ಗುರುವಾರ , ಏಪ್ರಿಲ್ 22, 2021
30 °C

ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯ ಬಹಳಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದ್ದು ವಿಶೇಷವಾಗಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವೈದ್ಯರ ಕೊರತೆಯಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ತಿಳಿಸಿದ್ದಾರೆ.ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದೆ ಹಾಗೂ ಆರೋಗ್ಯ ಇಲಾಖೆ 18 ತಜ್ಞ ವೈದ್ಯರ ಕೊರತೆ ಎದುರಿಸುತ್ತಿದೆ ಎಂದರು.ಗಂಗೊಳ್ಳಿ, ಆಲೂರು, ಹಳ್ಳಿಹೊಳೆ, ಬೆಳ್ವೆ, ಬಜಗೊಳಿಯಲ್ಲಿ ತಲಾ ಒಂದು ಹುದ್ದೆ ಹಾಗೂ ಸಿದ್ದಾಪುರದಲ್ಲಿ ಮೂರು ವೈದ್ಯರ ಹುದ್ದೆ ಖಾಲಿ ಇದೆ. ವಿಶೇಷವಾಗಿ ನಕ್ಸಲ್ ಪೀಡಿತ ಪ್ರದೇಶಗಳಿಗೆ ಬೇರೆ ಜಿಲ್ಲೆಗಳಿಂದ ವೈದ್ಯರು ಬರಲಿಕ್ಕೆ ಕಿಂಚಿತ್ತೂ ಆಸಕ್ತಿ ವಹಿಸುವುದಿಲ್ಲ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿನ ಅರ್ಹ ವೈದ್ಯರನ್ನೇ ಈ ಭಾಗಕ್ಕೆ ವರ್ಗ ಮಾಡಿದರೆ ಅವರು ಕೆಲಸ ಮಾಡಬಲ್ಲರು ಎಂದು ಸರ್ಕಾರಕ್ಕೆ ಕೂಡ ಮನವಿ ಮಾಡಿಕೊಳ್ಳಲಾಗಿದೆ. ಆದರೆ ನಿಯಮದಂತೆ ಅದನ್ನು ಮಾಡಲಿಕ್ಕೆ ಆಗುತ್ತಿಲ್ಲ. ಆದರೆ ಜಿ.ಪಂ. ಸದಸ್ಯರ ಮೂಲಕ ನಿರ್ಣಯವೊಂದನ್ನು ಮಾಡಿ ಅದನ್ನು ಸರ್ಕಾರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದರು.ವೈದ್ಯರ ಕೊರತೆಯಿಂದಾಗಿ ಲಭ್ಯವಿರುವ ವೈದ್ಯರನ್ನೇ ಬಳಸಿಕೊಂಡು ವಾರದಲ್ಲಿ ನಿರ್ದಿಷ್ಟ ದಿನ ಕೊರತೆ ಇರುವ ಕಡೆಗಳಲ್ಲಿ ವೈದ್ಯರನ್ನು ಕಳುಹಿಸಿ ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಶುಶ್ರೂಷಕಿಯರನ್ನು ಕೂಡ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಾರದ ಕೆಲವು ದಿನ ಕಳುಹಿಸಿ ಕೆಲಸ ನಿರ್ವಹಣೆ ಮಾಡಲಾಗುತ್ತಿದೆ. ಕೂಡಲೇ ವೈದ್ಯರ ನೇಮಕ ನಡೆಸದ ಹೊರತೂ ಈ ಸಮಸ್ಯೆ ಪರಿಹರಿಸಲಾಗದು ಎಂದರು.ಇದಕ್ಕೂ ಮುನ್ನ ಈ ಪ್ರಶ್ನೆಯನ್ನು ಪ್ರಸ್ತಾಪಿಸಿದ್ದ ಸದಸ್ಯೆ ಮಮತಾ ಆರ್. ಶೆಟ್ಟಿ, ಸಿದ್ದಾಪುರದ ಪ್ರಾಥಮಿಕ ಕೇಂದ್ರದಲ್ಲಿ ವೈದ್ಯರೂ ಇಲ್ಲ, ನರ್ಸ್‌ಗಳೂ ಇಲ್ಲ, ಆದರೆ ಆಸ್ಪತ್ರೆ ಮಾತ್ರವಿದೆ. ಹೀಗಾದರೆ ಆ ಭಾಗದ ಜನರು ಏನು ಮಾಡಬೇಕು? ಎಂದು ಪ್ರಶ್ನಿಸಿದರು.ಪರಿಶಿಷ್ಟ ವರ್ಗಕ್ಕೆ ಪಿಯು, ಪದವಿ ಹಾಸ್ಟೆಲ್ ನಿರ್ಮಾಣಕ್ಕೆ ಆಗ್ರಹ

ಸದಸ್ಯ ಅನಂತ ಮೊವಾಡಿ ಮಾತನಾಡಿ, ಕುಂದಾಪುರ ತಾಲ್ಲೂಕಿನಲ್ಲಿ ಪರಿಶಿಷ್ಟ ವರ್ಗದ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಬಳಿಕ ಮುಂದೆ ಪಿಯು ಹಾಗೂ ಪದವಿ ಓದಲು ಉಳಿದುಕೊಳ್ಳಲು ಎಲ್ಲಿಯೂ ಹಾಸ್ಟೆಲ್‌ಗಳಿಲ್ಲ. ಹೀಗಾಗಿ ಕೂಡಲೇ ತಾಲ್ಲೂಕಿನಲ್ಲಿ ಹಾಸ್ಟೆಲ್ ನಿರ್ಮಿಸಿಕೊಡುವಂತೆ ಆಗ್ರಹಿಸಿದರು. ಅದೇ ರೀತಿ ಕಾರ್ಕಳದ ಸದಸ್ಯರು ಕೂಡ ತಮ್ಮ ತಾಲ್ಲೂಕಿನಲ್ಲಿ ಕೂಡ ಇಂತಹ ಹಾಸ್ಟೆಲ್ ಇಲ್ಲದೇ ಇರುವ ಬಗ್ಗೆ ಗಮನಸೆಳೆದರು. ಇದಕ್ಕೆ ಉತ್ತರಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಶೇಖರ್, ಎಲ್ಲೆಲ್ಲಿ ಇಂತಹ ಹಾಸ್ಟೆಲ್‌ಗಳ ಅಗತ್ಯವಿದೆಯೋ ಆ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸಿ, ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಮಂಜೂರಾತಿ ಪಡೆಯಲಾಗುವುದು ಎಂದರು.ಅಂಗನವಾಡಿಗಳ ಸಮಯ ಹೆಚ್ಚಳ-ಸದಸ್ಯರ ಆತಂಕ: ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿದ ಬೆನ್ನಿಗೆ ಕೆಲಸದ ಸಮಯವನ್ನೂ ಹೆಚ್ಚಿಸಲಾಗಿದ್ದು ಮಧ್ಯಾಹ್ನ 1 ಗಂಟೆಯಿಂದ ಅದನ್ನು ಸಂಜೆ 4 ಗಂಟೆಯವರೆಗೆ ನಡೆಸುವಂತೆ ಸರ್ಕಾರದಿಂದ ಸೂಚನೆ ಬಂದಿದೆ. ಆದರೆ ಇದರಿಂದಾಗಿ ಅಲ್ಲಿರುವ ಮಕ್ಕಳಿಗೆ ಆಹಾರದ ಸಮಸ್ಯೆ ಕಾಡುತ್ತಿದೆ. ಜತೆಗೆ ಕಾರ್ಯಕರ್ತಯರಿಗೆ ಕೂಡ ಮಕ್ಕಳನ್ನು ಎಷ್ಟು ಹೊತ್ತು ನಿರ್ವಹಣೆ ಮಾಡಬೇಕು ಎನ್ನುವ ಬಗ್ಗೆ ಸ್ಪಷ್ಟ ನಿರ್ದೇಶನವಿಲ್ಲ. ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಕೆಲವು ಸದಸ್ಯರು ಆಗ್ರಹಿಸಿದರು. ಆ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯುವುದಾಗಿ ಅಧಿಕಾರಿಗಳು ತಿಳಿಸಿದರು.ನಿಟ್ಟೆ , ಶಾಂಭವಿ ಹೊಳೆ ಕಲುಷಿತ- ವರದಿಗೆ ಸೂಚನೆ:ಮೀನುಗಾರಿಕೆಗಾಗಿ ನದಿಯಲ್ಲಿ ಡೈನಮೇಟ್ ಸಿಡಿಸುವುದು, ಇಲ್ಲವೇ ವಿಷ ಪದಾರ್ಥಗಳನ್ನು ಹಾಕುವ ಮೂಲಕ ನಿಟ್ಟೆ ಶಾಂಭವಿ ಹೊಳೆಯನ್ನು ಕಲುಷಿತಗೊಳಿಸಲಾಗಿದೆ. ಆದರೆ ಆ ಬಗ್ಗೆ ಯಾವ ಅಧಿಕಾರಿಗಳೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಸದಸ್ಯ ಸುಪ್ರೀತ್ ಶೆಟ್ಟಿ ಹಾಗೂ ಕಾರ್ಕಳ ತಾ.ಪಂ.ಅಧ್ಯಕ್ಷ ಜಯರಾಮ ಸಾಲಿಯಾನ್ ದೂರಿದರು.ಇದಕ್ಕೆ ಉತ್ತರಿಸಿದ ಜಿ.ಪಂ.ಸಿಇಓ ರಾಜಶೇಖರ್, ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹೊಳೆಯ ನೀರು ಕಲುಷಿತಗೊಂಡಿರುವ ಬಗ್ಗೆ ವರದಿ ಪಡೆದು ತಮಗೆ ಸಲ್ಲಿಸುವಂತೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಉಪಾಧ್ಯಕ್ಷೆ ಜ್ಯೋತಿ ಶೆಟ್ಟಿ, ಉಪಕಾರ್ಯದರ್ಶಿ ಪ್ರಾಣೇಶ್ ರಾವ್, ಮುಖ್ಯ ಯೋಜನಾಧಿಕಾರಿ ವಿಜಯಕುಮಾರ್ ಶೆಟ್ಟಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಶಿವಾನಂದ, ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಉಪೇಂದ್ರ ನಾಯಕ್ ಮತ್ತಿತರರು ಸಭೆಯಲ್ಲಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.