ಮಂಗಳವಾರ, ಜೂನ್ 15, 2021
25 °C

ಇಂಗ್ಲಿಷ್ ಓದುಗರಿಗೆ ಬಿಸಿಬೇಳೆ ಭಾತ್

ಎಸ್.ಆರ್.ರಾಮಕೃಷ್ಣ Updated:

ಅಕ್ಷರ ಗಾತ್ರ : | |

ಕರ್ನಾಟಕದ ಅತಿ ಜನಪ್ರಿಯ ಡಿಶ್ ಅಂದರೆ ಬಿಸಿಬೇಳೆ ಭಾತ್ ಅಂತ ನಿಮಗೆ ಗೊತ್ತಿತ್ತ? (ಅಂದಹಾಗೆ, ಚಿತ್ರಾನ್ನ ಅನ್ನೋ ಪದ ಯಾವ ಹೋಟೆಲ್, ದರ್ಶಿನಿಯಲ್ಲೂ ಕೇಳಿ ಬರ್ತಾ ಇಲ್ಲ. ಚಿತ್ರಾನ್ನ ಮಾಡಿದರೂ ಅದನ್ನ ರೈಸ್ ಭಾತ್ ಎಂದು ಕರೆಯುತ್ತಾರೆ! ಹಾಗಾಗಿ ಟೊಮೊಟೊ ರೈಸ್ ಭಾತ್, ಲೆಮನ್ ರೈಸ್ ಹೀಗೆ ಬೇರೆ ಬೇರೆ ಹೆಸರಿನ ಐಟಂಗಳು ಕಣ್ಣಿಗೆ ಬೀಳುತ್ತವೆ. ಚಿತ್ರಾನ್ನ ಬಿಸಿ ಬೇಳೆ ಭಾತ್‌ನಷ್ಟೇ ಜನಪ್ರಿಯವಾಗಿದ್ದರೂ, ಅದಕ್ಕೆ ಬೀಳುವ ವೋಟು ಹರಿದು ಹಂಚಿಹೋಗುತ್ತದೆ.)ಬಿಸಿಬೇಳೆ ಭಾತ್‌ನ ಬಗ್ಗೆ ಇಂಗ್ಲಿಷ್ ಓದುಗರಿಗೆ, ಅದರಲ್ಲೂ ವಿದೇಶಿ ಓದುಗರಿಗೆ ಸೊಗಸಾಗಿ ತಿಳಿ ಹೇಳಿರುವುದು ಬೆಂಗಳೂರಿನಲ್ಲಿ ನೆಲೆಸಿರುವ ಅಮೆರಿಕನ್ ಪತ್ರಕರ್ತೆ ಮಾರ್ಗೋ ಕೋಹೆನ್.ಅವರು ಅಮೆರಿಕದ ಅಧಿಕ ಪ್ರಸಾರದ ಬಿಜಿನೆಸ್ ಪತ್ರಿಕೆ `ವಾಲ್ ಸ್ಟ್ರೀಟ್ ಜರ್ನಲ್~ನಲ್ಲಿ ಬಿಸಿಬೇಳೆ ಭಾತ್‌ನ ಕೊಂಡಾಡುವ ಲೇಖನವನ್ನು ಬರೆದಿದ್ದಾರೆ. ಓದಬೇಕಾದರೆ ಅವರ ಹೆಸರು, `ವಾಲ್ ಸ್ಟ್ರೀಟ್ ಜರ್ನಲ್~ ಮತ್ತು `ಬಿಸಿಬೇಳೆ ಭಾತ್~ ಎಂದು ಗೂಗಲ್ ಮಾಡಿ.`ಬಿಸಿಬೇಳೆ ಹುಳಿಯನ್ನ~ ಎನ್ನುವ ಹೆಸರು ಹೊಂದಿದ್ದ ಈ ಡಿಶ್ ಸುಮಾರು ಹತ್ತನೇ ಶತಮಾನದ `ಕಟ್ಟೋಗರ~ ಎಂಬ ಅಡುಗೆಯ ಹೊಸ ಸ್ವರೂಪ ಎಂದು ಆಹಾರ ಚರಿತ್ರಕಾರ ಕೆ.ಟಿ.ಅಚ್ಚಯ್ಯ ಅಭಿಪ್ರಾಯಪಟ್ಟರೆ, ಕೆಲವರು ಅದು ಮುನ್ನೂರು ವರ್ಷದ ಹಿಂದೆ ಮೈಸೂರು ಅರಮನೆಯಲ್ಲಿ ಮೂಡಿಬಂದ ಐಟಂ ಎಂದು ಹೇಳುತ್ತಾರೆ.

 

ಮೊದಲು ಬಿಸಿಬೇಳೆ ಹುಳಿಯನ್ನದಲ್ಲಿ ತರಕಾರಿ ಹಾಕುತ್ತಿರಲಿಲ್ಲವಂತೆ. ಬರಬರುತ್ತಾ ಅದಕ್ಕೆ ಹುರುಳಿಕಾಯಿ, ಬಟಾಣಿ, ಕ್ಯಾರೆಟ್ ಹಾಕುವುದು ಅಭ್ಯಾಸವಾಗಿ, ಅದಕ್ಕೊಂದು ಸೈಡ್ ಡಿಶ್ ಆಗಿ ಮೊಸರು ಬಜ್ಜಿಯೂ ಸೇರಿಕೊಂಡಿತು.

 

ಈಗ ಅದರ ಮೇಲೆ ಖಾರ ಬೂಂದಿ ಉದುರಿಸುವ ಅಭ್ಯಾಸವೂ ಸೇರಿಕೊಂಡಿದೆ. ಹೀಗೆಲ್ಲ ಮಾಡುವುದರಿಂದ ಚಕ್ಕೆ, ಲವಂಗ ಮತ್ತು ಅರಿಶಿನದ ಸೂಕ್ಷ್ಮ ಘಮಲು ಮರೆಮಾಚಿ ಹೋಗುತ್ತದೆ ಎಂದು ಶೆಫ್ ಒಬ್ಬರು ಮಾರ್ಗೊಗೆ ಹೇಳಿದರಂತೆ.ಉತ್ತರ ಭಾರತದ ಖಿಚಡಿಗೆ ಸರಿಸಾಟಿಯಾಗಿ ನಿಲ್ಲುವ ಮತ್ತು ಕನ್ನಡದ ಹೆಸರನ್ನು ಉಳಿಸಿಕೊಂಡಿರುವ ಬಿಸಿಬೇಳೆ ಭಾತ್ ಬೆಂಗಳೂರಿನ ಕನ್ನಡೇತರರೂ ಇಷ್ಟಪಟ್ಟು ತಿನ್ನುವ ಐಟಂ ಆಗಿ ಜನಪ್ರಿಯವಾಗಿದೆ.ಕಥೆಗಾರರು ಅಂಕಣ ಬರೆಯಬಾರದೆ?


ಪತ್ರಿಕೆಯಲ್ಲಿ ಅಂಕಣ ಬರೆಯುವುದು ಕಥೆಗಾರರಿಗೆ ಒಳ್ಳೆಯದಲ್ಲ ಎಂಬ ವಾದವನ್ನು ಯು.ಆರ್.ಅನಂತಮೂರ್ತಿಯವರು ಮೊನ್ನೆ ಒಂದು ಸಭೆಯ ಮುಂದಿಟ್ಟರು. ಸಾಹಿತ್ಯಕ ಜಗತ್ತಿಗೂ ಪತ್ರಿಕೋದ್ಯಮದ ಜಗತ್ತಿಗೂ ಅಂತರ ಇರುವುದೇ ಒಳ್ಳೆಯದು ಅನ್ನುವ ಭಾವ ಅವರ ಭಾಷಣದಲ್ಲಿತ್ತು.

 

ಅವರ ಮಾತಿನಲ್ಲಿ ಅಡಗಿರುವ ಪತ್ರಿಕೋದ್ಯಮ ಕುರಿತ ಕಟು ಟೀಕೆಯನ್ನು ನೀವು ಗಮನಿಸಿರಬಹುದು. ಪತ್ರಿಕೋದ್ಯಮದ ತುರ್ತು ಬರವಣಿಗೆ ಸಾಹಿತ್ಯದ ಅಳೆದು-ತೂಗಿದ ಬರವಣಿಗೆಗಿಂತ ಕೀಳು ಎಂಬ ಅವರ ಇಂಗಿತವನ್ನು ಪತ್ರಕರ್ತರು ಒಪ್ಪಲಾರರು! 

 

ಎಷ್ಟೋ ಸಾಹಿತಿಗಳಿಗೆ ಅಂಕಣ ಬರೆಯುವ ಗುಪ್ತ ಹಂಬಲ ಇರುತ್ತದೆ, ಪತ್ರಿಕೋದ್ಯಮಿಗಳಿಗೆ ಪುಸ್ತಕ ಬರೆಯುವ ಹಂಬಲ ಇದ್ದಹಾಗೆ. ಮಾರ್ಕ್ವೆಜ್, ಜಾರ್ಜ್ ಆರ್ವೆಲ್, ಜಾರ್ಜ್ ಸ್ಟೇನರ್, ಒರ್ಹಾನ್ ಪಮುಕ್, ಡಿ.ವಿ.ಜಿ, ಲಂಕೇಶ್ ಮತ್ತು ಪಾ.ವೆಂ.ಆಚಾರ್ಯರಂತಹ ಸಾಹಿತ್ಯ ಕ್ಷೇತ್ರದ ಹಿರಿಯರು ಪತ್ರಿಕೋದ್ಯಮದಲ್ಲೂ ಅಪಾರ ಕೆಲಸ ಮಾಡಿದ್ದಾರೆ.

 

ಬಲವಂತಕ್ಕೆ ಬರೆಯುವ ಅಂಕಣಕಾರರಿಗೂ, ಏನೋ ಹೇಳುವ ತುಡಿತದಿಂದ ಬರೆಯುವ ಅಂಕಣಕಾರರಿಗೂ ದೊಡ್ಡ ವ್ಯತ್ಯಾಸ ಇರುತ್ತದೆ. (ನಾನು ಎರಡೂ ಪರಿಸ್ಥಿತಿಯಲ್ಲಿ ಇದ್ದುದರಿಂದ ಹೀಗೆ ಧೈರ್ಯವಾಗಿ ಹೇಳಬಲ್ಲೆ!). ಸಾಹಿತ್ಯವೆಲ್ಲವೂ ಶ್ರೇಷ್ಠವಾಗಿರುವುದಿಲ್ಲ; ಹಾಗೆಯೇ ಅಂಕಣಗಳೆಲ್ಲವೂ ಕಳಪೆಯಾಗಿರುವುದಿಲ್ಲ. ಅನಂತಮೂರ್ತಿಯವರು ಉತ್ಕೃಷ್ಟ ಪತ್ರಿಕಾ ಅಂಕಣಗಳನ್ನು ಮತ್ತು ಉತ್ಕೃಷ್ಟ ಸಾಹಿತ್ಯವನ್ನು ಹೋಲಿಸಿದ್ದರೆ ಹೆಚ್ಚು ವ್ಯತ್ಯಾಸ ಕಾಣುತ್ತಿರಲಿಲ್ಲವೇನೋ? ಒಳ್ಳೆಯ ಪತ್ರಕರ್ತ ಕಥೆಗಾರಿಕೆಯ ಕಸುಬುದಾರನೇ ಅಲ್ಲವೇ? ಅವರು ಒಳ್ಳೆಯ ಸಾಹಿತ್ಯವನ್ನು ಕೆಟ್ಟ ಅಂಕಣ ಬರಹಕ್ಕೆ ಹೋಲಿಸಿ ಹೀಗೆ ಹೇಳಿರಬೇಕು.

 

ಡೆಡ್‌ಲೈನ್‌ಗೆ ಬರೆಯುವ ಒತ್ತಡದಿಂದ ಹೊರಬಂದು, ಸಾಹಿತಿಗಳು ಧ್ಯಾನಾವಸ್ಥೆಯಲ್ಲಿ ಪ್ರಪಂಚದ ಆಗುಹೋಗುಗಳಿಗೆ ಸ್ಪಂದಿಸಲಿ ಎಂಬ ಅವರ ವಾದದಲ್ಲಿ ಸಾಹಿತ್ಯದ ಬಗ್ಗೆ ಕಾಳಜಿ ಇದ್ದರೂ, ಪತ್ರಕರ್ತರ ದೃಷ್ಟಿಯಲ್ಲಿ ವಿಲಾಸಿಯಾಗಿ ಕಾಣುವ ಅಪಾಯವಿದೆ.ವರ್ಷಕ್ಕೊಂದು ಏನಾದರೂ ಬರಿ ಎಂದು ಸಂಪಾದಕರು ಬಿಟ್ಟುಬಿಟ್ಟಿದರೆ ನನ್ನಂಥವರು ವಾರ ವಾರ (ಕೆಲವು ಕಡೆ ಪ್ರತಿ ದಿನ) ಯಾಕೆ ಅಭಿಪ್ರಾಯ ಕೆತ್ತಲು ಹೋಗಬೇಕು ಹೇಳಿ?ಎರಡು ಪತ್ರಿಕಾ ಲೇಖನಗಳ ಪುಸ್ತಕ

ಹೋದ ವಾರ ಎರಡು ಪತ್ರಿಕಾ ಬರಹಗಳ ಸಂಗ್ರಹಗಳು ಬಿಡುಗಡೆಯಾದವು. ನಟರಾಜ್ ಹುಳಿಯಾರ್ ಮತ್ತು ಸುಗತ ಶ್ರೀನಿವಾಸರಾಜು ಅವರು ಪತ್ರಿಕೆಗಳಿಗೆ ಬರೆದ ಲೇಖನಗಳು ಪುಸ್ತಕ ರೂಪದಲ್ಲಿ ಹೊರಬಂದಿವೆ. ನಟರಾಜ್ ಪುಸ್ತಕದ ಹೆಸರು `ಗಾಳಿ ಬೆಳಕು~. ಅವರ ಕಥಾ ಸಂಕಲನ `ಮಾಯಾಕಿನ್ನರಿ~ಯೂ ಜೊತೆಗೆ ಬಿಡುಗಡೆಯಾಯಿತು.ನಟರಾಜ್ ಲಂಕೇಶ್ ಪತ್ರಿಕೆ ಮತ್ತು ಕನ್ನಡ ಟೈಮ್ಸಗೆ ಬರೆದ ಲೇಖನಗಳನ್ನು ಒಟ್ಟು ಮಾಡಿದ್ದಾರೆ. ಸುಗತ ಬರೆದ ಇಂಗ್ಲಿಷ್ ಪುಸ್ತಕವನ್ನು `ಪಿಕಲ್ಸ್ ಫ್ರಂ ಹೋಂ~ (ಮನೆಯ ಉಪ್ಪಿನಕಾಯಿ) ಎಂದು ಕರೆದಿದ್ದಾರೆ. ಅದರಲ್ಲಿ ಅವರು ಔಟ್‌ಲುಕ್ ಪತ್ರಿಕೆಗೆ ಬರೆದ ಹಲವು ಲೇಖನಗಳಿವೆ.

 

ಬೆಂಗಳೂರಿನ ಹಲವರ ದ್ವಿಭಾಷಾ ಮತ್ತು ಬಹುಭಾಷಾ ಜಗತ್ತಿನ ಸ್ವಾರಸ್ಯಗಳನ್ನ ಕೆದಕಿ ವಿಶ್ಲೇಷಣೆ ಮಾಡಿದ್ದಾರೆ. ಇಬ್ಬರಿಗೂ ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕೀಯದ ಅಂಟು-ನಂಟಿನ ಬಗ್ಗೆ ಆಳವಾದ ಕುತೂಹಲವಿದೆ.

 

ನಟರಾಜ್ ಸಾರ್ವಜನಿಕ ಸಭೆಯಲ್ಲೂ ತಮಾಷೆ ಮಾಡಬಲ್ಲಂಥ ಚಿಂತಕ. ಸುಗತ ಸ್ವಲ್ಪ ಗಂಭೀರವಾಗಿಯೇ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ನಟರಾಜ್ ಪುಸ್ತಕದ ಬಿಡುಗಡೆಗೆ ಅನಂತಮೂರ್ತಿಯವರು ಅನಾರೋಗ್ಯವನ್ನು ಲೆಕ್ಕಿಸದೆ ಆಸ್ಪತ್ರೆಯಿಂದಲೇ ಬಂದಿದ್ದರು.

ಇವೆರಡೂ ಪುಸ್ತಕದ ಬಿಡುಗಡೆ ಸಾಹಿತ್ಯಾಸಕ್ತರಿಂದ ತುಂಬಿದ ಸಭೆಗಳಲ್ಲಿ ನಡೆದವು.

   

ಊಟದ ಸೆಲೆಬ್‌ಗಳು

ಹೆಸರಾಂತ ಆಹಾರ ಬರಹ ತಜ್ಞೆ ರತ್ನ ರಾಜಯ್ಯ ಟ್ವಿಟ್ಟರ್‌ನಲ್ಲಿ ಒಂದು ವಿಷಯ ಬರೆಯಲು ಪ್ರಾರಂಭಿಸಿದರು: ಕನ್ನಡ ಫುಡ್ ಸೆಲೆಬ್ಸ್. ಪ್ರಖ್ಯಾತರನ್ನು ಮತ್ತು ಊಟ ತಿಂಡಿಯನ್ನು ಒಟ್ಟೊಟ್ಟಿಗೆ ನೆನೆಸಿಕೊಂಡು ಕೆಲವು ಟ್ವೀಟ್ ಮಾಡಿದರು.ನನಗೆ ಮೊದಲು ಕಂಡ ಅವರ ಟ್ವೀಟ್ `ಉಪ್ಪಿಟ್ಟೇಂದ್ರ~. ನನಗೂ ಸ್ಫೂರ್ತಿ ಬಂದು ಎರಡು ಟ್ವೀಟ್ ಮಾಡಿದೆ: `ಕೋಸಂಬರೀಷ್~. `ಕ್ಯಾಪ್ಟನ್ ಗೋಬಿನಾಥ್~. ಡ್ರಿಂಕ್ ಸೆಲೆಬ್ಸ್ ಕೂಡ ಇರಬಹುದು ಎನಿಸಿ ಇನ್ನೆರಡು ಟ್ವೀಟ್ ಮಾಡಿದೆ: `ರಮ್-ಯಾ~, `ಹಾಲಪ್ಪ~. ನನ್ನ ಪತ್ರಕರ್ತ ಸ್ನೇಹಿತ ಬಾಲಾಜಿ ನರಸಿಂಹನ್ ಮತ್ತೊಂದು ಸೇರಿಸಿದರು: `ಜಿನ್-ಎಲಿಯ ಡಿಸೋಜ~!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.