ಬುಧವಾರ, ಜೂನ್ 3, 2020
27 °C

ಆರ್‌ಬಿಐ ನೀತಿ, ಪೇಟೆಯಲ್ಲಿ ಮತ್ತೆ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲಾ ಹೂಡಿಕೆದಾರರಿಗೆ ಸಂಕ್ರಾಂತಿಯ ಶುಭಾಶಯಗಳು. ಹಬ್ಬ ಎಂದರೆ ಅಬ್ಬಬ್ಬ ಎನ್ನುವ ಮಟ್ಟಕ್ಕೆ ಸಾಮಾಗ್ರಿಗಳ ಬೆಲೆ ಗಗನಕ್ಕೇರಿವೆ ಎಂದೆನಿಸಿದರೂ ಇದು ಕೇವಲ ಭಾರತಕ್ಕೆ ಮಾತ್ರ ಅನ್ವಯಿಸದೆ ಜಾಗತಿಕ ಮಟ್ಟದ ಸಾಂಕ್ರಾಮಿಕ ಅಂಶವಾಗಿದೆ. 2011ರ ಆರಂಭದಿಂದಲೂ ಹಣದುಬ್ಬರದ ಏರಿಕೆಗೆ ಪೇಟೆಗಳು ಹೆಚ್ಚಿನ ಮಹತ್ವ ನೀಡಿವೆ. ಡಿಸೆಂಬರ್ ಮಾಸದ ಹಣದುಬ್ಬರವು ಶೇ. 8.43 ಕ್ಕೇರಿದ್ದು ಅಗತ್ಯ ವಸ್ತುಗಳ, ಆಹಾರ ಸಾಮಾಗ್ರಿಗಳ ಬೆಲೆ ಹೆಚ್ಚಳವೇ ಇದಕ್ಕೆ ಕಾರಣವಾಗಿದೆ. ಹಾಗಾಗಿ ಸರ್ಕಾರವು ಖಾದ್ಯ ತೈಲ, ಬೇಳೆ ಕಾಳುಗಳ ರಫ್ತು ನಿಷೇಧ ಮುಂದುವರೆಸಿದೆ. ಈ ವಾತಾವರಣದ ಕಾರಣ ಡಿಸೆಂಬರ್ 25 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಲಿರುವ ನೀತಿಯಲ್ಲಿ ಬಡ್ಡಿದರ ಹೆಚ್ಚಳ, ನಿಚ್ಚಳವಾಗಿದೆ ಎಂಬ ಭಾವನೆಯಿಂದ ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಾಗಿ, ನೀರಸ ಭಾವನೆ ಮೂಡಿದೆ.

ಈ ಮಧ್ಯೆ ಬುಧವಾರ ಪ್ರಕಟವಾದ ಕೈಗಾರಿಕಾ ಉತ್ಪನ್ನ ಸೂಚ್ಯಂಕದ ಅಂಕಿ ಅಂಶಗಳು ಇಳಿಕೆಯಲ್ಲಿದ್ದು ನವೆಂಬರ್ ತಿಂಗಳಲ್ಲಿ ಶೇ. 2.7ಕ್ಕೆ ಕುಸಿದಿರುವುದು ಸಕಾರಾತ್ಮಕವಾದರೂ, ಭಾರತೀಯ ರಿಸರ್ವ್ ಬ್ಯಾಂಕ್ ಈ ಕಾರಣದಿಂದ ಬಡ್ಡಿದರ ಹೆಚ್ಚಳಕ್ಕೆ ಮುಂದಾಗಲಾರದೆಂಬ ಸಮಾಧಾನಕರ ಅಂಶದಿಂದ ಸೂಚ್ಯಂಕ ಏರಿಕೆ ಕಂಡಿತು. ಗುರುವಾರದಂದು ತಾಂತ್ರಿಕ ವಲಯದ ಅಗ್ರಮಾನ್ಯ ಕಂಪೆನಿ ಇನ್‌ಫೋಸಿಸ್ ಪ್ರಕಟಿಸಿದ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿರಲಿಲ್ಲವೆಂಬ ಕಾರಣಕ್ಕೆ ರೂ 162ರ ಕುಸಿತ ಕಂಡಿತು. ಸೂಚ್ಯಂಕವನ್ನು ಕೆಳ ಜಗ್ಗಿತು. ಒಟ್ಟಿನಲ್ಲಿ ಪೇಟೆಯ ಏರಿಳಿತಕ್ಕೆ ಬಹಳಷ್ಟು ಕಾರಣಗಳು ಸಂದರ್ಭಕ್ಕನುಗುಣವಾಗಿ ಸೃಷ್ಠಿಯಾಗುತ್ತಿವೆ, ಈ ಕಾರಣ ದರಗಳು ದಿಕ್ಕು-ದಿಶೆ ತ್ವರಿತವಾಗಿ ಬದಲಾಗುತ್ತಿವೆ. ಸ್ಥಿರತೆಗೆ ಅವಕಾಶವಿಲ್ಲವಾಗಿದೆ.

ಕಳೆದವಾರ ಸಂವೇದಿ ಸೂಚ್ಯಂಕವು 831 ಪಾಯಿಂಟುಗಳ ಇಳಿಕೆ ಕಂಡರೆ ಮಧ್ಯಮ ಶ್ರೇಣಿಯ ಸೂಚ್ಯಂಕವು 246 ಪಾಯಿಂಟುಗಳ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 369 ಪಾಯಿಂಟುಗಳಷ್ಟು ಕುಸಿಯಿತು. ಈ ರೀತಿ ಮಾರಾಟದ ಒತ್ತಡವು ಷೇರುಪೇಟೆಯ ಬಂಡವಾಳೀಕರಣ ಮೌಲ್ಯವು ರೂ 68 ಲಕ್ಷ ಕೋಟಿಗೆ ಕುಸಿಯಿತು. ಇಂತಹ ವಾತಾವರಣ ನಿರ್ಮಿತವಾಗಲು ಮುಖ್ಯ ಕಾರಣ ವಿದೇಶೀ ವಿತ್ತೀಯ ಸಂಸ್ಥೆಗಳ ಸತತ ಮಾರಾಟದ ಹಾದಿ. ಇವು ವಾರದ ಎಲ್ಲಾ ಐದು ದಿನಗಳು ಸೇರಿ ರೂ  3671 ಕೋಟಿ ಮೌಲ್ಯದ ಒತ್ತಡ ಹೇರಿವೆ. ಸ್ಥಳೀಯ ಸಂಸ್ಥೆಗಳು ರೂ  2974 ಕೋಟಿ ಮೌಲ್ಯದ ಷೇರು ಖರೀದಿಸಿವೆಯಾದರೂ ಇಳಿಕೆ ತಡೆಯಲು ಅಸಾಧ್ಯವಾಗಿತ್ತು.

ಹೊಸ ಷೇರಿನ ವಿಚಾರ

* ಇತ್ತೀಚೆಗೆ ಪ್ರತಿ ಷೇರಿಗೆ ರೂ 30 ರಂತೆ ಸಾರ್ವಜನಿಕರಿಗೆ ವಿತರಣೆ ಮಾಡಿದ ಶೇಖಾವತಿ ಪೊಲಿಯಾರ್ನ್ ಕಂಪೆನಿಯು 12 ರಿಂದ ‘ಬಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಆರಂಭದ ದಿನ ಷೇರಿನ ಬೆಲೆಯು ರೂ  30.70 ರಿಂದ ರೂ  69 ರವರೆಗೂ ಏರಿಳಿತ ಕಂಡು ರೂ 30/45 ರಲ್ಲಿ ವಾರಾಂತ್ಯ ಕಂಡಿತು. ಆರಂಭದ ದಿನದಂದು ಸುಮಾರು 10.51 ಕೋಟಿ ಷೇರು ವಹಿವಾಟಾಗಿ ರೂ  499 ಕೋಟಿ ಮೌಲ್ಯದ ಷೇರು ವಹಿವಾಟಾಗಿದೆ. ಅಂದು ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ ಒಟ್ಟು ರೂ  3448 ಕೋಟಿ ಮೌಲ್ಯದ ವಹಿವಾಟಾದರೆ ಅದರಲ್ಲಿ ಶೇ. 15 ರಷ್ಟು ಭಾಗ ಈ ಕಂಪೆನಿಯ ಕೊಡುಗೆಯಾಗಿದೆ. ಆರಂಭದ ದಿನದ ವಹಿವಾಟಿನಲ್ಲಿ ವಹಿವಾಟುದಾರರು ಹೆಚ್ಚಾಗಿ ದೈನಂದಿನ ವಹಿವಾಟು ನಡೆಸಿದ್ದಾರೆ. ನಡೆದ 10 ಕೋಟಿ ಷೇರಿನ ವಹಿವಾಟಿನಲ್ಲಿ ಕೇವಲ 6 ವಹಿವಾಟು ಸಂಸ್ಥೆಗಳು ಸುಮಾರು 7.81 ಕೋಟಿ ಷೇರಿನ ವಹಿವಾಟು ನಡೆಸಿರುವುದು ಗಮನಾರ್ಹ ಅಂಶವಾಗಿದೆ. ಒಂದು ಸಂಸ್ಥೆಯಂತು 1.56 ಕೋಟಿ ಷೇರು ಕೊಂಡು ಮಾರಾಟ ಮಾಡಿದೆ. ಹೂಡಿಕೆದಾರರು ಕೇವಲ ಅಂಕಿ ಅಂಶಗಳನ್ನಾಧರಿಸಿ ಹೂಡಿಕೆಗೆ ಅರ್ಹವೆಂಬ ಮಾನದಂಡ ಉಪಯೋಗಿಸುವುದು ಅಪಾಯಕಾರಿ.

* ಕಲ್ಯಾಣಿ ಸ್ಟೀಲ್ಸ್ ಕಂಪೆನಿಯ ಇನ್ವೆಸ್ಟ್‌ಮೆಂಟ್ಸ್ ವಿಭಾಗವನ್ನು ಬೇರ್ಪಡಿಸಿ ಪ್ರತಿ 10 ಷೇರಿಗೆ 1 ರಂತೆ ನೀಡಲಾದ ಕಲ್ಯಾಣಿ ಇನ್ವೆಸ್ಟ್‌ಮೆಂಟ್ಸ್ ಕಂಪೆನಿಯು 14 ರಂದು ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಆರಂಭದ ದಿನ ರೂ 352.90 ರಿಂದ ರೂ 1143.50 ರವರೆಗೆ ಏರಿಳಿತ ಕಂಡು ರೂ  970.85 ರಲ್ಲಿ ವಾರಾಂತ್ಯ ಕಂಡಿತು.

* ಬಿ.ಎಫ್. ಯುಟಿಲಿಟೀಸ್ ಕಂಪೆನಿಯ ಇನ್ವೆಸ್ಟ್‌ಮೆಂಟ್ಸ್ ವಿಭಾಗವನ್ನು ಬೇರ್ಪಡಿಸಿ 1:1ರ ಅನುಪಾತದಲ್ಲಿ ನೀಡಲಾದ ಬಿಎಫ್ ಇನ್ವೆಸ್ಟ್‌ಮೆಂಟ್ ಲಿ. 14 ರಂದು ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಆರಂಭದ ದಿನ ರೂ  101 ರಿಂದ ರೂ  338/55 ರವರೆಗೆ ಏರಿಳಿತ ಕಂಡು ರೂ. 131 ರಲ್ಲಿ ಅಂತ್ಯಗೊಂಡಿತು.

ಲಾಭಾಂಶ ವಿಚಾರ

ಎಡಿಸಿ ಇಂಡಿಯಾ ಕಮ್ಯುನಿಕೇಷನ್ ಶೇ. 15 (ನಿಗಧಿತ ದಿನಾಂಕ 11.2.11) ಕೋರಮಂಡಲ್ ಇಂಟರ್‌ನ್ಯಾಶನಲ್ ಶೇ. 400 (ಮುಖಬೆಲೆ ರೂ. 1, ನಿಗದಿತ ದಿನಾಂಕ 24.1.11) ಹೆಕ್ಸಾವೇರ್ ಟೆಕ್ನಾಲಜೀಸ್ ಶೇ. 50 (ಮುಖಬೆಲೆ ರೂ.  2, ನಿ.ದಿ. 21.1.11) ಫೈಜರ್ ಲಿ. ಶೇ. 125 (ನಿ.ದಿ. 21.1.11) ವಿಟಿಎಂ ಲಿಮಿಟೆಡ್ ಶೇ. 270 (ನಿ.ದಿ. 20.1.11) ವೈಯತ್ ಲಿಮಿಟೆಡ್ ಶೇ. 150 (ನಿ.ದಿ. 21.1.11).

ಟಾಟಾ ಸ್ಟೀಲ್ ಲಿಮಿಟೆಡ್‌ನ ಷೇರು ಪುನರ್ ವಿತರಣೆ

ಇತ್ತೀಚಿನ ದಿನಗಳಲ್ಲಿ ಕೇವಲ ಸಾರ್ವಜನಿಕ ವಲಯದ ಕಂಪೆನಿಗಳು ಮಾತ್ರ ಷೇರು ಪುನರ್ ವಿತರಣೆ ಮಾಡುತ್ತಿದ್ದು ಖಾಸಗಿ ವಲಯದಲ್ಲಿ ಇತ್ತೀಚೆಗೆ ಪ್ರಪ್ರಥಮವಾಗಿ ಟಾಟಾ ಸ್ಟೀಲ್ ಲಿಮಿಟೆಡ್ ಷೇರು ಪುನರ್ ವಿತರಣೆ ಮಾಡಲಿದ್ದು ಜನವರಿ 19 ರಿಂದ 21 ರವರೆಗೆ ಈ ಎಫ್.ಪಿ.ಓ. ತೆರೆದಿರುತ್ತದೆ. ವಿತರಣೆ ಬೆಲೆಯನ್ನು ಒಂದು ದಿನ ಮುಂಚಿತವಾಗಿ ಪ್ರಕಟಿಸಲಾಗುವುದು. ರೂ 10ರ ಮುಖಬೆಲೆಯ 5.7 ಕೋಟಿ ಷೇರು ವಿತರಣೆಯಲ್ಲಿ ಸಣ್ಣ ಹೂಡಿಕೆದಾರರಿಗೆ ಶೇ. 35ರ ಮೀಸಲಾತಿ ಇದೆ. ಮತ್ತು ಅರ್ಜಿಯ ಮಿತಿಯು ಗರಿಷ್ಠ ರೂ ಎರಡು ಲಕ್ಷವಿರುತ್ತದೆ.

 ಈ ಕಂಪೆನಿಯು ಉತ್ತಮ, ಸದೃಢವಾದರೂ ವಿತರಣೆ ಬೆಲೆಯು ಯಾವ ಮಟ್ಟದಲ್ಲಿದೆ ಹಾಗೂ ಪೇಟೆಯ ದರವನ್ನವಲಂಭಿಸಿ ನಿರ್ಧರಿಸಿರುವುದು ಸೂಕ್ತ. ಇತ್ತೀಚೆಗೆ ಷೇರು ಪುನರ್ ವಿತರಣೆ ಮಾಡಿದ ಎನ್‌ಎಂಡಿಸಿ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಉತ್ತಮ ಕಂಪೆನಿಗಳಾದರೂ ಪೇಟೆಯ ದರ ತೀವ್ರ ಕುಸಿತ ಕಂಡಿದೆ. ಈ ವಿತರಣೆಯಿಂದ ಸಂಗ್ರಹಣೆಯ ಹಣವನ್ನು ಕಂಪೆನಿ ಚಟುವಟಿಕೆ ವಿಸ್ತರಣೆ ಹಾಗೂ ನಾನ್ ಕನ್ವರ್ಟಬಲ್ ಡಿಬೆಂಚರ್‌ಗಳಿಗೆ ಪಕ್ವತೆ ಹಣ ನೀಡಲು ಉಪಯೋಗಿಸಲಾಗುವುದು.

ಬೋನಸ್ ಷೇರಿನ ವಿಚಾರ

* ಹೆಕ್ಸಾವೇರ್ ಟೆಕ್ನಾಲಜೀಸ್ ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

* ಬಂಡಾರಿ ಹೊಸೈರಿ ಎಕ್ಸ್‌ಪೋರ್ಟ್ ಕಂಪೆನಿಯು 15 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

* ಹಿಂದೂಸ್ಥಾನ್ ಝಿಂಕ್ ಕಂಪೆನಿಯು 19 ರಂದು ಬೋನಸ್ ಷೇರು ವಿತರಣೆಯನ್ನು ಪರಿಶೀಲಿಸಲಿದೆ.

* ಎಸ್ ಇ ಇನ್ವೆಸ್ಟ್‌ಮೆಂಟ್ಸ್ ಕಂಪೆನಿಯು 24 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಮುಖಬೆಲೆ ಸೀಳಿಕೆ ವಿಚಾರ

* ಹಿಂದೂಸ್ಥಾನ್ ಝಿಂಕ್ ಕಂಪೆನಿಯು ಷೇರಿನ ಮುಖಬೆಲೆ ಸೀಳಿಕೆಯನ್ನು 19 ರಂದು ಪರಿಶೀಲಿಸಲಿದೆ.

* ಇಂಕಾ ಫಿನ್‌ಲೀಸ್ ಲಿಮಿಟೆಡ್ ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ  10 ರಿಂದ ರೂ 2ಕ್ಕೆ ಸೀಳಲಿದ್ದು 15ನೇ ಜನವರಿ ನಿಗದಿತ ದಿನವಾಗಿದೆ.

* ಟಿ. ಗುಂಪಿನ ಅಮ್ರಪಾಲಿ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ. 10 ರಿಂದ ರೂ.  5ಕ್ಕೆ ಸೀಳಲು 28ನೇ ಜನವರಿ 2011 ನಿಗದಿತ ದಿನವಾಗಿದೆ.

ವಾರದ ವಿಶೇಷ

ಪೇಟೆಯ ನಿಯಂತ್ರಕ ‘ಸೆಬಿ’ ಶುಕ್ರವಾರದಂದು ರಿಲೈಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿ. ಮತ್ತು ರಿಲೈಯನ್ಸ್ ನ್ಯಾಚರಕ್ ರಿಸೋರ್ಸಸ್ ಕಂಪೆನಿಗಳ ಮೇಲೆ ಡಿಸೆಂಬರ್ 2012 ವರೆಗೆ ಹಾಗೂ ಅನಿಲ್ ಅಂಬಾನಿ ಮತ್ತು ಇತರೆ ಮೂರು ನಿರ್ದೇಶಕರಿಗೆ ಡಿಸೆಂಬರ್ 2011 ರವರೆಗೆ ಷೇರುಪೇಟೆಯ ಸೆಕೆಂಡರಿ ಪೇಟೆಯಲ್ಲಿ ಚಟುವಟಿಕೆ ನಡೆಸದಂತೆ ನಿಷೇಧವನ್ನು ಒಪ್ಪಿಗೆ ಆದೇಶದ ಪ್ರಕಾರ, ವಿಧಿಸಿದೆ. ಮತ್ತು 50 ಕೋಟಿ ರೂಪಾಯಿಗಳ ದಂಡ ವಿಧಿಸಲಾಗಿದೆ.

ಜೆಎಸ್‌ಡಬ್ಲು ಸಮೂಹದ ಸಜ್ಜನ್ ಜಿಂದಾಲ್‌ರವರು ತಾವು ಖರೀದಿಸಿದ ಇಸ್‌ಪಾಟ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಆಡಳಿತ ಮಂಡಳಿಯನ್ನು ಅಡಿಷನಲ್ ಡೈರೆಕ್ಟರ್ ಆಗಿ ಪ್ರವೇಶಿಸಿದ್ದಾರೆ.

ಡಿಸೆಂಬರ್ 27 ರಿಂದ ವಹಿವಾಟು ಆರಂಭಿಸಿದ ರವಿಕುಮಾರ್ ಇಂಡಸ್ಟ್ರೀಸ್ 31 ರಂದು  ರೂ. 93.95ನ್ನು ತಲುಪಿತ್ತು. ರೂ. 64 ರಂತೆ ವಿತರಣೆಯಾಗಿದ್ದ ಈ ಕಂಪೆನಿಯ ಷೇರಿನ ಬೆಲೆಯು 14 ರಂದು ರೂ. 38.05ಕ್ಕೆ ಕುಸಿದು ಕನಿಷ್ಠ ದರದ ದಾಖಲೆ ನಿರ್ಮಿಸಿದೆ.

30ನೇ ಡಿಸೆಂಬರ್ ಲೀಸ್ಟಿಂಗ್ ಆದ ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ ಅಂದು ರೂ.  149.70 ರವರೆಗೆ ತಲುಪಿದ್ದು ಜನವರಿ 14 ರಂದು ಮಧ್ಯಂತರದಲ್ಲಿ ರೂ. . 110.90ರ ಕನಿಷ್ಠ ಮಟ್ಟಕ್ಕೆ ಕುಸಿದು ರೂ.  118.85 ರಲ್ಲಿ ಅಂತ್ಯಗೊಂಡಿತು.

ಝಿ ಎಂಟರ್‌ಟೇನ್‌ಮೆಂಟ್ ಎಂಟರ್‌ಪ್ರೈಸಸ್ ಲಿ. 14 ರಂದು ಫಲಿತಾಂಶ ಪ್ರಕಟಿಸಿದ ನಂತರದಲ್ಲಿ ಷೇರಿನ ಬೆಲೆಯು ಕ್ಷಿಪ್ರಗತಿಯಲ್ಲಿ  ರೂ. 134ರ ಸಮೀಪದಿಂದ ರೂ. 108.40ಕ್ಕೆ ಕುಸಿದು ತ್ವರಿತವಾಗಿ ರೂ.  118ರ ಸಮೀಪಕ್ಕೆ ಚಿಗುರಿತು.ರೂ.  108.40 ವಾರ್ಷಿಕ ಕನಿಷ್ಠ ಮಟ್ಟವಾಗಿದೆ.

ಹಿಂದೂಸ್ಥಾನ್ ಮೋಟಾರ್ಸ್‌ನ ಷೇರು ಬಂಡವಾಳವನ್ನು ಶೇ. 50 ರಷ್ಟು ಕಡಿತಗೊಳಿಸಲು ಕೊಲ್ಕತ್ತಾ ಹೈಕೋರ್ಟ್ ಅನುಮೋದಿಸಿದೆ.

ಹಿಂದಿನವಾರ ಮಿಡ್‌ಫೀಲ್ಡ್ ಇಂಡಸ್ಟ್ರೀಸ್ ಷೇರಿನ ಪಥ ಹೇಗೆ ಬದಲಾವಣೆ ಕಂಡಿತೋ ಅದೇ ಮಾಧರಿಯಲ್ಲಿ ಶುಕ್ರವಾರ 14 ರಂದು ಶ್ರೀ ಅಷ್ಟ ವಿನಾಯಕ ಸಿನೇ ವಿಷನ್ ಲಿ. ಕಂಪೆನಿಯು ನವೆಂಬರ್ 5 ರಂದು ತಲುಪಿದ ರೂ.  51ರ ಗರಿಷ್ಠದಿಂದ ಸತತ ಇಳಿಕೆಯಿಂದ ರೂ.  4.86 ರವರೆಗೆ ಕೊಳ್ಳುವವರಿಲ್ಲದೆ ನೆಲಕಚ್ಚಿತ್ತು. ಮಧ್ಯಾಹ್ನ 2 ಗಂಟೆಯ ಸುಮಾರಿಗೆ ರೂ. 5.36 ತಲುಪಿ ಮಾರಾಟ ಮಾಡುವವರಿಲ್ಲದ ಹಂತಕ್ಕೆ ಜಿಗಿಯಿತು.

ಅಮರರಾಜಾ ಬ್ಯಾಟರೀಸ್ ಕಂಪೆನಿಯ 25ನೇ ವಾರ್ಷಿಕೋತ್ಸವದ ಕಾರಣ ಕಂಪೆನಿಯು 24 ರಂದು ಒಂದು ಭಾರಿ ವಿಶೇಷ ಲಾಭಾಂಶ ಪ್ರಕಟಿಸಲು ಯೋಜಿಸಿದೆ. ಈ ಲಾಭಾಂಶ ವಿತರಣೆಗೆ 31ನೇ ಜನವರಿ ನಿಗಧಿತ ದಿನಾಂಕವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.