ಭಾನುವಾರ, ಏಪ್ರಿಲ್ 11, 2021
21 °C

ಇಂದು ಹೈಕೋರ್ಟ್ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನುಷ್ಠಾನ ವಿಚಾರದಲ್ಲಿ ಇರುವ ಗೊಂದಲಗಳನ್ನು ನಿವಾರಿಸಬೇಕು ಎಂಬ ಮುಖ್ಯ ಬೇಡಿಕೆ ಇಟ್ಟು ಶಾಲೆಗಳ ಬಂದ್ ನಡೆಸಿರುವ ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಸಂಘ (ಕುಸ್ಮಾ) ಭವಿಷ್ಯ ಈಗ ಹೈಕೋರ್ಟ್ ಕೈಯಲ್ಲಿದೆ.`ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘಿಸಿರುವ `ಕುಸ್ಮಾ~, ಶಾಲೆಗಳಿಗೆ ರಜೆ ಘೋಷಿಸಿದೆ. ಅದರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಬೇಕು~ ಎಂದು ಕೋರಿ ವಕೀಲ ಎಸ್.ವಾಸುದೇವ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯನ್ನು ಬುಧವಾರಕ್ಕೆ ಕೋರ್ಟ್ ಮುಂದೂಡಿದೆ.ಕಾನೂನು ಮೀರಿರುವ `ಕುಸ್ಮಾ~ದ ಅಡಿ ಬರುವ ಎಲ್ಲ ಶಾಲೆಗಳ ಮಾನ್ಯತೆ ರದ್ದು ಮಾಡಬೇಕು ಹಾಗೂ ಪರಿಶಿಷ್ಟರಿಗೆ ಮತ್ತು ಹಿಂದುಳಿದ ವರ್ಗದವರಿಗೆ ನಿಯಮಾನುಸಾರ ಪ್ರವೇಶ ನೀಡದ ಇದರ ಅಡಿಯ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಬೇಕು ಎಂದೂ ವಾಸುದೇವ ಅವರು ಕೋರಿದ್ದಾರೆ.ಅರ್ಜಿದಾರರ ಆರೋಪವೇನು?: `ಎಲ್ಲ ಅನುದಾನರಹಿತ ಖಾಸಗಿ ಶಾಲೆಗಳು 6ರಿಂದ 14 ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎಂದು `ಅನುದಾನರಹಿತ ಖಾಸಗಿ ಶಾಲೆಗಳು ವರ್ಸಸ್ ರಾಜಸ್ತಾನ ಸರ್ಕಾರ~ ಪ್ರಕರಣದಲ್ಲಿ ಏಪ್ರಿಲ್ 14ರಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಇದು ಎಲ್ಲ ರಾಜ್ಯಗಳಿಗೂ ಅನ್ವಯ ಆಗಲಿದೆ. ಆದರೆ ಇದರ ಹೊರತಾಗಿಯೂ `ಕುಸ್ಮಾ~ ಕರೆ ಅನ್ವಯ ಹಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದು ಕಾನೂನುಬಾಹಿರ~ ಎನ್ನುವುದು ಅರ್ಜಿದಾರರ ಆರೋಪ.ಸಂವಿಧಾನದ 21 (ಎ) ವಿಧಿ ಅನ್ವಯ, ಉಚಿತ ಶಿಕ್ಷಣದ ಹಕ್ಕು ಎಲ್ಲರಿಗೂ ಕಡ್ಡಾಯ. ಇದು ಅನುದಾನರಹಿತ ಶಾಲೆಗಳಿಗೂ ಅನ್ವಯ ಆಗುತ್ತದೆ. ಆದರೆ ಇದನ್ನು ಕೂಡ ಸಂಘ ಉಲ್ಲಂಘನೆ ಮಾಡಿದೆ. ಆದುದರಿಂದ ಈಗ ನಡೆಯುತ್ತಿರುವ ಶಾಲೆಗಳ ಬಂದ್  ಕಾನೂನುಬಾಹಿರ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಆದೇಶಿಸಬೇಕು ಎಂದು ಕೋರಲಾಗಿದೆ. ಈ ರೀತಿ ರಜೆ ಘೋಷಣೆ ಮಾಡಿರುವುದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದರೆ ಇದನ್ನು ಶಾಲೆಗಳ ಆಡಳಿತ ಮಂಡಳಿಗಳು ಕಡೆಗಣಿಸುತ್ತಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.