ಬುಧವಾರ, ಮೇ 12, 2021
18 °C
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಯೋಜನೆ

ಆದರ್ಶ ವಿದ್ಯಾಲಯ, ಬಾಲಕಿಯರ ಹಾಸ್ಟೆಲ್ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: `ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಜಿಲ್ಲೆಯಲ್ಲಿ ನಾಲ್ಕು ಆದರ್ಶ ವಿದ್ಯಾಲಯಗಳನ್ನು ಮತ್ತು ನಾಲ್ಕು ಬಾಲಕಿಯರ ವಸತಿನಿಲಯಗಳನ್ನು ನಿರ್ಮಿಸಲಾಗುವುದು' ಎಂದು ಕೇಂದ್ರ ಮಾನವ ಸಂಪನ್ಮೂಲದ ಸಚಿವಾಲಯದ ಕಾರ್ಯದರ್ಶಿ ರಾಜರ್ಷಿ ಭಟ್ಟಾಚಾರ್ಯ ತಿಳಿಸಿದರು.`ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರು ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ ತಲಾ ಒಂದು ಆದರ್ಶ ವಿದ್ಯಾಲಯ ಮತ್ತು ಬಾಲಕಿಯರ ವಸತಿ ನಿಲಯ ನಿರ್ಮಿಸಲಾಗುವುದು. ಒಟ್ಟು 20 ತಿಂಗಳ ಅವಧಿಯಲ್ಲಿ ವಿದ್ಯಾಲಯಗಳನ್ನು ಮತ್ತು ವಸತಿನಿಲಯಗಳನ್ನು ಕಟ್ಟಲಾಗುವುದು' ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.`2009-10ನೇ ಸಾಲಿನಲ್ಲಿ ಮಂಜೂರಾಗಿದ್ದ ಯೋಜನೆಯನ್ನು ಈಗ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ 21.19 ಕೋಟಿ ರೂಪಾಯಿಯಾಗಲಿದ್ದು, 4.14 ಕೋಟಿ ರೂಪಾಯಿ ವೆಚ್ಚದಲ್ಲಿ ತಲಾ ಒಂದು ವಿದ್ಯಾಲಯ ಮತ್ತು 2.14 ಕೋಟಿ ರೂಪಾಯಿ ವೆಚ್ಚದಲ್ಲಿ ತಲಾ ಒಂದು ವಸತಿ ನಿಲಯ ನಿರ್ಮಿಸಲಾಗುವುದು' ಎಂದು ಅವರು ಹೇಳಿದರು.`ಕಟ್ಟಡಗಳ ನಿರ್ಮಾಣ, ಶಾಲೆಗಳ ಮೇಲ್ದರ್ಜೆಗೇರಿಸುವ ಯೋಜನೆ ಕೂಡ ರೂಪಿಸಲಾಗಿದ್ದು, 92 ಶಾಲಾ ಕೊಠಡಿಗಳನ್ನು, 34 ವಿಜ್ಞಾನ ಪ್ರಯೋಗಾಲಯಗಳನ್ನು, 18 ಕಂಪ್ಯೂಟರ್ ಕೊಠಡಿಗಳನ್ನು, 34 ಕಲಾ ಮತ್ತು ಕೌಶಲ್ಯ ತರಬೇತಿ ಕೊಠಡಿಗಳನ್ನು ನಿರ್ಮಿಸಲಾಗುವುದು' ಎಂದು ಅವರು ಹೇಳಿದರು.`ಚಿಕ್ಕಬಳ್ಳಾಪುರ ತಾಲ್ಲೂಕಿನ ಅಡ್ಡಗಲ್, ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕನಹಳ್ಳಿ ಮತ್ತು ಗೌರಿಬಿದನೂರು ತಾಲ್ಲೂಕಿನ ಸೊಣ್ಣಗಾನಹಳ್ಳಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಯೂ ರೂಪಿಸಲಾಗಿದ್ದು, ಒಟ್ಟು 38.36 ಕೋಟಿ ರೂಪಾಯಿ ವೆಚ್ಚವಾಗಲಿದೆ' ಎಂದು ಅವರು ಹೇಳಿದರು.ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಕಾರ್ಯದರ್ಶಿ  ಜಿ.ಕುಮಾರನಾಯ್ಕ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಉಮಾಶಂಕರ್, ಸರ್ವಶಿಕ್ಷಣ ಅಭಿಯಾನದ ನಿರ್ದೇಶಕ ಸುಬೋಧ ಯಾದವ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಅಜಿತ್‌ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇದಕ್ಕೂ ಮುನ್ನ ಅವರು ಪೆರೇಸಂದ್ರ ಸರ್ಕಾರಿ ಶಾಲೆ, ಗುಡಿಬಂಡೆ ಸರ್ಕಾರಿ ಶಾಲೆ, ಬೀಚಗಾನಹಳ್ಳಿ ಕ್ರಾಸ್ ಬಳಿಯಿರುವ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಶೈಕ್ಷಣಿಕ ವ್ಯವಸ್ಥೆ ಮತ್ತು ಗುಣಮಟ್ಟವನ್ನು ಪರಿಶೀಲಿಸಿದರು. ಆಯಾ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳ ಜೊತೆ ಸಂವಾದ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.