ಬುಧವಾರ, ಆಗಸ್ಟ್ 12, 2020
27 °C

ಆಡಿದ್ದನ್ನು ಶೀಘ್ರವಾಗಿ ಮಾಡಿ ತೋರಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್ (ಪಿಟಿಐ): ಶಾಹೀದ್ ಅಫ್ರಿದಿ ಅವರ ಷರತ್ತಿನ ನಿವೃತ್ತಿ ನಿರ್ಧಾರಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಇಜಾಜ್ ಬಟ್ ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ.ಬಟ್ ಅವರು ಮಂಗಳವಾರ ನೀಡಿದ್ದ ಹೇಳಿಕೆಯು ಮೃದುವಾಗಿತ್ತು. ಆದರೆ ಬುಧವಾರ ಅವರು ಸುದ್ದಿಗಾರರ ಮುಂದೆ ಕಾಣಿಸಿಕೊಂಡು ನೀಡಿದ ಪ್ರತಿಕ್ರಿಯೆ ಸಹಜವಾಗಿಯೇ ಅಚ್ಚರಿಗೊಳಿಸಿತು. `ಆಡಿದ್ದನ್ನು ಶೀಘ್ರವಾಗಿ ಮಾಡಿ ತೋರಿಸಲಿ~ ಎಂದು ಹೇಳುವ ಮೂಲಕ ಬೆರಗುಗೊಳಿಸಿದ್ದಾರೆ.`ಪಿಸಿಬಿಯ ಈಗಿನ ವ್ಯವಸ್ಥೆಯಲ್ಲಿ ಕ್ರಿಕೆಟ್ ಆಡುವುದು ಕಷ್ಟವೆಂದು ಅಫ್ರಿದಿ ಹೇಳಿದ್ದಾರೆ. ವ್ಯವಸ್ಥೆ ಎಂದರೆ ಅದರಲ್ಲಿ ನಾನು ಕೂಡ ಇದ್ದೇನೆ. ಒಂದು ವೇಳೆ ಅವರಿಗೆ ನಾನು ಮುಖ್ಯಸ್ಥನಾಗಿರುವ ಮಂಡಳಿಯ ಆಡಳಿತದ ಬಗ್ಗೆ ಆಕ್ಷೇಪ ಇದ್ದರೆ ತಕ್ಷಣವೇ ನಿವೃತ್ತಿ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲಿ~ ಎಂದು ಬಟ್ ಸ್ಪಷ್ಟಪಡಿಸಿದರು.`ಈ ಕ್ರಿಕೆಟಿಗನ ವರ್ತನೆಯನ್ನು ಸರಿಯೆಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಅವರು ಆಟಗಾರರ ನೀತಿಸಂಹಿತೆಯನ್ನು ಉಲ್ಲಂಘಿಸಿದ ಅನೇಕ ಘಟನೆಗಳು ನಡೆದಿವೆ~ ಎಂದ ಅವರು `ಆಟಗಾರರ ಗುತ್ತಿಗೆ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದು ನಿಜ. ಅಷ್ಟೇ ಅಲ್ಲ ನಾಯಕತ್ವದಲ್ಲಿ ಇದ್ದುಕೊಂಡು ಅಹಿತಕರ ಘಟನೆಗೆ ಅವರು ಕಾರಣರಾಗಿದ್ದಾರೆ. ಆದ್ದರಿಂದ ಪಿಸಿಬಿ ಕ್ರಮ ಕೈಗೊಂಡಿದೆ. ಅಗತ್ಯ ಎನಿಸಿದರೆ ಕ್ರಿಕೆಟಿಗ ತನ್ನ ಪರವಾಗಿ ವಿವರಣೆಯನ್ನು ಕ್ರಿಕೆಟ್ ಮಂಡಳಿಗೆ ನೀಡಬಹುದು~ ಎಂದು ಹೇಳಿದರು.ಮಂಗಳವಾರ ತಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಪಿಸಿಬಿ ಮುಂದಾಗುತ್ತದೆ ಎನ್ನುವುದನ್ನು ತಿಳಿದೇ ಬೆದರಿಗೆಯ ತಂತ್ರವಾಗಿ ಶಾಹೀದ್ ಅಫ್ರಿದಿ ಷರತ್ತಿನ ನಿವೃತ್ತಿ ಪ್ರಕಟಿಸಿದ್ದರು. ಆದರೆ ಕ್ರಿಕೆಟ್ ಮಂಡಳಿ ಯೋಜಿಸಿದಂತೆ ಶಿಸ್ತು ಕ್ರಮವನ್ನು ಜಾರಿಗೊಳಿಸಿದೆ. ಕೇಂದ್ರೀಕೃತ ಗುತ್ತಿಗೆ ಒಪ್ಪಂದದಿಂದ ಅಫ್ರಿದಿಯನ್ನು ಕೈಬಿಟ್ಟಿದೆ. ಅಷ್ಟೇ ಅಲ್ಲ ವಿವರಣೆ ಕೇಳಿ ನೋಟಿಸ್ ಕೂಡ ಕಳುಹಿಸಿದೆ. ಒಂದು ವಾರದೊಳಗೆ ನೋಟಿಸ್‌ಗೆ ಪ್ರತಿಕ್ರಿಯೆ ನೀಡಬೇಕು ಎಂದು ಕೂಡ ಗಡುವು ನೀಡಿದೆ.ಇನ್ನೊಂದೆಡೆ ಅಫ್ರಿದಿ ಮತ್ತು ಪಿಸಿಬಿ ನಡುವಣ ಚಕಮಕಿಯು ರಾಜಕೀಯ ಸ್ವರೂಪ ಪಡೆದುಕೊಳ್ಳತೊಡಗಿದೆ. ಕೆಲವು ಪಕ್ಷಗಳು ಅಫ್ರಿದಿ ಬೆಂಬಲಕ್ಕೆ ನಿಂತಿದ್ದರೆ, ಇನ್ನು ಕೆಲವು ಪಕ್ಷಗಳ ಪ್ರತಿನಿಧಿಗಳು ಕ್ರಿಕೆಟ್ ಮಂಡಳಿಯ ಪರವಾಗಿ ಮಾತನಾಡಿದ್ದಾರೆ. ಇದರಿಂದಾಗಿ ಗೊಂದಲಮಯ ವಾತಾವರಣವಾಗಿದೆ. ಇದರಿಂದಾಗಿ ಪಿಸಿಬಿ ಹಿಂದಿನ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಡಿದೆ. ಆಟಗಾರ ಅನುಸರಿಸುತ್ತಿರುವ ಒತ್ತಡಕ್ಕೆ ಮಣಿಯುವುದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.