ಶುಕ್ರವಾರ, ಜೂನ್ 18, 2021
28 °C
ಉತ್ತರ ಕರ್ನಾಟಕ

ಆಟ್ಯಾ ಪಾಟ್ಯಾ ದಾಪುಗಾಲು

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ಕೊಕ್ಕೊ ಆಟವನ್ನೇ ಹೋಲುವ ಆಟ್ಯಾಪಾಟ್ಯಾ ಎಂಬ ಕ್ರೀಡೆ ರಾಜ್ಯದಲ್ಲಿ ಕ್ರಮೇಣ ಬೆಳವಣಿಗೆ ಹೊಂದುತ್ತಿದೆ. ನೆರೆಯ ಮಹಾರಾಷ್ಟ್ರದಲ್ಲಿ ಹೆಚ್ಚು ಬಳಕೆಯಲ್ಲಿರುವ ಈ ಆಟ ಉತ್ತರದ ಕರ್ನಾಟಕದ ಅನೇಕ ಊರುಗಳಲ್ಲೂ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತದೆ. ಮೈಸೂರು–ಬೆಂಗಳೂರು ಭಾಗದ ಮಂದಿ ಈ ಹೆಸರು ಕೇಳದಿರಬಹುದು. ಆದರೆ ಧಾರವಾಡ, ದಾವಣಗೆರೆ, ಬೆಳಗಾವಿ ಭಾಗದವರಿಗೆ ಈ ಆಟ ಹೆಚ್ಚು ಪರಿಚಿತ.ಮೂರು ದಶಕಗಳ ಹಿಂದೆ ಸ್ಥಾಪನೆಯಾದ ಭಾರತೀಯ ಆಟ್ಯಾ–ಪಾಟ್ಯಾ ಫೆಡರೇಶನ್‌ನ ಅಧ್ಯಕ್ಷರಾಗಿ ಧಾರವಾಡದ ವಿ.ಡಿ. ಪಾಟೀಲ ಆಯ್ಕೆಯಾಗಿದ್ದಾರೆ. ದಾವಣಗೆರೆಯವರೇ ಆಗಿದ್ದ ಎಚ್‌.ಬಿ. ಹಳ್ಳದ ಅವರು ಈ ಹಿಂದೆ ಫೆಡರೇಷನ್‌ನ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದರು. ಅವರ ಜಾಗದಲ್ಲಿ ಇದೀಗ ಪಾಟೀಲರು ಕಾರ್ಯ ನಿರ್ವಹಿಸಲಿದ್ದಾರೆ. ಏಪ್ರಿಲ್‌ನಿಂದ ಹೊಸ ಸಮಿತಿಯು ಅಸ್ತಿತ್ವಕ್ಕೆ ಬರಲಿದೆ.ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ನಿಯೋಜನೆ ಮೇರೆಗೆ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಿ.ಡಿ. ಪಾಟೀಲರು ಸುಮಾರು 15 ವರ್ಷ ಕಾಲ ರಾಷ್ಟ್ರೀಯ ಆಟ್ಯಾಪಾಟ್ಯಾ ತಂಡದಲ್ಲಿ ಆಡಿದ ಅನುಭವ ಹೊಂದಿದವರು. ಕಳೆದ ವರ್ಷ ಭೂತಾನ್‌ನಲ್ಲಿ ನಡೆದ ದಕ್ಷಿಣ ಏಷ್ಯಾ ಮಟ್ಟದ ಮೊದಲ ಆಟ್ಯಾಪಾಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್‌ ಆದ ಭಾರತ ಪುರುಷ ತಂಡಕ್ಕೆ ತರಬೇತಿ ನೀಡಿದವರು. ಈ ಕ್ರೀಡೆಯಲ್ಲಿನ ಸಾಧನೆಗಾಗಿ 1984ರಲ್ಲಿ ರಾಜ್ಯ ಸರ್ಕಾರದಿಂದ ‘ಏಕಲವ್ಯ’ ಪುರಸ್ಕಾರವನ್ನೂ ಅವರು ಪಡೆದಿದ್ದಾರೆ.ಆಟ್ಯಾಪಾಟ್ಯಾ ಕುರಿತು ಪುಸ್ತಕ ಬರೆದು ಆಟದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು ಈ ಆಟದ ಸ್ವರೂಪ, ಬೆಳವಣಿಗೆ ಮತ್ತು ಸ್ಥಿತಿ–ಗತಿ ಕುರಿತು ‘ಪ್ರಜಾವಾಣಿ’ ಜೊತೆ ತಮ್ಮ ಅನಿಸಿಕೆ  ಹಂಚಿಕೊಂಡಿದ್ದಾರೆ.*ಆಟ್ಯಾ ಪಾಟ್ಯಾ ಅನ್ನುವ ಹೆಸರೇ ಭಿನ್ನವಾಗಿದೆ. ಈ ಆಟದ ಬಗ್ಗೆ ಹೆಚ್ಚು ಜನರು ಕೇಳಿರಲಾರರು. ಯಾವ ಬಗೆಯ ಆಟ ಇದು?

ಆಟ್ಯಾ ಪಾಟ್ಯಾ ಎನ್ನುವುದು ನಮ್ಮದೇ ದೇಶಿಯ ಕ್ರೀಡೆ. ಶತಮಾನಗಳಿಂದಲೂ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಿರುವ ಈ ಕ್ರೀಡೆ ಬೆಳವಣಿಗೆ ಹೊಂದುತ್ತಾ ಬಂದಿದೆ. ಮೂಲತಃ ಮಹಾರಾಷ್ಟ್ರದ ಕ್ರೀಡೆ ಇದು. ಆಟ್ಯಾ ಪಾಟ್ಯಾ ಎನ್ನುವ ಹೆಸರು ಅಲ್ಲಿನದ್ದೇ. ಈ ಆಟ ಬಹುತೇಕ ಕೊಕ್ಕೊ ಆಟವನ್ನೇ ಹೋಲುತ್ತದೆ. ಅದೇ ಅಂಕಣವನ್ನು ಬಳಸಿಕೊಂಡು ಆಡಬಹುದು.ಇಲ್ಲಿಯೂ ಒಂದು ತಂಡದಲ್ಲಿ ಏಕಕಾಲಕ್ಕೆ 9 ಆಟಗಾರರು ಆಡುತ್ತಾರೆ. ವ್ಯತ್ಯಾಸ ಎಂದರೆ ಕೊಕ್ಕೊದಲ್ಲಿ ಆಟಗಾರರು ಅಂಕಣದಲ್ಲಿ ಕುಳಿತುಕೊಂಡಿದ್ದರೆ, ಇಲ್ಲಿ ನಿಂತು ಆಡುತ್ತಾರೆ. ಒಟ್ಟು ಮೂರು ಇನ್ನಿಂಗ್ಸ್‌ಗಳ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ.

ಈ ಆಟವಾಡಲು ಯಾವುದೇ ಸಲಕರಣೆಗಳ ಅಗತ್ಯವಿಲ್ಲ. ಒಂದು ಸಮತಟ್ಟಾದ ಮೈದಾನ ಇದ್ದರೆ ಸಾಕು. ಹಳ್ಳಿಯ ಭಾಗದಲ್ಲಿ ಇದನ್ನು ಆಡುವವರು ಹೆಚ್ಚು.*ರಾಷ್ಟ್ರೀಯ ಕ್ರೀಡೆಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು ಯಾವಾಗ?

ಆಟ್ಯಾ ಪಾಟ್ಯಾಕ್ಕೆ ಭಾರತೀಯ ಒಲಿಂಪಿಕ್‌ ಒಕ್ಕೂಟ ಹಾಗೂ ಯುವ ಜನ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯು ಮಾನ್ಯತೆ ನೀಡಿದೆ. 1981ರಲ್ಲಿ ರಾಷ್ಟ್ರೀಯ ಮಟ್ಟದ ಫೆಡರೇಶನ್‌ ರಚನೆಯಾಯಿತು. ಅದರ ಜೊತೆಗೆ ರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನೂ ಆಯೋಜಿಸುತ್ತಾ ಬರಲಾಯಿತು. 1982ರಲ್ಲಿ ಪುರುಷರ ಟೂರ್ನಿಗಳು, 1983ರಲ್ಲಿ ಜೂನಿಯರ್‌ ವಿಭಾಗದ ಟೂರ್ನಿ ಹಾಗೂ 1984ಲ್ಲಿ ಸಬ್‌ ಜೂನಿಯರ್‌ ಹಾಗೂ ಮಹಿಳಾ ವಿಭಾಗದ ಟೂರ್ನಿಗಳು ರಾಷ್ಟ್ರ ಮಟ್ಟದಲ್ಲಿ ಆರಂಭಗೊಂಡವು. 1987ರಲ್ಲಿ ರಷ್ಯಾ ಹಾಗೂ ಇತರ ದೇಶಗಳಲ್ಲಿ ಈ ಕ್ರೀಡೆಯನ್ನು ಪ್ರದರ್ಶಿಸಲಾಯಿತು. ಈ ಮೂಲಕ ಆಟಕ್ಕೆ ಅಂತರರಾಷ್ಟ್ರೀಯ ಮಾನ್ಯತೆಯೂ ದೊರೆಯಿತು.ಈಗ ಪ್ರತಿ ವರ್ಷ ಮೂರು ವಿಭಾಗಗಳಲ್ಲಿ ರಾಷ್ಟ್ರಮಟ್ಟದ ಟೂರ್ನಿಗಳು ನಡೆಯುತ್ತಾ ಬರುತ್ತಿವೆ. ಇದಲ್ಲದೆ ವಲಯ ಮಟ್ಟದಲ್ಲೂ ಟೂರ್ನಿಗಳನ್ನು ಸಂಘಟಿಸುವ ಮೂಲಕ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ.  ಪ್ರಸ್ತುತ ದೇಶದ 28 ರಾಜ್ಯಗಳಲ್ಲಿ ಈ ಆಟವನ್ನು ಆಡಲಾಗುತ್ತಿದೆ. ರಾಷ್ಟ್ರೀಯ ಟೂರ್ನಿಗಳಲ್ಲಿ ಕನಿಷ್ಠ 20–25 ತಂಡಗಳು ಪಾಲ್ಗೊಳ್ಳುತ್ತಾ ಬಂದಿವೆ. ಮಹಾರಾಷ್ಟ್ರ, ಪುದುಚೇರಿ, ಕರ್ನಾಟಕ, ಉತ್ತರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ತಂಡಗಳು ಉತ್ತಮ ಪ್ರದರ್ಶನ ತೋರುತ್ತಿವೆ.*ಆಟ್ಯಾ ಪಾಟ್ಯಾದಲ್ಲಿ ಕರ್ನಾಟಕದ ಸಾಧನೆ ಏನು?

ಮೂರು ದಶಕಗಳಿಂದಲೂ ನಮ್ಮ ರಾಜ್ಯದ ಆಟಗಾರ–ಆಟಗಾರ್ತಿಯರು ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದ್ದಾರೆ, ಸೀನಿಯರ್‌ ಮಟ್ಟದಲ್ಲಿ ವರ್ಷ ಒಂದಲ್ಲ ಒಂದು ಪ್ರಶಸ್ತಿ ಗೆಲ್ಲುತ್ತಲೇ ಬಂದಿದ್ದಾರೆ. ಪುರುಷರ ತಂಡ ಈವರೆಗೆ ಸುಮಾರು 11 ಬಾರಿ ರಾಷ್ಟ್ರೀಯ ಚಾಂಪಿಯನ್‌ ಪಟ್ಟ ಎತ್ತಿ ಹಿಡಿದಿದೆ. ಕಳೆದ ವರ್ಷ ನಡೆದ ರಾಷ್ಟ್ರೀಯ ಟೂರ್ನಿಯಲ್ಲಿ ಕರ್ನಾಟಕ ಸಬ್‌ ಜೂನಿಯರ್‌ ವಿಭಾಗದಲ್ಲಿ          ಚಾಂಪಿಯನ್ ಆಗಿದೆ. ಜೂನಿಯರ್ ಹಾಗೂ ಹಿರಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾಶಾಲೆ, ಧಾರವಾಡದಲ್ಲಿರುವ ಯುನಿವರ್ಸಿಟಿ ಪಬ್ಲಿಕ್‌ ಸ್ಕೂಲ್‌, ಗದಗ ಜಿಲ್ಲೆಯ ನರೇಗಲ್‌ನ ಅನ್ನದಾನೀಶ್ವರ ಪ್ರೌಢಶಾಲೆ, ರೋಣ ತಾಲ್ಲೂಕಿನ ಯಾವಗಲ್‌ನಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಆಟಗಾರರು ಇದ್ದಾರೆ. ಇದಲ್ಲದೆ ಹುಬ್ಬಳ್ಳಿ, ದಾವಣಗೆರೆ, ಹಾವೇರಿ, ಬಾಗಲಕೋಟೆ, ಕಾರವಾರ, ಭಟ್ಕಳ ಮೊದಲಾದ ಭಾಗಗಳಿಂದಲೂ ಆಟಗಾರ–ಆಟಗಾರ್ತಿಯರು ರಾಜ್ಯ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.ಈಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರಮಟ್ಟದ ಟೂರ್ನಿಗಳನ್ನು ಆಯೋಜಿಸಲಾಗುತ್ತಿದೆ. ಈ ವರ್ಷ ಜನವರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರಾಷ್ಟ್ರೀಯ ಮಟ್ಟದ ಸಬ್‌ ಜೂನಿಯರ್‌ ಟೂರ್ನಿ ನಡೆಯಿತು. ಹಾಗೂ ಇದೇ ಮಾರ್ಚ್‌ನಲ್ಲಿ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ದಕ್ಷಿಣ ವಲಯ ಮಟ್ಟದ ಟೂರ್ನಿ ನಡೆಯಿತು. ಇದರಿಂದ ಸ್ಥಳೀಯ ಸ್ಪರ್ಧಿಗಳಿಗೆ ಪ್ರೋತ್ಸಾಹ ದೊರೆತು ಉತ್ತಮ ಸಾಧನೆ ತೋರಲು ಸಾಧ್ಯವಾಯಿತು. ಪ್ರೇಕ್ಷಕರೂ ಸಾಕಷ್ಟು ಸಂಖ್ಯೆಯಲ್ಲಿ ನೆರೆದು ಆಟ ವೀಕ್ಷಿಸಿ ಆಟಗಾರರನ್ನು ಬೆನ್ನು ತಟ್ಟಿದ್ದು ಖುಷಿ ಕೊಟ್ಟಿತು.*ಮೈಸೂರು–ಬೆಂಗಳೂರು ಭಾಗದಲ್ಲಿ ಈ ಆಟ ಬೆಳೆಯಲಿಲ್ಲವೇಕೆ?

ಮುಖ್ಯವಾಗಿ ಇದು ಗ್ರಾಮೀಣ ಕ್ರೀಡೆ. ಹೀಗಾಗಿ ಬೆಂಗಳೂರಿನಂತಹ ನಗರದಲ್ಲಿ ಅದಕ್ಕೆ ಪ್ರೋತ್ಸಾಹ ದೊರೆಯುವುದು ಕಡಿಮೆ. ಹಿಂದೆ ಎರಡು ಬಾರಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಟೂರ್ನಿಗಳನ್ನು ಆಯೋಜನೆ ಮಾಡಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ದೊರೆಯಲಿಲ್ಲ. ಮುಂದೆ ರಾಜ್ಯದ ವಿವಿಧೆಡೆ ಶಿಬಿರಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ.*ರಾಜ್ಯದಲ್ಲಿ ಆಟದ ಬೆಳವಣಿಗೆಗೆ ಇರುವ ತೊಂದರೆಗಳು ಏನು?

ಮಹಾರಾಷ್ಟ್ರದಲ್ಲಿ ಈ ಆಟಕ್ಕೆ ಅಲ್ಲಿನ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಸರ್ಕಾರಿ ಹುದ್ದೆಗಳಲ್ಲಿ  ಕ್ರೀಡಾ ಕೋಟಾದ ಅಡಿ ಮೀಸಲಾತಿಯ ಜೊತೆಗೆ ‘ಶಿವಾಜಿ’ ಪ್ರಶಸ್ತಿಯನ್ನು ನೀಡಿ ಬೆನ್ನು ತಟ್ಟುತ್ತಿದೆ. ಪಾಂಡಿಚೇರಿಯಲ್ಲಿ ಸಹ ಉದ್ಯೋಗದಲ್ಲಿ ಮೀಸಲಾತಿ ಇದೆ. ಆದರೆ ನಮ್ಮಲ್ಲಿ ಈ ವ್ಯವಸ್ಥೆ ಇನ್ನೂ ಜಾರಿಗೆ ಬಂದಿಲ್ಲ.  ಆಟ್ಯಾ–ಪಾಟ್ಯಾ ಆಟಗಾರರಿಗೆ ಶಿಕ್ಷಣದಲ್ಲಿ ಕ್ರೀಡಾ ಕೋಟಾದಡಿ ಸೀಟು ನೀಡಲಾಗುತ್ತಿದೆ. ಅದರಂತೆ ಉದ್ಯೋಗದಲ್ಲೂ ಇದನ್ನು ಪರಿಗಣಿಸಿದರೆ ಹೆಚ್ಚು ಮಂದಿ ಇದೇ ಆಟದಲ್ಲಿ ಉಳಿದು ಸಾಧನೆ ಮಾಡಲು ಪ್ರೇರಣೆಯಾಗುತ್ತದೆ.ಅಂತೆಯೇ, ಸ್ಕೂಲ್‌ ಗೇಮ್‌ ಫೆಡರೇಶನ್‌ ಆಫ್ ಇಂಡಿಯಾವು ಕೇವಲ ಜಿಲ್ಲಾ ಮಟ್ಟದ ಟೂರ್ನಿಗಳವರೆಗೆ ಮಾತ್ರ ಈ ಆಟಕ್ಕೆ ಅವಕಾಶ ನೀಡಿದೆ. ಇದನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಟೂರ್ನಿಗಳಿಗೂ ವಿಸ್ತರಿಸುವ ಅಗತ್ಯವಿದೆ.*ರಾಜ್ಯ ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ?

1982ರಲ್ಲಿ ಎಚ್‌.ವಿ. ಹಳ್ಳದ ಅವರು ರಾಜ್ಯದಲ್ಲಿ ಆಟ್ಯಾಪಾಟ್ಯಾ ಸಂಸ್ಥೆಯನ್ನು ಹುಟ್ಟುಹಾಕಿ ಈ ಆಟದ ಬೆಳವಣಿಗೆಗೆ ಚಾಲನೆ ನೀಡಿದರು. ಪ್ರಸ್ತುತ ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ರಾಜ್ಯ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ನಾನು ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಆಟಗಾರರಿಗೆ ಉತ್ತಮ ತರಬೇತಿ  ಹಾಗೂ ಸೌಲಭ್ಯ ಒದಗಿಸಲು ಸಂಸ್ಥೆ ಕಾರ್ಯೋನ್ಮುಖವಾಗಿದೆ. ವರ್ಷಗಳ ಹಿಂದೆ ಕರ್ನಾಟಕ ಚಾಂಪಿಯನ್‌ ಆಗಿತ್ತು. ಈಗ ಅದೇ ಸ್ಥಾನಕ್ಕೆ ರಾಜ್ಯ ತಂಡಗಳನ್ನು ಒಯ್ಯುವುದು ಸಂಸ್ಥೆಯ ಗುರಿ.*ರಾಷ್ಟ್ರೀಯ ಫೆಡರೇಷನ್‌ ಅಧ್ಯಕ್ಷರಾಗಿ ನಿಮ್ಮ ಯೋಜನೆಗಳು ಏನು?

ಒಕ್ಕೂಟವು ಈಗಾಗಲೇ ರಾಷ್ಟ್ರೀಯ ಟೂರ್ನಿಗಳನ್ನು ಯಶಸ್ವಿಯಾಗಿ ಸಂಘಟಿಸಿಕೊಂಡು ಬರುತ್ತಿದೆ. ದೇಶದ ಆಚೆಗೂ ಟೂರ್ನಿಗಳನ್ನು ನಡೆಸುವ ಉದ್ದೇಶ ಇದ್ದು, ನೇಪಾಳದಲ್ಲಿ ಎರಡನೇ ದಕ್ಷಿಣ ಏಷ್ಯಾ ಆಟ್ಯಾಪಾಟ್ಯಾ ಚಾಂಪಿಯನ್‌ಷಿಪ್‌ ಆಯೋಜಿಸಲು ತೀರ್ಮಾನಿಸಲಾಗಿದೆ. ಕ್ರೀಡಾ ಇಲಾಖೆ ಮಾನ್ಯತೆ ಇರುವ ಕಾರಣ ಸರ್ಕಾರದಿಂದ ಹಣಕಾಸು ನೆರವು ಇದ್ದು, ಟೂರ್ನಿಗಳ ಸಂಘಟನೆಗೆ ಯಾವುದೇ ತೊಂದರೆ ಇಲ್ಲ. ನಮ್ಮ ರಾಜ್ಯದಲ್ಲಿಯೂ ಹೆಚ್ಚು ಸ್ಪರ್ಧೆಗಳನ್ನು ನಡೆಸಲು ಆದ್ಯತೆ ನೀಡಲಾಗುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.