ಭಾನುವಾರ, ಮೇ 9, 2021
27 °C

ಇಂದು... ನಾಳೆ... ಇನ್ನಿಲ್ಲ ಹೇಳಿದ ದಿನ ತಪ್ಪಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ನಾಗರಿಕರ ಐದು ಅಗತ್ಯ ಸೇವೆಗಳನ್ನು ವಿಳಂಬ ಮಾಡದೇ ಉತ್ತಮ ಸೇವೆ ನೀಡುವ ದಿಸೆಯಲ್ಲಿ ನಾಗರಿಕ ಸೇವಾ ಖಾತರಿ ಕಾಯ್ದೆ-2011 `ಸಕಾಲ~ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಕುರಿತಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಚಿಕ್ಕಣ್ಣ ಹೇಳಿದರು.ಸೋಮವಾರ ನಗರಸಭೆ ಆವರಣದಲ್ಲಿ ನಡೆದ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯ್ದೆ-2011 ಜಾರಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿರುವ ಈ ಕಾಯ್ದೆಯಡಿ ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ಕಾಲಮಿತಿಯಲ್ಲಿ ಒದಗಿಸಲಾಗುವುದು. ಈ ಮೂಲಕ ಸರ್ಕಾರದ ಹಲವಾರು ಯೋಜನೆಗಳನ್ನು ಜನಸಾಮಾನ್ಯರ ಬಳಿಗೆ ಯಶಸ್ವಿಯಾಗಿ ಮುಟ್ಟಿಸುವುದು ಈ ಕಾಯ್ದೆಯ ಮುಖ್ಯ ಉದ್ದೆೀಶವಾಗಿದೆ ಎಂದರು.ಕಾಯ್ದೆ ಸಮರ್ಪಕ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಈಗಾಗಲೇ ಸಿಬ್ಬಂದಿಗೆ ಈ ಬಗ್ಗೆ ಸೂಚನೆ ಹಾಗೂ ತರಬೇತಿ ನೀಡಲಾಗಿದೆ. ಕಾಯ್ದೆಯ ವಿವರಗಳನ್ನು ಕಚೇರಿ ಮುಂಭಾಗ ಸೂಚನಾ ಫಲಕದಲ್ಲಿ ಅಳವಡಿಸಲಾಗಿದೆ. ನಾಗರಿಕರು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.ನಗರಸಭೆ ಅಧ್ಯಕ್ಷ  ಎಂ.ಜಗದೀಶ್ ರೆಡ್ಡಿ ಮಾತನಾಡಿ, ನಾಗರಿಕರಿಗೆ ವಿನಾಕಾರಣ ವಿಳಂಬವಾಗುತ್ತಿದ್ದ ಕೆಲಸಗಳು ಇನ್ನು ಮುಂದೆ ತ್ವರಿತವಾಗಿ  ನಡೆಯಲಿವೆ. ಇದರಿಂದ ಆಡಳಿತ ಯಂತ್ರ ಚುರುಕುಗೊಳ್ಳಲಿದೆ ಎಂದರು.ನಗರಸಭೆ ಉಪಾಧ್ಯಕ್ಷ ಜಿ.ರಾಮಕೃಷ್ಣ, ನಗರಸಭಾ ಸದಸ್ಯರಾದ ಸೋಮರುದ್ರ ಶರ್ಮಾ, ಟಿ.ಎನ್.ಪ್ರಭುದೇವ್, ವಿಜಯಲಕ್ಷ್ಮೀ, ಮಂಜುಳಾ ಮುಂತಾದವರು ಹಾಜರಿದ್ದರು.ಸಕಾಲ ಯೋಜನೆಗೆ ಚಾಲನೆ

ವಿಜಯಪುರ: `ಸಕಾಲ~ ಯೋಜನೆಯಡಿ 11ಇಲಾಖೆಯ 151 ವಿಷಯಗಳಿಗೆ ಸಂಬಂಧಿಸಿದಂತೆ ಸೇವಾ ಸೌಲಭ್ಯಗಳನ್ನು ಪಡೆಯಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಆರ್. ಮಂಜುನಾಥ್ ಮಾಹಿತಿ ನೀಡಿದರು.ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ ಸೋಮವಾರ ರಾಜ್ಯ ಸರ್ಕಾರವು ಜಾರಿಗೊಳಿಸಿರುವ `ಸಕಾಲ~ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯೋಜನೆಗೆ ಚಾಲನೆ ನೀಡಿದ ಪುರಸಭೆ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ಮಾತನಾಡಿ, `ಸಕಾಲ~ ಯೋಜನೆಯಂತೆ ಜನರು ಬಯಸುವ ಸೇವೆಗಳನ್ನು ನಿಗದಿತ ಸಮಯದಲ್ಲಿ ಒದಗಿಸಬೇಕು. ಅವಧಿ ಮೀರಿದರೆ ಪ್ರತಿ ನಿತ್ಯವೂ 20 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದರು.ಪುರಸಭೆ ಉಪಾಧ್ಯಕ್ಷ ಎಂ.ಎಲ್. ಕೃಷ್ಣಪ್ಪಗೌಡ, ಸದಸ್ಯ ರಾಮು ಭಗವಾನ್, ಮಾಜಿ ಸದಸ್ಯ ಎ.ನಾರಾಯಣ ಸ್ವಾಮಿ, ಆರೋಗ್ಯಾಧಿಕಾರಿ ಮಂಜುಳಾ, ವ್ಯವಸ್ಥಾಪಕಿ ಸರಸ್ವತಿ, ಎಂಜಿನಿಯರ್ ಮಮತಾ, ಪ್ರಥಮ ದರ್ಜೆ ಸಹಾಯಕರಾದ ಬಾಬು, ಭೈರಪ್ಪ, ಕಂದಾಯ ಇಲಾಖೆ ಅಧಿಕಾರಿಗಳು, ಗಣಕಯಂತ್ರ ನಿರ್ವಾಹಕ ಪ್ರಸನ್ನಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.ಪಾರದರ್ಶಕ ಆಡಳಿತ

ದೇವನಹಳ್ಳಿ: ಕೇಂದ್ರ ಸರ್ಕಾರದ ಮಾಹಿತಿ ಹಕ್ಕು ಕಾಯ್ದೆಯ ರೀತಿಯಲ್ಲಿಯೇ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ `ಸಕಾಲ~ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಪಾರದರ್ಶಕ ಆಡಳಿತ ನಿರ್ವಹಣೆಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ತಹಶೀಲ್ದಾರ್ ಎಲ್.ಸಿ.ನಾಗರಾಜ್ ಅಭಿಪ್ರಾಯಪಟ್ಟರು.ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸೋಮವಾರ `ಸಕಾಲ~ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಧುನಿಕ ಮಾಹಿತಿ ತಂತ್ರಜ್ಞಾನದಲ್ಲಿ ರಾಜ್ಯವು  ಮುಂಚೂಣಿಯಲ್ಲಿದ್ದು ಅಧಿಕಾರಿಗಳು ಸಾರ್ವಜನಿಕರ ಕುಂದು ಕೊರತೆಯನ್ನು ನಿಗದಿಪಡಿಸಿದ ವೇಳೆಯಲ್ಲಿ ನೀಡುವಂತಾಗಬೇಕು ಎಂದು ಹೇಳಿದರು.ಜಿ.ಪಂ.ಸದಸ್ಯ ಬಿ.ರಾಜಣ್ಣ ಮಾತನಾಡಿ, ಸರ್ಕಾರ ಪಡಿತರ ಸಮರ್ಪಕ ವಿತರಣೆ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಬೇಕೆಂದು ಆಶಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ವೆಂಕಟಸ್ವಾಮಿ, ಯೋಜನೆ ಅನುಸಾರ ಅಧಿಕಾರಿಗಳು ನಿಗದಿತ ವೇಳೆಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಪೂರೈಸಬೇಕು. ಯಾವುದೇ ಕಾರಣಕ್ಕೂ ದಂಡ ಪಾವತಿಗೆ ಒಳಗಾಗದೆ ಪ್ರಾಮಾಣಿಕವಾಗಿ ಜನಸಾಮಾನ್ಯರಿಗೆ ಸ್ಪಂದಿಸಬೇಕು ಎಂದು ಹೇಳಿದರು.

ತಾ.ಪಂ.ಅಧ್ಯಕ್ಷ ಬಿ.ಕೆ.ಶಿವಪ್ಪ ಅವರು ಮಾತನಾಡಿದರು.ವಿಶೇಷ ತಹಶೀಲ್ದಾರ್ ಕೇಶವಮೂರ್ತಿ, ಸೇವಾದಳ ಅಧ್ಯಕ್ಷ ಲಕ್ಷ್ಮಿ ನಾರಾಯಣ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಆಂಜನಪ್ಪ, ತಾ.ಪಂ.ಉಪಾಧ್ಯಕ್ಷೆ ಕೆ.ಪ್ರಭಾ, ಕಂದಾಯ ಶಿರಸ್ತೇದಾರ್ ಅಜಿತ್ ರಾಯ್, ಚುನಾವಣಾ ಶಿರಸ್ತೇದಾರ್ ರಾಘವೇಂದ್ರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.