ಶನಿವಾರ, ಮಾರ್ಚ್ 6, 2021
29 °C

ಆರ್‌ಬಿಐ ಬಡ್ಡಿ ದರ ಬದಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್‌ಬಿಐ ಬಡ್ಡಿ ದರ ಬದಲಿಲ್ಲ

ಮುಂಬೈ (ಪಿಟಿಐ):  ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ಅವರು ತಮ್ಮ ಕೊನೆಯ ಹಣಕಾಸು ನೀತಿ ಪರಾಮರ್ಶೆಯಲ್ಲಿ  ಅಲ್ಪಾವಧಿ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.ಮಂಗಳವಾರ ಪ್ರಕಟಿಸಲಾದ ಆರ್‌ಬಿಐನ ಪ್ರಸಕ್ತ ಸಾಲಿನ ತೃತೀಯ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ  ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ  (ರೆಪೊ)  ಶೇ 6.5ಕ್ಕೆ ಮತ್ತು   ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಆರ್‌ಬಿಐ ಪಾವತಿಸುವ ಬಡ್ಡಿ  ದರ (ರಿವರ್ಸ್‌ ರೆಪೊ) ಶೇ 6ಕ್ಕೆ ಉಳಿಸಿಕೊಳ್ಳಲಾಗಿದೆ. ನಗದು ಮೀಸಲು ಅನುಪಾತ ಶೇ 4ರಲ್ಲಿ ಇರಲಿದೆ.ಹಣದುಬ್ಬರವು ಈ ಮೊದಲು ಅಂದಾಜಿಸಿರುವ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ (ಶೇ 5) ಇರುವುದರಿಂದ  ಆರ್‌ಬಿಐ ಬಡ್ಡಿ ದರ  ಕಡಿಮೆ ಮಾಡುವ ನಿರ್ಧಾರಕ್ಕೆ ಬಂದಿಲ್ಲ.ಪ್ರಸಕ್ತ ಹಣಕಾಸು ವರ್ಷದ ಮೊದಲ  ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‌ಬಿಐ  ಶೇ 0.25 ರಷ್ಟು ಬಡ್ಡಿ ದರ ಕಡಿತ ಮಾಡಿತ್ತು.

‘ಸದ್ಯದ ಪರಿಸ್ಥಿತಿಯಲ್ಲಿ ರೆಪೊ ಬಡ್ಡಿ ದರಗಳನ್ನು ಬದಲಾಯಿಸದಿರುವುದೇ ಆರ್‌ಬಿಐ ಪಾಲಿಗೆ ಸೂಕ್ತವಾದ ನಿರ್ಧಾರವಾಗಿದೆ’ ಎಂದು ರಾಜನ್‌  ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.2017ರ ಮಾರ್ಚ್‌ ತಿಂಗಳಿಗೆ  ಹಣದುಬ್ಬರದ ಗರಿಷ್ಠ ಮಿತಿ ಶೇ 5ಕ್ಕೆ ಇರಬೇಕೆಂದು ಗುರಿ ನಿಗದಿಪಡಿಸಲಾಗಿದೆ. ಜೂನ್‌ ತಿಂಗಳಲ್ಲಿ 22 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿರುವ ಹಣದುಬ್ಬರವು ಶೇ  5.8ರಷ್ಟು ದಾಖಲಾಗಿದೆ.ಆಹಾರ ಹಣದುಬ್ಬರ ಹೆಚ್ಚಳ ಮತ್ತು  ಕೇಂದ್ರ ಸರ್ಕಾರಿ ನೌಕರರ 7ನೇ  ವೇತನ ಆಯೋಗದ ಶಿಫಾರಸುಗಳ ಜಾರಿ ಫಲವಾಗಿ ಹಣದುಬ್ಬರದ ಮೇಲೆ ಒತ್ತಡ  ಇದ್ದೇ ಇದೆ.ಬೇಳೆಕಾಳುಗಳ ಬೆಲೆಗಳೂ ಏರುಗತಿಯಲ್ಲಿ ಇವೆ.   ಈ ಎಲ್ಲ ವಿದ್ಯಮಾನಗಳು ಆರ್‌ಬಿಐ ತನ್ನ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು

ಕಾರಣವಾಗಿವೆ.

2015ರಿಂದೀಚೆಗೆ ಆರ್‌ಬಿಐ, ಶೇ 1.50ರಷ್ಟು ಬಡ್ಡಿ ದರಗಳನ್ನು ಕಡಿತ ಮಾಡಿತ್ತು.  ಈ ಕಡಿತದ ಫಲವಾಗಿ ಬ್ಯಾಂಕ್‌ ಬಡ್ಡಿ ದರಗಳು ಶೇ 0.90ರಷ್ಟು ಅಗ್ಗವಾಗಿದ್ದವು.

ಇದೇ ಸೆಪ್ಟೆಂಬರ್‌ 4ಕ್ಕೆ ತಮ್ಮ ಮೂರು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಲಿರುವ ರಾಜನ್‌, ಗವರ್ನರ್‌ ಹುದ್ದೆಯಿಂದ  ನಿರ್ಗಮಿಸಲಿದ್ದಾರೆ.ದ್ವೈಮಾಸಿಕ ಹಣಕಾಸು ನೀತಿಯ ಪರಾಮರ್ಶೆ

* ರೆಪೊ ದರ (ಶೇ 6.50), ರಿವರ್ಸ್‌ ರೆಪೊ ದರ (ಶೇ 6) ಯಥಾಸ್ಥಿತಿ* ಬದಲಾಗದ ನಗದು ಮೀಸಲು ಅನುಪಾತ (ಸಿಆರ್‌ಆರ್‌) ಶೇ 4* ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರ ಶೇ 7.6* 2017ರ ಜನವರಿಗೆ ಹಣದುಬ್ಬರ ಗರಿಷ್ಠ ಮಿತಿ  ಶೇ 5ಕ್ಕೆ ನಿಗದಿ* ವಾಡಿಕೆ ಮುಂಗಾರು ಮತ್ತು 7ನೆ ವೇತನ ಆಯೋಗದ ಶಿಫಾರಸು ಜಾರಿಯಿಂದ ಆರ್ಥಿಕತೆಗೆ ಉತ್ತೇಜನ* ಜಿಎಸ್‌ಟಿ ಜಾರಿಯಿಂದ ಉದ್ಯಮಶೀಲತೆ ಮತ್ತು ಹೂಡಿಕೆಗೆ ಬೆಂಬಲ* ಜಿಎಸ್‌ಟಿಯ ಹಣದುಬ್ಬರ ಪರಿಣಾಮದ ಬಗ್ಗೆ ಮಾತನಾಡುವುದು  ಅವಸರದ ನಿರ್ಧಾರ* ಆಗಸ್ಟ್‌ 5ಕ್ಕೆ  ವಿದೇಶಿ ವಿನಿಮಯ  ಮೀಸಲು ₹ 24.52 ಲಕ್ಷ ಕೋಟಿ* ಎಫ್‌ಸಿಎನ್‌ಆರ್‌ ಖಾತೆಯಿಂದ ಹಣ ವಾಪಸಾತಿಯು ಪೇಟೆಯ ನಗದುತನದ ಮೇಲೆ ಪ್ರಭಾವ ಬೀರದು* ಬಡ್ಡಿ ದರ ಕಡಿತದ ಲಾಭವನ್ನು ಬ್ಯಾಂಕ್‌ಗಳು ಕಡಿಮೆ ಪ್ರಮಾಣದಲ್ಲಿ ವರ್ಗಾಯಿಸಿವೆ* ಠೇವಣಿ ಮೇಲಿನ ಹೆಚ್ಚುವರಿ ಬಡ್ಡಿ ದರ ಆಧರಿಸಿದ  ಸಾಲದ ಬಡ್ಡಿ ದರ  ವ್ಯವಸ್ಥೆ ಬದಲು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.