ಬುಧವಾರ, ಏಪ್ರಿಲ್ 21, 2021
31 °C

ಆತ್ಮವಿಶ್ವಾಸಿ ಅಭಿಮನ್ಯು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತ್ಮವಿಶ್ವಾಸಿ ಅಭಿಮನ್ಯು

ಆಗ ಅಲೋಕ್, ಈಗ ಅಭಿಮನ್ಯು. ಅವರು ನಟ, ನಿರ್ದೇಶಕ ಕಾಶಿನಾಥ್‌ರ ಪುತ್ರ. ಮೊದಲ ಚಿತ್ರ `ಬಾಜಿ~ಗಾಗಿ ಅಲೋಕ್ ಹೆಸರಿನಲ್ಲಿ ಕಾಣಿಸಿಕೊಂಡಿದ್ದರು ಅಭಿಮನ್ಯು. `ಬಾಜಿ~ ಚಿತ್ರತಂಡದ ಆಚಾರ ವಿಚಾರಗಳ ಲೆಕ್ಕಾಚಾರದಿಂದಾಗಿ ಹೆಸರಿನ ಬದಲಾವಣೆ ನಡೆದಿತ್ತಂತೆ.ಅಭಿಮನ್ಯು ಹೆಸರಿನ ಇಂಗ್ಲಿಷ್ ಅಕ್ಷರಗಳಲ್ಲಿ ಕೆಲವು ಬದಲಾವಣೆಗಳನ್ನು ಚಿತ್ರತಂಡದ ಸದಸ್ಯರು ಮಾಡಿದ್ದರು. ಆದರೆ ಅದು ವಿಚಿತ್ರವಾಗಿ ತೋರುತ್ತಿದ್ದುದರಿಂದ ಅಭಿಮನ್ಯುವೇ ಸ್ವತಃ ಅಲೋಕ್ ಎಂಬ ಹೆಸರು ಸೂಚಿಸಿದ್ದರು.ಈ ನಂಬಿಕೆಗಳ ಲೆಕ್ಕಾಚಾರ ಏನೇ ಇರಲಿ `ಬಾಜಿ~ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಯಿತು. ದೊಡ್ಡ ನಿರ್ದೇಶಕ ಎಂದು ಹೆಸರು ಗಳಿಸಿದ ಅಪ್ಪ, ನಟನೆಯ ಕಲಿಕೆ ಇತ್ಯಾದಿ ಅಂಶಗಳೆಲ್ಲಾ ಜತೆಗಿದ್ದರೂ ಅವರು ಯಶಸ್ವಿಯಾಗಲಿಲ್ಲ.ಸೋಲು ಆತ್ಮವಿಮರ್ಶೆಗೆ ಹಚ್ಚಿತು. ನಟನೆಯಲ್ಲಿ ಸಾಕಷ್ಟು ಚೇತರಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದರು. ನಂತರದ ಎರಡು ವರ್ಷಗಳ ಅವಧಿಯಲ್ಲಿ ಅವರು ಅಭಿನಯವನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡರಂತೆ.ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವುದು ಹೇಗೆ ಎಂಬುದನ್ನು, ದೊಡ್ಡ ದೊಡ್ಡ ಡೈಲಾಗ್‌ಗಳನ್ನು ಸಲೀಸಾಗಿ ಹೇಳುವುದನ್ನು ಕಲಿತರಂತೆ. ಜತೆಗೆ ಅಪ್ಪನ ಚಿತ್ರಗಳನ್ನು ಅಧ್ಯಯನದ ದೃಷ್ಟಿಯಿಂದ ಮತ್ತೆ ಮತ್ತೆ ನೋಡಿದರಂತೆ. ಅದರ ಫಲವೆಂಬಂತೆ `12 ಎಎಂ ಮಧ್ಯರಾತ್ರಿ~ ಮೂಡಿಬಂದಿದೆ ಎನ್ನುವುದು ಅವರ ವಿಶ್ವಾಸದ ನುಡಿ.ಇಂದು (ಆಗಸ್ಟ್ 10) ತೆರೆ ಕಾಣುತ್ತಿರುವ ಚಿತ್ರದಲ್ಲಿ ವೈದ್ಯಕೀಯ ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡನೇ ಚಿತ್ರಕ್ಕೆ ಬರುವ ವೇಳೆಗೆ ಒಂದಿಷ್ಟು ಆತ್ಮವಿಶ್ವಾಸವನ್ನು ಒಗ್ಗೂಡಿಸಿ ತಂದಿದ್ದಾರೆ.ಚಿತ್ರದ ಕಾರ್ಯಕಾರಿ ನಿರ್ಮಾಪಕರೂ ಆಗಿರುವ ಕಾಶಿನಾಥ್ ಪ್ರೊಫೆಸರ್ ಪಾತ್ರ ಪೋಷಿಸುತ್ತಿದ್ದಾರೆ. ದಿವ್ಯಾ ಶ್ರೀಧರ್ ಚಿತ್ರದ ನಾಯಕಿಯಾಗಿದ್ದಾರೆ. ಕಾಶಿನಾಥರ ಶಿಷ್ಯ ಕಾರ್ತಿಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ಮೂಢನಂಬಿಕೆಯ ಪರವೇ ಅಥವಾ ವಿರುದ್ಧವೇ ಎಂದು ಕೇಳಿದಾಗ ಅಭಿಮನ್ಯು ಉತ್ತರಿಸಿದ್ದು: `ಅವರವರ ಭಾವಕ್ಕೆ ಅವರವರ ಭಕುತಿಗೆ...~ನಿರ್ಮಾಣದ ಒತ್ತಡಗಳಿದ್ದರೂ ಅಭಿನಯಿಸುವಾಗ ಕಾಶಿನಾಥ್ ಪಕ್ಕಾ ನಟರಾಗು ತ್ತಿದ್ದುದನ್ನು ಅಭಿಮನ್ಯು ನೆನಪಿಸಿಕೊಳ್ಳುತ್ತಾರೆ. ಹೀಗೆ ಒಂದು ಹೊಣೆಗಾರಿಕೆಯಿಂದ ಮತ್ತೊಂದು ಹೊಣೆಗಾರಿಕೆಗೆ ಬದಲಾಗುವ ಕಾಶಿನಾಥರ ಬಗ್ಗೆ ಏಷ್ಟು ಹೇಳಿದರೂ ಪ್ರಯೋಜನವಿಲ್ಲ.ಅದನ್ನು ಕಣ್ಣಾರೆ ಕಂಡಾಗಲಷ್ಟೇ ಸೊಗಸು ಎನ್ನುತ್ತಾರೆ ಅವರು. ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದು ಬಿಟ್ಟರೆ ಅವರಿಗೆ ನಟನೆಯ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಮೊದಲಿನಿಂದಲೂ ಕಾಶಿನಾಥ್ ತಮ್ಮ ಮಗನನ್ನು ಚಿತ್ರರಂಗಕ್ಕೆ ಕರೆ ತರಲು ಅಷ್ಟೇನೂ ಆಸಕ್ತಿ ತೋರಿರಲಿಲ್ಲ. ನಿನ್ನ ಹಾದಿ ನಿನಗೆ, ಆದರೆ ಹಾದಿಯ ಬಗ್ಗೆ ಸ್ಪಷ್ಟತೆ ಇರಲಿ ಎಂಬುದಷ್ಟೇ ಅಪ್ಪ ನೀಡಿದ್ದ ಎಚ್ಚರಿಕೆ.ಅಭಿಮನ್ಯುವಿಗೆ ಉತ್ತಮ ಕ್ರಿಕೆಟಿಗನಾಗುವ ಹುಚ್ಚು. ಏಳನೇ ತರಗತಿವರೆಗೂ ಗಲ್ಲಿ ಕ್ರಿಕೆಟ್ ವ್ಯಾಮೋಹ. ನಂತರ ಕ್ರಿಕೆಟ್‌ಗೆ ಒತ್ತು ನೀಡಲೆಂದೇ ನಗರದ ಸೇಂಟ್ ಜೋಸೆಫ್ ಶಾಲೆ ಸೇರಿದರು. ಕ್ರಿಕೆಟಿಗರ ಕಾರ್ಖಾನೆಯಂತೆ ಆ ಶಾಲೆ. ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್‌ನೊಂದಿಗೆ ಗುರುತಿಸಿಕೊಂಡರು. ಪೆಂಟ್ಯಾಗ್ಯಲರ್ಸ್‌, ವಿಶ್ವವಿದ್ಯಾಲಯ ಪಂದ್ಯಾವಳಿಗಳಲ್ಲಿ ಪ್ರತಿಭೆ ಪ್ರದರ್ಶಿಸಿದರು. ಅಪ್ಪನ ಪ್ರೋತ್ಸಾಹವೂ ಜತೆಗಿತ್ತು.ಆಡುತ್ತ ಆಡುತ್ತಲೇ ಬಿ.ಕಾಂ ಮುಗಿಸಿದರು. ಮುಂದೇನು? ಕ್ರಿಕೆಟ್ ಹಾಗೂ ನಟನೆ ಎರಡೂ ದೋಣಿಗಳಲ್ಲಿ ಕಾಲಿಡುವುದು ಅಸಾಧ್ಯ ಎನಿಸಿದಾಗ ಅವರು ಚಿತ್ರರಂಗವನ್ನು ಆಯ್ದುಕೊಂಡರು. ಎ.ಎಸ್. ಮೂರ್ತಿ ಅವರ `ಅಭಿನಯ ತರಂಗ~ ಸೇರಿದರು. ಜತೆಗೆ ಸ್ಟಂಟ್ ತರಗತಿಗಳಲ್ಲೂ ಕಲಿಕೆ. ಆದರೆ ಎಲ್ಲೂ ಕಾಶಿನಾಥ್ ಮಗ ಎಂದು ಹೇಳಿಕೊಳ್ಳದಿರು ಎಂಬುದು ಅಪ್ಪ ಹೇಳಿದ್ದ ಮಾತು. ಅದರಂತೆ ಅವರು ಹೆಜ್ಜೆ ಇರಿಸಿದ್ದಾರೆ; ಚಿತ್ರರಂಗದಲ್ಲೇ ಇದ್ದು ಏನಾದರೂ ಸಾಧಿಸುವ ಛಲದೊಂದಿಗೆ.ಅಂದಹಾಗೆ `ಬಾಜಿ~ ಸೋಲಿಗೂ ಅವರು ಅಭಿಮನ್ಯುವಾಗಿ ಮರು ನಾಮಕರಣ ಗೊಂಡದ್ದಕ್ಕೂ ಸಂಬಂಧ ಇಲ್ಲವಂತೆ. `ಅಪ್ಪ ಅಮ್ಮ ಇಟ್ಟ ಹೆಸರನ್ನು ಬದಲಿಸಿಕೊಳ್ಳಲು ಇಷ್ಟವಿರಲಿಲ್ಲ. ನಿರ್ದೇಶಕ ಕಾರ್ತಿಕ್ ಅವರಿಗೆ ಕೂಡ ನನ್ನನ್ನು ಅಭಿಮನ್ಯುವಾಗಿಯೇ ಉಳಿಸಿಕೊಳ್ಳಲು ಇಷ್ಟ. ಹೀಗಾಗಿ ಈ ಬದಲಾವಣೆ~ ಎನ್ನುತ್ತಾರೆ ಅವರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.