತ್ತು.

ಇದರಿಂದ ಆಕ್ರೋಶಗೊಂಡ ಆಟೋ ಚಾಲಕರು, ಮಾಲೀಕರು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಆರ್‌ಟಿಒ ಕಚೇರಿಯಲ್ಲಿದ್ದಾಗ ಕಳವು ನಡೆದಿರುವುದರಿಂದ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಅಧಿಕಾರಿಗಳೇ ಕಳುವಾಗಿರುವ ವಸ್ತುಗಳ ವೆಚ್ಚವನ್ನು ಭರಿಸಿಕೊಡಬೇಕು. ಈಗಾಗಲೇ ಎರಡು ಮೂರು ದಿನಗಳಿಂದ ಆಟೋ ನಿಲ್ಲಿಸಿದ್ದರಿಂದ ದುಡಿಮೆಯೂ ನಿಂತಿದೆ. ಮತ್ತೆ ಈಗ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕು. ಬಡವರ ಬದುಕಿನ ಜತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ತಪ್ಪು ಮಾಡಿದರೆ ದಂಡ ಹಾಕುತ್ತೀರಾ. ಆದರೆ, ಈಗ ನಿಮ್ಮ ಕಚೇರಿಯಲ್ಲಿ ಕಳವು ಮಾಡಲಾಗಿದೆ. ಇದಕ್ಕೆ ಯಾರು ಹೊಣೆಗಾರರು. ನಿಮ್ಮ ತಪ್ಪಿಗೆ ನಾವು ಶಿಕ್ಷೆ ಅನುಭವಿಸಬೇಕೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ಬಗ್ಗೆ ಆರ್‌ಟಿಒ ಕಚೇರಿಯಲ್ಲಿ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಎಸ್.ಕೆ. ಬಸವರಾಜನ್, ಬೇಜಾವಾಬ್ದಾರಿ ವರ್ತನೆಯಿಂದಾಗಿ ಆಟೋಗಳ ಸಾಮಗ್ರಿಗಳು, ಗ್ಯಾಸ್ ಕಿಟ್, ಗ್ಯಾಸ್ ಸಿಲಿಂಡರ್, ಎಂಜಿನ್ ಮತ್ತಿತರ ಯಂತ್ರೋಪಕರಣಗಳ ಬಿಡಿ ಭಾಗಗಳು ಕಳವಾಗಿವೆ. ಕಳುವಾಗಿರುವ ಬಿಡಿ ಭಾಗಗಳನ್ನು ಅಧಿಕಾರಿಗಳ ಸಂಬಳದಲ್ಲೇ ಆಟೋ ಚಾಲಕ, ಮಾಲೀಕರಿಗೆ ನೀಡುವಂತೆ ತಾಕೀತು ಮಾಡಿದರು.

ಕಚೇರಿ ಸುತ್ತ ಕಾಂಪೌಂಡ್ ಇದೆ. ಕಚೇರಿ ಕಾಯಲು ಕಾವಲುಗಾರರು ಇದ್ದಾರೆ. ಹಾಗಾದರೆ ಯಾರು ಕಳವು ಮಾಡಿದರು? ಎಂದು ಪ್ರಶ್ನಿಸಿದರು.

ಘಟನೆ ಕುರಿತು ಸಮಜಾಯಿಷಿ ನೀಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ತೆಂಬದ್ ಕಳ್ಳತನ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆಟೋಗಳ ಬಿಡಿ ಭಾಗಗಳನ್ನು ಕಳ್ಳತನ ಮಾಡಲಾಗಿದೆ. ಆದರೆ, ಬಿಡಿ ಭಾಗಗಳನ್ನು ತಂದು ಕೊಡಲು ಸಾಧ್ಯವಿಲ್ಲ. ಇಲಾಖೆಯಲ್ಲಿ  ಯಾವುದೇ ಅನುದಾನವು ಇಲ್ಲ. ಬಿಡಿ ಭಾಗಗಳನ್ನು ತಂದು ಕೊಟ್ಟರೆ ದುರಸ್ತಿ ಕಾರ್ಯ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಇದನ್ನು ಒಪ್ಪಿಕೊಳ್ಳದ ಶಾಸಕ ಎಸ್.ಕೆ.ಬಸವರಾಜನ್ ಸಾರಿಗೆ ಇಲಾಖೆ ಅಧಿಕಾರಿಗಳೆಲ್ಲ ಸೇರಿ ನಿಮ್ಮ ಸಂಬಳದಲ್ಲಿ ಆಟೋಗಳ ಬಿಡಿ ಭಾಗಗಳನ್ನು ತಂದು ಕೊಡಿ. ಒಟ್ಟಿನಲ್ಲಿ ಆಟೋಗಳು ಮೊದಲಿನಂತೆ ಯಥಾಸ್ಥಿತಿಯಲ್ಲಿರಬೇಕು ಎಂದು ಎಚ್ಚರಿಕೆ ನೀಡಿದರು.

ಆಟೋ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ಎಂ.ಜಯಣ್ಣ ಮಾತನಾಡಿ, ಪ್ರತಿದಿನ ಅಂದಿನ ದುಡಿಮೆಯಲ್ಲಿ ಜೀವನ ಸಾಗಿಸುವ ಆಟೋ ಮಾಲೀಕರು, ಚಾಲಕರು ಈಗ ಹಣ ನೀಡಿ ಬಿಡಿ ಭಾಗಗಳನ್ನು ಖರೀದಿ ಮಾಡಿ ತಂದು ದುರಸ್ತಿ ಮಾಡಿಸುವಷ್ಟು ಶ್ರೀಮಂತರಲ್ಲ. ಪ್ರತಿ ದಿನದ ಜೀವನವನ್ನು ಹೇಗೆ ಸಾಗಿಸಬೇಕು ಎಂದು ಪರಿತಪಿಸುತ್ತಿರುತ್ತಾರೆ. ಈಗ ಯಂತ್ರಗಳ ಬಿಡಿ ಭಾಗಗಳು ಕಳವಾಗಿರುವುದನ್ನು ನೋಡಿದರೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು  ಕಿಡಿಕಾರಿದರು.

ಕೊನೆಗೆ ಕೆಲವು ಖಾಸಗಿ ಬಸ್ ಮಾಲೀಕರು ಕಳುವಾಗಿರುವ ವಸ್ತುಗಳ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದರಿಂದ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದಂತಾಗಿ ಸಭೆಯನ್ನು ಅಂತ್ಯಗೊಳಿಸಲಾಯಿತು.

ಮಾಜಿ ಶಾಸಕ ಎ.ವಿ.ಉಮಾಪತಿ, ಖಾಸಿಂ ಅಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.