ಸೋಮವಾರ, ಜುಲೈ 26, 2021
26 °C

ಆತಂಕ ತರುವ ಅನಾಮಿಕ ಕರೆ...

ಎಂ. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |


 
ಜಾರ್ಖಂಡ್ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಸೇರಿದಂತೆ ಮಹಿಳೆಯ ವಿರುದ್ಧದ ಹಲವು ಬಗೆಯ ಅಪರಾಧಗಳು ಬೆಂಗಳೂರು ನಗರದಲ್ಲಿ ಕಳೆದು ಹೋದ ವರ್ಷದಲ್ಲಿ ವರದಿಯಾಗಿವೆ. ಅಭದ್ರತೆ ಸೃಷ್ಟಿಸುವ, ಆತ್ಮವಿಶ್ವಾಸವನ್ನು ಕುಂದಿಸುವ ಇಂತಹ ಅಪರಾಧಗಳು - ಮಹಿಳೆಯ ಮುನ್ನಡೆಗೆ ಎದುರಾಗುವಂತಹ ತಡೆ. ಈಚಿನ ದಿನಗಳಲ್ಲಿ  ಮತ್ತೊಂದು ಬಗೆಯ ಕಿರುಕುಳ ಹೆಚ್ಚುತ್ತಿದೆ. ಅದು ಅನಾಮಧೇಯ ಫೋನ್ ಕರೆಗಳು. ಭಾವನಾತ್ಮಕ ನೆಲೆಯಲ್ಲಿ ನೀಡುವ ಹಿಂಸೆಯ ಮತ್ತೊಂದು ರೂಪ ಇದು.


ಕ ರೆ ಮಾಡಿದ ವ್ಯಕ್ತಿ ಯಾರೆಂದು ಆಕೆಗೆ ಗೊತ್ತಿಲ್ಲ, ಕೇಳಿದರೂ ಅಸಾಮಿ ಹೇಳುವುದಿಲ್ಲ. ಆಗುಂತಕನಿಗೆ ಏನು ಬೇಕಾಗಿದೆ, ಕರೆ ಹಿಂದಿನ ಉದ್ದೇಶವಾದರೂ ಏನು? ಇಂತಹ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಗುವುದಿಲ್ಲ.ಬೇಸರ, ಕಿರಿಕಿರಿ, ಮುಜುಗರ ಉಂಟು ಮಾಡುವ, ಅಸಹ್ಯ ಹುಟ್ಟಿಸಿ ಹಿಂಸೆ ನೀಡುವ ಆ ದೂರವಾಣಿ ಕರೆ ಮಾತ್ರ ನಿಲ್ಲುವುದಿಲ್ಲ. ಇದರಿಂದ ಮಾನಸಿಕ ಯಾತನೆ ಅನುಭವಿಸುವ ಮಹಿಳೆಯ ಸಂಸಾರದಲ್ಲಿ ಬಿರುಗಾಳಿಯೇ ಏಳಬಹುದು.ಈ ಪ್ರಸಂಗ ಸಾವಿನಲ್ಲಿ ಅಂತ್ಯವಾಗಬಹುದು ಅಥವಾ ಸಂಸಾರ ಒಡೆಯಬಹುದು. ಸರಿ, ಆ ಕರೆ ಮಾಡಿದ ವ್ಯಕ್ತಿಯಾದರೂ ಯಾರು?ದೇಶದ ಯಾವುದೋ ಮೂಲೆಯಲ್ಲಿ ಇರುವ ಆತ್ಮೀಯರ, ಸಂಬಂಧಿಗಳ, ಪೋಷಕರ ಮಾತನ್ನು ಸ್ಥಿರ ದೂರವಾಣಿಯಲ್ಲಿ ಕೇಳಿದಾಗ ನಾವೆಲ್ಲ ಪುಳಕಿತರಾಗಿದ್ದೆವು. ಸಂಚಾರಿ ದೂರವಾಣಿಯಲ್ಲಿ (ಮೊಬೈಲ್ ಫೋನ್) ದನಿ ಕಿವಿಗೆ ಬಿದ್ದಾಗ ಇನ್ನಷ್ಟು ಬೀಗಿದ್ದೆವು. ಆದರೆ ಈಗ ಅದರ ದುಷ್ಪರಿಣಾಮ ಅನುಭವಿಸುವ ಕಾಲ. ಅಪರಿಚಿತರಿಂದ ಬರುವ ಅದರಲ್ಲೂ ಮಹಿಳೆಯರಿಗೆ ಬರುವ ಅನಾಮಧೇಯ ವ್ಯಕ್ತಿಯ ಕರೆಗಳು ಆತಂಕಕಾರಿಯಾಗಿಬಿಟ್ಟಿವೆ. ಇದೇ ಮೊಬೈಲ್ ಫೋನ್ ಉರುಫ್ ಸಂಚಾರಿ ದೂರವಾಣಿ ಅಲಿಯಾಸ್ ಜಂಗಮ ಗಂಟೆ ಕೊರಳಿಗೆ ಉರುಳು ಹಾಕುವ ಮಟ್ಟಿಗೆ ದುರುಪಯೋಗವೂ ಆಗುತ್ತಿದೆ.ಗೊತ್ತಿಲ್ಲದ ಸಂಖ್ಯೆ- ವ್ಯಕ್ತಿಯಿಂದ ನಿಮಗೂ ಕರೆ ಬಂದಿರಬಹುದು ಅಥವಾ ಈಗಲೂ ಇಂತಹ ಕರೆಗಳಿಂದ ಯಾತನೆ ಪಡುತ್ತಿರಬಹುದು. ಇದಕ್ಕೆ ಪರಿಹಾರ ಕಂಡುಕೊಳ್ಳೋಣ. ಅದಕ್ಕೂ ಮೊದಲು ಇಂತಹ ಕೃತ್ಯ ಎಸಗುವ ಆ ವ್ಯಕ್ತಿ ಯಾರು ಎಂದು ಮೊದಲು ಹುಡುಕೋಣ.ಸುಖೇಶ ಮೂರು ವರ್ಷಗಳ ಕಾಲ ಪ್ರೀತಿಸಿದ ಗೆಳತಿ ಪುಳಕಿತಾಳನ್ನು ವಿವಾಹವಾಗಿ ಇನ್ನೂ ಎರಡು ತಿಂಗಳು ಕಳೆದಿರಲಿಲ್ಲ. ಗಂಡ ಮನೆಯಲ್ಲಿ ಇಲ್ಲದಾಗ ಆಕೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಅರ್ಥವಿಲ್ಲದಂತೆ ಮಾತಾಡತೊಡಗಿದ.  ‘ನೀನು ಯಾರು’ ಎಂದು ಕೇಳಿದರೆ ಆತ ಉತ್ತರಿಸಲಿಲ್ಲ. ‘ಕರೆಯನ್ನು ಸ್ಥಗಿತ ಮಾಡಬೇಡ ಮಾತನಾಡು’ ಎಂದು ಹೇಳುವ ಆತನ ಧ್ವನಿ ಆಕೆಯಲ್ಲಿ ಭಯ ಹುಟ್ಟಿಸಿತು. ಅದೇ ದಿನ ಮೂರು ಬಾರಿ ಆತ ಕರೆ ಮಾಡಿ ಪೀಡಿಸಿದ್ದ. ಕೆಲ ದಿನಗಳ ಕಾಲ ಇದನ್ನೇ ಮುಂದುವರೆಸಿದ್ದ.ಈ ವಿಷಯವನ್ನು ಆಕೆ ಸುಖೇಶನಿಗೆ ತಿಳಿಸಿದಳು. ಕೂಡಲೇ ಅವರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದರು. ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿದ ಪೊಲೀಸರು ಆತನಿಗೆ ಕರೆ ಮಾಡದಂತೆ ಎಚ್ಚರಿಕೆ ನೀಡಿದರು. ಆದರೂ ಆತ ಕೇಳಲಿಲ್ಲ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನೊಬ್ಬ ಮಾನಸಿಕ ಖಿನ್ನತೆ ಅನುಭವಿಸುತ್ತಿರುವ ವ್ಯಕ್ತಿ ಎಂದು ಗೊತ್ತಾಯಿತು. ಜೀವನದಲ್ಲಿ ಆತ ಸತತ ಸೋಲು ಕಂಡಿದ್ದ. ವೈವಾಹಿಕ ಜೀವನ ಕುಸಿದು ಬಿದ್ದಿತ್ತು. ಪರಿಣಾಮ ಆತ ಹಾಗಾಗಿದ್ದ. ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದರು.ಇಲ್ಲಿ ಗಮನಿಸಬೇಕಾದ ಒಂದು ಅಂಶ ಎಂದರೆ ಸುಖೇಶ ಮತ್ತು ಪುಳಕಿತಾ ಅವರ ಮಧ್ಯೆಯಿದ್ದ ಪರಸ್ಪರ ನಂಬಿಕೆ. ಸಮಸ್ಯೆಯೊಂದನ್ನು ಆಕೆ ಹೇಳಿದಾಗ ಆತ ತೋರಿದ ಸಹನೆ, ಜಾಣ್ಮೆ ಒಂದು ಸಮಸ್ಯೆಯನ್ನು ತೀರಾ ಸುಲಭವಾಗಿ ಪರಿಹರಿಸಿತ್ತು. ದಂಪತಿ ಮಧ್ಯೆ ಹೊಂದಾಣಿಕೆ, ನಂಬಿಕೆ ಇದ್ದಾಗ ಮಾತ್ರ ಅಂತಹ ಸಂಕಷ್ಟಗಳನ್ನು ಧೈರ್ಯವಾಗಿ ಎದುರಿಸಿ ಸಾಗಬಹುದು. ಅನಾಮಧೇಯನ ಕರೆಯನ್ನೇ ಅಪಾರ್ಥ ಮಾಡಿ ರಂಪಾಟ ಮಾಡಿದ್ದರೆ, ಬಹುಶಃ ಅಲ್ಲೊಂದು ದುರಂತ ನಡೆಯುವ ಅಪಾಯವಿತ್ತು.ವಿವಾಹಿತ ಮಹಿಳೆಯರಿಗೆ ಮಾತ್ರ ಇದು ಅನ್ವಯಿಸುವುದಿಲ್ಲ. ಸಹೋದರಿಗೋ, ಮಗಳಿಗೋ ವ್ಯಕ್ತಿಯೊಬ್ಬ ಕರೆ ಮಾಡುತ್ತಿದ್ದಾನೆ ಎಂದು ಗೊತ್ತಾದಾಗ. ಅದನ್ನು ತಪ್ಪಾಗಿ ಅರ್ಥೈಸದೆ ತಣ್ಣಗೆ ಯೋಚಿಸಿ ಅದರಿಂದ ಪಾರಾಗಲು ಯತ್ನಿಸಬೇಕು.ಈ ರೀತಿ ‘ಅನಾಮಿಕ’ ಕರೆಗಳ ಹಿಂದೆ ಬಣ್ಣ- ಬಣ್ಣದ ಕಥೆಗಳಿರುತ್ತವೆ. ತೊಂದರೆ ನೀಡಬೇಕೆಂದು ಅಥವಾ ಕೆಡುಕು ಉಂಟು ಮಾಡಬೇಕೆಂದು ಕರೆ ಮಾಡುವವರ ಸಂಖ್ಯೆ ವಿರಳ ಎಂಬುದು ಪೊಲೀಸರ ಅಂಬೋಣ. ಕೇವಲ ಮಾತನಾಡುವುದೇ ಅಲ್ಲ, ‘ಹೊಡೆಯುತ್ತೇನೆ, ಅತ್ಯಾಚಾರ ಎಸಗುತ್ತೇನೆ, ಕೊಲೆ ಮಾಡುತ್ತೇನೆ’ ಎಂಬ ಬೆದರಿಕೆಯನ್ನೂ ಹಾಕುತ್ತಾರೆ. ಅಶ್ಲೀಲವಾಗಿಯೂ ಮಾತನಾಡುತ್ತಾರೆ.ದೂರವಾಣಿಯ ಬೆದರಿಕೆ, ಅಶ್ಲೀಲ ಸಂಭಾಷಣೆ, ಸುಮ್ಮನೆ ಕಿರಿಕಿರಿ ನೀಡುವ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿರುವುದೂ ಹೌದು. ಆದರೆ ಇಂತಹ ಪ್ರಕರಣಗಳ ಅಂತ್ಯವೂ ವಿಚಿತ್ರವಾಗಿರುತ್ತದೆ.  ಕುಟುಂಬದ ಸದಸ್ಯರಿಂದ ನಿರ್ಲಕ್ಷ್ಯಕ್ಕೆ ಒಳಗಾದವರು, ಜೀವನದಲ್ಲಿ ಸತತ ಸೋಲುಗಳನ್ನು ಕಂಡವರು ಅಥವಾ ಇನ್ಯಾವುದೇ ಅಘಾತಕ್ಕೆ ಒಳಗಾದವರು ಈ ರೀತಿ ಕರೆ ಮಾಡುತ್ತಾರೆ ಎನ್ನುತ್ತಾರೆ ಪೊಲೀಸರು.ಇಂತಹ ಕೃತ್ಯವನ್ನು ಪ್ರಜ್ಞಾಪೂರ್ವಕವಾಗಿ ಮಾಡಿದ ವ್ಯಕ್ತಿಯೂ ಒಂದು ರೀತಿ ದಡ್ಡನೇ ಎನ್ನಬಹುದು. ಏಕೆಂದರೆ ವ್ಯಕ್ತಿಯೊಬ್ಬರಿಗೆ ಮಾನಸಿಕ ಹಿಂಸೆ ನೀಡುವುದು, ಕೊಲೆ- ಅತ್ಯಾಚಾರ ಬೆದರಿಕೆ ಹಾಕುವುದು ಅಪರಾಧ ಎಂಬುದು ಗೊತ್ತಿರುವ ಸಂಗತಿ. ಇದೂ ಗೊತ್ತಿಲ್ಲದಿದ್ದರೆ ಆತನನ್ನು ದಡ್ಡ ಎನ್ನದೆ ವಿಧಿಯಿಲ್ಲ ಎನ್ನುತ್ತಾರೆ ಪೊಲೀಸರು.ಮನಸ್ಸಿಗೆ ಬಂದ ಸಂಖ್ಯೆಗಳನ್ನು ಜೋಡಿಸಿ ಅವರು ಕರೆ ಮಾಡುತ್ತಾರೆ. ಹೆಂಗಸರ ಧ್ವನಿ ಕೇಳಿಸಿದರೆ ಮಾತನಾಡುತ್ತಾರೆ. ಇಲ್ಲವಾದರೆ ಕರೆ ಸ್ಥಗಿತಗೊಳಿಸುತ್ತಾರೆ ಎಂದು ಪೊಲೀಸರು ಹೇಳುತ್ತಾರೆ.

                 
ಐಪಿಸಿ ಸೆಕ್ಷನ್ 509

ಮಹಿಳೆಯ ಜತೆ ಅಶ್ಲೀಲವಾಗಿ ಮಾತನಾಡುವುದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 509ರ ಅನ್ವಯ ಅಪರಾಧ. ಮಹಿಳೆಯ ಗೌರವಕ್ಕೆ ಚ್ಯುತಿ (ಇನ್‌ಸಲ್ಟಿಂಗ್ ಮಾಡೆಸ್ಟಿ ಆಫ್ ವಿಮೆನ್) ತಂದರೆ ಇಂತಹ ತಪ್ಪು ಮಾಡುವ ವ್ಯಕ್ತಿಗೆ ಒಂದು ವರ್ಷ ಜೈಲು ಶಿಕ್ಷೆಯಾಗುತ್ತದೆ.ಕರೆ ಮಾಡಿ ಭಯ ಮೂಡುವಂತೆ ಮಾತನಾಡುವುದು ಮತ್ತು ತನ್ನ ಗುರುತನ್ನು ಹೇಳಿಕೊಳ್ಳದೆ ಇರುವುದು ಐಪಿಸಿ ಸೆಕ್ಷನ್ 507ರ ಪ್ರಕಾರ ಅನಾಮಧೇಯನೊಬ್ಬ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿ ಭಯ ಹುಟ್ಟಿಸುವುದು (ಕ್ರಿಮಿನಲ್ ಇಂಟಿಮಿಡೇಷನ್ ಫ್ರಂ ಅನಾನಿಮಸ್ ಪರ್ಸನ್) ಅಪರಾಧ. ಈ ಕೃತ್ಯ ಸಾಬೀತಾದರೆ ಎರಡು ವರ್ಷ ಜೈಲು ಶಿಕ್ಷೆಯಾಗುತ್ತದೆ. ನಿರ್ದಿಷ್ಟ ಪ್ರಕರಣಕ್ಕೆ ಅನ್ವಯಿಸಿ ಇತರೆ ಕಾನೂನುಗಳನ್ನು ಪ್ರಯೋಗಿಸಿ ತಪ್ಪಿತಸ್ಥನಿಗೆ ಪಾಠ ಕಲಿಸುವ ಎಲ್ಲ ಅವಕಾಶಗಳೂ ಇವೆ.‘ಫೋನ್ ಮಾಡಿ ಹಿಂಸೆ ನೀಡುವುದು, ಬೆದರಿಕೆ ಹಾಕುವುದು ಅಥವಾ ಅಶ್ಲೀಲವಾಗಿ ಮಾತನಾಡುವ ಪ್ರಸಂಗಗಳು ನಡೆದಾಗ ಕೂಡಲೇ ಸ್ಥಳೀಯ ಪೊಲೀಸರಿಗೆ ದೂರು ನೀಡಿ’ ಎಂದು ಸಲಹೆ ನೀಡುತ್ತಾರೆ ಬೆಂಗಳೂರಿನ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್. ‘ಅಪರಾಧಿಗಳನ್ನು ಪತ್ತೆ ಮಾಡಿ ಅವರನ್ನು ಶಿಕ್ಷಿಸಲಾಗುತ್ತದೆ’ ಎಂದು ಅವರು ಹೇಳುತ್ತಾರೆ.‘ಟೆಲಿ ಮಾರ್ಕೆಂಟಿಂಗ್‌ನವರು ಮಾಡುವ ಕರೆಗಳನ್ನು ಸ್ಥಗಿತಗೊಳಿಸಬಹುದು. ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಮಾಡುವ ವೈಯಕ್ತಿಕ ಕರೆಗಳನ್ನು ಬಂದ್ ಮಾಡಲು ಅವಕಾಶವಿಲ್ಲ. ಇದಕ್ಕೆ ಪೊಲೀಸರ ಸಹಾಯ ಪಡೆಯಬೇಕು’ ಎಂದು ಬಿಎಸ್‌ಎನ್‌ಎಲ್‌ನ ಬೆಂಗಳೂರು ಟೆಲಿಕಾಂ ಜಿಲ್ಲೆಯ ಉಪ ಪ್ರಧಾನ ವ್ಯವಸ್ಥಾಪಕ (ಮಾರುಕಟ್ಟೆ ಮತ್ತು ಗ್ರಾಹಕರ ಸೇವೆ) ಕೆ.ಆರ್ ಕೃಷ್ಣಮೂರ್ತಿ ಹೇಳುತ್ತಾರೆ.ಹೀಗೂ ಮಾಡಬಹುದು: ಇಂತಹ ಕರೆಗಳಿಂದ ಪಾರಾಗಲು ಹತ್ತಾರು ಮಾರ್ಗಗಳಿದ್ದು, ಅವುಗಳನ್ನು ಬಳಸಿಕೊಳ್ಳಬಹುದು. ನಮಗೆ ಬೇಡವಾದ ಸಂಖ್ಯೆಯಿಂದ ಕರೆ ಬರುವುದನ್ನು ತಡೆಯಲು ಅವಕಾಶ ಇದೆ. ಮೊಬೈಲ್ ಫೋನ್‌ನಲ್ಲಿರುವ ಈ ‘ಆಪ್ಷನ್’ ಬಳಸಿಕೊಂಡು ಬೇಡವಾದ ಕರೆಗಳನ್ನು ಸ್ವತಃ ನಿಷೇಧಿಸಬಹುದು.ಒಂದೇ ಸಂಖ್ಯೆಯಿಂದ ಕರೆ ಬರುತ್ತಿದ್ದರೆ ಅದನ್ನು ರಿಸೀವ್ ಮಾಡದೆ ನಿರ್ಲಕ್ಷ್ಯ ತೋರಬಹುದು. ಅಪರಿಚಿತ ಸಂಖ್ಯೆಯಿಂದ ಬರುವ ಕರೆಗಳನ್ನು ಸ್ವೀಕರಿಸದಿರುವುದು ಒಳ್ಳೆಯದು. ಕೊನೆಯದಾಗಿ ಪೊಲೀಸರ ಸಹಾಯ ಕೇಳಬಹುದು. ವಿವಾಹಿತರಿರಲಿ,ಅವಿವಾಹಿತರೇ ಇರಲಿ, ಇಂತಹ ಕರೆಗಳು ಬಂದಾಗ ಅದನ್ನು ಕುಟುಂಬದವರ ಗಮನಕ್ಕೆ ತಂದು ಚರ್ಚಿಸಿ ಮಾನಸಿಕ ಸ್ಥೈರ್ಯ ಪಡೆದುಕೊಳ್ಳಬೇಕು.


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.