ಭಾನುವಾರ, ಜನವರಿ 19, 2020
29 °C

ಆನೆಯ ಗಡ್ಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದಿನ ಆನೆ ಕವುಚಿ ಮಲಕ್ಕೊಂಡು ಭಾನುವಾರದ ಪೇಪರ್ ಓದ್ತಾ ಇತ್ತು. ಅದ್ರಲ್ಲಿ ವಿವಿಧ ಬಗೆಯ ಗಡ್ಡಗಳನ್ನು ಬಿಟ್ಟ ಗಡ್ಡದಾರಿಗಳ ಫೋಟೋ ಕೊಟ್ಟು ಅವುಗಳ ವಿಶೇಷಗಳು ಏನೇನು ಅಂತ ಬರೆದಿದ್ರು.ಆನೆ ಎಲ್ಲಾ ವಿಷಯ ಓದಿದಮೇಲೆ ಎದ್ದು ಹೋಗಿ ಕನ್ನಡೀಲಿ ತನ್ನ ಮುಖ ನೋಡ್ಕೊಂತು. `ಅರೆ ನಂಗೆ ಗಡ್ಡವೇ ಇಲ್ವಲ್ಲ, ಎಲ್ಲಾ ಗಂಡಸ್ರಿಗೆ ಗಡ್ಡ ಕೊಟ್ಟವರು ನಂಗ್ಯಾಕೆ ಗಡ್ಡ ಕೊಡ್ಲಿಲ್ಲ. ನಂಗೂ ಗಡ್ಡ ಇದ್ದಿದ್ರೆ ಚೆನ್ನಾಗಿರ‌್ತಿತ್ತಲ್ಲಾ.~ ಅಂತ ಯೋಚನೆ ಮಾಡ್ತು.`ಇವ್ರಿಗೆಲ್ಲಾ ಗಡ್ಡ ಕೊಟ್ಟೋರ‌್ಯಾರು. ಯಾರು!~ ಅಂತ ಯೋಚನೆ ಮಾಡ್ತು. ಹೂಂ. ಆ ಗಡ್ಡಧಾರಿ ಬ್ರಹ್ಮ ಅಲ್ವಾ. ಅವನೇನ್ ಮೋಸಗಾರ ನೋಡು. ನನ್ನ ವಿಷಯದಲ್ಲಿ ಅವನು ಹೀಗೆ ಮಾಡಬಹುದಾ? ಸುಮ್ಮನಿರಬಾರದು, ನಂಗೆ ಗಡ್ಡ ಬೇಕೇ ಬೇಕು ಅಂತ ಅವನಿಗೆ ಕೇಳ್ಬೇಕು. ಆದ್ರೆ, ಹೇಗೆ ಕೇಳೋದು?~. ಯೋಚನೆಗೆ ಬಿದ್ದ ಆನೆ `ಸತ್ಯಾಗ್ರಹ ಮಾಡೋದೆ ಸರಿ~ ಅಂತ ನಿರ್ಧಾರ ಮಾಡ್ತು.`ಬೇಡ ಕಣೋ. ಗಡ್ಡ ಇಲ್ಲದಿದ್ರೂ ನೀನು ಚೆನ್ನಾಗಿದ್ದೀಯ~ ಎಂದು ಫ್ರೆಂಡ್ಸ್ ಹೇಳಿದ್ರೂ ಆನೆ ಕೇಳ್ಲೇ ಇಲ್ಲ. ಸೀದಾ ಒಂದು ಎತ್ತರವಾದ ಬೆಟ್ಟದ ಮೇಲೆ ಹೋಯ್ತು. ತುದೀಗೆ ಹೋಗಿ ಒಂಟಿ ಕಾಲಲ್ಲಿ ನಿಂತ್ಕೊಂಡು- `ಬ್ರಹ್ಮ ನಂಗೆ ಗಡ್ಡ ಕೊಡು, ಬ್ರಹ್ಮ ನಂಗೆ ಗಡ್ಡ ಕೊಡು~ ಅಂತ ಮಂತ್ರ ಹೇಳ್ತಾ ನಿಂತ್ಕೊಂತು. ಒಂದಿನ, ಎರಡು ದಿನ, ಹದಿನೈದು ದಿನವಾಯ್ತು. ಬ್ರಹ್ಮ ಬರಲೇ ಇಲ್ಲ. ಆನೆಯ ತಪಸ್ಸಿನಿಂದ ಬೆಟ್ಟಕ್ಕೆ ತುಂಬಾ ನೋವಾಯ್ತು. ಬೆಟ್ಟ ಭೂಮಿತಾಯೀನ ಕರೀತು. `ನೋಡು ತಾಯಿ, ಈ ಆನೆ ಒಂದೇ ಕಡೆ ನಿಂತ್ಕೊಂಡು ಸತ್ಯಾಗ್ರಹ ಮಾಡ್ತಿದೆ. ನಂಗೆ ತುಂಬಾ ನೋವಾಗ್ತಿದೆ~ ಅಂತು. ಭೂಮಿ ತಾಯಿ ಆನೆ ಹತ್ರ ಬಂದು- `ಏನಪ್ಪಾ... ನಿಂಗಾಗಿರೋ ತೊಂದ್ರೆ~ ಅಂದ್ಲು.`ಆ ಬ್ರಹ್ಮನ ಮೋಸ ನೋಡಿದೆಯಾ ತಾಯಿ. ಭೂಮಿಮೇಲಿರೋ ಎಲ್ಲಾ ಗಂಡಸ್ರಿಗೂ ಗಡ್ಡ ಕೊಟ್ಟಿದ್ದಾನೆ. ನಂಗೆ ಮಾತ್ರ ಇಲ್ಲ. ನಂಗೂ ಗಡ್ಡ ಕೊಡು ಅಂತ ಬ್ರಹ್ಮನಿಗೆ ಮೊರೆ ಇಡ್ತಾ ನಿಂತಿದ್ದೀನಿ~ ಅಂತು. ಭೂಮಿತಾಯಿಗೂ ಹೌದಲ್ವ ಅನ್ನಿಸ್ತು. ಆಕೆ ಬ್ರಹ್ಮನ ಹತ್ರ ಹೋದ್ಲು. `ನೋಡು ಬ್ರಹ್ಮ, ಆನೆಗೆ ಗಡ್ಡ ಬೇಕಂತೆ. ಗಡ್ಡದ ವಿಷಯಕ್ಕೆ ಆ ಗುಡ್ಡದ ಮೇಲೆ ತಪಸ್ಸು ಮಾಡ್ತಿದ್ದಾನೆ. ಅವನಿಗೆ ಗಡ್ಡ ಕೊಟ್ಬಿಡು~ ಅಂದ್ಲು.`ತಾಯಿ. ನಿಂಗೆ ಗಡ್ಡದ ಸಮಾಚಾರ ಗೊತ್ತಿಲ್ಲ. ಅದರಿಂದ ಅವನಿಗೆ ತೊಂದ್ರೆ ಅಂತಾನೇ ನಾನು ಕೊಟ್ಟಿಲ್ಲ~ ಅಂದ ಬ್ರಹ್ಮ. `ಅದೆಲ್ಲಾ ಗೊತ್ತಿಲ್ಲಾ. ನಿಂಗೆ ಗಡ್ಡ ಇದೆ, ಅವನಿಗೂ ಕೊಡು, ನೀನೇನ್ ಕಳ್ಕತೀಯ~ ಅಂದ್ಲು ಭೂಮಿತಾಯಿ. `ಸರಿ ನೀನ್ ಹೇಳಿದ್ಮೇಲೆ ಕೊಡ್ತೀನಿ ಬಿಡು~ ಅಂತ ಆನೆ ಮುಂದೆ ಪ್ರತ್ಯಕ್ಷನಾದ ಬ್ರಹ್ಮ ತಥಾಸ್ತು ಅಂದುಬಿಟ್ಟ. ಆನೆ ಖುಷಿಯಿಂದ ಕುಣಿದಾಡಿಬಿಡ್ತು.ಮಾರನೇ ದಿನದಿಂದ್ಲೇ ಗಡ್ಡ ಬೆಳೆಯೋಕೆ ಶುರುವಾಯ್ತು. ಮಳೆಗಾಲದ ಹುಲ್ಲುಗಾವಲಿನಂತೆ ಬೆಳೀತು. ಆನೆ ಸೊಂಡಿಲಿನ ಜೊತೆಗೆ ಗಡ್ಡವನ್ನೂ ಇಳಿಬಿಟ್ಕೊಂಡು ಓಡಾಡೋಕೆ ಶುರುವಾಯ್ತು.ಒಂದು ಮಧ್ಯಾಹ್ನ ಕಬ್ಬಿನ ಗದ್ದೆಗೆ ಹೋಗಿ ಚೆನ್ನಾಗಿ ಕಬ್ಬು ತಿಂದು, ಮರದ ಕೆಳಗೆ ಬಂದು ಕೂತ್ಕೊಂತು. ಹೊಟ್ಟೆ ತುಂಬಿತ್ತಲ್ಲ ಚೆನ್ನಾಗಿ ನಿದ್ರೆ ಬಂತು. ಆ ಮರದಲ್ಲಿದ್ದ ಕೆಲವು ಪಕ್ಷಿಗಳು ಕೆಳಗೆ ಮಲಗಿರೋ ಆನೇನ ನೋಡಿದ್ವು. ಅವಕ್ಕೆ ಆನೆ ಗಡ್ಡ ಇಷ್ಟವಾಯ್ತು. ಕೆಳಗೆ ಹಾರಿ ಬಂದ ಅವು ಆನೆ ಗಡ್ಡದ ತುದೀನ ತಗೊಂಡು ಜಡೆ ಹಾಗೆ ಹೆಣೆದು ಎಲ್ಲಾ ಒಟ್ಮಾಡಿ ಆನೆದಂತಕ್ಕೆ ಗಂಟು ಹಾಕಿದ್ವು. ಒಳ್ಳೆ ತೊಟ್ಟಿಲಿನಂತೆ ಮಾಡಿದ್ವು.

 

ಮರದ ಮೇಲಿನ ಪಕ್ಷಿಗಳೆಲ್ಲಾ ಆನೆ ಗಡ್ಡದ ಗೂಡಿಗೇ ಬಂದು ಸೇರ‌್ಕೊಂಡ್ವು. ಬೆಚ್ಚಗೆ ಮಲಗಿದ್ವು. ಆನೆಗೆ ಗೊತ್ತೇ ಇಲ್ಲ. ಎಚ್ಚರವಾದಾಗ ನೋಡುತ್ತೆ ತನ್ನ ಗಡ್ಡ ಗೂಡಾಗಿದೆ. ಗೂಡಲ್ಲಿ ಹಕ್ಕಿಗಳ ಸಂಸಾರವೇ ಇದೆ. `ಇದ್ರೆ ಇರ‌್ಲಿ~ ಅಂದುಕೊಂಡು ಮತ್ತಷ್ಟು ಗಾಂಭೀರ್ಯದಿಂದ ನಡ್ಕೊಂಡು ತನ್ನ ಫ್ರೆಂಡ್ಸ್ ಹತ್ರ ಹೋಯ್ತು. ಯಾರಿಗೂ ಇಲ್ಲದ ಗಡ್ಡ, ಗಡ್ಡದಲ್ಲಿ ಗೂಡು, ಗೂಡಲ್ಲಿ ಪಕ್ಷಿಗಳ ಸಂಸಾರ ನೋಡಿ ಇತರೆ ಆನೆಗಳಿಗೆಲ್ಲಾ ಸೋಜಿಗ ಅನ್ನಿಸ್ತು.ಸೊಪ್ಪು ಸದೆ ತಿನ್ನೋಕೆ ಆನೆ ಕಾಡಲ್ಲೆಲ್ಲಾ ಓಡಾಡ್ತಾ ಇತ್ತಲ್ಲ, ಅಲ್ಲೇ ಪಕ್ಷಿಗಳಿಗೂ ಹಣ್ಣು ಹಂಪಲು ಸಿಗ್ತಾ ಇತ್ತು. ಊಟಕ್ಕೋಸ್ಕರ ಅವುಗಳೇನೂ ದೂರ ಹಾರಿ ಹೋಗ್ತಾ ಇರ‌್ಲಿಲ್ಲ. ಅದೊಂದು ರೀತಿ ನಡೆದಾಡೋ ಪಕ್ಷಿಧಾಮ ಅನ್ನಿ. ದಿನಕಳೆದ ಹಾಗೆ ಹೆಣ್ಣುಪಕ್ಷಿಗಳು ಮೊಟ್ಟೆ ಇಡೋಕೆ ಶುರುಮಾಡಿದ್ವು. ಒಂದೊಂದೇ ಮೊಟ್ಟೆ ಒಡೆದು ಮರಿ ಆದವು. ಅಲ್ಲಿಂದ ಪ್ರಾರಂಭವಾಯ್ತು ಆನೆಗೆ ಮಾನಸಿಕ ಹಿಂಸೆ. ದಿನಾ ಅವುಗಳ ಕಿಚಿಪಿಚಿ ಶಬ್ದ. ಆ ಮೊಟ್ಟೆ ಮರಿಗಳನ್ನ ತಿನ್ನೋಕೆ ಹಾವುಗಳೂ ಗಡ್ಡದ ಗೂಡಿಗೆ ಬಂದವು. ಇದೀಗ ಆನೆಗೆ ಭಯವಾಯ್ತು.`ಛೇ. ಏನ್ಮಾಡ್ಲಿ. ನಂಗೆ ಈ ಗಡ್ಡ ಬೇಡ್ವಾಗಿತ್ತು~ ಅಂತ ಈಗ ಆನೆಗೆ ಅನ್ನಿಸೋಕೆ ಪ್ರಾರಂಭವಾಯ್ತು. ದಿನೇ ದಿನೇ ಪಕ್ಷಿಗಳ ಕಾಟ, ಹಾವಿನ ಕಾಟ ಜಾಸ್ತಿಯಾಯ್ತು. ವಿಧಿ ಇಲ್ಲದೆ ಆನೆ ಪುನಃ ಬೆಟ್ಟದ ಮೇಲೆ ತಪಸ್ಸು ಮಾಡ್ತು. ಈ ಸಲ ಜಾಸ್ತಿ ಕಾಯಿಸದೆ ಬ್ರಹ್ಮ ಪ್ರತ್ಯಕ್ಷನಾದ. ಬ್ರಹ್ಮನನ್ನು ನೋಡ್ತಿದ್ದ ಹಾಗೇ- `ದೇವಾ, ನಿನ್ನ ಗಡ್ಡ ತಗೋ ಮರಾಯ, ನಂಗೆ ಬೇಡ~ ಅಂತು.`ನೋಡ್ದಾ ಆನೆಯಣ್ಣಾ, ಯಾರ‌್ಯಾರಿಗೆ ಏನೇನು ಬೇಕು ಅಂತ ಬ್ರಹ್ಮನಿಗೆ ಗೊತ್ತು. ಇಲ್ಲದ್ದನ್ನ ಕೇಳಿದ್ರೆ ಇದೇ ಆಗೋದು. ಇರೋದ್ರಲ್ಲೇ ನೆಮ್ದಿಯಾಗಿ ಇರೋದ್ ಬಿಟ್ಟು ಏನೇನೋ ಬೇಕು ಅಂದ್ರೆ ಅದ್ರಿಂದ ಆಪತ್ತೇ ಜಾಸ್ತಿ~ ಎಂದು ಬೆಟ್ಟ ಆನೆಗೆ ಬುದ್ದಿ ಹೇಳ್ತು.`ಆಯ್ತು ಬ್ರಹ್ಮದೇವ, ನೀ ಕೊಟ್ಟಿರೋ ಈ ಭಾರೀ ದೇಹವೇ ನಂಗೆ ಸಾಕು, ಇನ್ನೇನೂ ಬೇಡ. ಬರ‌್ತೀನಿ ಬೆಟ್ಟಪ್ಪ~ ಅಂತ ಆನೆ ಗಡ್ಡ ಕಳ್ಕಂಡು ಗುಡ್ಡ ಇಳೀತು. ನೆಮ್ಮದಿಯ ಉಸಿರು ಬಿಟ್ಕೊಂಡು ಕಾಡಿನ ದಾರಿ ಹಿಡೀತು.

ಪ್ರತಿಕ್ರಿಯಿಸಿ (+)