ಬುಧವಾರ, ಜೂನ್ 3, 2020
27 °C

ಇಂದಿನಿಂದ ಹೆಗ್ಗೋಡಿನಲ್ಲಿ ಚರಕ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಹೆಗ್ಗೋಡಿನ ಚರಕ ಸಂಸ್ಥೆಯ ‘ಚರಕ ಉತ್ಸವ’ ಜ. 20ರಿಂದ 23ರವರೆಗೆ ನಡೆಯಲಿದೆ.ರವೀಂದ್ರನಾಥ ಟಾಗೋರರ 150ನೇ ಜಯಂತ್ಯುತ್ಸವದ ನೆನಪಿನಲ್ಲಿ ನಡೆಯುವ ಈ ಬಾರಿಯ ಉತ್ಸವದಲ್ಲಿ ರವೀಂದ್ರನಾಥ ಟಾಗೋರರ ಕೃತಿಗಳನ್ನಾಧರಿಸಿದ ಚಲನಚಿತ್ರಗಳ ಪ್ರದರ್ಶನ, ನೇಕಾರರ ಸಮಾವೇಶ, ಚರಕ ಚಿತ್ರಪ್ರದರ್ಶನ, ಜಾನಪದ ಕಾರ್ಯಕ್ರಮ, ರಂಗಗೀತೆ, ನಾಟಕ, ಏಕವ್ಯಕ್ತಿ ಪ್ರದರ್ಶನ, ವಿಚಾರ ಸಂಕಿರಣ, ಸುಗಮ ಸಂಗೀತ, ಯಕ್ಷಗಾನ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಚರಕ ಚಲನಚಿತ್ರೋತ್ಸವವನ್ನು ಜ. 20ರಂದು ಸಂಜೆ 6ಕ್ಕೆ ನಾಟಕಕಾರ ಕೆ. ಮರುಳಸಿದ್ದಪ್ಪ ಉದ್ಘಾಟಿಸುವರು. ಸಾಹಿತಿ ನಾ. ಡಿಸೋಜ ಅಧ್ಯಕ್ಷತೆ ವಹಿಸುವರು. ಪ್ರತಿದಿನ ಸಂಜೆ 6ಕ್ಕೆ ಗಾಂಧಿಮಂದಿರದಲ್ಲಿ ಟಾಗೋರರ ಕೃತಿಗಳನ್ನಾಧರಿಸಿದ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. 21ರಂದು ಬೆಳಿಗ್ಗೆ 10.30ಕ್ಕೆ ನೇಕಾರರ ಸಮಾವೇಶವನ್ನು ಜಿ.ಪಂ. ಸಿಇಒ ಎ.ಬಿ. ಹೇಮಚಂದ್ರ ಉದ್ಘಾಟಿಸುವರು. ಅತಿಥಿಗಳಾಗಿ ಟೆಕ್ಸ್‌ಟೈಲ್ಸ್ ಸಮಿತಿ ಸಹ ನಿರ್ದೇಶಕ ಜೆ.ಡಿ. ಬರ್ಮನ್, ತಹಶೀಲ್ದಾರ್ ಎಸ್. ಯೋಗೇಶ್ವರ್ ಪಾಲ್ಗೊಳ್ಳುವರು.

 

ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯದ ವಿವಿಧ ಭಾಗಗಳಿಂದ ವಿನ್ಯಾಸಕಾರರು ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ‘ಚರಕ’ ಚಿತ್ರಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ನಿರ್ದೇಶಕ ಮನು ಬಳಿಗಾರ್ ಉದ್ಘಾಟಿಸುವರು. ಸಂಜೆ 6.30ಕ್ಕೆ ಉತ್ಸವವನ್ನು ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕ ಡಾ.ಅನುರಾಧ ಕಪೂರ್ ಉದ್ಘಾಟಿಸುವರು. ಸುಭದ್ರಮ್ಮ ಮನ್ಸೂರ್, ಎಂ.ಪಿ. ಪ್ರಕಾಶ್ ಪಾಲ್ಗೊಳ್ಳುವರು. ಗದಗದ ಗ್ರಾಮದೇವಿ ಯುವಕ ಮಂಡಳದಿಂದ ‘ಗೀಗೀ ಪದ’, ಸುಭದ್ರಮ್ಮ ಮನ್ಸೂರ್ ಅವರಿಂದ ‘ರಂಗಗೀತೆ’, ಹಾನಗಲ್ ತಿಳುವಳ್ಳಿಯ ವಿದ್ಯಾನಿಕೇತನ ತಂಡದಿಂದ ‘ಪಂಜರ ಶಾಲೆ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.22ರಂದು ಬೆಳಿಗ್ಗೆ 9.30ಕ್ಕೆ ಮೈಸೂರು ರಂಗಾಯಣದ ಶಶಿಕಲಾ ಅವರಿಂದ ‘ಕಸ್ತೂರ ಬಾ’ ಏಕವ್ಯಕ್ತಿ ಪ್ರದರ್ಶನ. ಬೆಳಿಗ್ಗೆ 10.30ಕ್ಕೆ ‘ಕೆ.ವಿ. ಸುಬ್ಬಣ್ಣ ನೆನಪಿನ ಗ್ರಂಥಾಲಯ’ವನ್ನು ಕೆ.ಕೆ. ಬ್ಯಾನರ್ಜಿ ಉದ್ಘಾಟಿಸುವರು. ‘ರವೀಂದ್ರನಾಥ ಟಾಗೋರರು ಮತ್ತು ಗ್ರಾಮಭಾರತ’ ಕುರಿತ ವಿಚಾರ ಸಂಕಿರಣವನ್ನು ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಉದ್ಘಾಟಿಸುವರು. ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ 11.30ಕ್ಕೆ ನಡೆಯುವ ಗೋಷ್ಠಿಯಲ್ಲಿ ಎಸ್.ಜಿ. ದೇವರಮನಿ, ಡಾ.ರಾಜೇಂದ್ರ ಚೆನ್ನಿ, ಕಡಿದಾಳ್ ಶಾಮಣ್ಣ, ಜ.ಹೊ. ನಾರಾಯಣಸ್ವಾಮಿ, ಡಿ.ಎಸ್. ನಾಗಭೂಷಣ್  ಭಾಗವಹಿಸುವರು. ಸಂಜೆ ಬೀಸು ಕಂಸಾಳೆ, ಗರ್ತಿಕೆರೆ ರಾಘಣ್ಣ ಅವರಿಂದ ಸುಗಮ ಸಂಗೀತ, ಪ್ರಸನ್ನ ರಚನೆ-ನಿರ್ದೇಶನದ ‘ಆಚಾರ್ಯ ಪ್ರಹಸನ’ ನಾಟಕ ಪ್ರದರ್ಶನವಿದೆ.23ರಂದು ಬೆಳಿಗ್ಗೆ 9.30ಕ್ಕೆ ದು. ಸರಸ್ವತಿ ಅವರಿಂದ ಏಕವ್ಯಕ್ತಿ ಪ್ರದರ್ಶನ. ಬೆಳಿಗ್ಗೆ 10.15ಕ್ಕೆ ಚರಕ ವೆಬ್‌ಸೈಟ್‌ನ್ನು ಕೆ.ವಿ. ಅಕ್ಷರ ನೆರವೇರಿಸುವರು. ನಂತರದ ವಿಚಾರ ಸಂಕಿರಣದಲ್ಲಿ ಕಾಗೋಡು ತಿಮ್ಮಪ್ಪ, ರವೀಂದ್ರ ತ್ರಿಪಾಠಿ, ಜಿ.ಬಿ. ಹರೀಶ್, ಬಿ.ಆರ್. ಜಯಂತ್ ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ಎಸ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಸಂಜೆ 6ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಆಗ್ರಹಾರ ಕೃಷ್ಣಮೂರ್ತಿ, ಕುಂ ವೀರಭದ್ರಪ್ಪ ಪಾಲ್ಗೊಳ್ಳುವರು. ಪೊಲೀಸ್ ಮಹಾನಿರ್ದೇಶಕ ಅಜಯ್‌ಕುಮಾರ್ ಸಿಂಗ್ ಕಾಯಕ ಪ್ರಶಸ್ತಿ ವಿತರಿಸುವರು. ಸಂಜೆ 7ಕ್ಕೆ ‘ಭೀಷ್ಮ ವಿಜಯ’ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.