ಗುರುವಾರ , ಆಗಸ್ಟ್ 5, 2021
28 °C

ಆಸ್ಪತ್ರೆಗೆ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ನಗರದ ಸರ್ಕಾರಿ  ಆಸ್ಪತ್ರೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಸೋಮವಾರ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.ಹೆರಿಗೆ ವಿಭಾಗದ ಶಸ್ತ್ರಚಿಕಿತ್ಸೆ ಘಟಕ ಪುನರಾರಂಭಿಸಬೇಕು. ನಿಷ್ಕ್ರಿಯವಾಗಿರುವ ರೋಗಿ ಕಲ್ಯಾಣ ಹಾಗೂ ಆಸ್ಪತ್ರೆ ನಿರ್ವಹಣಾ ಸಮಿತಿ ಸಭೆಯನ್ನು ಕೂಡಲೇ ಕರೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ರೋಗಿ ಕಲ್ಯಾಣ ಹಾಗೂ ಆಸ್ಪತ್ರೆ ನಿರ್ವಹಣಾ ಸಮಿತಿ ನಾಮಫಲಕವನ್ನು ಹೊರತಂದು ಅಡಿಕೆ, ಎಲೆ ಹಾಕಿಕೊಂಡು ಉಗಿದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮೇ 20ರ ಒಳಗಾಗಿ ಸಭೆ ಕರೆಯಬೇಕು, ಆಸ್ಪತ್ರೆ ಅವ್ಯವಸ್ಥೆಗಳನ್ನು ಸರಿಪಡಿಸಬೇಕೆಂದು ತಾಲ್ಲೂಕು ವೈದ್ಯಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ನಗರದ ಸರ್ಕಾರಿ ಆಸ್ಪತ್ರೆ 100 ಹಾಸಿಗೆಗಳ ಮೇಲ್ದರ್ಜೆಗೇರಿಸುವಂತೆ ಸರ್ಕಾರದ ಆದೇಶವಾಗಿ 4 ವರ್ಷಗಳು ಕಳೆದಿದ್ದರೂ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಹೆರಿಗೆ ವಿಭಾಗದ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಎರಡು ತಿಂಗಳಿನಿಂದ ಮುಚ್ಚಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಕೊರತೆ, ನೈರ್ಮಲ್ಯ ಮುಂತಾದ ಹಲವಾರು ಸಮಸ್ಯೆಗಳಿವೆ.

 

ಶಾಸಕರೇ ಅಧ್ಯಕ್ಷರಾಗಿರುವ ಆಸ್ಪತ್ರೆ ನಿರ್ವಹಣಾ ಸಮಿತಿ ಸಭೆಯನ್ನು 5 ವರ್ಷಗಳಾದರೂ ಕರೆದಿಲ್ಲ. ಆಸ್ಪತ್ರೆ ಕುಂದು ಕೊರತೆಗಳನ್ನು ಚರ್ಚಿಸಿಲ್ಲ. ಈ ಸಮಿತಿ ನಿಷ್ಕ್ರಿಯವಾಗಿದ್ದು, ಮೇ 20ರ ಒಳಗಾಗಿ ಸಭೆ ಕರೆದು ಆಸ್ಪತ್ರೆ ಕುಂದು ಕೊರತೆಗಳನ್ನು ಚರ್ಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಡಿ.ಎನ್.ಮಂಜುನಾಥ್, ನಗರಾಧ್ಯಕ್ಷ ಮೆಹಬೂಬ್, ತಾ.ಉಪಾಧ್ಯಕ್ಷ ಸುನಿಲ್‌ಕುಮಾರ್, ತೂಬಗೆರೆ, ನಾಯ್ಕಂಡನಹಳ್ಳಿ ಶಾಖೆ ಕರವೇ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.