ಸೋಮವಾರ, ಜನವರಿ 20, 2020
26 °C

ಇಂದು ಮಂಡೇಲಾ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಿಟೋರಿಯಾ (ಪಿಟಿಐ): ವರ್ಣಭೇದ ನೀತಿ ವಿರುದ್ಧ ಹೋರಾಡಿದ್ದ ಆಫ್ರಿಕಾದ ಗಾಂಧಿ ನೆಲ್ಸನ್‌ ಮಂಡೇಲಾ ಅವರ ಅಂತ್ಯಕ್ರಿಯೆ ಅವರ ಹುಟ್ಟೂರು ಕುನುದಲ್ಲಿ ಭಾನುವಾರ ನಡೆಯಲಿದೆ.ಹತ್ತು ದಿನಗಳ ರಾಷ್ಟ್ರೀಯ ಶೋಕ ಮತ್ತು ಜಾಗತಿಕ ಮುಖಂಡರ ಶ್ರದ್ಧಾಂಜಲಿ ಬಳಿಕ, ಪ್ರಿಟೋರಿಯಾದಲ್ಲಿನ ಫುಟ್ಬಾಲ್‌ ಕ್ರೀಡಾಂಗಣದಿಂದ ಅವರ ಪಾರ್ಥಿವ ಶರೀರವನ್ನು ಶನಿವಾರ ವಾಯುಪಡೆ ವಿಶೇಷ ವಿಮಾನದಲ್ಲಿ ಸಮಾಧಿ ಸ್ಥಳಕ್ಕೆ ಕೊಂಡೊಯ್ಯಲಾಯಿತು. 1994ರಲ್ಲಿ ಇದೇ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷರಾಗಿ ಮಂಡೇಲಾ ಅಧಿಕಾರ ಸ್ವೀಕರಿಸಿದ್ದರು.ಮಂಡೇಲಾ ಅವರ ಶರೀರವನ್ನು ಕುನುವಿಗೆ ಕೊಂಡೊಯ್ಯುವುದಕ್ಕೂ ಮುನ್ನ, ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌ (ಎಎನ್‌ಸಿ) ಮುಖಂಡರು ಮತ್ತು ಕಾರ್ಯಕರ್ತರು ತನ್ನ ನಾಯಕನಿಗೆ ಗೌರವ ಸಲ್ಲಿಸಿ ಅಂತಿಮ ವಿದಾಯ ಹೇಳಿದರು.ಡಿಸೆಂಬರ್‌ 5ರಂದು ಮಂಡೇಲಾ ನಿಧನರಾಗಿದ್ದರು. ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಹತ್ತು ದಿನಗಳ ರಾಷ್ಟ್ರೀಯ ಶೋಕ ಘೋಷಿಸಲಾಗಿತ್ತು. ಈ ಸಂದರ್ಭದಲ್ಲಿ ಭಾರತದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಸೇರಿದಂತೆ ವಿಶ್ವದ ಇತರ ನೇತಾರರು, ಗಣ್ಯರು ಸೇರಿದಂತೆ ಲಕ್ಷಾಂತರ ಜನರು ಪ್ರಿಟೋರಿಯಾಕ್ಕೆ ಭೇಟಿ ನೀಡಿ ಮಂಡೇಲಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)