ಮಂಗಳವಾರ, ಏಪ್ರಿಲ್ 13, 2021
32 °C

ಆತಂಕ ಇಲ್ಲ; ಗೆಲುವೊಂದೇ ಗುರಿ

ಗೋಪಾಲಕೃಷ್ಣ ಹೆಗಡೆ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮೊದಲು ದಕ್ಷಿಣ ಆಫ್ರಿಕಕ್ಕೆ ಧನ್ಯವಾದ ಹೇಳಬೇಕು. ದಕ್ಷಿಣ ಆಫ್ರಿಕ ಶನಿವಾರ ಮೀರಪುರದಲ್ಲಿ ಬಾಂಗ್ಲಾದೇಶವನ್ನು ಸದೆಬಡಿಯುವುದರೊಂದಿಗೆ ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳಿಗೆ ಇದ್ದ ಆತಂಕ ದೂರವಾಗಿ, ಎರಡೂ ತಂಡಗಳು ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯುವುದು ಖಚಿತವಾಯಿತು. ಇಂಗ್ಲೆಂಡ್ ಕೂಡ ಸಮಾಧಾನದ ನಿಟ್ಟುಸಿರು ಬಿಟ್ಟು ಎಂಟರ ಹಂತಕ್ಕೆ ಮುನ್ನಡೆಯಿತು.ಈಗ ಏನಿದ್ದರೂ ಭಾರತ ಗೆಲ್ಲುವುದೇ ಅಥವಾ ವೆಸ್ಟ್‌ಇಂಡೀಸ್ ಗೆಲ್ಲುವುದೇ ಎಂಬ ಪ್ರಶ್ನೆ ಮಾತ್ರ. ಹತ್ತನೇ ವಿಶ್ವ ಕಪ್ ಕ್ರಿಕೆಟ್‌ನ ‘ಬಿ’ ಗುಂಪಿನ ಕೊನೆಯ ಲೀಗ್ ಪಂದ್ಯ ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವೆ ಭಾನುವಾರ ಎಂ.ಎ. ಚಿದಂಬರಮ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಸೋತರೂ ಮುನ್ನಡೆಯುತ್ತದೆ. ವೆಸ್ಟ್‌ಇಂಡೀಸ್ ಸೋತರೂ ಅದರ ರನ್ ಸರಾಸರಿ ಬಾಂಗ್ಲಾದೇಶಕ್ಕಿಂತ ಉತ್ತಮವಾಗಿಯೇ ಇರುವುದರಿಂದ  ಅದೂ ಕೂಡ ಯಾವುದೇ ಒತ್ತಡವಿಲ್ಲದೇ ಆಡಬಹುದು.ಈ ಟೂರ್ನಿಯಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡ ಎಂಬ ಅಬ್ಬರದ ಪ್ರಚಾರದೊಂದಿಗೆ ಕಣಕ್ಕಿಳಿದ ಭಾರತ ಅದಕ್ಕೆ ತಕ್ಕ ಆಟವಾಡಿಲ್ಲ. ಲೀಗ್‌ನಲ್ಲಿ ಅಗ್ರಸ್ಥಾನ ಪಡೆಯುವ ಅದರ ಅವಕಾಶ ತಪ್ಪಿಹೋಗಿದೆ. ಈಗ ಏನಿದ್ದರೂ ಎರಡು ಅಥವಾ ಮೂರನೇ ಸ್ಥಾನ ಮಾತ್ರ ಸಾಧ್ಯ. ಮೊದಲು ತಂಡವನ್ನು ದುರ್ಬಲ ಬೌಲಿಂಗ್ ಮತ್ತು ಸಡಿಲ ಫೀಲ್ಡಿಂಗ್ ಕಾಡಿದವು.ನಂತರ ನಾಗಪುರದಲ್ಲಿ ಬ್ಯಾಟಿಂಗ್‌ನಲ್ಲೂ ಬಿರುಕು ಕಂಡಿತು. ಕ್ವಾರ್ಟರ್‌ಫೈನಲ್‌ಗೆ ಮೊದಲು ಭಾರತ ತನ್ನ ಮೊದಲಿನ ಆತ್ಮವಿಶ್ವಾಸ ಗಳಿಸಿಕೊಳ್ಳಬೇಕೆಂದರೆ ವೆಸ್ಟ್‌ಇಂಡೀಸ್ ವಿರುದ್ಧ ಗೆಲ್ಲಲೇಬೇಕು. ವೆಸ್ಟ್‌ಇಂಡೀಸ್ ದುರ್ಬಲ ತಂಡವೇನಲ್ಲ.ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ಗುರುವಾರ ಗೆಲುವಿನ ಸಮೀಪ ಬಂದು ಸೋತರೂ, ಆ ತಂಡ ಯಾವ ಹಂತದಲ್ಲಿ ಹೇಗೆ ಆಡುತ್ತದೆ ಎಂದು ಹೇಳಲು ಬರುವುದಿಲ್ಲ. ತಂಡದಲ್ಲಿ ಉತ್ತಮ ವೇಗದ ಬೌಲರುಗಳಿದ್ದಾರೆ.ಜೊತೆಗೆ ಕ್ರಿಸ್ ಗೇಲ್ ಮತ್ತು ಕೀರನ್ ಪೊಲಾರ್ಡ್ ಅವರಂಥ ಸ್ಫೋಟಕ ಬ್ಯಾಟ್ಸಮನ್‌ಗಳಿದ್ದಾರೆ.ಚೆನ್ನೈನ ಪಿಚ್ ಸಾಮಾನ್ಯವಾಗಿ ಸ್ಪಿನ್ನರುಗಳಿಗೆ ನೆರವಾಗುವುದೆಂಬ ನಂಬಿಕೆ ಇದೆ. ಇಲ್ಲಿ ಪಿಚ್ ನಿಧಾನವಾಗಿ ಬದಲಾಗುತ್ತ ಹೋಗುವುದರಿಂದ, ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಬೆನ್ನಟ್ಟುವುದು ಕಷ್ಟವಾಗುತ್ತದೆ.ಇದರಿಂದಾಗಿ ಟಾಸ್ ಇಲ್ಲಿ ಬಹಳ ಮಹತ್ವದ್ದು. ಟಾಸ್ ಗೆದ್ದವರು ಕಣ್ಣುಮುಚ್ಚಿಕೊಂಡು ಬ್ಯಾಟಿಂಗ್ ಆಯ್ದುಕೊಳ್ಳುತ್ತಾರೆ. 250 ರ ಆಸುಪಾಸಿನ ಮೊತ್ತವನ್ನು ರಕ್ಷಿಸಿಕೊಳ್ಳುವುದು ಸುಲಭ ಎನಿಸುತ್ತದೆ.ವೀರೇಂದ್ರ ಸೆಹ್ವಾಗ್ ಅವರ ಮೊಳಕಾಲಿಗೆ ಅಲರ್ಜಿಯಿಂದಾಗಿ ಸಣ್ಣ ತೊಂದರೆಯಾಗಿದೆ. ಭಾನುವಾರ ಬೆಳಿಗ್ಗೆಯೇ ಅವರು ಆಡುವ ಬಗ್ಗೆ ಗೊತ್ತಾಗಲಿದೆ. ಭಾರತ ಆಡಿರುವ ಎಲ್ಲ ಪಂದ್ಯಗಳಲ್ಲಿ ಸೆಹ್ವಾಗ್ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ. ಐದೂ ಪಂದ್ಯಗಳಲ್ಲಿ ಮೊದಲ ಎಸೆತವನ್ನು ಬೌಂಡರಿಗೆ ಹೊಡೆದಿರುವ ಅವರು, ಸಚಿನ್ ತೆಂಡೂಲ್ಕರ್ ಜೊತೆ ಉತ್ತಮ ಅಡಿಪಾಯವನ್ನು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ನಂತರ ಉಳಿದವರು ಅದೇ ಮಟ್ಟದಲ್ಲಿ ಆಡಿಲ್ಲ. ಬ್ಯಾಟಿಂಗ್ ಪವರ್‌ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದೇ ಆದಷ್ಟು ಹೆಚ್ಚು ರನ್ ಗಳಿಸುವ ಅಗತ್ಯ ಇದೆ.ಸಚಿನ್ ತೆಂಡೂಲ್ಕರ್ ಇನ್ನೊಂದು ಶತಕ ಹೊಡೆದರೆ ಇನ್ನೊಂದು ಹೊಸ ದಾಖಲೆ ಬರಲಿದೆ. ಟೆಸ್ಟ್‌ಗಳಲ್ಲಿ 51 ಹಾಗೂ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 48 ಶತಕಗಳನ್ನು ಹೊಡೆದಿರುವ ಅವರು, ‘ಶತಕಗಳ ಶತಕವೀರ’ನೆನಿಸಿಕೊಳ್ಳಲು ಇನ್ನೊಂದು ಶತಕ ಮಾತ್ರ ಗಳಿಸಬೇಕು. ಸಚಿನ್ ಭಾನುವಾರ ಅದನ್ನು ಗಳಿಸಿದರೆ ಭಾರತದ ಗೆಲುವಿನ ಯತ್ನ ಸುಲಭವಾಗುತ್ತದೆ.ವಿರಾಟ್ ಕೊಹ್ಲಿ ಅವರ ನಾಲ್ಕನೇ ಕ್ರಮಾಂಕವನ್ನು ಬದಲು ಮಾಡಿದ್ದು ಯಶ ನೀಡಿಲ್ಲ. ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದ ವಿರಾಟ್ ನಂತರ ಅದೇ ರೀತಿಯ ಆಟವಾಡಿಲ್ಲ. ಸ್ಕೋರಿನ ವೇಗ ಹೆಚ್ಚಿಸಲು ಇವರ ಸ್ಥಾನಕ್ಕೆ ಬಡ್ತಿ ಪಡೆದ ಯೂಸುಫ್ ಪಠಾಣ್ ಸಂಪೂರ್ಣ ವಿಫರಾಗಿದ್ದಾರೆ. ಅವರ ಆಟ ಟ್ವೆಂಟಿ-20 ಕ್ರಿಕೆಟ್‌ಗೆ ಮಾತ್ರ ಸೂಕ್ತ ಎಂಬ ಅನುಮಾನ ಮೂಡಿಸುತ್ತಿದೆ. ಯುವರಾಜ್ ಸಿಂಗ್ ದುರ್ಬಲ ತಂಡಗಳ ವಿರುದ್ಧ ತಮ್ಮ ಆಲ್‌ರೌಂಡ್ ಆಟ ಪ್ರದರ್ಶಿಸಿದ್ದಾರೆ. ದೋನಿ ಅವರಿಂದ ಹೆಲಿಕಾಪ್ಟರ್ ಷಾಟ್‌ಗಳು ಬರಬೇಕಿದೆ.ಬೌಲರುಗಳಲ್ಲಿ ಜಹೀರ್ ಖಾನ್ ಒಬ್ಬರೇ ವಿಶ್ವಾಸದಿಂದ ಬೌಲ್ ಮಾಡುತ್ತಿದ್ದಾರೆ. ಹರಭಜನ್ ಸಿಂಗ್ ಕೆಟ್ಟದಾಗೇನೂ ಬೌಲ್ ಮಾಡುತ್ತಿಲ್ಲವಾದರೂ ಪಂದ್ಯ ಗೆದ್ದುಕೊಡುವಂಥ ಸಾಧನೆ ತೋರಿಲ್ಲ. ಮಹೇಂದ್ರ ಸಿಂಗ್ ದೋನಿ ಅವರ ಮೇಲೆ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಆಡಿಸುವ ಒತ್ತಡ ಹೆಚ್ಚುತ್ತಿದೆ. ಆಯ್ಕೆ ಸಮಿತಿ ಅಧ್ಯಕ್ಷ ಕೆ. ಶ್ರೀಕಾಂತ್ ಮತ್ತು ಅವರ ನಡುವೆ ವಾದ ವಿವಾದ ನಡೆದ ಘಟನೆ ಸುಳ್ಳು ಎಂದು ಸ್ಪಷ್ಟೀಕರಣ ನೀಡಲಾಗಿದೆಯಾದರೂ ಅಶ್ವಿನ್ ಅವರನ್ನು ಆಡಿಸಬೇಕೆಂಬ ಅಂಶವಂತೂ ಗಮನ ಸೆಳೆದಿದೆ. ಭಾನುವಾರ ಅವರು ಆಡುವ ಎಲ್ಲ ಸಾಧ್ಯತೆಗಳೂ ಇವೆ. ಯೂಸುಫ್ ಪಠಾಣ್ ಬದಲು ಸುರೇಶ್ ರೈನಾ ಅಡುವ ಸಾಧ್ಯತೆಯೂ ಇದೆ.ವೆಸ್ಟ್‌ಇಂಡೀಸ್‌ನ ಅನುಭವಿ ಬ್ಯಾಟ್ಸಮನ್ ಶಿವನಾರಾಯಣ ಚಂದ್ರಪಾಲ್ ಗುರುವಾರ ಇಂಗ್ಲೆಂಡ್ ವಿರುದ್ಧ ಆಡಿರಲಿಲ್ಲ.ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲಪಡಿಸಲು ಅವರು ಭಾನುವಾರ ಆಡುವ ನಿರೀಕ್ಷೆ ಇದೆ. ಆದರೆ ತಂಡದ ಯಶಸ್ಸು ಕ್ರಿಸ್ ಗೇಲ್ ಮತ್ತು ಪೊಲಾರ್ಡ್ ಅವರ ಬಿರುಸಿನ ಬ್ಯಾಟಿಂಗ್ ಮೇಲೆ ನಿಂತಿದೆ. ಇವರಿಬ್ಬರನ್ನು ಬೇಗ ಕಟ್ಟಿಹಾಕಿದರೆ ಭಾರತದ ಗುರಿ ಸುಲಭವಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.