ಮಂಗಳವಾರ, ಜನವರಿ 28, 2020
21 °C

ಆಧಾರ್‌ ಬದಲಿಗೆ ಎನ್‌ಪಿಆರ್‌ ಸಂಖ್ಯೆ: ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ‘ಅಡುಗೆ ಅನಿಲ ಬಳಕೆದಾರರು ಆಧಾರ ಬದಲಿಗೆ ಎನ್‌.ಪಿ.ಆರ್‌(ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಸಂಖ್ಯೆ ಮಾಡಿಸಿದರೆ ಅದು ಆಧಾರ ಆಗಿ ಪರಿವರ್ತನೆಯಾಗಲಿದೆ. ಎನ್‌.ಪಿ.ಆರ್‌ ಸಂಖ್ಯೆಯನ್ನು ಗ್ರಾಹಕರು ಅಡುಗೆ ಅನಿಲ ಸರಬರಾಜು ಏಜೆನ್ಸಿಗೆ ನೀಡಬೇಕು’ ಎಂದು ತಹಶೀಲ್ದಾರ್‌ ನಾರಾಯಣ ರಾವ್‌ ಹೇಳಿದರು.ಇಲ್ಲಿಯ ಲೊಯೋಲ ವಿಕಾಸ ಕೇಂದ್ರ ಹಾಗೂ ಜ್ಯೋತಿ ಆರೋಗ್ಯ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಅಡುಗೆ ಅನಿಲ ಬಳಕೆದಾರರ ಕುಂದು ಕೊರತೆ ಸಭೆಯಲ್ಲಿ  ಮಾತನಾಡಿದರು. ‘ಜಿಲ್ಲೆಯಲ್ಲಿ  ಆಧಾರ ಕಾರ್ಡ್‌ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಅದರ ಬದಲಿಗೆ ಎನ್‌.ಪಿ.ಆರ್‌ ಸಂಖ್ಯೆಯನ್ನು ನೀಡಲಾಗುತ್ತಿದ್ದು ಜನವರಿ ಅಂತ್ಯದೊಳಗೆ ಗ್ರಾಹಕರು ಹೆಸರನ್ನು ನೋಂದಾಯಿಸಿಕೊಂಡು ಹತ್ತಿರದ ಗ್ಯಾಸ್‌ ಏಜೆನ್ಸಿ ಅವರಿಗೆ ನೀಡಬೇಕು.

ಇದರಿಂದ ಅಡುಗೆ ಅನಿಲದ ಸಹಾಯಧನ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಆಗಲಿದೆ. ಈಗಾಗಲೇ ತಾಲ್ಲೂಕಿನ ಕಾತೂರ ಹಾಗೂ ಚಿಗಳ್ಳಿಯಲ್ಲಿ ಎನ್‌.ಪಿ.ಆರ್‌ ನೀಡುವ ವ್ಯವಸ್ಥೆ ಮಾಡಲಾಗಿದ್ದು ಶೀಘ್ರದಲ್ಲಿಯೇ ಉಳಿದ ಗ್ರಾ.ಪಂ.ಗಳಿಗೂ ವಿಸ್ತರಿಸಲಾ ಗುವುದು. ಪಟ್ಟಣದಲ್ಲಿಯೂ ಸಹ ಎನ್‌.ಪಿ.ಆರ್‌ ಕೇಂದ್ರ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.‘ಅಡುಗೆ ಅನಿಲ ಸಂಪರ್ಕ ಹೊಂದಿದ ಕುಟುಂಬಗಳು ಸೀಮೆ ಎಣ್ಣೆಗಾಗಿ ಪರದಾಡುತ್ತಿದ್ದಾರೆ. ತಿಂಗಳಿಗೆ ಎರಡು ಲೀಟರ್‌ ಸೀಮೆ ಎಣ್ಣೆಯನ್ನಾದರೂ ಪೂರೈಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದರು. ಈ ಬಗ್ಗೆ ಮಾತನಾಡಿದ ತಹಶೀಲ್ದಾರ್‌, ‘ಎಲ್‌.ಪಿ.ಜಿ ಸಂಪರ್ಕ ಹೊಂದಿದ ಕುಟುಂಬಗಳಿಗೂ ಸೀಮೆ ಎಣ್ಣೆ ನೀಡುವ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೊಂದಿಗೆ ಚರ್ಚಿಸಲಾಗುವುದು.

ಅಲ್ಲದೇ ನ್ಯಾಯಬೆಲೆ ಅಂಗಡಿಗಳಲ್ಲಿ ಸೀಮೆ ಎಣ್ಣೆ ಉಳಿಕೆಯಾಗುತ್ತಿದ್ದರೇ ಅದನ್ನು ಸರ್ಕಾರಿ ದರದಲ್ಲಿಯೇ ಅಗತ್ಯವಿರುವ ಕುಟುಂಬಗಳಿಗೆ ನೀಡಲು ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು’ ಎಂದರು. ಅಡುಗೆ ಅನಿಲವನ್ನು ಮನೆ ಬಾಗಿಲಿಗೆ ತರುವ ಸಿಬ್ಬಂದಿ ₨10–15 ಹೆಚ್ಚಿಗೆ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು. ಇದಕ್ಕೆ ಓಂ ಗ್ಯಾಸ್‌ ಸರ್ವಿಸಸ್‌ ಮಾಲೀಕ ಬಸವರಾಜ ಓಶಿಮಠ ಮಾತನಾಡಿ, ‘ಬಿಲ್‌ನಲ್ಲಿ ನಮೂದಿಸಿರುವಷ್ಟೇ ಹಣವನ್ನು ಗ್ರಾಹಕರು ನೀಡಿ. ಒಂದು ವೇಳೆ ಹೆಚ್ಚಿಗೆ ಹಣ ಕೇಳಿದರೆ ನನಗೆ ದೂರು  ನೀಡಿ ಎಂದರು.‘ಆಧಾರ್‌ ಕಾರ್ಡ್‌ ಇಲ್ಲದಿರುವವರು ಎನ್‌.ಪಿ.ಆರ್‌ ಮಾಡಿಸಿಕೊಂಡು ಅದರ ಸಂಖ್ಯೆಯನ್ನು ನಮಗೆ ನೀಡಬೇಕು. ಪ್ರತಿ ತಿಂಗಳು ಗ್ರಾಹಕರು ಅಡುಗೆ ಅನಿಲ ಪಡೆದ ನಂತರ ಸಹಾಯಧನದ ಹಣ ಅವರ ಖಾತೆಗೆ ಜಮಾ ಆಗಲಿದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದ್ದು ಮೊದಲಿಗೆ ಇದು ಸ್ವಲ್ಪ ತೊಂದರೆ ಎನಿಸಿದರೂ ಮುಂದಿನ ದಿನಗಳಲ್ಲಿ ಇದರಿಂದ ಜನರಿಗೆ ಹೆಚ್ಚಿನ ಉಪಯೋಗವಾಗಲಿದೆ’ ಎಂದರು. ಆಹಾರ ನಿರೀಕ್ಷಕ ಸುರೇಶ ವಕ್ಕುಂದ, ರವಿ ಡೋರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)