ಶನಿವಾರ, ಮೇ 28, 2022
27 °C

ಆನೆಗಳ ಟ್ವೆಂಟಿ-20; ಶ್ವಾನಗಳ ಫುಟ್ಬಾಲ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿ ಶ್ವಾನಗಳು ಫುಟ್ಟಾಲ್ ಆಡುತ್ತವೆ. ಆನೆಗಳು ಟ್ವೆಂಟಿ-20 ಕ್ರಿಕೆಟ್ ಆಡಿ ರನ್ನುಗಳ ಸುರಿಮಳೆ ಸುರಿಸುತ್ತವೆ!ಹೌದು; ಇದೆಲ್ಲ ನಡೆಯುತ್ತಿರುವುದು ನಜರಬಾದ್‌ನಲ್ಲಿ ಆರಂಭವಾಗಿರುವ ಜೆಮಿನಿ ಸರ್ಕಸ್‌ನಲ್ಲಿ. ದಸರಾ ಕ್ರೀಡಾಕೂಟ ನೋಡಿರುವ ಮೈಸೂರಿನ ಜನರಿಗೆ ಈಗ ಪ್ರಾಣಿಗಳ ಆಟವನ್ನು ನೋಡುವ ಅವಕಾಶ ಇಲ್ಲಿದೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸರ್ಕಸ್‌ನ  ವ್ಯವಸ್ಥಾಪಕ ಕೆ.ಎಸ್. ಪುಷ್ಕರನ್, `ಮೈಸೂರಿಗೆ ಮತ್ತೆ ಬಂದಿರುವ ಜೆಮಿನಿ ಸರ್ಕಸ್‌ನಲ್ಲಿ ಹೊಸ ಕಲಾವಿದರು, ಹೊಸ ಕಸರತ್ತುಗಳನ್ನು ಪ್ರಸ್ತುತಪಡಿಸುತ್ತಿದೆ. ಪ್ರತಿದಿನ ಮಧ್ಯಾಹ್ನ 1, 4 ಹಾಗೂ 7 ಗಂಟೆಗೆ ಮೂರು ಪ್ರದರ್ಶನಗಳು ನಡೆಯಲಿವೆ. ಟಿಕೆಟ್ ದರ ರೂ. 40. 80, 120, 150 ನಿಗದಿಪಡಿಸಲಾಗಿದೆ~ ಎಂದು ಹೇಳಿದರು.`ರಷ್ಯನ್ ಸ್ಟಿಕ್ ಬ್ಯಾಲೆನ್ಸ್, ತ್ರಿ ಐ ಸ್ಟ್ರಿಂಗ್ ನೆಟ್, ವರ್ಟಿಕಲ್ ಸ್ವಿಂಗ್, ಎಕ್ರೊಬ್ಯಾಟ್ಸ್, ರಷ್ಯನ್ ರೋಪ್ ಬ್ಯಾಲೆನ್ಸ್, ಕಾಮಿಕ್ ಬೇರ್ ಏಕ್ರೋಬ್ಯಾಟ್ ಮುಂತಾದ ಪ್ರದರ್ಶನಗಳು ಈ ಬಾರಿ ಹೊಸದಾಗಿ ಸೇರ್ಪಡೆಯಾಗಿವೆ. ಕಮಲ್, ಜರೀನಾ, ಜನಾರ್ದನ ಹಾಗೂ ನೂರ್ ಮಹಮ್ಮದ್ ಅವರು ಪ್ರದರ್ಶಿಸುವ ಅಮೆರಿಕನ್ ಮೃತ್ಯು ಉಂಗುರ, ಸುಮನ್ ಅವರ ಸೈಕಲ್ ಎಕ್ರೊಬ್ಯಾಟಿಕ್ಸ್, ಬಬ್ಲು, ಹಾಗೂ ಶೋಭಾ ಅವರ ಪಾಕೆಟ್ ಸೈಕಲ್ ಆಟಗಳು, ಜಯಶ್ರೀ ಹಾಗೂ  ಮಹೇರಸಿಂಗ್ ಸೇರಿದಂತೆ ನಾಲ್ಕು ಮಂದಿ ಕಲಾವಿದರು ಗೋಲದೊಳಗೆ ಪ್ರದಶಿಸುವ ಮೋಟಾರ್ ಸವಾರಿಯು ಪ್ರಮುಖ ಆಕರ್ಷಣೆಯಾಗಿದೆ~ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸರ್ಕಸ್‌ನ ಇನ್ನೊಬ್ಬ ವ್ಯವಸ್ಥಾಪಕ ಪ್ರಭಾಕರ್, `ಬ್ರೆಜಿಲ್‌ನ ಕಾಡುಗಳಲ್ಲಿ ಕಂಡು ಬರುವ ಮೆಕೌ ಗಿಳಿ, ಆಸ್ಟ್ರೇಲಿಯದ ವಿರಳ ಪಕ್ಷಿ ಕೊಕ್ಕೊ ಗಳ ಆಕರ್ಷಕ ಪ್ರದರ್ಶನ ಪ್ರೇಕ್ಷಕರ ಮನಸ್ಸಿಗೆ ಮುದ ನೀಡುತ್ತವೆ. ಆನೆಗಳ ಡಾಕ್ಟರ್ ಆಟವೂ ವಿಶೇಷವಾಗಿದೆ~ ಎಂದು ತಿಳಿಸಿದರು.`ರಾಜಕಪೂರ್ ಅವರ ಮೇರಾ ನಾಮ್ ಜೋಕರ್, ಮಿಥುನ್ ಚಕ್ರವರ್ತಿಯ ಶಿಕಾರಿ, ಕಮಲ್‌ಹಾಸನ್ ಅವರ ಅಪೂರ್ವ ಸಹೋದರ್‌ರಗಳ್ ಚಲನಚಿತ್ರಗಳಲ್ಲಿ ಜೆಮಿನಿ ಸರ್ಕಸ್ ಕಾರ್ಯನಿರ್ವಹಿಸಿದೆ. 200 ಉದ್ಯೋಗಿಗಳನ್ನು ಹೊಂದಿದೆ. ಅದರಲ್ಲಿ 40 ಪುರುಷರು, 40 ಮಹಿಳೆಯರು, 120 ಆಡಳಿತ ಸಿಬ್ಬಂದಿ ಇದ್ದಾರೆ.

 

1951ರಲ್ಲಿ ಎಂ.ವಿ. ಶಂಕರನ್ ಹಾಗೂ ಕೆ. ಸಹದೇವನ್ ಅವರಿಂದ ಸ್ಥಾಪಿಸಲ್ಪಟ್ಟ ಜೆಮಿನಿ ಸರ್ಕಸ್ ಗುಜರಾತ್‌ನಲ್ಲಿ ತನ್ನ ಮೊದಲ ಪ್ರದರ್ಶನ ನೀಡಿತ್ತು. ಆಗಿನ ಪ್ರಧಾನಿ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರೀ, ಡಾ. ರಾಜೇಂದ್ರಪ್ರಸಾದ್, ಡಾ. ಎಸ್. ರಾಧಾಕೃಷ್ಣನ್ , ಇಂದಿರಾಗಾಂಧಿ ಯವರಿಂದ ಮೆಚ್ಚುಗೆ ಗಳಿಸಿತ್ತು. ಇದೀಗ ಮೈಸೂರಿನಲ್ಲಿ ಜೆಮಿನಿ ಸರ್ಕಸ್ ಪ್ರದರ್ಶನಗೊಳ್ಳುತ್ತಿದೆ~ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.