ಶುಕ್ರವಾರ, ಮೇ 27, 2022
27 °C

ಆದೇಶ ಹಿಂದಕ್ಕೆ ಪಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಸೇರಿದಂತೆ ದೇಶದ ಐದು  ಪ್ರಮುಖ ರಾಜ್ಯಗಳು, 2009ರಲ್ಲಿ ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆ `ಆರ್‌ಟಿಇ~ಯನ್ನು ಜಾರಿಗೊಳಿಸಲು ಹಿಂಜರಿಯುತ್ತಿರುವುದಕ್ಕೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ಅಸಮಾಧಾನ ಸೂಚಿಸಿ, ಕಾಯ್ದೆಯನ್ನು ದೇಶದಾದ್ಯಂತ ಜಾರಿಗೊಳಿಸಲು ಸಾಧ್ಯವಾಗದೇ ಹೋದರೆ ಅದೊಂದು  `ಐತಿಹಾಸಿಕ ವೈಫಲ್ಯ~ ಎಂದಿದ್ದಾರೆ.

ಈ ಐತಿಹಾಸಿಕ ವೈಫಲ್ಯದ ಮುಂಚೂಣಿಯಲ್ಲಿರುವ ಕರ್ನಾಟಕ ಸರ್ಕಾರ, ಈಗಾಗಲೇ ಹತ್ತು ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದು, ಮುಂದಿನ ಮಾರ್ಚ್ ಕೊನೆಯ ಒಳಗೆ ಮತ್ತೆ 3174 ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸಿದೆ. ಶಿಕ್ಷಣ ಸಾರ್ವತ್ರೀಕರಣದ ಅಂಗವಾಗಿ 6-14 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಬೇಕಿರುವುದು ಸರ್ಕಾರದ ಕರ್ತವ್ಯವೆಂಬ ಸಂವಿಧಾನದ ನಿಯಮವನ್ನೂ, ಇದರೊಂದಿಗೆ ಶಿಕ್ಷಣ ಹಕ್ಕು ಕಾಯ್ದೆ ಹೇಳುವಂತೆ, ಪ್ರತಿ ಮಗುವಿಗೂ ಕಡ್ಡಾಯ ಶಿಕ್ಷಣ ಅದು ವಾಸಿಸುವ ಸ್ಥಳದ ಹತ್ತಿರದಲ್ಲೇ ನೀಡಬೇಕೆಂಬ ನಿಯಮವನ್ನೂ ಸರ್ಕಾರ ಉಲ್ಲಂಘಿಸುವ ಮೂಲಕ ಬಡ ಮಕ್ಕಳ ಶಿಕ್ಷಣದ ಹಕ್ಕು ಕಸಿಯುತ್ತಿದೆ. 

1994 ರಿಂದ ಯಾವುದೇ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಬಾರದೆಂಬ ರಾಜ್ಯ ಸರ್ಕಾರದ ಆದೇಶವಿದೆ. ಆದರೆ ಅಂದಿನಿಂದ ಇಂದಿನವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಅನುಮತಿ ಪಡೆದ ಸಾವಿರಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಆಂಗ್ಲ ಮಾಧ್ಯಮದಲ್ಲಿಯೇ ಬೋಧಿಸುತ್ತಿವೆ. ಸರ್ಕಾರ-ಸರ್ಕಾರದ ವಿವಿಧ ಹಂತದ ಅಧಿಕಾರಶಾಹಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಅನೂಚನವಾಗಿ ನಡೆದು ಬಂದಿರುವ  `ಕೊಡು-ಕೊಳ್ಳುವ~ ಒಳ ಒಪ್ಪಂದದಿಂದಾಗಿ, ಈ ಕಾನೂನುಬಾಹಿರ ಶಾಲೆಗಳನ್ನು ನಿಯಂತ್ರಿಸುವ ನೈತಿಕಶಕ್ತಿಯನ್ನೇ ಕಳೆದುಕೊಂಡಿರುವ  `ಉಳ್ಳವರ ಪರವಾದ~ ಸರ್ಕಾರ, ಒಂದೆಡೆ ಶಿಕ್ಷಣ ಖಾಸಗಿಕರಣಕ್ಕೆ ಸದ್ದಿಲ್ಲದೇ ಬೆಂಬಲ ನೀಡುತ್ತಾ, ಇನ್ನೊಂದೆಡೆ ಅಪಾರ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ, ಶತಮಾನಗಳಿಂದ ಶಿಕ್ಷಣದಿಂದ ವಂಚಿತವಾಗಿರುವ ತಳ ಸಮುದಾಯದ ಮಕ್ಕಳು, ಬಡ ಹೆಣ್ಣುಮಕ್ಕಳು ಶಾಶ್ವತವಾಗಿ ಅನಕ್ಷರಸ್ಥರಾಗುವಂತೆ ಹುನ್ನಾರ ನಡೆಸುತ್ತಿದೆ. 

ನಿಜಕ್ಕೂ ಸರ್ಕಾರಕ್ಕೆ ಪ್ರತಿ ಮಗುವಿಗೂ ಸಮಾನ ಶಿಕ್ಷಣ ನೀಡಬೇಕೆಂಬ ಉದ್ದೆೀಶವಿದ್ದರೆ ತಕ್ಷಣವೇ ಶಿಕ್ಷಣ ಹಕ್ಕು ಕಾಯ್ದೆ ರಾಜ್ಯದಲ್ಲಿ ಜಾರಿಯಾಗುವಂತೆ ಹಾಗೂ ಸರ್ಕಾರಿ ಶಾಲೆಗಳು ಮುಚ್ಚದಂತೆ ಕ್ರಮ ಕೈಗೊಳ್ಳಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.