ಭಾನುವಾರ, ಜನವರಿ 26, 2020
22 °C
ಅಶ್ವಿನಿ ನಾಚಪ್ಪ ಎಟಿಎಂ ಕಾರ್ಡ್‌ ಕಳವು

ಆರೋಪಿ ಸಿ.ಸಿ ಕ್ಯಾಮೆರಾದಲ್ಲಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಅಥ್ಲೀಟ್‌ ಅಶ್ವಿನಿ ನಾಚಪ್ಪ ಅವರ ಎಟಿಎಂ ಕಾರ್ಡ್‌ಗಳನ್ನು ಕಳವು ಮಾಡಿ ₨ 2.40 ಲಕ್ಷ ಡ್ರಾ ಮಾಡಿಕೊಂಡಿದ್ದ ದುಷ್ಕರ್ಮಿಯ ದೃಶ್ಯ ಜಯನಗರ ಮೂರನೇ ಹಂತದ ಮುಖ್ಯರಸ್ತೆಯ  ‘ಯೆಸ್‌’ ಬ್ಯಾಂಕ್‌ ಎಟಿಎಂ ಘಟಕದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ.ಜಯನಗರದ ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಮಂಗಳವಾರ ಅಶ್ವಿನಿ ನಾಚಪ್ಪ ಅವರ ಎಟಿಎಂ ಕಾರ್ಡ್‌ಗಳನ್ನು ಕಳವು ಮಾಡಿದ್ದ ಕಳ್ಳ, ಆ ಕ್ರೀಡಾಂಗಣದಿಂದ ಸ್ವಲ್ಪ ದೂರದಲ್ಲಿರುವ ಯೆಸ್‌ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಬೆಳಿಗ್ಗೆ 10.14ಕ್ಕೆ ಹಣ ಡ್ರಾ ಮಾಡಿಕೊಂಡಿದ್ದಾನೆ. ಆ ದೃಶ್ಯ ಘಟಕದ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆ ದೃಶ್ಯಾವಳಿಯ ತುಣುಕನ್ನು ಬ್ಯಾಂಕ್‌ನ ಅಧಿಕಾರಿಗಳಿಂದ ಬುಧವಾರ ಪಡೆದುಕೊಳ್ಳಲಾಗಿದೆ. ಆದರೆ, ಆ ದೃಶ್ಯಾವಳಿಯಲ್ಲಿ ಕಳ್ಳನ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯು ಅಶ್ವಿನಿ ನಾಚಪ್ಪ ಅವರ ಎಟಿಎಂ ಕಾರ್ಡ್‌ಗಳಿಂದ

ಬೇರೆ ಬ್ಯಾಂಕ್‌ಗಳ ಎಟಿಎಂ ಘಟಕಗಳಲ್ಲೂ ಹಲವು ಬಾರಿ ಹಣ ಡ್ರಾ ಮಾಡಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ.

ಆ ಘಟಕಗಳ ಸಿ.ಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ಆರೋಪಿಯ ದೃಶ್ಯಾವಳಿಯನ್ನು ನೀಡುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)