ಬುಧವಾರ, ಮೇ 18, 2022
26 °C

ಇಂದು ಎಚ್‌ಎಎಲ್ - ಬಾಗನ್ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಲ್) ತಂಡದವರು ಐ- ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಭಾನುವಾರ ಕೋಲ್ಕತ್ತದ ಮೋಹನ್ ಬಾಗನ್ ತಂಡದ ಸವಾಲನ್ನು ಎದುರಿಸಲಿದ್ದಾರೆ.ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಎಚ್‌ಎಎಲ್ ತಂಡಕ್ಕೆ ಪ್ರಮುಖ ಆಟಗಾರ ಕ್ಸೇವಿಯರ್ ವಿಜಯ್‌ಕುಮಾರ್ ಅವರ ಸೇವೆ ಲಭಿಸುತ್ತಿಲ್ಲ. ಜೆಸಿಟಿ ವಿರುದ್ಧದ ಕಳೆದ ಪಂದ್ಯದಲ್ಲಿ ಕ್ಸೇವಿಯರ್ ಎರಡು ಹಳದಿ ಕಾರ್ಡ್ ಪಡೆದಿದ್ದರು.ಇದರಿಂದ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿದ್ದಾರೆ.ಎಚ್‌ಎಎಲ್ ತಂಡ ಐ-ಲೀಗ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ 2-1 ರಲ್ಲಿ ಮೋಹನ್ ಬಾಗನ್ ವಿರುದ್ಧ ಅಚ್ಚರಿಯ ಗೆಲುವು ಪಡೆದಿತ್ತು. ಆದ್ದರಿಂದ ಭಾನುವಾರ ಕೂಡ ಇದೇ ರೀತಿಯ ಫಲಿತಾಂಶವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿ ಬೆಂಗಳೂರಿನ ತಂಡ ಇದೆ.ಆದರೆ ಬಾಗನ್ ತಂಡದವರು ಕಳೆದ ಪಂದ್ಯದ ಸೋಲಿಗೆ ಮುಯ್ಯಿ ತೀರಿಸುವ ತವಕದಲ್ಲಿದ್ದಾರೆ. ಕೋಲ್ಕತ್ತದ ತಂಡ ಇದೀಗ ಒಟ್ಟು 20 ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಎಚ್‌ಎಎಲ್ 11ನೇ ಸ್ಥಾನದಲ್ಲಿದೆ.ಬ್ರೆಸಿಲ್‌ನ ಸ್ಟ್ರೈಕರ್ ಜೋಸ್ ಬರೆಟೊ ಅವರ ಅನುಪಸ್ಥಿತಿಯಲ್ಲಿ ಬಾಗನ್ ತಂಡ ಕಣಕ್ಕಿಳಿಯಲಿದೆ. ಗಾಯದ ಕಾರಣ ಬರೆಟೊ ಆಡುತ್ತಿಲ್ಲ. ಅದೇ ರೀತಿ ಆಶಿಮ್ ಬಿಸ್ವಾಸ್ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿದ್ದಾರೆ.ಎಚ್‌ಎಎಲ್ ತಂಡ ಕ್ಸೇವಿಯರ್ ಬದಲು ಎ. ಹಮ್ಜಾ ಅವರನ್ನು ಕಣಕ್ಕಿಳಿಸಲಿದೆ. ನೈಜೀರಿಯದ ಹಮ್ಜಾ ಅವರು ಜೆಸಿಟಿ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ‘ಮಹತ್ವದ ಪಂದ್ಯದಲ್ಲಿ ಕ್ಸೇವಿಯರ್ ಅವರ ಅನುಪಸ್ಥಿತಿ ನಮಗೆ ದೊಡ್ಡ ಹಿನ್ನಡೆ ಉಂಟುಮಾಡಿದೆ’ ಎಂದು ಎಚ್‌ಎಎಲ್ ಕೋಚ್ ಆರ್. ತ್ಯಾಗರಾಜನ್ ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.