ಗುರುವಾರ , ಏಪ್ರಿಲ್ 22, 2021
31 °C

ಆಹಾರದ ಮೂಲ ಭದ್ರವಾಗಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಹಾರದ ಮೂಲ ಭದ್ರವಾಗಲಿ...

ಅಪೌಷ್ಟಿಕತೆ ಹೋಗಲಾಡಿಸಲು ಅನೇಕ ಕಾರ್ಯಕ್ರಮಗಳು ಜಾರಿಯಲ್ಲಿದ್ದರೂ ವಾಸ್ತವ ಸಂಗತಿ ಚಿಂತಾಜನಕವಾಗಿದೆ. ಕಳೆದ ಎರಡು ತಿಂಗಳಿನಿಂದ ಸರ್ಕಾರ ಅಂಗನವಾಡಿಗಳಿಗೆ ಆಹಾರವನ್ನೇ ಪೂರೈಕೆ ಮಾಡಿಲ್ಲ. ಹಾಲು, ಮೊಟ್ಟೆಯ ಹಣಕ್ಕೂ ಕಾರ್ಯಕರ್ತೆಯರು ಪರದಾಡುವಂತಾಗಿದೆ.ಗ್ರಾಮದ ಜನರಿಂದ ಹಣ ಸಂಗ್ರಹಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳು ಕಾರ್ಯಕರ್ತೆಯರ ಮೇಲೆ ಒತ್ತಡ ಹಾಕುತ್ತಿರುವುದು ಸರ್ಕಾರ ಅಪೌಷ್ಟಿಕತೆಯ ವಿಷಯವನ್ನು ಎಷ್ಟು ಲಘುವಾಗಿ ಪರಿಗಣಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಪೌಷ್ಟಿಕ ಆಹಾರಕ್ಕಾಗಿ ಅಂಗನವಾಡಿಗೆ ಬರುವ ಮಕ್ಕಳು ಹಸಿವೆಯಿಂದ ನರಳುತ್ತಿವೆ.ಕಾರ್ಯಕರ್ತೆಯರನ್ನು ಮಕ್ಕಳ ಯೋಗಕ್ಷೇಮದ ನಿಗಾ ವಹಿಸುವ ಕಾರ್ಯಕ್ಕೆ ಪೂರ್ಣವಾಗಿ ಬಳಸಿಕೊಳ್ಳುತ್ತಿಲ್ಲ. ಸರ್ಕಾರದ ಇತರ ಯೋಜನೆಗಳ ಅಂಕಿ ಅಂಶ ಸಂಗ್ರಹ, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಿಗೂ ಅವರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಅವರು ಮಕ್ಕಳತ್ತ ಗಮನ ಹರಿಸುವುದಕ್ಕೆ ತೊಡಕಾಗಿದೆ.ಮಧ್ಯಾಹ್ನದವರೆಗೆ ಇದ್ದ ಅಂಗನವಾಡಿ ಸಮಯವನ್ನು ಸಂಜೆ 4 ಗಂಟೆಯವರೆಗೂ ವಿಸ್ತರಿಸಲಾಗಿದೆ. ಆದರೆ ಈ ಸಣ್ಣ ಮಕ್ಕಳು ಮಲಗಲು ಬೇಕಾದ ಕಾರ್ಪೆಟ್‌ಗಳು ಇದುವರೆಗೂ ಪೂರೈಕೆಯಾಗಿಲ್ಲ.ಮಕ್ಕಳು ನೆಲದ ಮೇಲೆ ಇಲ್ಲವೇ ಗೋಣಿ ತಾಟಿನ ಮೇಲೆ ಮಲಗುತ್ತಿರುವುದು ಉಸಿರಾಟದ ತೊಂದರೆಗೆ ಕಾರಣವಾಗುತ್ತಿದೆ. ಸರ್ಕಾರದ ನೀತಿ ಮಕ್ಕಳ ಯೋಗಕ್ಷೇಮಕ್ಕೆ ಪೂರಕವಾಗದೇ ಅಡ್ಡಪರಿಣಾಮಕ್ಕೆ ಕಾರಣವಾಗಿದೆ.ಅಂಗನವಾಡಿಗಳ ಮೂಲಕವೇ ಅಪೌಷ್ಟಿಕತೆ ಹೋಗಲಾಡಿಸುತ್ತೇವೆ ಎಂದುಕೊಳ್ಳುವುದು ಸರ್ಕಾರದ ಭ್ರಮೆಯೇ ಹೊರತು ಸಮಸ್ಯೆಗೆ ಶಾಶ್ವತ ಪರಿಹಾರ ಅಲ್ಲ. ಪ್ರತಿ ಮಗುವಿನ ಆಹಾರದ ಮೂಲವೇ ಕುಟುಂಬ.ಹೀಗಾಗಿ ಮನೆಗಳಲ್ಲೇ ಪೌಷ್ಟಿಕ ಆಹಾರ ಸೇವನೆ ಇಲ್ಲದಿರುವಾಗ ಇನ್ನು ಮಗುವಿಗೆ ಒಳ್ಳೆಯ ಆಹಾರ ದೊರಕಲು ಹೇಗೆ ಸಾಧ್ಯ?`ಬರಗಾಲದ ಕಾರ್ಯಕ್ರಮಗಳು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ವೈಫಲ್ಯ ಜನರ ದುಡಿಮೆಯ ಅವಕಾಶವನ್ನೇ ಕಿತ್ತುಕೊಂಡಿವೆ. ದುಡಿಮೆ ಇಲ್ಲದ ಜನರ ಮನೆಗಳಲ್ಲಿ ಆಹಾರ ಸೇವನೆ ಉತ್ತಮಗೊಳ್ಳಲು ಹೇಗೆ ಸಾಧ್ಯ?~ ಎಂಬುದು ಮಕ್ಕಳ ತಜ್ಞೆ ಡಾ. ರಜನಿ ಅವರ ಪ್ರಶ್ನೆ.ಕೆಲಸದ ಅಭದ್ರತೆ, ಗುತ್ತಿಗೆ ಆಧಾರದ ಕೆಲಸ, ಜಾರಿಯಾಗದ ಕನಿಷ್ಠ ಕೂಲಿ, ಸಡಿಲಗೊಳ್ಳುತ್ತಿರುವ ಕಾರ್ಮಿಕ ಕಾನೂನುಗಳು ಕೂಡ ಜನರ ಆದಾಯ ಕ್ಷೀಣಿಸುವಂತೆ ಮಾಡಿವೆ. ಇವೆಲ್ಲವೂ ಅವರು ಪೌಷ್ಟಿಕಾಂಶಯುಕ್ತ ಆಹಾರಕ್ಕೆ ಹಣ ವೆಚ್ಚ ಮಾಡುವುದರ ಮೇಲೆ ಪರಿಣಾಮ ಬೀರಿವೆ. ಇಂಥವುಗಳನ್ನು ಸರಿಪಡಿಸದೆ ತಾತ್ಕಾಲಿಕ ಪರಿಹಾರಕ್ಕೆ ಮೊರೆ ಹೋಗುವುದು ವಾಸ್ತವ ಆಗಲಾರದು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.