ಭಾನುವಾರ, ಮೇ 31, 2020
27 °C

ಆಸ್ಟ್ರೇಲಿಯಾ ಓಪನ್: ಹೆನಿನ್, ವಿಲಿಯಮ್ಸ್ ನಿರ್ಗಮನ, ಫೆಡರರ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಎಎಫ್‌ಪಿ/ಡಿಪಿಎ): ಸ್ವಿಟ್ಜರ್‌ಲೆಂಡ್‌ನ ಎರಡನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದರು.

ಇಲ್ಲಿನ ಮೆಲ್ಬರ್ನ್ ಪಾರ್ಕ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲುವಿನ ಯಾತ್ರೆ ಮುಂದುವರಿಸಿರುವ ಫೆಡರರ್ 6-3, 6-3, 6-1ನೇರ ಸೆಟ್‌ಗಳಿಂದ ಬೆಲ್ಜಿಯಂನ ಕ್ಸೇವಿಯರ್ ಮಾಲೈಸ್ ವಿರುದ್ಧ ಸುಲಭ ಗೆಲುವು ಪಡೆದರು. ಎದುರಾಳಿ ಆಟಗಾರನಿಂದ ಮೊದಲೆರೆಡು ಸೆಟ್‌ಗಳಲ್ಲಿ ಫೆಡರರ್‌ಗೆ ಕೊಂಚ ಪ್ರತಿರೋಧ ಎದುರಾಯಿತು. ಆದರೆ ಕೊನೆಯ ಸೆಟ್‌ನಲ್ಲಿ ಸುಲಭವಾಗಿ ಜಯ ಪಡೆದರು. ಫೆಡರರ್‌ಗೆ ಮೆಲ್ಬರ್ನ್ ಪಾರ್ಕ್‌ನಲ್ಲಿ ದೊರೆತ 57ನೇ ಗೆಲುವು ಇದಾಗಿದೆ.

ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಇತರ ಪಂದ್ಯಗಳಲ್ಲಿ ಸರ್ಬಿಯಾದ ಮೂರನೇ ಶ್ರೇಯಾಂಕದ ಆಟಗಾರ ನೊವಾಕ್ ಜೊಕೋವಿಕ್ ತಮ್ಮ ದೇಶದವರೇ ಆದ ವಿಕ್ಟೋರ್ ಟ್ರೋಯಿಕಿಯಾ ಮೇಲೆ ಜಯ ಪಡೆದರು. ಜೊಕೋವಿಕ್ 6-2ರಲ್ಲಿ ಮುನ್ನಡೆ ಸಾಧಿಸಿದ್ದ ವೇಳೆ ಎದುರಾಳಿ ಗಾಯದಿಂದ ಹಿಂದೆ ಸರಿದರು. ಅಮೆರಿಕದ ಆಯಂಡಿ ರಾಡಿಕ್ 2-6, 7-6, 6-2, 6-2ರಲ್ಲಿ ಹಾಲೆಂಡ್‌ನ ರಾಬಿನ್ ಹಾಸಿ ವಿರುದ್ಧವೂ, ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ 6-2, 7-6, 6-2ರಲ್ಲಿ ಫ್ರಾನ್ಸ್‌ನ ರಿಚರ್ಡ್ ಗ್ಯಾಸ್ಕೆಟ್ ಮೇಲೂ ಗೆಲುವು ಪಡೆದರು.

ವೀನಸ್ ನಿರ್ಗಮನ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್ ನಿರ್ಗಮಿಸಿದರು. ಜರ್ಮನಿಯ ಆಂಡ್ರಿಯಾ ಪಿಟ್ಕೋವಿಕ್ ವಿರುದ್ಧದ ಮೂರನೇ ಸುತ್ತಿನ ಪಂದ್ಯದಲ್ಲಿ 0-1 ರಲ್ಲಿ ಹಿನ್ನಡೆ ಸಾಧಿಸಿದ್ದ ವೇಳೆ ವೀನಸ್ ಗಾಯದಿಂದ ಹಿಂದೆ ಸರಿದರು.

ಡೆನ್ಮಾರ್ಕ್‌ನ ಅಗ್ರ ಶ್ರೇಯಾಂಕದ ಆಟಗಾರ್ತಿ ಕ್ಯಾರೊಲಿನ್ ವೊಜ್‌ನಿಯಾಕಿ 6-4, 6-3ರಲ್ಲಿ ಸ್ಲೋವಾಕಿಯಾದ ಡೊಮಿನಿಕಾ ಸಿಬುಲ್ಕೋವಾ ಅವರನ್ನು ಮಣಿಸಿದರು. ಆದರೆ ಬೆಲ್ಜಿಯಂನ ಜಸ್ಟಿನ್ ಹೆನಿನ್ 4-6, 6-7ರಲ್ಲಿ ರಷ್ಯಾದ ಸ್ವೆಟ್ಲಾನಾ ಕುಜ್ನೆಟ್ಸೋವಾ ಎದುರು ಸೋಲು ಅನುಭವಿಸಿದರು.

ಮೂರನೇ ಸುತ್ತಿಗೆ ರೋಹನ್, ಖುರೇಷಿ ಜೋಡಿ

~ಇಂಡೋ ಪಾಕ್ ಎಕ್ಸ್‌ಪ್ರೆಸ್’ ಭಾರತದ ರೋಹನ್ ಬೋಪಣ್ಣ ಹಾಗೂ ಐಸಾಮ್ ಉಲ್ ಹಕ್ ಖುರೇಷಿ ಜೋಡಿ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದರು.

ಶುಕ್ರವಾರ ನಡೆದ ಪಂದ್ಯದಲ್ಲಿ 10ನೇ ಶ್ರೇಯಾಂಕದ ಆಟಗಾರರಾದ ಬೋಪಣ್ಣ-ಖುರೇಷಿ 6-3, 4-6, 6-4ರಲ್ಲಿ ಫ್ರಾನ್ಸ್‌ನ ಜೆರ್ಮಿ ಚೌರ್ಡಿ ಮತ್ತು ಅರ್ನಾಲ್ಡ್ ಕ್ಲೆಮೆಂಟ್ ಎದುರು ಜಯ ಸಾಧಿಸಿದರು.

ಎರಡನೇ ಸೆಟ್‌ನಲ್ಲಿ ಸೋಲು ಅನುಭವಿಸಿದ ಭಾರತ- ಪಾಕ್ ಜೋಡಿ ಕೊನೆಯ ಸೆಟ್‌ನಲ್ಲಿ ಲಯ ಕಂಡುಕೊಂಡು ಗೆಲುವನ್ನು ತಮ್ಮದಾಗಿಸಿ ಮೂರನೇ ಸುತ್ತಿಗೆ ಮುನ್ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.