ಶನಿವಾರ, ಜೂಲೈ 11, 2020
22 °C

ಇಂದು ವಿಶ್ವ ಜಲ ದಿನ; ಜಲ ಮರುಪೂರಣಕ್ಕೆ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು ವಿಶ್ವ ಜಲ ದಿನ; ಜಲ ಮರುಪೂರಣಕ್ಕೆ ಒತ್ತು

ಗುಲ್ಬರ್ಗ:   ಬೇಸಿಗೆ ಶುರುವಾಗುತ್ತಿದ್ದಂತೆ ಕೊಳವೆಬಾವಿಗಳು ಒಣಗಲು ಶುರು. ನೀರಿಗೆ ಹಾಹಾಕಾರ. ನಗರದ ಅನೇಕ ಬಡಾವಣೆಗಳಲ್ಲಿ ನೀರಿಗಾಗಿ ಹೋರಾಟಗಳು ನಡೆಯುತ್ತವೆ. ಇನ್ನೊಂದಿಷ್ಟು ಕೊಳವೆಬಾವಿ ಕೊರೆಸುವುದು ಅಥವಾ ಟ್ಯಾಂಕರ್ ಮೂಲಕ ನೀರು ಪೂರೈಸುವ ಕೆಲಸವನ್ನು ಆಡಳಿತಯಂತ್ರ ಕೈಗೆತ್ತಿಕೊಳ್ಳುತ್ತದೆ. ನೀರಿನ ಕೊರತೆ ಕಂಡುಬಂದಾಗ ಮಾತ್ರ ಎಚ್ಚೆತ್ತುಕೊಳ್ಳುವ ವಿಧಾನಕ್ಕಿಂತ ಶಾಶ್ವತ ಪರಿಹಾರ ಒಳ್ಳೆಯದಲ್ಲವೇ?

ಇಂಥದೊಂದು ಪ್ರಯತ್ನಕ್ಕೆ ನಗರದ ಕೆಲವು ಪ್ರಜ್ಞಾವಂತರು ಮುಂದಾಗಿದ್ದು, ಮಳೆ ನೀರು ಮರುಪೂರಣ ಮಾಡಿ ಪ್ರಯೋಜನ ಪಡೆದಿದ್ದಾರೆ. “ನೀರಿನ ಸಮಸ್ಯೆಯನ್ನು ತೀವ್ರವಾಗಿ ಅನುಭವಿಸಿದ್ದೆ. ಆದರೆ ಮಳೆನೀರು ಮರುಪೂರಣ ವಿಧಾನ ಅನುಸರಿಸಿದ ಬಳಿಕ ಈಗ ನೀರ ನೆಮ್ಮದಿ ಸಿಕ್ಕಿದೆ” ಎನ್ನುತ್ತಾರೆ, ಗುರುನಾಥ ಪೂಜಾರಿ.

ಕೆನರಾ ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿಯಾಗಿರುವ ಗುರುನಾಥ ಅವರ ಆಸಕ್ತಿ ಈ ವಿಧಾನದ ಕಡೆಗೆ ಹರಿದಿದ್ದೇ ಆಕಸ್ಮಿಕ. ಗುಲ್ಬರ್ಗದ ಬಿದ್ದಾಪೂರ ಕಾಲೊನಿಯ ಜಾಧವ ಬಡಾವಣೆಯಲ್ಲಿ 2004ರಲ್ಲಿ ಮನೆ ಕಟ್ಟಿಸಿದ ಅವರು, ನೀರಿಗೆ ಕೊಳವೆಬಾವಿಯೊಂದನ್ನು ಕೊರೆಸಿದ್ದರು. ಆರಂಭದಲ್ಲಿ ಯಥೇಚ್ಛ ನೀರು ಸಿಕ್ಕಿತ್ತು. ಆದರೆ ಮುಂದಿನ ಬೇಸಿಗೆಯಲ್ಲಿ ಕೊಳವೆಬಾವಿ ದಿಢಿ ೀರ್ ಒಣಗಿ ಹೋಯಿತು. ನೀರಿಗೆ ತಾಪತ್ರಯ ಶುರು.

ಪರ್ಯಾಯ ಮಾರ್ಗಕ್ಕೆ ಗುರುನಾಥ ಹುಡುಕಾಟ ನಡೆಸಿದರು. ಮಳೆನೀರು ಇಂಗಿಸುವುದರಿಂದ ಕೊಳವೆಬಾವಿ ಮತ್ತೆ ‘ಜೀವ’ ಪಡೆದ ಹಲವು ಪ್ರಕರಣಗಳ ಕುರಿತು ಜಲತಜ್ಞ ‘ಶ್ರೀ’ಪಡ್ರೆ ಪತ್ರಿಕೆಗಳಲ್ಲಿ ಬರೆದಿದ್ದ ಲೇಖನಗಳನ್ನು ಓದಿದ ಅವರಿಗೆ ಚಿಂತನೆ ಮೂಡಿತು. ಆದರೆ ತಮ್ಮ ಮನೆಯ ಕೊಳವೆಬಾವಿಗೆ ಮಳೆ ನೀರು ಮರುಪೂರಣ ಮಾಡಲು ಸಾಧ್ಯವಿಲ್ಲ ಎಂದು ಎಂಜಿನಿಯರ್‌ಗಳು ಹೇಳಿದಾಗ ಮತ್ತೆ ಚಿಂತೆ. ಈ ಸಮಯದಲ್ಲಿ ಸಹೋದ್ಯೋಗಿ ರಘು ಜಾಲಿಹಾಳ ತಮ್ಮ ಮನೆಯ ಕೊಳವೆಬಾವಿಗೆ ನೀರಿಂಗಿಸುವ ವ್ಯವಸ್ಥೆ ಮಾಡಿದರು (ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಲೇಖನ ಪ್ರಕಟವಾಗಿದೆ). ಅವರಿಂದಲೇ ಪ್ರೇರಣೆ ಪಡೆದ ಗುರುನಾಥ, ತಮ್ಮ ಮನೆಯ ಕೊಳವೆಬಾವಿಗೂ ಈ ವಿಧಾನ ಅಳವಡಿಸಲು ಮುಂದಾದರು.

ಅಲ್ಪ ವೆಚ್ಚ: ಮಳೆ ನೀರು ಇಂಗಿಸುವುದು ಎಂದ ಕೂಡಲೇ ಕ್ಲಿಷ್ಟ ಕೆಲಸವೆಂದು ಭಾವಿಸುತ್ತಾರೆ. ಆದರೆ ಅದೆಷ್ಟು ಸುಲಭ ಎಂಬುದನ್ನು ಗುರುನಾಥ ವಿವರಿಸುತ್ತಾರೆ:

“ಮನೆಯ ಚಾವಣಿಯ ಮೇಲೆ ಸುರಿಯುವ ಮಳೆನೀರು ಹೊರಗೆ ಹೋಗಲು ಹಲವು ಕಡೆ ಪೈಪ್ ಅಳವಡಿಸಿದ್ದೆವು. ಉದ್ದನೆಯ ಇನ್ನೊಂದು ಕೊಳವೆಯನ್ನು ಮೇಲ್ಭಾಗದಲ್ಲಿ ಅಳವಡಿಸಿ, ಹೊರಬೀಳುವ ಎಲ್ಲ ನೀರನ್ನು ಒಂದೇ ಕಡೆ ಬರುವಂತೆ ಮಾಡಿದೆವು. ಹೀಗೆ ಬರುವ ನೀರು ಬಟ್ಟೆಯಲ್ಲಿ ಶೋಧಗೊಂಡು ಪ್ಲಾಸ್ಟಿಕ್ ಡ್ರಮ್‌ನಲ್ಲಿ ಸಂಗ್ರಹವಾಗುತ್ತದೆ. ಡ್ರಮ್‌ನ ತಳಭಾಗದಲ್ಲಿ ಜೋಡಿಸಿರುವ ಪೈಪ್‌ನಿಂದ ಕೊಳವೆಬಾವಿಗೆ ಹೋಗಿ ಬೀಳುತ್ತದೆ. ಯಾವುದೇ ದೊಡ್ಡ ಯಂತ್ರ ಇಲ್ಲ; ಹೆಚ್ಚು ಖರ್ಚಿಲ್ಲ. ಈ ಸರಳ ವಿಧಾನ ನಮ್ಮ ನೀರಿನ ಸಮಸ್ಯೆಯನ್ನೇ ಪರಿಹರಿಸಿದೆ”.

“ಡ್ರಮ್, ಪೈಪ್, ಕೂಲಿಗಾರರ ವೆಚ್ಚ ಸೇರಿ ಆದ ಖರ್ಚು ಎರಡು ಸಾವಿರಕ್ಕೂ ಕಡಿಮೆ. ಆದರೆ ಇದರಿಂದ ನನಗೆ ಸಿಕ್ಕಿದ್ದು ನೀರ ನೆಮ್ಮದಿ. ಪಕ್ಕದಲ್ಲೇ ಇರುವ ಸಹೋದ್ಯೋಗಿ ರಾಜು ರಾಂಪುರೆ ಎಂಬುವವರ ಮನೆಯ ಆವರಣದಲ್ಲಿ ಕೊರೆದಿದ್ದ ಕೊಳವೆಬಾವಿ ಒಣಗಿತ್ತು. ನಾನು ನೀರಿಂಗಿಸಲು ಶುರು ಮಾಡಿದ ಮೇಲೆ ಅವರ ಕೊಳವೆಬಾವಿಯಲ್ಲಿ ಸಹ ನೀರು ಮತ್ತೆ ಬಂದಿದೆ. ಇನ್ನೊಂದು ಲಾಭವೆಂದರೆ, ಉಪ್ಪು ರುಚಿ ಹೊಂದಿದ್ದ ನಮ್ಮ ಕೊಳವೆಬಾವಿಯು ಈಗ ಸಿಹಿ ನೀರು ಕೊಡುತ್ತಿದೆ” ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಗುರುನಾಥ.

(ಮಾಹಿತಿಗೆ- 9901361410)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.