ಬುಧವಾರ, ಮೇ 18, 2022
24 °C

ಆ್ಯಪಲ್ ಜನಕ ಸ್ಟೀವ್ ಜಾಬ್ಸ್ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್, (ಪಿಟಿಐ): ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಹಾಗೂ ಆ್ಯಪಲ್ ಕಂಪೆನಿಯ ಜನಕ ಸ್ಟೀವ್ ಜಾಬ್ಸ್ ಅವರು, ಸತತ ಏಳು ವರ್ಷಗಳಿಂದ ಕ್ಯಾನ್ಸರ್‌ನೊಂದಿಗೆ ಹೋರಾಡಿ ಬುಧವಾರ ಕೊನೆಯುಸಿರೆಳೆದರು.ಅವರಿಗೆ  56 ವರ್ಷ ವಯಸ್ಸಾಗಿತ್ತು. ಅತ್ಯಂತ ವಿರಳವಾದ ಮೇದೋಜೀರಕ ಗಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರನ್ನು ಈಚೆಗೆ ಕ್ಯಾಲಿಫೋರ್ನಿಯಾದ ಪಾಲೋ ಅಲ್ಟೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಪತ್ನಿ ಹಾಗೂ ಕುಟುಂಬದ ಸದಸ್ಯರು ಅಂತ್ಯ ಕಾಲದಲ್ಲಿ ಅವರ ಜತೆಗಿದ್ದರು.ಆ್ಯಪಲ್ ನಿರ್ದೇಶಕ ಮಂಡಳಿ ಸ್ಟೀವ್ ಮರಣವನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. `ಅವರ ಜ್ಞಾನ ಹಾಗೂ ಶಕ್ತಿ ಜನರ ಬಾಳನ್ನು ಬೆಳಗುವ ಹೊಸ ಸಂಶೋಧನೆಗಳಿಗೆ ಪ್ರೇರಣೆ. ಸಮಾಜಕ್ಕೆ ಅವರು ನೀಡಿದ ಕೊಡುಗೆಗಳು ಹಲವು ಬದಲಾವಣೆ, ಅಭಿವೃದ್ಧಿಗೆ ಕಾರಣವಾಗಿವೆ~ ಎಂದು  ಶೋಕ ಸಂದೇಶದಲ್ಲಿ ಹೇಳಿದೆ.ಆ್ಯಪಲ್‌ನಂತಹ ದೈತ್ಯ ಕಂಪೆನಿಯನ್ನು ಹುಟ್ಟು ಹಾಕುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯ ಅಲೆಯನ್ನೇ ಹುಟ್ಟುಹಾಕಿದ ಸ್ಟೀವ್ ಅವರಿಗೆ 2004ರಲ್ಲಿ ಕ್ಯಾನ್ಸರ್ ತಗುಲಿರುವ ವಿಷಯ ಪತ್ತೆಯಾಗಿತ್ತು. 2009ರಲ್ಲಿ ಯಕೃತ್ತು/ಪಿತ್ತಜನಕಾಂಗದ (ಲಿವರ್) ಕಸಿ ಮಾಡಲಾಗಿತ್ತು.ಆರೋಗ್ಯ ಸಮಸ್ಯೆಯಿಂದಾಗಿಯೇ ಅವರು ಇದೇ ಆಗಸ್ಟ್‌ನಲ್ಲಿ ಆ್ಯಪಲ್ ಕಂಪೆನಿಯ ಕಾರ್ಯನಿರ್ವಾಹಕ ಹುದ್ದೆಯಿಂದ ನಿರ್ಗಮಿಸಿದ್ದರು. ಆದರೆ, ಆಡಳಿತ ಮಂಡಳಿಯ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆದಿದ್ದರು. ತಮ್ಮದೇ ಕ್ಷೇತ್ರದ ಮತ್ತೊಬ್ಬ ದಿಗ್ಗಜ ಟಿಮ್ ಕುಕ್ ಅವರನ್ನು ಸಿಇಒ ಸ್ಥಾನಕ್ಕೆ ನೇಮಿಸಿದ್ದರು.  ಜನವರಿಯಿಂದ ವೈದ್ಯಕೀಯ ರಜೆಯ ಮೇಲಿದ್ದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆ. ತಮ್ಮ ಕಂಪೆನಿಯ ಹೊಸ ತಯಾರಿಕೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ಅವರು ತಪ್ಪದೇ ಹಾಜರಾಗುತ್ತಿದ್ದರು.ಮಾರ್ಚ್‌ನಲ್ಲಿ ಹೊಸ ಐ-ಪ್ಯಾಡ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ನಂತರ ಅಮೆರಿಕ ಅಧ್ಯಕ್ಷ ಒಬಾಮ ಅವರು ನೀಡಿದ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಮ್ಮ ಸಂಸ್ಥೆ ಅಭಿವೃದ್ಧಿಪಡಿಸಿದ ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನ `ಐ-ಕ್ಲೌಡ್~ ಕುರಿತು ಮಾತನಾಡಿದ್ದರು. ಸ್ಟೀವ್ ಹೋರಾಟದ ಜೀವನ, ಬೆಳೆದು ಬಂದ ದಾರಿ ಹಾಗೂ ಕಂಪೆನಿಯನ್ನು ಕಟ್ಟಿ ಬೆಳೆಸಿದ ರೀತಿಯೇ ಒಂದು ಕುತೂಹಲಕಾರಿ ಕಥೆಯಂತಿದೆ.ತಂತ್ರಜ್ಞಾನವನ್ನು ಜನಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋಗುವ ಕನಸು ಕಂಡ ಅವರು ಹೈಸ್ಕೂಲ್ ಸಹಪಾಠಿ ಸ್ಟೀಫನ್ ವೋಜ್ನಿಯಕ್ ಜತೆಗೂಡಿ 1976ರಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಆ್ಯಪಲ್ ಕಂಪೆನಿಯನ್ನು ಹುಟ್ಟುಹಾಕಿದರು. ಕ್ಯಾಲಿಪೋರ್ನಿಯಾದ ಹೊರವಲಯದ ಪುಟ್ಟ ಗ್ಯಾರೇಜ್‌ವೊಂದರಲ್ಲಿ ಹುಟ್ಟಿದ ಸಂಸ್ಥೆ ಇಂದು ಜಾಗತಿಕ ಮಟ್ಟದ ದೈತ್ಯ ಕಂಪೆನಿಯಾಗಿ ಬೆಳೆದುನಿಂತಿದೆ. ಮಾರುಕಟ್ಟೆಯಲ್ಲಿ 350 ಶತಕೋಟಿ ಡಾಲರ್‌ಗೂ ಹೆಚ್ಚು ಬಂಡವಾಳ ಹೊಡಿದೆ. ಐ-ಪಾಡ್, ಐ-ಫೋನ್ ಮತ್ತು ಐ-ಪ್ಯಾಡ್ ಮೂಲಕ ಜಗತ್ತಿನ ಮೂಲೆ ಮೂಲೆಗೂ ಆ್ಯಪಲ್ ತಲುಪಿದೆ. `ಅರ್ಧ ಕಚ್ಚಿದ ಸೇಬು~ ಲಾಂಛನ  ಉತ್ಕೃಷ್ಟ ಗುಣಮಟ್ಟದ ಸಂಕೇತವಾಗಿದೆ. ಈ ಎಲ್ಲ ಅಚ್ಚರಿಗಳ ಹಿಂದೆ ಸ್ಟೀವ್ ದಣಿವರಿಯದ ದುಡಿಮೆ, ಪ್ರತಿಭೆ ಹಾಗೂ ಪರಿಶ್ರಮ ಇದೆ.   ಅಪರೂಪದ ಹೆಸರು

`ಆ್ಯಪಲ್~ ಎನ್ನುವ ಹೆಸರೇ ಜಾಬ್ಸ್ ಅವರ ಸ್ವತಂತ್ರ ಚಿಂತನೆಗೆ ಹಾಗೂ ಸೃಜನಶೀಲತೆಗೆ  ಹಿಡಿದ ಕನ್ನಡಿ. ಮಾದರಿ ಸಂಖ್ಯೆಗಳ ಮೂಲಕ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದ ಕಾಲಘಟ್ಟದಲ್ಲಿ ಸ್ಟೀವ್ ಜಾಬ್ಸ್ ತಮ್ಮ ಸಂಸ್ಥೆಗೆ `ಆ್ಯಪಲ್~ ಎಂದು ಹೆಸರಿಟ್ಟು ಬೆರಗು ಮೂಡಿಸಿದರು.ಕುಟುಂಬದ ಪ್ರೇರಕ ಶಕ್ತಿ

ಸ್ಯಾನ್ ಫ್ರಾನ್ಸಿಸ್ಕೊ, (ಎಎಫ್‌ಪಿ): 
ಸಾರ್ವಜನಿಕ ಜೀವನದಲ್ಲಿ ದೂರದೃಷ್ಟಿಯುಳ್ಳ ವ್ಯಕ್ತಿ ಎಂದೇ ಪರಿಚಿತರಾದ ಸ್ಟೀವ್ ಖಾಸಗಿ ಜೀವನದಲ್ಲಿ ಕುಟುಂಬದ ಪ್ರೇರಕ ಶಕ್ತಿಯಾಗಿದ್ದರು ಎಂದು ಅವರ ಆಪ್ತರು ಹೇಳುತ್ತಾರೆ.1991ರಲ್ಲಿ ಲೌರೆನ್ ಪಾವೆಲ್ ಅವರನ್ನು ಮದುವೆಯಾದ ಸ್ಟೀವ್ ಅವರಿಗೆ  ಈವ್, ಎರಿನ್ ಸಿಯೆನ್ನಾ ಎಂಬ ಇಬ್ಬರು ಪುತ್ರಿಯರು ಹಾಗೂ ರೀಡ್ ಎಂಬ ಪುತ್ರ ಇದ್ದಾನೆ. ಮದುವೆಗೂ ಮುಂಚೆ ಪ್ರೇಯಸಿ ಕ್ರಿಸನ್ನಾ ಬ್ರೆನ್ನನ್ ಜೊತೆಗಿನ ಸಂಬಂಧದಿಂದ ಲಿಸಾ ಎಂಬ ಪುತ್ರಿ ಜನಿಸಿದ್ದಾಳೆ. ಕಾದಂಬರಿಗಾರ್ತಿ ಮೋನಾ ಸಿಂಪ್ಸನ್ ಹಾಗೂ ಪತ್ತಿ ಜಾಬ್ಸ್ ಅವರು ಸ್ಟೀವ್ ಸಹೋದರಿಯರು.ಒಮ್ಮೆ ಆ್ಯಪಲ್ ತೊರೆದಿದ್ದ ಸ್ಟೀವ್: ಅಧಿಕಾರಕ್ಕಾಗಿ ಆ್ಯಪಲ್ ಆಡಳಿತ ಮಂಡಳಿ ನಿರ್ದೇಶಕರ ಜತೆಗಿನ ಕಿತ್ತಾಟದಿಂದ 1985ರಲ್ಲಿ ಒಮ್ಮೆ ಸ್ಟೀವ್ ಆ್ಯಪಲ್ ಕಂಪೆನಿಯನ್ನು ತೊರೆದಿದ್ದರು.ಮರು ವರ್ಷ `ನೆಕ್ಸ್ಟ್~ ಕಂಪ್ಯೂಟರ್ ಎಂಬ ಕಂಪೆನಿ ಮತ್ತು ಕಂಪ್ಯೂಟರ್ ಗ್ರಾಫಿಕ್ಸ್ ವಿಭಾಗ ಹುಟ್ಟು ಹಾಕಿದರು ಮತ್ತೆ 1996ರಲ್ಲಿ ಆಡಳಿತ ಮಂಡಳಿ ನಿರ್ದೇಶಕರು ಸ್ಟೀವ್ ಅವರನ್ನು ಮನವೊಲಿಸಿ ಆ್ಯಪಲ್‌ಗೆ ಮರಳಿ ಕರೆತರುವಲ್ಲಿ ಯಶಸ್ವಿಯಾದರು. ಹೀಗಾಗಿ ಅವರ ನೆಕ್ಸ್ಟ್ ಕೂಡ ಆ್ಯಪಲ್ ಒಡಲು ಸೇರಿತು.2010ರಲ್ಲಿ ಫೋಬ್ಸ್  ತಯಾರಿಸಿದ್ದ ಅಮೆರಿಕದ ಶ್ರೀಮಂತರ ಪಟ್ಟಿಯಲ್ಲಿ 6.1 ಶತಕೋಟಿ ಒಡೆಯರಾಗಿದ್ದ ಸ್ಟೀವ್ 42ನೇ ಸ್ಥಾನದಲ್ಲಿದ್ದರು. ಬೌದ್ಧ ಧರ್ಮದ ಪ್ರಭಾವ...

ಸ್ಟೀವ್ ಜಾಬ್ಸ್  ಪಾಲಿಗೆ ಭಾರತವೆಂದರೆ ಆಧ್ಯಾತ್ಮದ ಸೆಲೆಯಾಗಿತ್ತು. ಆಧ್ಯಾತ್ಮದ ಬಗ್ಗೆ ಅದಮ್ಯ ಆಸಕ್ತಿ ಹೊಂದಿದ್ದ ಸ್ಟೀವ್ ನಂತರದಲ್ಲಿ ಬೌದ್ಧಧರ್ಮಕ್ಕೆ ಮತಾಂತರಗೊಂಡಿದ್ದರು.ಮರೆಯಲಾಗದ ಮಹಾನುಭಾವ

ಸ್ಯಾನ್ ಫ್ರಾನ್ಸಿಸ್ಕೋ, (ಎಎಫ್‌ಪಿ): 
ಆ್ಯಪಲ್ ಜನಕ ಸ್ಟೀವ್ ಜಾಬ್ಸ್ ಮುಂದಿನ ಹಲವು ಪೀಳಿಗೆ ಮರೆಯಲಾಗದಂತ ವ್ಯಕ್ತಿ ಎಂದು ಅವರ ಪ್ರತಿಸ್ಪರ್ಧಿ ಕಂಪೆನಿ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಕಂಬನಿ ಮಿಡಿದಿದ್ದಾರೆ.`30 ವರ್ಷಗಳ ಹಿಂದೆ ಭೇಟಿಯಾದ ಸ್ಟೀವ್ ಹಾಗೂ ನಾನು ಗೆಳೆಯರಾಗಿ, ಸಹೋದ್ಯೋಗಿಗಳಾಗಿ, ಪ್ರತಿಸ್ಪರ್ಧಿಗಳಾಗಿ ಅರ್ಧ ಜೀವನ ಕಳೆದಿದ್ದೇವೆ. ಅವರ ಅಗಲಿಕೆ ನೀಜಕ್ಕೂ ನೋವು ತಂದಿದೆ~ ಎಂದಿದ್ದಾರೆ.

`ಅವರೊಟ್ಟಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಪೀಳಿಗೆಯವರಿಗೆ ದೊರೆತ ಗೌರವ~ ಎಂದು ಗೇಟ್ಸ್ ಗೆಳೆಯನ ಕುರಿತು ಹೇಳಿದ್ದಾರೆ.ಫೇಸ್‌ಬುಕ್ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಝುಕರ್‌ಬರ್ಗ್, ನ್ಯೂಯಾರ್ಕ್ ಮೇಯರ್ ಮೈಕೆಲ್ ಬ್ಲೂಮ್‌ಬರ್ಗ್ ಸೇರಿದಂತೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅನೇಕರು ಸ್ಟೀವ್ ವಿಶೇಷ ಬುದ್ಧಿಮತ್ತೆ ಹಾಗೂ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.