ಸೋಮವಾರ, ಜೂನ್ 21, 2021
28 °C

ಆನುವಾಳು: ಸಮಸ್ಯೆಗಳ ಗೋಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಹದಗೆಟ್ಟ ರಸ್ತೆ, ಬಸ್ ಹಾಗೂ ಪ್ರಯಾಣಿಕ ವಾಹನದ ಸೌಕರ್ಯವಿಲ್ಲದೆ ಹೆಣ್ಣು ಮಕ್ಕಳು ಹೈಸ್ಕೂಲ್ ಮೆಟ್ಟಿಲೇರಲಾಗದ ಸ್ಥಿತಿ, ಚರಂಡಿಗಳಿಲ್ಲದೆ ಅನೈರ್ಮಲ್ಯ. ಇದನ್ನು ಒಟ್ಟಾಗಿ ಆನುವಾಳು ಗ್ರಾಮ ಎನ್ನಬಹುದು!ಮೇಲುಕೋಟೆ ಹೋಬಳಿಗೆ ಸೇರಿದ ಆನುವಾಳು ಗ್ರಾಮ ಸುಮಾರು 500 ಜನಸಂಖ್ಯೆ ಹೊಂದಿದೆ. ಮುಖ್ಯ ರಸ್ತೆಗೆ ಬರಬೇಕಾದರೆ 3 ಕಿ.ಮೀ ನಡೆಯಬೇಕು. ಕಾರಣ ಯಾವುದೇ ವಾಹನ ಸೌಲಭ್ಯವಿಲ್ಲ. ಕಾನನದ ಪ್ರದೇಶದ ನಡುವೆ ಇರುವ ಈ ರಸ್ತೆಯಂತು ಹಳ್ಳದಿಣ್ಣೆಗಳಿಂದ ಕೂಡಿದ್ದು ಜನನಿಬಿಡ ಪ್ರದೇಶವಾಗಿದೆ. ಇದರಿಂದ ಒಂಟಿ ಮಹಿಳೆಯರು, ಮಕ್ಕಳು ಈ ದಾರಿಯಲ್ಲಿ ತಿರುಗಾಡುವುದು ಕಷ್ಟವಾಗಿದೆ.ಇಲ್ಲಿಯ ಸರ್ಕಾರಿ ಶಾಲೆಯಲ್ಲಿ 1 ರಿಂದ 5ನೇ ತರಗತಿಯವರೆಗೆ ಮಾತ್ರ ವ್ಯಾಸಂಗ ಮಾಡಲು ಸಾಧ್ಯ. ಮುಂದಿನ ವಿದ್ಯಾಭ್ಯಾಸಕ್ಕೆ ಸುಮಾರು 6 ಕಿ.ಮೀ ದೂರದ ಸುಂಕಾ ತೊಣ್ಣೂರು ಗ್ರಾಮದ ಸರ್ಕಾರಿ ಶಾಲೆ ಕಾಲೇಜಿಗೆ ಹೋಗಬೇಕಾಗಿದೆ. ಹಾಗಾಗಿ ಪೋಷಕರು ಕೂಡ ತಮ್ಮ ಬಹಳಷ್ಟು ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ.ಗ್ರಾಮದೊಳಗಿನ ಬೀದಿಗಳು ಸರಿಯಿಲ್ಲ. ಚರಂಡಿಯಂತೂ ಇಲ್ಲವೇ ಇಲ್ಲ. ಅಲ್ಲಲ್ಲಿ ತಿಪ್ಪೆಗುಂಡಿಗಳ ರಾಶಿ. ವಿಲೇವಾರಿಗೆ ಗ್ರಾಮ ಪಂಚಾಯಿತಿ ಮನಸ್ಸು ಮಾಡಿದಂತಿಲ್ಲ. ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಿದ್ದರೆ ಅಭಿವೃದ್ಧಿ ಆಗುತ್ತಿತ್ತು ಎಂಬುದು ಗ್ರಾಮಸ್ಥರ ಅಭಿಪ್ರಾಯ.ಆರೋಗ್ಯ ಸೇವೆಗಳು ಈ ಗ್ರಾಮಕ್ಕೆ ತಲುಪಿಲ್ಲ. ರೋಗಿಗಳು ಚಿಕಿತ್ಸೆಗೆ ತಾಲ್ಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಗೆ ಬರಬೇಕಾಗಿದೆ. ತುರ್ತುಚಿಕಿತ್ಸೆ ಹಾಗೂ ಹೆರಿಗೆ ಸಂದರ್ಭಗಳಲ್ಲಂತೂ ಆ ದೇವರೇ ಕಾಪಾಡಬೇಕು.ಬೀದಿ ದೀಪಗಳಿಲ್ಲದೆ ರಾತ್ರಿ ವೇಳೆ ಸಂಚರಿಸುವುದು ಇಲ್ಲಿ ದುಸ್ತರವಾಗಿದೆ. ಗ್ರಾಮದಲ್ಲಿರುವ ವೀರಗಲ್ಲು ಮತ್ತು ಮಾಸ್ತಿಗಲ್ಲುಗಳ ಸಂರಕ್ಷಣೆಯಿಲ್ಲದೆ ಆಟ ಆಡುವ ಮಕ್ಕಳಿಗೆ ಆಟಿಕೆಗಳಾಗಿವೆ. ಗ್ರಾಮ ದೇವತೆಯ ಭೈರವೇಶ್ವರಸ್ವಾಮಿ ದೇವಸ್ಥಾನ ಇದುವರೆಗೂ ಜೀರ್ಣೋದ್ಧಾರ ಕಂಡಿಲ್ಲ.ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ರೂ.3 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ಎರಡು ಬೀದಿಗಳಲ್ಲಿ ಸಿಮೆಂಟ್ ರಸ್ತೆ, ಚಪ್ಪಡಿ  ಚರಂಡಿ ನಿರ್ಮಿಸಿದೆ. ಕಾಮಗಾರಿ ನಡೆದು ವರ್ಷ ಕಳೆದಿಲ್ಲ. ಆಗಲೇ ಹಾಳಾಗುವ ಸೂಚನೆ ಕಾಣಿಸಿದೆ ಎನ್ನುತ್ತಾರೆ ಯುವಕ ಸುಧಾಕರ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.