ಭಾನುವಾರ, ಮೇ 29, 2022
31 °C

ಆರ್ಥಿಕ ಕ್ಷೇತ್ರದ ಹೊಸ ಭರವಸೆ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಆರ್ಥಿಕ ಕ್ಷೇತ್ರದ ಹೊಸ ಭರವಸೆ

ಸಾಮಾನ್ಯ ಕಾಯಿಲೆಗಳು ಬಂದರೆ ನಾವು ವೈದ್ಯರನ್ನು ಕಾಣುತ್ತೇವೆ. ಆದರೆ ಯಾವುದೇ ಒಂದು ಪ್ರಕಾರದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿ ಬಂದಾಗ ವಿಶೇಷ ತಜ್ಞರನ್ನೇ ಕಾಣುತ್ತೇವೆ.ಹಾಗೆಯೇ ಬೃಹತ್ ಆರ್ಥಿಕ ವ್ಯವಹಾರಗಳಿಗೆ ಒಬ್ಬ ವಿಮಾ ಏಜೆಂಟ್‌ನನ್ನೊ, ಬಾಂಡ್ ವಿತರಕನನ್ನೊ ಕಂಡರೆ ಆಗದು. ಅದಕ್ಕೆ ಹಣಕಾಸು ವ್ಯವಹಾರದ ಸರ್ಜನ್‌ನಂತೆ ಕಾರ್ಯನಿರ್ವಹಿಸುವ ವಿಶೇಷ ಆರ್ಥಿಕ ಯೋಜನಾಧಿಕಾರಿಯೇ ಆಗಬೇಕು.ಹೌದು, ಹಣಕಾಸು ಯೋಜನಾಧಿಕಾರಿ ಆರ್ಥಿಕ ಕ್ಷೇತ್ರದ ಹೊಸ ಭರವಸೆಯಾಗಿದ್ದಾನೆ. ವೈಯಕ್ತಿಕ ಹಣಕಾಸು ಸಲಹೆಗಾರನಂತೆ ಕೆಲಸ ಮಾಡುವ ಅವನು, ನಿಮ್ಮಿಂದ ನಿಮ್ಮ ಆದಾಯ, ಖರ್ಚು, ವೆಚ್ಚ ಹಾಗೂ ಇತರ ಮಾಹಿತಿಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ನಿಮ್ಮ ಹಣಕಾಸು ವ್ಯವಹಾರಗಳು, ಉಳಿತಾಯ ಹಾಗೂ ಹೂಡಿಕೆ ಬಗ್ಗೆ ಸಲಹೆ ನೀಡುವ ನಿಮ್ಮ ವಿಶ್ವಾಸದ ಅಧಿಕಾರಿ. ಏನಿದು ಆರ್ಥಿಕ ಯೋಜನೆ

ಆರ್ಥಿಕ ಯೋಜನೆ ಎನ್ನುವುದು ಒಂದು ವಿಜ್ಞಾನ. ಅದು ವೈಯಕ್ತಿಕ ಹಣಕಾಸು ವ್ಯವಹಾರವನ್ನು ನೋಡಿಕೊಳ್ಳುವ ಒಂದು ಕಲೆ. ಕೋಟ್ಯಂತರ ರೂಪಾಯಿ ಆದಾಯವಿರುವ ವ್ಯಕ್ತಿ ಅಥವಾ ಸಂಸ್ಥೆಯ ಹಣಕಾಸು ವ್ಯವಹಾರವನ್ನು ಅತ್ಯಂತ ಸೂಕ್ಷ್ಮ ದೃಷ್ಟಿಕೋನದಿಂದ ನೋಡುವ, ಅಳೆಯುವ ಹಾಗೂ ಯೋಜನೆಗಳನ್ನು ರೂಪಿಸುವ ಕೆಲಸ ಆರ್ಥಿಕ ಯೋಜನಾಧಿಕಾರಿಗೆ ಸೇರುತ್ತದೆ. ಆತ ಎಷ್ಟು ಪ್ರಾಮಾಣಿಕವಾಗಿ, ಎಷ್ಟು ಜಾಣ್ಮೆಯಿಂದ ಈ ವ್ಯವಹಾರವನ್ನು ನಿರ್ವಹಿಸುತ್ತಾನೆ ಎನ್ನುವುದರ ಆಧಾರದ ಮೇಲೆ ಆತನ ವೃತ್ತಿ ನೈಪುಣ್ಯತೆಯನ್ನು ಅಳೆಯಲಾಗುತ್ತದೆ.ಇದು ಯಾವುದೇ ಒಂದು ನಿರ್ದಿಷ್ಟ ಬಾಂಡ್ ಅಥವಾ ವಿಮಾ ಯೋಜನೆಯ ಬಗ್ಗೆ ಗ್ರಾಹಕರ ತಲೆ ತಿಂದು ಒಪ್ಪಿಗೆ ಪಡೆದು ಕಮಿಷನ್‌ಗೆ ಕೈಚಾಚುವ ವೃತ್ತಿಯಲ್ಲ. ಇಲ್ಲಿ ಒಬ್ಬ ಗ್ರಾಹಕನ ಸಂಪೂರ್ಣ ಆರ್ಥಿಕ ಹೊಣೆಯನ್ನು ಈ ಅಧಿಕಾರಿಯೇ ಹೊತ್ತು ನಿರ್ವಹಿಸಬೇಕಾಗುತ್ತದೆ. ಆ ವ್ಯಕ್ತಿಯ ಅಳಿವು ಉಳಿವಿನಲ್ಲಿ ಈ ಅಧಿಕಾರಿ ಸಮಪಾಲು ಹೊಂದಿರುತ್ತಾನೆ.ಇದೇನು ಆರ್ಥಿಕ ಕ್ಷೇತ್ರದ ಹೊಸ ಅನ್ವೇಷಣೆ ಅಲ್ಲ, ವರ್ಷಗಳಿಂದಲೂ ಈ ಸೇವೆ ಚಾಲ್ತಿಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಅಧಿಕಾರಿಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಹೇಳಬಹುದಷ್ಟೇ.ಉದ್ಯಮಿಗಳಿಗೆ, ಸಂಸ್ಥೆಗೆಳಿಗೆ ಈ ಅಧಿಕಾರಿಗಳ ಮಹತ್ವ ಗೊತ್ತಾಗಿದೆ. ಮಾಸಿಕ ಕೋಟ್ಯಂತರ ಆದಾಯ ಇರುವ ಉದ್ಯಮಿಗಳು, ಅಧಿಕಾರಿಗಳು ಇವರ ಸೇವೆಯನ್ನು ಅವಲಂಬಿಸಿರುತ್ತಾರೆ. ಅಲ್ಲದೇ, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ವಿಮಾ ಕಚೇರಿಗಳು ಇವರ ಸೇವೆಯನ್ನು ಬಯಸುತ್ತವೆ.`ಭಾರತದಲ್ಲಿರುವ ಪ್ರಮಾಣೀಕೃತ ವೃತ್ತಿನಿರತ ಅಧಿಕಾರಿಗಳ ಸಂಖ್ಯೆ ಕೇವಲ 1500 ಹಾಗೂ ಸಿಎಫ್‌ಪಿ ಪರೀಕ್ಷೆಯನ್ನು ಮುಗಿಸಿರುವ ಆದರೆ ಇನ್ನೂ ಪ್ರಮಾಣೀಕರಿಸಲ್ಪಡದ ಸದಸ್ಯರ ಸಂಖ್ಯೆ ಇನ್ನೊಂದು 1500.ಆದರೆ ಆರ್ಥಿಕ ಯೋಜನಾಧಿಕಾರಿಗಳಿಗೆ ಇನ್ನು ದೊಡ್ಡ ಮಟ್ಟದ ಮಾರುಕಟ್ಟೆ ಕಾದು ಕುಳಿತಿದೆ~ ಎನ್ನುತ್ತಾರೆ ಸಿಎಫ್‌ಪಿ ಸಂಜೀವ್ ಕುಮಾರ್. ಜೆಆರ್‌ಜಿ ಗ್ರೂಪ್‌ನ ಹಣಕಾಸು ಯೋಜನಾಧಿಕಾರಿಯಾಗಿರುವ ಅವರು, ಕಳೆದ 20 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.`ಇಂದು ಅನೇಕ ಜನರಿಗೆ ಹಾಗೂ ಸಂಸ್ಥೆಗಳಿಗೆ ಈ ಅಧಿಕಾರಿಗಳ ಅವಶ್ಯಕತೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಈ ಸರ್ಟಿಫಿಕೇಶನ್ ಮುಗಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಐಐಜೆಟಿ ಸೆಟಲೈಟ್ ಮೂಲಕವೂ ಶಿಕ್ಷಣ ನೀಡುತ್ತಿದೆ. ಹಣಕಾಸು ಕ್ಷೇತ್ರದ ದಿಗ್ಗಜರು ಒಂದೇ ಸ್ಥಳದಲ್ಲಿ ಕುಳಿತು ಜಗತ್ತಿನ ಯಾವುದೇ ಮೂಲೆಯಲ್ಲಿರುವ ಅಭ್ಯರ್ಥಿಗಳಿಗೆ ಸೆಟ್‌ಲೈಟ್ ಮೂಲಕ ಉಪನ್ಯಾಸ ನೀಡುತ್ತಾರೆ~ ಎಂದು ಸಿಎಫ್‌ಪಿ ರಮಣ ಕೃಷ್ಣ ವಿವರಿಸಿದರು.

 

ಹಣಕಾಸು ಕ್ಷೇತ್ರದಲ್ಲಿ ಸುಮಾರು ಹತ್ತು ವರ್ಷ ಸೇವೆ ಸಲ್ಲಿಸಿದ ಅವರು 2008ರಲ್ಲಿ ಸಿಎಫ್‌ಪಿ ಸರ್ಟಿಫಿಕೇಶನ್ ಪಡೆದು ಈಗ ಟೊಯೊಟಾ ಗ್ರೂಪ್‌ನಲ್ಲಿ ಹಣಕಾಸು ಯೋಜನಾಧಿಕಾರಿ ಆಗಿದ್ದಾರೆ.ಸಿಎಫ್‌ಪಿ ಕೋರ್ಸ್, ಪ್ರಮಾಣಪತ್ರ

10+2 ಶೈಕ್ಷಣಿಕ ಅರ್ಹತೆ ಹೊಂದಿರುವ ಹಾಗೂ ಹಣಕಾಸು ವ್ಯವಹಾರದ ಜ್ಞಾನವಿರುವ ಯಾವುದೇ ಪದವೀಧರ `ಪ್ರಮಾಣೀಕೃತ ಆರ್ಥಿಕ ಯೋಜನಾಧಿಕಾರಿ~(ಸಿಎಫ್‌ಪಿ) ಕೋರ್ಸ್ ಪಡೆಯಬಹುದು. ಭಾರತದಾದ್ಯಂತ ಅನೇಕ ಖಾಸಗಿ ಸಂಸ್ಥೆಗಳಲ್ಲಿ ಈ ಕೋರ್ಸ್ ಲಭ್ಯವಿದೆ. ಎಫ್‌ಪಿಎಸ್‌ಬಿ (Financial Planning Standards Board) 35 ಶಿಕ್ಷಣ ಸಂಸ್ಥೆಗಳಿಗೆ ಸಿಎಫ್‌ಪಿಸಿಎಂ ಗೆ ತರಬೇತಿ ನೀಡಲು ಅನುಮತಿ ನೀಡಿದೆ.ಸುಮಾರು ಒಂದು ನೂರು ನಗರಗಳಲ್ಲಿ ಕ್ಲಾಸ್‌ರೂಮ್ ಟ್ರೇನಿಂಗ್ ನೀಡಲಾಗುತ್ತಿದ್ದು, ಕೆಲವು ಸಂಸ್ಥೆಗಳು ದೂರ ಶಿಕ್ಷಣ ಮಾದರಿಯಲ್ಲಿಯೂ ಈ ತರಬೇತಿ ನೀಡುತ್ತಿವೆ.ಈ ಕೋರ್ಸ್‌ನಲ್ಲಿ ಒಟ್ಟು ಆರು ಮಾಡ್ಯೂಲ್‌ಗಳಿದ್ದು, ಕನಿಷ್ಠ ಐದು ತಿಂಗಳು ಅಥವಾ ಹೆಚ್ಚೆಂದರೆ ಒಂದು ವರ್ಷದ ಅವಧಿಯಲ್ಲಿ ಅಭ್ಯರ್ಥಿ ಆರೂ ಮಾಡ್ಯೂಲ್‌ಗಳನ್ನು ಪಾಸು ಮಾಡಿಕೊಳ್ಳಬೇಕು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಮತ್ತೆ ಪರೀಕ್ಷಾ ಶುಲ್ಕ ಪಾವತಿಸಿ ನೋಂದಾವಣೆ ಮಾಡಿಕೊಳ್ಳಬೇಕು.ಆದರೆ ಭಾರತದ ಎಫ್‌ಪಿಎಸ್‌ಬಿ ವತಿಯಿಂದ ಸಿಎಫ್‌ಪಿ ಪ್ರಮಾಣ ಪತ್ರ ಪಡೆಯಲು ವೃತ್ತಿ ನಿರ್ವಹಿಸಿದ ಅನುಭವವಿರಲೇಬೇಕು.ಈ ಪ್ರಮಾಣಪತ್ರವು ಆಸ್ಟ್ರೇಲಿಯಾ, ಕೆನಡಾ, ಚೀನಾ, ಬೆಲ್ಜಿಯಂ, ಜರ್ಮನಿ, ಹಾಂಗ್‌ಕಾಂಗ್, ಜಪಾನ್, ಸಿಂಗಪೂರ್, ದಕ್ಷಿಣ ಆಫ್ರಿಕಾ, ಮಲೇಷ್ಯಾ ಒಳಗೊಂಡಂತೆ 23 ದೇಶಗಳಲ್ಲಿ ಊರ್ಜಿತವಾಗಿರುತ್ತದೆ.ಆದರೆ ಕೇವಲ ಶೈಕ್ಷಣಿಕ ಅರ್ಹತೆಯೊಂದಿಗೆ ಸರ್ಟಿಫಿಕೇಶನ್ ಪಡೆದು ಬಿಟ್ಟರೆ ಮುಗಿಯಿತು ಎಂದಲ್ಲ. ನಿಮ್ಮ ಗ್ರಾಹಕರ ಬೇಡಿಕೆಗಳನ್ನು ನೀವು ಹೇಗೆ ಪೂರೈಸುತ್ತೀರಿ, ಅವರು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಹೇಗೆ ಸಹಕರಿಸುತ್ತೀರಿ ಎಂಬುದು ವೈಯಕ್ತಿಕ ಸಾಮರ್ಥ್ಯ ಹಾಗೂ ಕೌಶಲದ ಮೇಲೆ ನಿರ್ಧಾರವಾಗುತ್ತದೆ.ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣ ಹಾಗೂ ಆ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನವನ್ನು ಕೊಡಮಾಡುತ್ತವೆ. ಆದರೆ ಆ ವೃತ್ತಿಗೆ ಸಂಬಂಧಿಸಿ ವಿಶೇಷ ಕೌಶಲ ಬೆಳೆಸಿಕೊಳ್ಳುವುದು ಅಭ್ಯರ್ಥಿಯ ಮೇಲೆ ಅವಲಂಬಿಸಿರುತ್ತದೆ.Indian Institute of Job Training (IIJT)

(http://www.iijt.net & 80-43323000)

International College of Financial Planning

(http://www.icofp.org & pg@icofp.org)

IMS Proschool

(http://proschoolonline.com)

The Indian Institute of Financial Planning

(http://www.iifpindia.com&contact@iifp.in)

Vantage Institute of Financial Markets and NJ Gurukul

(www.fpsb.co.in)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.