ಶುಕ್ರವಾರ, ಮೇ 7, 2021
20 °C

ಇಂದು ನೂತನ ಮೇಯರ್ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಗುರುವಾರ ಹೊಸ ಮೇಯರ್ ಆಯ್ಕೆಯಾಗಲಿದ್ದಾರೆ. ಮೇಯರ್ ಆಯ್ಕೆ ಬೆನ್ನಲ್ಲಿಯೇ ವಿರೋಧ ಪಕ್ಷದ ನಾಯಕನ ಆಯ್ಕೆಯೂ ನಡೆಯಲಿದೆ.ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿ ಹಿಡಿದು ಪಾಲಿಕೆಯ ಹೊರಗೂ ಹಾಗೂ ಒಳಗೂ ಹೋರಾಟ ನಡೆಸುವಂತಹ ಸಮರ್ಥ ವ್ಯಕ್ತಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಅಲಂಕರಿಸುವುದು ಅತ್ಯಂತ ಅಗತ್ಯವಾಗಿದೆ. ಆದರೆ, ಕಳೆದ ವರ್ಷ ಪಾಲಿಕೆಯಲ್ಲಿ ಹಗರಣಗಳ ಮೇಲೆ ಹಗರಣಗಳು ನಡೆದರೂ ವಿರೋಧ ಪಕ್ಷ ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಎಡವಿತು ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.ಕೇವಲ ಪಾಲಿಕೆ ಸಭೆ ಹಾಗೂ ಪತ್ರಿಕಾಗೋಷ್ಠಿಗಳಲ್ಲಿ ಮಾತ್ರ ವಿರೋಧ ಪಕ್ಷದ ನಾಯಕರು ಭ್ರಷ್ಟಾಚಾರ ವಿಷಯಗಳನ್ನು ಪ್ರಸ್ತಾಪಿಸಿದ್ದನ್ನು ಹೊರತುಪಡಿಸಿದರೆ ಬೀದಿಗಿಳಿದು ಹೋರಾಟ ನಡೆಸುವಲ್ಲಿ ವಿಫಲರಾದರು ಎಂಬ ಟೀಕೆಗಳು ಕೂಡ ಕೇಳಿ ಬಂದಿವೆ.ಪಾಲಿಕೆಯ ಮೂರು ವಲಯಗಳ ಕಾಮಗಾರಿಗಳಲ್ಲಿ ನಡೆದ 1,539 ಕೋಟಿ ರೂಪಾಯಿ ಹಗರಣ ವಿರೋಧ ಪಕ್ಷಗಳ ಹೋರಾಟಕ್ಕೆ ಪ್ರಮುಖವಾಗಿ `ಅಸ್ತ್ರ~ವಾಗಿ ಸಿಕ್ಕಿತ್ತು. ಆದರೆ, ವಿರೋಧ ಪಕ್ಷಗಳು ಈ ವಿಷಯವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವ ಪ್ರಯತ್ನವನ್ನೇ ಮಾಡಲಿಲ್ಲ. ಪಾಲಿಕೆಯ ವಿವಿಧ ಇಲಾಖೆಗಳಲ್ಲಿ ಹೆಕ್ಕಿದಷ್ಟೂ ಅವ್ಯವಹಾರ ಪ್ರಕರಣಗಳು ಬಯಲಿಗೆ ಬಂದರೂ ವಿರೋಧ ಪಕ್ಷವು ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿಹಿಡಿಯುವಲ್ಲಿ ಸೋತಿತು.2011-12ನೇ ಸಾಲಿನಲ್ಲಿ ಆಡಳಿತಾರೂಢ ಬಿಜೆಪಿ ತಡವಾಗಿ ಬಜೆಟ್ ಮಂಡಿಸಿತು. ಅಲ್ಲದೆ, ಬಜೆಟ್ ಅನುಷ್ಠಾನಗೊಳಿಸುವಲ್ಲಿಯೂ ಆಡಳಿತ ಪಕ್ಷ ವಿಫಲವಾಯಿತು. ಈ ವಿಚಾರದ ಬಗ್ಗೆಯೂ ತಾತ್ವಿಕ ನೆಲೆಗಟ್ಟಿನಲ್ಲಿ ವಿರೋಧ ಪಕ್ಷ ಹೋರಾಟ ನಡೆಸಲೇ ಇಲ್ಲ ಎಂಬ ಟೀಕೆಗೂ ಕಾಂಗ್ರೆಸ್ ಗುರಿಯಾಗಿದೆ.ಇನ್ನು, ಪಾಲಿಕೆಯಲ್ಲಿ ಯಾವುದೇ ಕಾಮಗಾರಿಗಳಿಗೆ ಅನುಮೋದನೆ ನೀಡುವ ಮುನ್ನ ಸಮಗ್ರ ಚರ್ಚೆ ನಡೆಯಬೇಕು. ಆದರೆ, ವಿರೋಧ ಪಕ್ಷದ ಸದಸ್ಯರ ಗದ್ದಲದ ನಡುವೆಯೂ ಚರ್ಚೆ ಇಲ್ಲದೆ ಯೋಜನೆಗಳಿಗೆ ಆಡಳಿತ ಪಕ್ಷ ಅನುಮೋದನೆ ನೀಡುವ ಪರಂಪರೆಯನ್ನು ಈ ಬಾರಿಯೂ ಮುಂದುವರಿಸಿಕೊಂಡು ಹೋಯಿತು.ಕೆಎಂಸಿ ಕಾಯ್ದೆ ನಿಯಮ 51ರ ಪ್ರಕಾರ, ಈ ರೀತಿ ಚರ್ಚೆಗೆ ಅವಕಾಶ ನೀಡದ ಪ್ರಸ್ತಾವಗಳನ್ನು ಮತ್ತೆ ಕೌನ್ಸಿಲ್ ಸಭೆಗೆ ತಂದು ಚರ್ಚೆಗೆ ತರಲು ಅವಕಾಶವಿದೆ. ಆದರೆ, ಸಭೆ ಮುಂದೂಡಿದ ನಂತರ ವಿರೋಧ ಪಕ್ಷಗಳ ಸದಸ್ಯರು ಕೂಡ ಆಡಳಿತ ಪಕ್ಷದ ಸದಸ್ಯರ ಜತೆ ಹೊರ ನಡೆದದ್ದನ್ನು ಬಿಟ್ಟರೆ ಒಮ್ಮೆಯೂ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಹೋರಾಟ ನಡೆಸಲೇ ಇಲ್ಲ. ಹೀಗಾಗಿ, ತೆರಿಗೆ ರೂಪದಲ್ಲಿ ಪಾವತಿಸುವ ಸಾರ್ವಜನಿಕ ಹಣ ಅನಗತ್ಯವಾದ ಎಷ್ಟೋ ಕಾರ್ಯಕ್ರಮಗಳಿಗೆ ದುಂದು ವೆಚ್ಚವಾದರೂ ವಿರೋಧ ಪಕ್ಷ ತಲೆಕೆಡಿಸಿಕೊಳ್ಳಲಿಲ್ಲ.ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಹೊಸ ವಾರ್ಡ್‌ಗಳಲ್ಲಿ ಈ ವರ್ಷ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿತು. ಅನೇಕ ಬಡಾವಣೆಗಳಲ್ಲಿ ಕೊಳವೆಬಾವಿಗಳು ಬತ್ತಿ ಹೋಗಿ ಜನ ಕುಡಿಯುವ ನೀರಿಗೆ ತೀವ್ರ ಬವಣೆ ಪಟ್ಟರೂ ವಿರೋಧ ಪಕ್ಷದ ಸದಸ್ಯರು ಬೀದಿಗಿಳಿಯಲಿಲ್ಲ.ಇನ್ನು, ಕಂದಾಯ ನಿವೇಶನಗಳಿಗೆ ಖಾತೆ ನೀಡುವ ಪ್ರಕ್ರಿಯೆ ನೆನೆಗುದಿಗೆ, ಕಾಮಗಾರಿಗಳಿಗೆ `ಜಾಬ್ ಕೋಡ್~ ನೀಡುವುದರಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆಯೂ ವಿರೋಧ ಪಕ್ಷಗಳು ಸಂಘಟಿತ ಹೋರಾಟ ನಡೆಸಲಿಲ್ಲ ಎಂದು ಕೂಗು ಕೇಳಿ ಬರುತ್ತಿದೆ.ನೆನೆಗುದಿಗೆ ಬಿದ್ದ ಯೋಜನೆಗಳು: ನಗರದಲ್ಲಿ ಪ್ರಮುಖ ಸಮಸ್ಯೆಗಳಲ್ಲೊಂದಾದ ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸಲು `ಮಾಫಿಯಾ~ ಅಡ್ಡಿಯಾಗುತ್ತಿದೆ ಎಂಬುದನ್ನು ಉಪ ಮೇಯರ್ ಎಸ್. ಹರೀಶ್ ಕೂಡ ಒಪ್ಪಿಕೊಂಡಿದ್ದಾರೆ. ಆದರೆ, ಈ  ವಿಚಾರದಲ್ಲಿ ಆಡಳಿತ ಪಕ್ಷದಷ್ಟೇ ವಿರೋಧ ಪಕ್ಷ ಕೂಡ  ವೈಫಲ್ಯಕಂಡಿತು.ಮಳೆಗಾಲ ಬಂದರೆ, ಬೆಂಗಳೂರಿನ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಕಳೆದ ವರ್ಷವೂ ಈ ಸಮಸ್ಯೆ ತಪ್ಪಿಲ್ಲ. ಗಾಳಿ ಆಂಜನೇಯಸ್ವಾಮಿ ದೇವಸ್ಥಾನದೊಳಕ್ಕೇ ಚರಂಡಿ ನೀರು ನುಗ್ಗಿ ದೇವಸ್ಥಾನ ಮಲಿನಗೊಂಡಿತು. ಈ ವರ್ಷವೂ ಮಳೆ ಬಂದರೆ ತಗ್ಗುಪ್ರದೇಶಗಳು ಜಲಾವೃತಗೊಳ್ಳಲಿವೆ. ಆದರೂ, ಒತ್ತುವರಿ ಜಾಗ ತೆರವುಗೊಳಿಸಿ ಚರಂಡಿಗಳನ್ನು ಸಜ್ಜಾಗಿಡಲು ಪಾಲಿಕೆಗೆ ಇದುವರೆಗೂ ಸಾಧ್ಯವಾಗಿಲ್ಲ. 2011-12ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳಿಗೆ ಇನ್ನೂ ಟೆಂಡರ್ ಪ್ರಕ್ರಿಯೆಯೇ ಶುರುವಾಗಿಲ್ಲ. ಆರ್ಥಿಕ ವರ್ಷ ಕೊನೆಗೊಂಡರೂ ಯಾವುದೇ ಕೆಲಸ ಆರಂಭವಾಗಿಲ್ಲ. ಇಂತಹ ಪ್ರಮುಖ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವಂತಹ ಸಮರ್ಥ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವುದು ಸೂಕ್ತವಾಗಿದೆ ಎಂದು ಪಾಲಿಕೆಯ ಕಾಂಗ್ರೆಸ್ ಸದಸ್ಯರೇ ಹೇಳುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.