ಗುರುವಾರ , ಮೇ 19, 2022
24 °C

ಆಶ್ರಯ ಬಡಾವಣೆಗೆ ಮರೀಚಿಕೆಯಾದ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್:  ಸೂರಿಲ್ಲದವರಿಗೆ ಸರ್ಕಾರವು ಆಶ್ರಯ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ ಹೀಗೆ ಹಲವು ಯೋಜನೆಗಳನ್ನು ರೂಪಿಸಿ ನೆಲೆ ಕಲ್ಪಿಸಿಕೊಡಲು ಪ್ರಯತ್ನ ನಡೆಸಿದೆ. ಆದರೆ ಪಟ್ಟಣದ ಹೊಸೂರು ರಸ್ತೆ ಸಮೀಪವಿರುವ ಆಶ್ರಯ ಬಡಾವಣೆಗೆ ಯಾವುದೇ ಸೌಲಭ್ಯಗಳಿಲ್ಲದೆ ಬಡವಾಗಿದೆ. ಅಲ್ಲದೇ ಇಲ್ಲಿ ವಾಸಿಸುವವರಿಗೆ ಹಕ್ಕು ಪತ್ರಗಳೂ ಇಲ್ಲದಾಗಿದೆ.  ವಸತಿಹೀನರಿಗೆ ವಸತಿ ಕಲ್ಪಿಸಿಕೊಡುವ ಸಲುವಾಗಿ 574 ಮನೆಗಳನ್ನು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಹೊಸೂರು ರಸ್ತೆ ಸಮೀಪ ಕಳೆದ 5 ವರ್ಷಗಳ ಹಿಂದೆ ನಿರ್ಮಿಸಲಾಯಿತು. ಈ ಯೋಜನೆ ಪ್ರಾರಂಭವಾದಾಗಿನಿಂದಲೂ ಒಂದಲ್ಲಾ ಒಂದು ತೊಡಕುಗಳು ಉಂಟಾಗುತ್ತಿವೆ. ಮನೆಗಳು ಹಂದಿ ಗೂಡುಗಳಂತಿವೆ. ವಾಸಕ್ಕೆ ಯೋಗ್ಯವಾಗಿಲ್ಲ ಎಂಬ ಆರೋಪ ಆರಂಭದಲ್ಲಿ ಕೇಳಿ ಬಂದಿತ್ತು. ಆದರೆ ಅಂತೂ ಇಂತು ಮನೆಗಳ ನಿರ್ಮಾಣ ಪೂರ್ಣಗೊಂಡಿತು. ಆಶ್ರಯ ಮನೆಗಳಿಗಾಗಿ 2004ರಲ್ಲಿ 7 ಸಾವಿರ ರೂ. ಪಾವತಿಸಿದ್ದ ಫಲಾನುಭವಿಗಳು ಹರ ಸಾಹಸ ಮಾಡಿದರೂ ಸಹ ಮನೆಗಳ ಹಂಚಿಕೆಯಾಗಲಿಲ್ಲ. ಜಾತಕ ಪಕ್ಷಿಗಳಂತೆ ಕಾದಿದ್ದ ಫಲಾನುಭವಿಗಳು ಪುರಸಭೆ ವತಿಯಿಂದ ಹಂಚಿಕೆಗೂ ಕಾಯದೆ, ನಾಲ್ಕು ವರ್ಷದ ಹಿಂದೆ ಏಕಾಏಕಿ ಅರ್ಜಿದಾರರಷ್ಟೇ ಅಲ್ಲ. ಕೆಲವು ಪ್ರಭಾವಿಗಳು ಹಾಗೂ ಪ್ರಭಾವಿಗಳ ಬೆಂಬಲವಿರುವವರೂ ಮನೆಗಳನ್ನು ಸ್ವಾಧೀನಪಡಿಸಿಕೊಂಡು ಆಶ್ರಯ ಪಡೆದರು.ಕೆಲವರು ಮೊಂಡು ಧೈರ್ಯ ಮಾಡಿ ಖಾಲಿ ಇರುವ ಮನೆಯನ್ನು ಸೇರಿಕೊಂಡರು.ಪುರಸಭೆಯವರು ಹಲವು ಬಾರಿ ಸೂಚನೆ ನೀಡಿದರೂ ಮನೆಗಳನ್ನು ಖಾಲಿ ಮಾಡಲಿಲ್ಲ. ಇದರಿಂದ ಯಾರಿಗೂ ಹಕ್ಕು ಪತ್ರಗಳು ವಿತರಣೆಯಾಗಲಿಲ್ಲ.ಪುರಸಭೆಯವರು ಸಹ ಕುಡಿಯುವ ನೀರು, ವಿದ್ಯುತ್, ರಸ್ತೆ ಮತ್ತಿತರ ಸೌಲಭ್ಯಗಳನ್ನು ನೀಡದೆ ನಿರ್ಲಕ್ಷಿಸಿದ್ದರು.ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪುರಸಭೆಯವರು ವಿದ್ಯುತ್, ರಸ್ತೆ, ಕುಡಿಯುವ ನೀರು ಮತ್ತಿತರ ಸೌಲಭ್ಯಗಳನ್ನು ಕಳೆದ 2 ವರ್ಷಗಳ ಹಿಂದೆ ಕಲ್ಪಿಸಿದ್ದರು.ಆದರೆ, 3 ತಿಂಗಳಿಂದ ಇಲ್ಲಿಗೆ ನೀರು ಪೂರೈಕೆ ಮಾಡುವ ಕೊಳವೆ ಬಾವಿ ಬರಿದಾಗಿ ನೀರಿನ ಸೌಕರ್ಯ ಇಲ್ಲದಾಗಿದೆ.ಇಲ್ಲಿರುವ 700ಕ್ಕೂ ಹೆಚ್ಚು ಕುಟುಂಬಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ.ಆಶ್ರಯ ಮನೆಯ ನಿವಾಸಿ ಶಕೀಲ ಅವರು ಹೇಳುವಂತೆ ನೀರಿಗಾಗಿ ಒಂದು ಕಿ.ಮೀ ಗಿಂತ ಹೆಚ್ಚು ದೂರ ಹೋಗಿ ತೋಟಗಳಲ್ಲಿ ನೀರು ತರಬೇಕಾಗಿದೆ. ಬಡಾವಣೆಯಲ್ಲಿ ಯಾವುದೇ ಸೌಲಭ್ಯ ಇಲ್ಲ. ಖಾಸಗಿಯವರಿಂದ ಬಿಂದಿಗೆಗೆ ಒಂದೂವರೆ ರೂಪಾಯಿ ನೀಡಿ ಪಡೆಯಬೇಕಾದ ಪರಿಸ್ಥಿತಿ ಇದೆ. ಪುರಸಭೆಯಿಂದ ನೀರಿನ ಟ್ಯಾಂಕರ್ ಬಂದರೂ ಸಹ ಸಾಲುವುದಿಲ್ಲ ಎಂದು ಹೇಳುತ್ತಾರೆ.ಪುರಸಭೆಯವರು, ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಜನ ಪ್ರತಿನಿಧಿಗಳು ಆಶ್ರಯ ಬಡಾವಣೆಗೆ ಕಳೆದ ವಾರ ಭೇಟಿ ನೀಡಿ, 2004ರಲ್ಲಿ ಆಶ್ರಯ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿರುವವರು ಮಾತ್ರ ಮನೆಗಳಲ್ಲಿ ಉಳಿದುಕೊಂಡು ಉಳಿದವರು ಮನೆಗಳನ್ನು ಖಾಲಿ ಮಾಡಿದರೆ ಅರ್ಹ ಫಲಾನುಭವಿಗಳಿಗೆ ಇತರೆ ವಸತಿ ಯೋಜನೆಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.ಇದಕ್ಕೆ 15 ದಿನಗಳ ಸಮಯಾವಕಾಶ ನೀಡಲಾಗಿದೆ. ಮನೆ ಖಾಲಿ ಮಾಡಿದವರಿಗೆ ನಿವೇಶನ ನೀಡಲಾಗುವುದು ಎಂದು ಪುರಸಭಾ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.