ಶುಕ್ರವಾರ, ಮೇ 7, 2021
26 °C

ಆರ್‌ಟಿಐ ಎಂದರೆ ಬಿಸಿಸಿಐಗೆ ಭಯ...!

ಡಿ.ಗರುಡ Updated:

ಅಕ್ಷರ ಗಾತ್ರ : | |

ಆರ್‌ಟಿಐ ಎಂದರೆ ಬಿಸಿಸಿಐಗೆ ಭಯ...!

ಕಳೆ, ಕೊಳೆ ಎಲ್ಲವೂ ಬೆಳಕಿಗೆ ಬರುವ ಭಯ! ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೆದರಿ ಬೆಚ್ಚಿಬಿದ್ದಿದೆ. ಹೌದು; ಇದೇ ಕಾರಣಕ್ಕೆ ಅದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ವ್ಯಾಪ್ತಿಗೆ ಬರುವುದಿಲ್ಲವೆಂದು ಪಟ್ಟು ಹಿಡಿದಿದೆ.ಸರ್ಕಾರದಿಂದ ಆರ್ಥಿಕ ನೆರವು ಪಡೆಯುತ್ತಿಲ್ಲ ನಾವು; ಅದಕ್ಕಾಗಿ ಆರ್‌ಟಿಐ ಅಡಿಯಲ್ಲಿ ಬರುವುದಿಲ್ಲ ಎಂದೆಲ್ಲಾ ನೆಪ ಹೇಳುತ್ತಿದ್ದಾರೆ ಕ್ರಿಕೆಟ್ ಮಂಡಳಿಯ ಚುಕ್ಕಾಣಿ ಹಿಡಿದವರು. ಇದು `ಕಳ್ಳನ ಮನಸ್ಸು ಹುಳ್ಳುಹುಳ್ಳಗೆ~ ಎನ್ನುವಂಥ ವರ್ತನೆ.

 

ಗುಟ್ಟಾಗಿ ಇಡುವಂಥದು ಏನೂ ಇಲ್ಲ ಎನ್ನುವ ಧೈರ್ಯ ಇರುವ ಯಾವುದೇ ಕ್ರೀಡಾ ಸಂಘಟನೆಯೊಂದು ಹೀಗೆ ನೆಪವನ್ನು ಹೇಳುವುದಕ್ಕೆ ಸಾಧ್ಯವೇ ಇಲ್ಲ.ಬಿಸಿಸಿಐ ಸರ್ಕಾರದಿಂದ ನೇರವಾಗಿ ಆರ್ಥಿಕ ನೆರವು ಪಡೆಯದಿರಬಹುದು. ಆದರೆ ಪರೋಕ್ಷವಾಗಿ ಅದಕ್ಕೆ ಜನರ ತೆರಿಗೆ ಹಣದಿಂದ ಆಗುತ್ತಿರುವ ಪ್ರಯೋಜನ ಅಪಾರ.ದೇಶದ ಮೂಲೆಮೂಲೆಯಲ್ಲಿ ಇರುವ ಕ್ರಿಕೆಟ್ ಮಂಡಳಿಯ ಅಧೀನ ಸಂಸ್ಥೆಗಳ ಕ್ರೀಡಾಂಗಣಗಳ ಜಾಗ ಯಾರದ್ದು? ಈ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರೆ ಸಾಕು, ಬಿಸಿಸಿಐ ಸಾರ್ವಜನಿಕ ಸ್ವತ್ತು ಎನ್ನುವುದು ಸ್ಪಷ್ಟವಾಗುತ್ತದೆ.ಬಿಡಿಗಾಸಿಗೆ ಸರ್ಕಾರದಿಂದ ಭೋಗ್ಯಕ್ಕೆ ಪಡೆದ ಜಮೀನಿನಲ್ಲಿ ಕಟ್ಟಿರುವ ಕ್ರೀಡಾಂಗಣಗಳಿಂದ ಗಳಿಸುತ್ತಿರುವ ಹಣವಂತೂ ಸುಲಭವಾಗಿ ಲೆಕ್ಕಕ್ಕೆ ಸಿಗುವುದಿಲ್ಲ.ಜನಮೆಚ್ಚಿದ ಕ್ರೀಡೆಯೆಂದು ಸರ್ಕಾರ ಕೂಡ ಕ್ರಿಕೆಟ್‌ಗೆ ಕಣ್ಣುಮುಚ್ಚಿಕೊಂಡು ಸೌಲಭ್ಯಗಳ ಅಭಿವೃದ್ಧಿಗೆ ಸ್ಥಳಾವಕಾಶ ನೀಡುತ್ತಲೇ ಬಂದಿದೆ. ಸ್ಥಿತಿ ಹೀಗಿದ್ದರೂ ಬಿಸಿಸಿಐ ತಾನು ಸರ್ಕಾರದಿಂದ ಆರ್ಥಿಕ ನೆರವು ಪಡೆಯುತ್ತಿಲ್ಲವೆಂದು ಮೊಂಡುವಾದ ಮುಂದಿಟ್ಟಿದೆ. ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ತನ್ನನ್ನು ಸೇರಿಸಬೇಡಿ ಎಂದು ಹಠ ಹಿಡಿದಿದೆ.ಕೇಂದ್ರ ಸರ್ಕಾರದಲ್ಲಿರುವ ಕೆಲವು ರಾಜಕಾರಣಿಗಳು ಕೂಡ ಕ್ರಿಕೆಟ್ ಮಂಡಳಿಯಲ್ಲಿ ಇರುವುದರಿಂದ ಹೇಗಾದರೂ `ಆರ್‌ಟಿಐ~ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದೆನ್ನುವ ಅತಿವಿಶ್ವಾಸವೂ ಬಿಸಿಸಿಐಯಲ್ಲಿ ಮನೆಮಾಡಿದೆ.ಆದರೆ ಕ್ರೀಡಾ ಸಚಿವ ಅಜಯ್ ಮಾಕನ್ ಸಿಡಿದೆದ್ದಿದ್ದಾರೆ. ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಂತೆ ಕ್ರಿಕೆಟ್ ಮಂಡಳಿಯೂ ಆರ್‌ಟಿಐ ಅಡಿಯಲ್ಲಿ ಬರಬೇಕೆಂದು ಪಟ್ಟು ಹಿಡಿದಿದ್ದಾರೆ.ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಭದ್ರತಾ ವ್ಯವಸ್ಥೆಯನ್ನು ಮಾಡಿಸಿಕೊಳ್ಳುವ ಬಿಸಿಸಿಐಗೆ ಆಗ ಸರ್ಕಾರದ ಸಹಕಾರ ಬೇಕು. ಸರ್ಕಾರ ನೀಡುವ ಭದ್ರತಾ ವ್ಯವಸ್ಥೆಯು ಜನರಿಂದ ಬಂದ ತೆರಿಗೆಯಿಂದ ಎನ್ನುವುದನ್ನು ಅದು ಮರೆತಿದೆ.ತಮ್ಮ ತೆರಿಗೆ ಹಣದಿಂದ ಸೌಲಭ್ಯವನ್ನು ಪಡೆಯುವ ಕ್ರಿಕೆಟ್ ಮಂಡಳಿ ಒಳಗೆ ಏನಾಗುತ್ತಿದೆ ಎನ್ನುವುದನ್ನು ತಿಳಿಯಲು ಜನರು ಬಯಸುವುದು ಮಾತ್ರ ಅದಕ್ಕೆ ಸಹನೀಯ ಎನಿಸುತ್ತಿದೆ. ಅದೇ ವಿಚಿತ್ರ.ಎಲ್ಲ ಕ್ರೀಡಾ ಸಂಸ್ಥೆಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎನ್ನುವುದು ಕೇಂದ್ರ ಸರ್ಕಾರದ ಆಶಯ. ಆದರೆ ಇದಕ್ಕೆ ತಗಾದೆ ತೆಗೆದಿದೆ ಬಿಸಿಸಿಐ. ತನ್ನ ಹೊಟ್ಟೆಯೊಳಗಿನ ಗುಟ್ಟೆಲ್ಲ ಬಯಲಾಗುವ ಭಯದಲ್ಲಿದೆ ಕ್ರಿಕೆಟ್ ಮಂಡಳಿ.ಒಮ್ಮೆ ಆರ್‌ಟಿಐ ಅಡಿಯಲ್ಲಿ ಬಿಸಿಸಿಐ ಬಂದರೆ ಸಾಮಾನ್ಯ ವ್ಯಕ್ತಿಯೊಬ್ಬ ಕೂಡ ಕ್ರಿಕೆಟ್ ಆಡಳಿತದ ಕೋಟೆಯೊಳಗಿನ ಕೊಳಕನ್ನು ಬಯಲಿಗೆ ಎಳೆಯುತ್ತಾನೆ. ಇದನ್ನು ಅರಿತೇ ಗುಟ್ಟಾಗಿರಲು ಬಯಸಿದೆ ಬಿಸಿಸಿಐ.ಕ್ರಿಕೆಟ್ ಮಂಡಳಿ ಏನೇ ನೆಪ ಹೇಳಿದರೂ ಅದನ್ನು ಕೂಡ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ತರಲೇಬೇಕು ಎನ್ನುವುದು ಸಾಮಾನ್ಯ ಕ್ರಿಕೆಟ್ ಪ್ರೇಮಿಯ ಆಶಯ. ತಮ್ಮ ಆಶಯಗಳನ್ನು ಹೊತ್ತುಕೊಳ್ಳುವ ದೇಶದ ಕ್ರಿಕೆಟ್ ತಂಡವನ್ನು ಕಟ್ಟುವ ಕ್ರಿಕೆಟ್ ಮಂಡಳಿಯ ಒಳಗೆ ಇಣುಕಿ ನೋಡಲು ಜನರು ಬಯಸುವುದು ಸಹಜ. ಅಂಥ ಸಹಜವಾದ ಆಶಯವು ಈಡೇರದಂತೆ ಮಾಡಲು ಅಡ್ಡಗಾಲಿಟ್ಟುಕೊಂಡು ನಿಂತಿದೆ ಕ್ರಿಕೆಟ್ ಮಂಡಳಿಯ ಆಡಳಿತ.ಸರ್ಕಾರವು ಆರ್‌ಟಿಐ ಮೂಲಕ ಕ್ರಿಕೆಟ್ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿದೆ ಎನ್ನುವುದು ಬಿಸಿಸಿಐ ದೂರು. ಆದರೆ ಕ್ರೀಡಾ ಸಚಿವ ಮಾಕನ್ ಅವರು `ಇದು ಜನರಿಗಾಗಿ~ ಎಂದು ಉತ್ತರ ನೀಡಿದ್ದಾರೆ.ಆದರೆ ಬಿಸಿಸಿಐ ಮಾತ್ರ ಈ ವಾದವನ್ನು ಒಪ್ಪುತ್ತಿಲ್ಲ. ಜನರನ್ನು ನೆಪವಾಗಿ ಇಟ್ಟುಕೊಂಡು ಸರ್ಕಾರವು ಕ್ರಿಕೆಟ್ ಮಂಡಳಿಯ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ ಎಂದು ಕೋಪದ ಕೆಂಡ ಕಾರಿದೆ. ಆರ್‌ಟಿಐ ವ್ಯಾಪ್ತಿಗೆ ಬೇಡವೆಂದು ಬಿಸಿಸಿಐ ಸಮರ ಸಾರಿದೆ; ಮುಂದೇನು...?

                                

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.