ಶುಕ್ರವಾರ, ಜೂನ್ 5, 2020
27 °C

ಆದರ್ಶ ಹಗರಣ: ಮುಂದಿನ ವಾರ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಆದರ್ಶ ಗೃಹ ನಿರ್ಮಾಣ ಸೊಸೈಟಿ ಪ್ರಕರಣದಲ್ಲಿ ವಿಳಂಬಗತಿಯ ತನಿಖೆಗಾಗಿ ಬಾಂಬೆ ಹೈಕೋರ್ಟ್‌ನಿಂದ ತೀವ್ರ ಟೀಕೆಗಳನ್ನು ಎದುರಿಸಿದ ಬಳಿಕ ಸಿಬಿಐ, ಪ್ರಕರಣದ ಬಗ್ಗೆ ಮುಂದಿನ ವಾರ ಎಫ್‌ಐಆರ್ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗುರುವಾರ ಹೇಳಿದೆ.

ಈ ಸಂದರ್ಭದಲ್ಲಿ ಕೆಲವು ನಿವೃತ್ತ ಹಿರಿಯ ಸೇನಾ ಅಧಿಕಾರಿಗಳು ಮತ್ತು ಕೆಲವು ರಾಜಕಾರಣಿಗಳ ಹೆಸರೂ ಬಯಲಿಗೆ ಬರಲಿದೆ ಎಂದು ಅದು ತಿಳಿಸಿದೆ. ಹಗರಣದ ಬಗ್ಗೆ ಕಳೆದ ನವೆಂಬರ್‌ನಲ್ಲಿ ಪ್ರಾಥಮಿಕ ತನಿಖೆಯನ್ನು ದಾಖಲಿಸಿದ್ದ ಸಿಬಿಐ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿರುವುದಕ್ಕೆ ಮಂಗಳವಾರ ಹೈಕೋರ್ಟ್‌ನಿಂದ ಟೀಕೆಗೆ ಗುರಿಯಾಗಿತ್ತು.

ಸಿಬಿಐನ ಕಾನೂನು ಘಟಕವು ಸಾಕ್ಷ್ಯವನ್ನು ಪರಿಶೀಲಿಸಿದ ಬಳಿಕ ದಾಖಲೆಗಳನ್ನು ನಕಲು ಮಾಡಿದರೆನ್ನಲಾದ ಮತ್ತು ಅಧಿಕೃತ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿರುವರೆನ್ನಲಾದ ಕೆಲವರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದೆ ಎಂದು ಸಂಸ್ಥೆಯ ಉನ್ನತ ಮೂಲಗಳು ತಿಳಿಸಿವೆ.

ಎರಡು ವಾರದೊಳಗೆ ತನಿಖೆಯನ್ನು ಪೂರ್ಣಗೊಳಿಸಬೇಕು ಮತ್ತು ಎಫ್‌ಐಆರ್ ದಾಖಲಿಸುವ ಕುರಿತು ಅಂತಿಮ ನಿರ್ಧಾರಕ್ಕೆ ಬರಬೇಕು ಎಂದು ಕೋರ್ಟ್ ಸಿಬಿಐಗೆ ಸೂಚಿಸಿತ್ತು.

‘ಪ್ರಕರಣದ ಬಗ್ಗೆ ಸಿಬಿಐ ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಪ್ರಾಥಮಿಕ ತನಿಖೆಯನ್ನು ನಡೆಸುತ್ತಿದೆ. ಈವರೆಗೂ ಎಫ್‌ಐಆರ್ ಏಕೆ ದಾಖಲಿಸಿಲ್ಲ’? ಎಂದು ಆದರ್ಶ ಪ್ರಕರಣದಲ್ಲಿನ ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿ ಬಿ.ಎಚ್. ಮರ್ಲಾಪಳ್ಳೆ ಮತ್ತು ಯು.ಡಿ. ಸಾಲ್ವಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಕೇಳಿದೆ.

ಸೇನಾಪಡೆಯ ಇಬ್ಬರು ನಿವೃತ್ತ ಮುಖ್ಯಸ್ಥರಾದ ಜ.  ದೀಪಕ್ ಕಪೂರ್ ಮತ್ತು ಜ. ಎನ್.ಸಿ. ವಿಜ್ ಹಾಗೂ ನೌಕಾಪಡೆಯ ಮಾಜಿ ಮುಖ್ಯಸ್ಥ ಮಾಧವೇಂದ್ರ ಸಿಂಗ್ ಅವರು ಹಗರಣ ಪೀಡಿತ ಸೊಸೈಟಿಯಿಂದ ಎರಡು ಫ್ಲ್ಯಾಟ್‌ಗಳನ್ನು ಖರೀದಿಸಿದ್ದರು. ಆದರೆ ಸೇನಾಪಡೆಯ ಮಾಜಿ ಉನ್ನತ ಅಧಿಕಾರಿಗಳು ತಾವು ಈಗಾಗಲೇ ಇದನ್ನು ಹಿಂತಿರುಗಿಸಿರುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.