ಶನಿವಾರ, ಜನವರಿ 25, 2020
19 °C
ಕೋಳಿ ಸಾಕಾಣಿಕೆದಾರರ ಸಭೆಯಲ್ಲಿ ಜಿಲ್ಲಾಧಿಕಾರಿ ಅಂಜನಕುಮಾರ್‌ ಮಾಹಿತಿ

ಆರ್ಥಿಕ ಸಂಕಷ್ಟ ನಿವಾರಣೆಗೆ ಮತ್ತೊಂದು ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬ್ರಾಯ್ಲರ್‌ ಕೋಳಿ ಸಾಕಣೆ ಮಾಡುತ್ತಿರುವ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರ ನೆರವಿಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಮುಂದೆ ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌ ಭರವಸೆ ನೀಡಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಬ್ರಾಯ್ಲರ್‌ ಕೋಳಿ ಸಾಕಾಣಿಕೆದಾರರ ಸಭೆಯಲ್ಲಿ ರೈತರ ಸಮಸ್ಯೆ ಆಲಿಸಿದ ಬಳಿಕ ಅವರು ಮಾತನಾಡಿದರು. ‘ದೊಡ್ಡ ಮೀನು ಸಣ್ಣ ಮೀನು ತಿಂದು ಬದುಕುವಂತೆ ಕೋಳಿ ಸಾಕಾಣಿಕೆದಾರರ ಬದುಕು ಆಗದಿರಲಿ. ಕೋಳಿ ಸಾಕುವ ಸಣ್ಣಪುಟ್ಟ ರೈತರೂ ಉಳಿಯಬೇಕು.

ಬೆಲೆಯಲ್ಲಿ ಸ್ಥಿರತೆ ತರಲು ಎಲ್ಲರೂ ಪ್ರಯತ್ನಿಸಬೇಕು. ಮಾರುಕಟ್ಟೆಯ ಅನಿಶ್ಚಿತತೆ ಹಾಗೂ ಕೋಳಿಮಾಂಸ ಉಪಯೋಗಿಸುವ ಪ್ರಮಾಣ ತಿಳಿದುಕೊಂಡ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಶೀಘ್ರದಲ್ಲಿಯೇ ಮತ್ತೊಂದು ಸಭೆ ಕರೆಯಲಾಗುವುದು. ಸುಗುಣ, ವೆಂಕೋಬ್‌, ಲೋಟಸ್‌  ಮತ್ತಿತರ ಕಂಪೆನಿಗಳ ಮುಖ್ಯಸ್ಥರು ಸಭೆಗೆ ಹಾಜರಾಗಬೇಕು’ ಎಂದು ಸೂಚಿಸಿದರು.ಕಂಪೆನಿ ಹಾಗೂ ರೈತರು ಸಾಮರಸ್ಯದ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಧಾರಣೆಯಲ್ಲಿ ಮಾರಾಟ ಮಾಡುವುದು ಆಗಬಾರದು ಎಂದು ಎಚ್ಚರಿಕೆ ನೀಡಿದರು. ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಮಲ್ಲಾಪುರ ದೇವರಾಜ್‌ ಮಾತನಾಡಿ, ‘ಅಜ್ಜನ ಕಾಲದಿಂದಲೂ ಕೋಳಿ ಸಾಕಣೆ ಮಾಡುತ್ತಿದ್ದೇವೆ. ಯಾವ ಸಂದರ್ಭದಲ್ಲೂ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಿಯೇ ಗೊತ್ತಿಲ್ಲ.

ಬಹುರಾಷ್ಟ್ರೀಯ ಕಂಪೆನಿಗಳು ಕೋಳಿ ಸಾಕಾಣಿಕೆಗೆ ಬಂದ ಬಳಿಕ, ಸಣ್ಣಪುಟ್ಟ ರೈತರಿಗೆ ದೊಡ್ಡ ಹೊಡೆತ ಬಿದ್ದಿದೆ. ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವ ಮೂಲಕ ರೈತರ ಮೇಲೆ ಸ್ಪರ್ಧೆವೊಡ್ಡುತ್ತಿದ್ದಾರೆ. ಒಂದು ಕೆ.ಜಿ. ಕೋಳಿಗೆ ₨ 70 ವೆಚ್ಚವಾಗುತ್ತದೆ. ಆದರೆ, ರೈತ ಸಾಕಿದ ಕೋಳಿಗೆ ಮಾರುಕಟ್ಟೆಯ ಸಗಟು ಬೆಲೆ ಕೇವಲ ₨ 40 ಬೆಲೆಯಿದೆ. ಪ್ರತಿ ಕೆ.ಜಿ.ಗೆ ₨ 30 ನಷ್ಟ ಉಂಟಾಗುತ್ತಿದೆ. ಅದಕ್ಕೆ ಬಹುರಾಷ್ಟ್ರೀಯ ಕಂಪೆನಿಗಳೇ ಕಾರಣ. ಒಂದು ಸಾವಿರ ಕೋಳಿ ಮಾರಾಟ ಮಾಡಿದರೆ ಈಗ ಒಂದು ಲಕ್ಷ ನಷ್ಟ ಉಂಟಾಗುತ್ತಿದೆ ಎಂದು ನೋವು ತೋಡಿಕೊಂಡರು.ಕೋಳಿ ಸಾಕಾಣಿಕೆದಾರರ ರಾಜ್ಯ ಘಟಕದ ಅಧ್ಯಕ್ಷ ಬಿ.ನಾಗೇಂದ್ರಪ್ಪ ಮಾತನಾಡಿ, ದೇಶಕ್ಕೆ ಬಹುರಾಷ್ಟ್ರೀಯ ಕಂಪೆನಿಗಳು ಕೋಳಿ ಮರಿ ಹಾಗೂ ಆಹಾರ ಪೂರೈಕೆಯ ಉದ್ದೇಶದಿಂದ ಮಾತ್ರ ಕಾಲಿಟ್ಟವು. ಇಂದು ಹತ್ತಾರು ಕಂಪೆನಿಗಳು ಪ್ರಾರಂಭಗೊಂಡಿವೆ. ₨ 12ಕ್ಕೆ ಕೋಳಿ ಮರಿ ನೀಡಬೇಕು. ಆದರೆ, ₨ 25ಕ್ಕೆ ಮಾರಾಟ ಮಾಡುತ್ತಿವೆ. ಸಾಕಿದ ಕೋಳಿಗಳನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿವೆ. ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಿರುವ ಕಂಪೆನಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.ಸಾಮಾನ್ಯ, ಮಧ್ಯಮದ ವರ್ಗದ ಆಶಾಕಿರಣವಾಗಿರುವ ಕೋಳಿ ಸಾಕಾಣಿಕೆ ಉದ್ಯಮ ಉಳಿಸಬೇಕು. ಮನಸ್ಸಿಗೆ ಬಂದ ದರದಲ್ಲಿ ಮಾರಾಟ ಮಾಡುವ ಕಂಪೆನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ನಾಲ್ಕೈದು ವರ್ಷಗಳಿಂದ ಪಾತಾಳ ಕಂಡಿರುವ ಉದ್ಯಮಕ್ಕೆ ಪುನಃಶ್ಚೇತನ ನೀಡಬೇಕು ಎಂಬ ಒಕ್ಕೊರಲ ಮನವಿ ಕೇಳಿಬಂತು.ಕಂಪೆನಿಯೊಂದರ ವ್ಯವಸ್ಥಾಪಕ ಡಾ.ಆರ್‌.ಎಸ್‌.ಪಾಟೀಲ್‌ ಮಾತನಾಡಿ, ಕಂಪೆನಿಗಳು ಸರ್ಕಾರಕ್ಕೆ ಯಾವುದೇ ರೀತಿಯಲ್ಲೂ ನಷ್ಟವುಂಟು ಮಾಡುತ್ತಿಲ್ಲ. ಕಂಪೆನಿಗಳು ಉದ್ಯಮ ತೆರಿಗೆ ಕಟ್ಟುತ್ತಿವೆ. ಕೋಳಿ ಸಾಕುವ ರೈತರು ಟಿಡಿಎಸ್‌ ನೀಡಿದರೆ ತೆರಿಗೆಯ ಹಣ ವಾಪಸ್‌ ಬರುತ್ತಿದೆ. ಕೋಳಿಗೆ ನೀಡುವ ಆಹಾರ ಕೂಡ ದುಬಾರಿಯಾಗಿದೆ.

‘ಸೋಯಾ’ ಕೆ.ಜಿ.ಗೆ ₨ 54ರಷ್ಟಾಗಿದೆ. ಜೋಳ ₨ 17ಗೆ ತಲುಪಿದೆ. ಯಾವುದೇ ರೈತರ ಬದುಕು ತುಳಿಯುವ ಉದ್ದೇಶ ನಮಗಿಲ್ಲ. ಶ್ರಾವಣ, ಕಾರ್ತೀಕ ಮಾಸದಲ್ಲಿ ಕೋಳಿ ದರ ವ್ಯತ್ಯಾಸ ಆಗಲಿದೆ ಎಂದು ಮಾಹಿತಿ ನೀಡಿದರು.    ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ರೈತರಾದ ನಾಗೇಶ್‌, ಶಿವಕುಮಾರ್, ಶರಣಪ್ಪ, ಅರುಣ್, ಸದಾನಂದ ಶೆಟ್ಟಿ, ಮಂಜುನಾಥ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)