ಶನಿವಾರ, ಮೇ 8, 2021
26 °C

ಆದಿವಾಸಿ, ನಗರಗಳಿಗೆ ಪ್ರತ್ಯೇಕ ಆರೋಗ್ಯ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಗ್ರಾಮೀಣ, ಆದಿವಾಸಿ ಮತ್ತು ನಗರ ಪ್ರದೇಶಗಳ ಜನರ ಆರೋಗ್ಯ ಸಮಸ್ಯೆಗಳು ಬೇರೆ ಬೇರೆಯಾಗಿದ್ದು ಪ್ರತ್ಯೇಕ ಮಾದರಿಗಳ ಆರೋಗ್ಯ ಯೋಜನೆಗಳ ಅನುಷ್ಠಾನದ ಅಗತ್ಯವಿದೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್‌ನ ಕಾರ್ಯನಿರ್ವಹಣಾ ಅಧಿಕಾರಿ ಡಾ. ಎಂ.ಎ. ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.ಮೈಸೂರು ವಿಶ್ವವಿದ್ಯಾಲಯ, ಸೆಂಟರ್ ಫಾರ್ ದಿ ಸ್ಟಡಿ ಆಫ್ ಸೋಶಿಯಲ್ ಎಕ್ಸುಕಲ್ಸಿವ್ ಮತ್ತು ಇನ್‌ಕಲ್ಸಿವ್ ಪಾಲಿಸಿ ಆಶ್ರಯದಲ್ಲಿ ಗುರುವಾರ ಆಯೋಜಿಸಲಾಗಿರುವ ಆರೋಗ್ಯ ಸೇವೆಯಲ್ಲಿ ಬಹುವಿಧ ಸಂಶೋಧನೆ ಮತ್ತು ಆರೋಗ್ಯ ನೀತಿಯಲ್ಲಿ ಹೊಸ ಚೌಕಟ್ಟು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಮಾನಿಮೂಲೆಹಾಡಿಯ ಪ್ರಕರಣವನ್ನು ಉಲ್ಲೇಖಿಸಿದ ಅವರು, `ಆರೋಗ್ಯ ಸಂಬಂಧಿ ಸಮಸ್ಯೆಯಾದಾಗ ಜಿಲ್ಲಾ ಆರೋಗ್ಯ ಇಲಾಖೆಯನ್ನು ಟೀಕಿಸುವುದು ಸಾಮಾನ್ಯ. ಆದರೆ, ಇದೆ ಹಾಡಿಯನ್ನು ವೈದ್ಯರು ಅಥವಾ 108  ಆ್ಯಂಬ್ಯುಲೆನ್ಸ್ ತಲುಪಬೇಕಾದರೆ ಸುತ್ತು ಬಳಸಿನ ದಾರಿ ಹಿಡಿಯಬೇಕು. ಮೈಸೂರು ಮತ್ತು ಮಾನಂದವಾಡಿ ರಸ್ತೆಯ ಹೆದ್ದಾರಿಯ ಮೇಲಿದ್ದರೂ ಮಾರ್ಗಮಧ್ಯದಲ್ಲಿ ಈ ಹಾಡಿಗೆ ಹೋಗುವ ರಸ್ತೆಯಲ್ಲಿ ಮುಕ್ತ ಸಂಚಾರವನ್ನು ಆರಣ್ಯ ಇಲಾಖೆ ನಿರ್ಬಂಧಿಸಿದೆ. ಆದರೆ, ವಿವಿಐಪಿಗಳಿಗೆ ಮಾತ್ರ ಈ ರಸ್ತೆಯಲ್ಲಿ ಪ್ರವೇಶವಿದೆ~ ಎಂದು ವಿವರಿಸಿದರು.`ಆರೋಗ್ಯ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗಳಿಗೆ ಮುಟ್ಟಬೇಕಾದರೆ ಸಮಾಜದ ಎಲ್ಲ ಕ್ಷೇತ್ರಗಳೂ ಒಂದಾಗಿ ಪ್ರಯತ್ನಿಸಬೇಕು. ಶಿಕ್ಷಣ, ಆಹಾರ, ಜೀವನಶೈಲಿ, ನೀರು, ವಸತಿ, ಅನೈರ್ಮಲ್ಯಗಳು ಮತ್ತಿತರ ಕಾರಣಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಎಲ್ಲ ಇಲಾ ಖೆಗಳೂ ಆರೋಗ್ಯ ನಿರ್ವಹಣೆಯ ಅನುಷ್ಠಾನಕ್ಕೆ ಕೈಜೋಡಿಸಬೇಕು~ ಎಂದು ಹೇಳಿದರು.`ವೈದ್ಯರಿಗೆ ಕೇವಲ ರೋಗಗಳನ್ನು ವಾಸಿ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಆದರೆ, ಮನುಷ್ಯನ ಮಾನಸಿಕ, ದೈಹಿಕ, ಆರ್ಥಿಕ ಮತ್ತು ಸಾಮಾಜಿಕ ಸಬಲತೆಗಳನ್ನು ರೂಪಿಸುವುದನ್ನು ಕಲಿಸಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇವೆಲ್ಲವುಗಳ ಸಬಲತೆಯೇ ನಿಜವಾದ ಆರೋಗ್ಯ. ಆರೋಗ್ಯ ನಿರ್ವಹಣೆಯೆಂದರೆ ಕೇವಲ ಆಸ್ಪತ್ರೆ, ವೈದ್ಯರು, ನರ್ಸ್‌ಗಳ ಜವಾಬ್ದಾರಿ ಎಂದುಕೊಂಡಿರುವುದೇ ಯೋಜನೆಗಳ ವೈಫಲ್ಯಕ್ಕೆ ಕಾರಣ~ ಎಂದರು.`ಸಂಪತ್ತು ಮತ್ತು ಸೌಲಭ್ಯಗಳ ವಿಕೇಂದ್ರೀಕರಣ ಎನ್ನುವುದು ವೈಜ್ಞಾನಿಕವಾಗಿ ಆಗಬೇಕು. ಕೇವಲ ಆಸ್ಪತ್ರೆ ಮತ್ತಿತರ ಸೌಲಭ್ಯಗಳನ್ನು ಆರಂಭಿಸುವುದರಿಂದ ಮಾತ್ರ ಅದು ಸಾಧ್ಯವಾಗುವುದಿಲ್ಲ. ಸಮಾನ ಜಾಗೃತಿ ಮತ್ತು ಆಯಾ ಪ್ರದೇಶಗಳಿಗೆ ಅಗತ್ಯವಿರುವ ಸೌಲಭ್ಯಗಳ ಕಾರ್ಯಶೈಲಿಯ ಅನುಷ್ಠಾನದ ಅವಶ್ಯಕತೆ ಇರುತ್ತದೆ. ಭೌಗೋಳಿಕವಾಗಿ ಅಲ್ಲಿಯ ಜನರ ಅಗತ್ಯಕ್ಕೆ ತಕ್ಕಂತೆ ಕಾರ್ಯಕ್ರಮ ರೂಪಿಸುವುದು ಅವಶ್ಯಕ~ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವೈದ್ಯಕೀಯ ಕಾಲೇಜು ಡೀನ್ ಡಾ. ಕೆ. ಗೀತಾ ಅವಧಾನಿ, `ಸರ್ಕಾರವು ಆರೋಗ್ಯ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ವಿನಿಯೋಗಿಸುತ್ತಿದೆ. ಸಾಕಷ್ಟು ವಿಮಾ ಯೋಜನೆಗಳನ್ನೂ ತಂದಿದೆ. ಆರೋಗ್ಯ ನೀತಿ ರಚಿಸಿದ ಮೇಲೂ ಹಲ ವಾರು ಗಂಭೀರ ರೋಗಗಳಿಂದ ಇದುವರೆಗೂ ಮುಕ್ತ ರಾಗುವ ಪ್ರಯತ್ನ ಜಾರಿಯಲ್ಲಿದೆ~ ಎಂದರು.ಮೈಸೂರು ವಿವಿ ಮನಶಾಸ್ತ್ರ ವಿಭಾಗದ ಪ್ರೊ. ಮೇವಾ ಸಿಂಗ್ ಅಧ್ಯಕ್ಷತೆ ವಹಿಸಿದ್ದರು.  ಮಮತಾರಾಜ್ ಪ್ರಾರ್ಥನೆಗೀತೆ ಹಾಡಿದರು. ಪ್ರೊ. ರಮೇಶ್ ಸ್ವಾಗತಿಸಿದರು. ಡಾ. ನಂಜುಂಡ ಅತಿಥಿಗಳನ್ನು ಪರಿಚಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.