ಸೋಮವಾರ, ಏಪ್ರಿಲ್ 19, 2021
29 °C

ಆಹಾರ ಸಮಸ್ಯೆ-ಸಮರ ಕಲೆ ಟೆಕ್ಕಿಗಳ ನೋವು ನಲಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಶೇ 55ರಷ್ಟು ಯುವಜನಾಂಗವು ಜೀವನ ಶೈಲಿ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಸಮೀಕ್ಷಾ ವರದಿಯನ್ನು ಅಸೋಚಾಂ(ದಿ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯ) ಹೊರಗೆಡವಿದೆ.ನಿಯಮಿತ ಕ್ರಮವಿಲ್ಲದೆ ತಿನ್ನುವ ಹವ್ಯಾಸ, ಅತಿಯಾದ ಕೆಲಸದ ಒತ್ತಡ, ಶಿಸ್ತುಬದ್ಧ ಸಮಯದ ಮಿತಿಯಿಲ್ಲದ ಕೆಲಸ... ಇವೇ ಮೊದಲಾದ ಕಾರಣಗಳಿಂದ ಈ ಸಮಸ್ಯೆ ತಲೆದೋರಿದೆ ಎಂದು  ಪಟ್ಟಿ ಮಾಡಿದೆ ಅಸೋಚಾಂ ಕೈಗಾರಿಕಾ ವಿಭಾಗದ ಸಮೀಕ್ಷಾ ತಂಡ.ಬಿಪಿಒ ಕಂಪೆನಿಗಳು, ಐಟಿ, ಐಟಿಇಎಸ್, ಬ್ಯಾಂಕಿಂಗ್, ಆರ್ಥಿಕ ಸೇವಾ ಸಂಸ್ಥೆಗಳು, ವಿಮಾ ಸಂಸ್ಥೆಗಳು, ಆಟೊಮೊಬೈಲ್, ಹೋಟೆಲ್ ಉದ್ಯಮ, ತ್ವರಿತಗತಿಯಲ್ಲಿ ಮಾರಾಟವಾಗುವ ಸರಕುಗಳ(ಎಫ್‌ಎಂಸಿಜಿ) ತಯಾರಿಕಾ ಸಂಸ್ಥೆಗಳು, ಇಂಧನ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ 22ರಿಂದ 30 ವರ್ಷ ವಯಸ್ಸಿನೊಳಗಿನ ಮೂರು ಸಾವಿರ ಉದ್ಯೋಗಿಗಳ ಜತೆಗಿನ ಚರ್ಚೆ, ಮಾತುಕತೆಗಳಿಂದ `ವೃತ್ತಿ ಬದುಕಿನ ತೊಡಕಿನ~ ಅಂಶಗಳನ್ನು ಕಂಡುಕೊಳ್ಳಲಾಗಿದೆ.ಬೆಂಗಳೂರು, ಚೆನ್ನೈ, ಹೈದರಾಬಾದ್, ಗುಡಗಾಂವ್, ನೊಯಿಡಾ, ಪುಣೆ ಮೊದಲಾದ ಮಹಾನಗರಗಳಲ್ಲಿ 2011ರ ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.ಸಮೀಕ್ಷೆಗೆ ಕಾರಣ

ಬಿಪಿಒ ಟೆಕ್ಕಿಗಳಲ್ಲಿ ಜಂಕ್‌ಫುಡ್ ವ್ಯಸನಿಗಳ ಕುರಿತು ಅಧ್ಯಯನ ನಡೆಸಲು ಎರಡು ಸಾವಿರ ಯುವಕರನ್ನೂ, ಒಂದು ಸಾವಿರ ಯುವತಿಯರನ್ನೂ `ಅಸೋಚಾಂ~ನ ಸಾಮಾಜಿಕ ಅಭಿವೃದ್ಧಿ ಪ್ರತಿಷ್ಠಾನ (ಎಎಸ್‌ಡಿಎಫ್) ಸಂದರ್ಶಿಸಿತ್ತು.`ದಿನದ 24 ಗಂಟೆ (2-4 x -7) ಕೆಲಸ ಮಾಡುವ ವಾತಾವರಣ, ಅಸಮರ್ಪಕ ಊಟದ ವೇಳೆಯಿಂದಾಗಿ ಫಾಸ್ಟ್ ಫುಡ್ ಅಂಗಡಿ ಇಲ್ಲವೇ ರಸ್ತೆ ಬದಿ ದೊರೆಯುವ ಖಾದ್ಯಗಳನ್ನು ತಿನ್ನುತ್ತೇವೆ. ಮತ್ತೆ ಕೆಲವು ಸಂದರ್ಭಗಳಲ್ಲಿ ನೇರವಾಗಿ ಕಚೇರಿಗೆ ತರುವ ನೂಡಲ್ಸ್, ಬರ್ಗರ್, ಫಿಜ್ಜಾ, ಭೇಲ್‌ಪುರಿ, ಚಾಟ್, ಆಲೂಗಡ್ಡೆ ಚಿಪ್ಸ್, ವಡಾಪಾವ್, ಸೇವ್‌ಪುರಿ, ಪಾನಿಪುರಿ, ಕರಿದ ಖಾದ್ಯಗಳಾದ ಸಮೋಸ, ಪಕೋಡ... ಜತೆಗೆ ತಂಪು ಪಾನೀಯ, ಕಾಫಿ, ಟೀ ಸೇವಿಸಿಯೇ ಹೊಟ್ಟೆ ತುಂಬಿಸಿಕೊಳ್ಳಲು ಯತ್ನಿಸುತ್ತೇವೆ~ ಎಂಬುದು ಶೇ 50 ಮಂದಿಯ ಪ್ರತಿಕ್ರಿಯೆ.`ಕಚೇರಿಗಳಲ್ಲಿ ಆಗಾಗ್ಗೆ ನೀಡಲಾಗುವ `ಅಲ್ಪ ವಿರಾಮ~ವೂ ಲಗಾಮಿಲ್ಲದೆ ಖಾರ ತಿನಿಸುಗಳನ್ನು ತಿನ್ನಲು ಪ್ರೇರೇಪಿಸುತ್ತವೆ. ಪರಿಣಾಮವಾಗಿ ಮಧುಮೇಹ, ಒತ್ತಡ, ಖಿನ್ನತೆ, ಆತಂಕ, ಉದ್ವಿಗ್ನತೆ, ಹೃದಯ-ರಕ್ತನಾಳಗಳಿಗೆ ಸಂಬಂಧಿಸಿದ ತೊಂದರೆಗಳು ಬಾಧಿಸುತ್ತವೆ.ಹಸಿವು ಅಧಿಕವಾದಂತೆ ಪೌಷ್ಟಿಕಾಂಶಭರಿತ ಆಹಾರ ಸೇವಿಸಬೇಕು ಎಂಬ ಜಾಗೃತಿ ಮನಸ್ಸಿನಿಂದ ದೂರವಾಗುತ್ತದೆ. ಯಾವ ತಿನಿಸಾದರೂ ಸರಿ, ಒಂದು ಬಾರಿ ಈ ಹಸಿವು ನೀಗಿಸಲು `ಜಂಕ್‌ಫುಡ್~ಗಳಾದರೂ ಸರಿಯೇ ಎಂಬ ಮನೋಭಾವ ಟೆಕ್ಕಿಗಳಲ್ಲಿ ಬೆಳೆದುಬಿಟ್ಟಿದೆ~ ಎಂಬುದನ್ನು ಅಧ್ಯಯನ ಬಹಿರಂಗಪಡಿಸಿದೆ.ಅಸೊಚಾಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್ `ಅತಿಯಾದ ಜಂಕ್‌ಫುಡ್ ಬಳಕೆ, ದೈಹಿಕ ವ್ಯಾಯಾಮದ ಕೊರತೆ, ಅಧಿಕ ಕೆಲಸದ ಅವಧಿ, ನಿದ್ರಾಹೀನತೆ ಸೇರಿಕೊಂಡಾಗ ಬಿಪಿಒ ಮತ್ತು ಐಟಿ ಉದ್ಯೋಗಿಗಳಲ್ಲಿ ಮಾನಸಿಕ ಆಯಾಸ ಅತಿಯಾಗುತ್ತದೆ. ನಗರಗಳಲ್ಲಿ ವಾಸವಾಗಿರುವ ಈ ವರ್ಗ ರಸ್ತೆ ಬದಿಯಲ್ಲಿ ಸಿಗುವ ಖಾದ್ಯಗಳನ್ನು ಅತಿಯಾಗಿ ಬಳಕೆ ಮಾಡಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ~ಎನ್ನುತ್ತಾರೆ. ಕಚೇರಿ ಕೆಫೆಟೇರಿಯ, ಸಮೀಪದ ಮಾರುಕಟ್ಟೆಗಳಲ್ಲಿ ಸಿಗುವ ಜಂಕ್‌ಫುಡ್ ತಿನ್ನಬೇಕು ಎಂಬ ಉದ್ದೇಶದೊಂದಿಗೆ, ಸ್ವತಂತ್ರವಾಗಿ ಜೀವಿಸಬೇಕು ಎಂಬ ಕಾರಣಕ್ಕೆ ನಗರಕ್ಕೆ ಬಂದಿರುವುದಾಗಿ ಯೇ 1600 ಮಂದಿ ಪ್ರತಿಕ್ರಿಯಿಸಿದ್ದಾರೆ!ಹೊಟ್ಟೆ ನೋವು, ಗ್ಯಾಸ್ಟ್ರಿಕ್, ಅಸಿಡಿಟಿ, ಮಲಬದ್ಧತೆ, ಭೇದಿ ಮೊದಲಾದ ಆರೋಗ್ಯ ತೊಂದರೆಗಳಿಗೆ ಒಳಗಾಗಿ ತಿಂಗಳಲ್ಲಿ ಎರಡು ಬಾರಿ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ ಎಂಬುದು ಜಂಕ್‌ಫುಡ್ ತಿನ್ನುವ ಶೇ 35 ಮಂದಿಯ `ನೋವಿನ ನುಡಿ~ ಎಂಬುದರತ್ತಲೂ ಅಧ್ಯಯನ ವರದಿ ಬೊಟ್ಟು ಮಾಡಿದೆ.ನಿರ್ದಿಷ್ಟ ಊಟದ ವಿರಾಮ, ದೂರವಾಣಿ ಸಂವಾದದ ವೇಳೆ ಬಿಡುವು ಇಲ್ಲದಿರುವುದರಿಂದ ಆಯಾಸ ಹಾಗೂ ತಲೆನೋವು ಉಂಟಾಗುತ್ತದೆ. ಕೆಲಸಕ್ಕೆ ಸಂಬಂಧಿಸಿದ ಒತ್ತಡದಿಂದಾಗಿ ಆಲ್ಕೊಹಾಲ್ ಸೇವನೆ, ಧೂಮಪಾನ, ತಂಬಾಕು ಸೇವನೆ ಮೊದಲಾದ ಚಟಗಳಿಗೆ ಬಲಿಯಾಗಿರುವುದರಿಂದ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾಗಿದೆ ಎಂದು ಶೇ 15 ಮಂದಿ ಅಭಿಪ್ರಾಯಪಟ್ಟಿದ್ದಾರೆ.ವಿರಾಮವಿಲ್ಲದೆ ದಿನದಲ್ಲಿ 7ರಿಂದ 8 ಗಂಟೆಗಳ ಕಾಲ ನಿರಂತರವಾಗಿ ಕೆಲಸಮಾಡುವುದರಿಂದ ಹೃದಯ-ನರಗಳಲ್ಲಿ ತೊಂದರೆಗಳು ಕಂಡುಬಂದಿವೆ. ಅನಾರೋಗ್ಯಕರ ತಿನ್ನುವ ಹವ್ಯಾಸಗಳೇ ಯುವಜನರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತಿವೆ.ಶೇ 45 ಐಟಿ ಉದ್ಯೋಗಿಗಳು ವ್ಯಾಯಾಮ ಮಾಡುವುದಿಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಕಂಪೆನಿಗಳು ತಮ್ಮ ಉದ್ಯೋಗಿಗಳ ಆರೋಗ್ಯದ ಕುರಿತು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವನ್ನು ಸಮೀಕ್ಷೆ ಒತ್ತಿ ಹೇಳಿದೆ. ಜತೆಗೆ ಒಂದು ಸಂಸ್ಥೆಯ ಆರ್ಥಿಕ ಅಭಿವೃದ್ಧಿಗೆ ಸಿಬ್ಬಂದಿಯ ಆರೋಗ್ಯವೂ ಮುಖ್ಯ ಎಂಬ ವಾಸ್ತವ ಸಂಗತಿಯತ್ತಲೂ ಗಮನ ಸೆಳೆದಿದೆ.ಜುಡೋ, ಕರಾಟೆಗೆ ಮೊರೆ

ಹೆಚ್ಚುತ್ತಿರುವ ಒತ್ತಡ, ಬೇಸರ ತರಿಸುವ ಕೆಲಸ, ಆರೋಗ್ಯದಲ್ಲಿ ಉಂಟಾಗುವ ಏರುಪೇರು... ಇವೇ ಸಮಸ್ಯೆಗಳಿಂದ ಹೊರಬರಲು ಹಾಗೂ ಮಾನಸಿಕ-ದೈಹಿಕವಾಗಿ ಸದೃಢರಾಗಲು ಐಟಿ ಉದೋಗಿಗಳು ಜುಡೋ, ಕರಾಟೆ ಮೊದಲಾದ ಯುದ್ಧಕಲೆಗಳತ್ತ (ಮಾರ್ಷಿಯಲ್ ಆರ್ಟ್ಸ್) ಆಸಕ್ತಿ ತೋರುತ್ತಿದ್ದಾರಂತೆ.ವ್ಯಕ್ತಿಯನ್ನು ದೈಹಿಕವಾಗಿ ಬಲಿಷ್ಠಗೊಳಿಸಲು ವ್ಯಾಯಾಮ (ಜಿಮ್) ಸಹಕಾರಿ. ಆದರೆ ಐಟಿ ಉದ್ಯೋಗಿಗಳ ಕೆಲಸದ ಕಾರ್ಯವೈಖರಿ, ಆತ್ಮವಿಶ್ವಾಸ ವೃದ್ಧಿಗೆ ಕರಾಟೆಯೇ ಸೂಕ್ತ ಎಂದು ಥಾಯ್ಲೆಂಡ್ ಮೂಲದ `ಮೂಯ್ ಥಾಯ್~ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.`ಐಟಿ ಉದ್ಯೋಗಿಗಳ ಕೆಲಸದ ರೀತಿ, ಜೀವನಶೈಲಿ ನೋಡಿಕೊಂಡು ತರಬೇತಿ ನೀಡಬೇಕಾಗುತ್ತದೆ. ಅವರು ಒಂದೇ ಸ್ಥಳದಲ್ಲಿ 12 ತಾಸು ಕುಳಿತು ಕೆಲಸ ಮಾಡುತ್ತಾರೆ. ಈ ಒತ್ತಡದಿಂದ ಹೊರಬರಲು ಜುಡೋ ಸಹಾಯಕ ಎಂದು ಅಖಿಲ ಭಾರತ ಮೂಯ್‌ಥಾಯ್ ಮಾರ್ಷಿಯಲ್ ಆರ್ಟ್ಸ್ ಸಂಘದ ಸಂಸ್ಥಾಪಕ ಅಧ್ಯಕ್ಷ ಜೆ.ಕೇಶವ ಅಭಿಪ್ರಾಯಪಟ್ಟಿದ್ದಾರೆ.ಟೆಕ್ಕಿಗಳು ಏನಂತಾರೆ

ನಗರದ ಬಹುತೇಕ ಕಂಪೆನಿಗಳಲ್ಲಿ ಕ್ಯಾಂಟೀನ್ ಸೌಲಭ್ಯವಿರುತ್ತದೆ. ದುರದೃಷ್ಟವಶಾತ್ ಅವುಗಳಲ್ಲಿ ಯಾವುದೂ ಗುಣಮಟ್ಟದ ಆಹಾರ ನೀಡುವುದಿಲ್ಲ. ರಾತ್ರಿ ಪಾಳಿಯಲ್ಲಿ ದುಡಿಯುವ ಮಂದಿ ಅನಿವಾರ್ಯವಾಗಿ ಅದೇ ಆಹಾರ ಸೇವಿಸಬೇಕು.

 

ಕೆಲಸದೊತ್ತಡದ ಮಧ್ಯೆ ಕಂಪೆನಿಯಿಂದ ಹೊರಕ್ಕೆ ಹೋಗಿ ಊಟ ಮಾಡುವಷ್ಟು ಸಮಯವೂ ಇರುವುದಿಲ್ಲ. ಆ ಕೆಟ್ಟ ಊಟದ ಸೇವನೆಯಿಂದ ಆರೋಗ್ಯ ಹದಗೆಡುವ ಸಾಧ್ಯತೆಗಳೂ ಹೆಚ್ಚೇ ಇವೆ. ಇನ್ನು ಕೆಲವು ಕಂಪೆನಿಗಳು ಊಟಕ್ಕೆ ನಿರ್ದಿಷ್ಟ ಸಮಯ ಮೀಸಲಿಟ್ಟಿರುತ್ತವೆ. ಆ ಸಮಯದಲ್ಲಿ ಊಟ ಮಾಡಿದರೆ ಸರಿ, ಇಲ್ಲವಾದರೆ ಕ್ಯಾಂಟೀನ್ ಕದ ಮುಚ್ಚಿರುತ್ತದೆ. ಪರಿಣಾಮ ಖಾಲಿ ಹೊಟ್ಟೆಯಲ್ಲಿ `ಗ್ಯಾಸ್~ನ ಟ್ರಬಲ್ ಶುರು...ಬೆಳಿಗ್ಗೆ ಒಂಬತ್ತರಿಂದ ಸಂಜೆ ಏಳರವರೆಗೆ ಕೆಲಸ ಮಾಡುವ ಮಂದಿ ಹೇಗೋ ಆಹಾರ ಹೊಂದಿಸಿಕೊಳ್ಳುತ್ತಾರೆ. ರಾತ್ರಿ ಪಾಳಿ ಮುಗಿಸಿ 12ಕ್ಕೆ ಏಳುವ ಉದ್ಯೋಗಿಗಳು ತಮ್ಮ ಮನೆ ಸಮೀಪದ `ಸ್ನ್ಯಾಕ್ಸ್~ ಅಂಗಡಿಗಳನ್ನು ಅವಲಂಬಿಸುವುದೇ ಹೆಚ್ಚು. ಹಲವು ಕಂಪೆನಿಗಳು ಉದ್ಯೋಗಿಗಳ ಆರೋಗ್ಯದ ಹಿತವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಗುಣಮಟ್ಟದ ಆಹಾರವನ್ನೇ ನೀಡುತ್ತಿವೆ. ಆಹಾರದ ಸಮಸ್ಯೆಯಿಲ್ಲವಾದರೆ ತೃಪ್ತಿಯಿಂದ ಕೆಲಸ ಮಾಡಬಹುದು.

 -ಬಾಷ್ ಉದ್ಯೋಗಿ ಶಿವಪ್ರಸಾದ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.