ಗುರುವಾರ , ಜೂಲೈ 2, 2020
28 °C

ಇಂದಾವರದಲ್ಲಿ ಸುಗ್ಗಿ ಹಬ್ಬದ ಹಿಗ್ಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಾವರದಲ್ಲಿ ಸುಗ್ಗಿ ಹಬ್ಬದ ಹಿಗ್ಗು

ಚಿಕ್ಕಮಗಳೂರು: ನಗರ ಸಮೀಪದ ಇಂದಾವರ ಗ್ರಾಮದಲ್ಲಿ ಮೂರು ದಿನಗಳ ಕಾಲ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆದ ಸುಗ್ಗಿ ದೇವತೆಯರ ಜಾತ್ರಾ ಮಹೋತ್ಸವಕ್ಕೆ ಸೋಮವಾರ ರಾತ್ರಿ ವಿಧ್ಯುಕ್ತ ತೆರೆಬಿತ್ತು.ಐದು ವರ್ಷಕ್ಕೊಮ್ಮೆ ನಡೆಯುವ ಸುಗ್ಗಿ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂ ಡಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ದೇವರಿಗೆ ಪೂಜೆ, ಹರಕೆ ಸಲ್ಲಿಸಿ, ದೇವತೆಗಳ ದರ್ಶನ ಪಡೆದರು.

ಪ್ರತಿ ಐದು ವರ್ಷಕ್ಕೊಮ್ಮೆ ಕಾರಹುಣ್ಣಿಮೆ ದಿನ ಜಾತ್ರೆ ಆರಂಭವಾಗುತ್ತದೆ. ಮುಖ್ಯ ದೇವರು ವೀರಭದ್ರೇಶ್ವರ, ಚೌಡಮ್ಮ, ಈಶ್ವರ, ಬಲರಾಮ, ಮಲ್ಲಿಮಹಾದೇವತೆ, ದೊಡ್ಡಮ್ಮ, ಚಿಕ್ಕಮ್ಮ, ಕರ್ಪೂರದ ಈರಣ್ಣ, ಕಳಸ, ದೇವಿ ರಮ್ಮ, ಕೆರೆಕೋಡಿಯಮ್ಮ, ಮುತ್ತಿನಮ್ಮ, ಹೊನ ಮಲದೇವತೆ, ಚೌಕಿ, ಅರೆಭೂತ, ರಂಗದ ಮಾಳಿಗೆ ದೇವರಿಗೆ ಉತ್ಸವ ಮತ್ತು ಪೂಜಾ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆದವು.ಮೊದಲ ದಿನ ಗ್ರಾಮದ ಅರಮನೆ ಬನದಲ್ಲಿ ಕೆಂಡಾರ್ಚನೆ, ಎರಡನೇ ದಿನವಾದ ಭಾನುವಾರ ವೀರಭದ್ರಸ್ವಾಮಿ ದೇಗುಲದ ಮುಂದೆ ಕೆಂಡಾರ್ಚನೆ, ಕೊನೆ ದಿನ ಸೋಮವಾರ ಬಳಸಿಕೆರೆ ಹತ್ತಿರ ಓಕಳಿ ಮತ್ತು ಕರಿ ಹಾಯುವುದು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯಿತು.ವಾದ್ಯಗೋಷ್ಠಿಗೆ ಸುಗ್ಗಿ ಕುಣಿತ ಕುಣಿಯುತ್ತಾ ಅಡ್ಡೆ ಹೊತ್ತವರು ಗ್ರಾಮದ ಸುತ್ತ ದೇವರನ್ನು ಮೆರವಣಿಗೆ ನಡೆಸಿದರು. ಮೊದಲ ದಿನ ಛತ್ರಿ ವನದ ಬಳಿಗೆ ಹೋಗಿದ್ದ ದೇವರ ಅಡ್ಡೆಗಳು, ಎರಡನೇ ದಿನ ಉಪ್ಪಳ್ಳಿಯ ಚಂದಾಳ ಬನದ ವರೆಗೆ ಹೋಗಿದ್ದವು.

 

ತಲಾ ತಲಾಂತರದಿಂದ ನಡೆದುಕೊಂಡು ಬಂದಿರುವಂತೆ ದೇವರ ಉತ್ಸವದ ಮುತುವರ್ಜಿಯನ್ನು ಸಂಬಂಧಿಸಿದ ಕುಟುಂಬಗಳು ನೋಡಿಕೊಳ್ಳುತ್ತವೆ. ದೇವರನ್ನು ನೆಲೆಮಾಳಿಗೆಯಿಂದ ತರುವುದು, ಅಡ್ಡೆಕಟ್ಟು ವುದು, ಉತ್ಸವ ನಡೆಸುವುದನ್ನು ಸಂಬಂಧಿಸಿದ ಮನೆತನದವರು ನಡೆಸುತ್ತಾರೆ.ಪ್ರತಿ ಮನೆಯಲ್ಲಿ ಒಬ್ಬೊಬ್ಬರು ಉಪವಾಸ ಇ್ದ್ದದು, ಹರಕೆ ಸಲ್ಲಿಸುತ್ತಾರೆ ಎಂದು `ಪ್ರಜಾವಾಣಿ~ಗೆ ಗ್ರಾಮದ ಮುಖಂಡರಾದ ಸಣ್ಣತಮ್ಮೇಗೌಡ, ಐ.ಡಿ.ಚಂದ್ರು ಹಾಗೂ ಐ.ಎನ್.ಬಸವೇಗೌಡ ತಿಳಿಸಿದರು.ದೇವರ ಅಡ್ಡೆ ಹೊರುವವರು ವಸ್ತ್ರ ಸಂಹಿತೆ ಪಾಲಿಸಬೇಕು. ಖಾಸಿ ಪಂಚೆ, ಮೈಸೂರು ಪೇಟ, ಕರಿಕೋಟು ಧರಿಸಿದ್ದವರು ಮಾತ್ರ ದೇವರ ಅಡ್ಡೆ ಹೊರು ವುದು ಇಲ್ಲಿ ಸಂಪ್ರದಾಯ. ಅಲ್ಲದೆ ಗ್ರಾಮಕ್ಕೆ ಜಾತ್ರಾ ಸಂದರ್ಭದಲ್ಲಿ ಪಾದರಕ್ಷೆ ಧರಿಸಿ ಬರುವಂತಿಲ್ಲ. ಇದನ್ನು ಸುಗ್ಗಿ ಹಬ್ಬ ಆರಂಭವಾಗುವ ಮೊದಲೇ ನೆಂಟರಿಷ್ಟರಿಗೆ ತಿಳಿಸಲಾಗಿರುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.