ಭಾನುವಾರ, ಜನವರಿ 19, 2020
22 °C

ಇಚ್ಛಾಶಕ್ತಿಯ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅರವಿಂದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದಕ್ಕೆ ಸಿದ್ಧರಾಗಿ­ದ್ದಾರೆ. ಎಪ್ಪತ್ತು ಮಂದಿ ಸದಸ್ಯ ಬಲವುಳ್ಳ ದೆಹಲಿ ವಿಧಾನಸಭೆಯಲ್ಲಿ ಎಎಪಿ ಗೆಲ್ಲಲು ಸಾಧ್ಯವಾಗಿದ್ದು 28 ಕ್ಷೇತ್ರಗಳನ್ನು ಮಾತ್ರ. ಉಳಿದಂತೆ ಕಾಂಗ್ರೆಸ್ ಎಂಟು ಕ್ಷೇತ್ರಗಳಲ್ಲಿ, ಬಿಜೆಪಿ 31 ಕ್ಷೇತ್ರಗಳಲ್ಲಿ ಮತ್ತು ಇತರರು ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು.ಸರ್ಕಾರ ರಚನೆಗೆ ಬೇಕಿರುವ ಬಹುಮತ ಯಾವ ಪಕ್ಷಕ್ಕೂ ಇರಲಿಲ್ಲ. ಈಗ ಎಎಪಿ, ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸುತ್ತಿದೆ. ಮುಖ್ಯವಾಹಿನಿ ಪಕ್ಷಗಳ ರಾಜಕಾರಣದ ಮಾದರಿಯನ್ನೇ ಪ್ರಶ್ನೆಗೊಡ್ಡಿದ್ದ ಎಎಪಿ ಈಗ ತಾನು ವಿರೋಧಿಸುತ್ತಿದ್ದ ಕಾಂಗ್ರೆಸ್‌ನ ಬೆಂಬಲವನ್ನೇ ಪಡೆದುಕೊಂಡು ಸರ್ಕಾರ ರಚಿಸುತ್ತಿದೆ. ಮೈತ್ರಿಕೂಟ ಸರ್ಕಾರಗಳ ಕಾಲಘಟ್ಟದಲ್ಲಿ ಈ ನಿರ್ಧಾರವನ್ನು ಋಣಾತ್ಮಕ­ವಾಗಿ ನೋಡುವ ಅಗತ್ಯವೇನೂ ಇಲ್ಲ.

ಎಎಪಿ ಎದುರು ಇರುವ ನಿಜವಾದ ಸವಾಲು ಅಧಿಕಾರದ ಜೊತೆಗಿನ ಸಂಬಂಧ ಮತ್ತು ಮೈತ್ರಿಕೂಟದ ನಿರ್ವ­ಹಣೆ. ಸರ್ಕಾರ ರಚನೆಗೆ ಸಿದ್ಧವಾದುದರ ಹಿಂದೆಯೇ ಮಂತ್ರಿ ಸ್ಥಾನ ದೊರೆ­ಯುತ್ತಿಲ್ಲ ಎಂಬ ಕಾರಣಕ್ಕೆ ಒಬ್ಬ ಶಾಸಕ ಮುನಿಸಿಕೊಂಡಿರುವುದು ಎಎಪಿ ಮುಂದಿನ ದಿನಗಳಲ್ಲಿ ಎದುರಿಸಬಹುದಾದ ಸವಾಲುಗಳ ಮುನ್ಸೂಚನೆ­ಯಂತಿದೆ. ಎಎಪಿಯ ಮೂಲಕ ಆಯ್ಕೆಯಾಗಿರುವವರು ಅಧಿಕಾರ ಹಿಡಿಯ­ಬಹುದು ಎಂಬ ಕಾರಣಕ್ಕಾಗಿ ಮಾತ್ರ ಆ ಪಕ್ಷದ ಆದರ್ಶಗಳನ್ನು ಪ್ರತಿಪಾದಿ­ಸುತ್ತಿದ್ದರೆ ಮುಂದಿನ ದಿನಗಳಲ್ಲಿ ಅದು ಬಯಲಾಗುತ್ತದೆ. ಭಿನ್ನ ರಾಜಕಾರಣ­ದ ಮತ್ತೊಂದು ಪ್ರಯೋಗ ಇತಿಹಾಸ ಸೇರುತ್ತದೆ.

ಒಂದು ವೇಳೆ ಅಧಿ­ಕಾರದ ಹಂಗು ತೊರೆದು ಆದರ್ಶವನ್ನು ಉಳಿಸಿಕೊಳ್ಳಲು ಹೊರಟು ಎಎಪಿ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸಿದರೂ ಇತಿಹಾಸ ಸೃಷ್ಟಿಯಾಗು­ತ್ತದೆ. ಕಾಂಗ್ರೆಸ್ ಅದಕ್ಕೆ ಅವಕಾಶ ನೀಡದೇ ಬೆಂಬಲ ಹಿಂತೆಗೆದುಕೊಂಡರೂ ಎಎಪಿ ನೈತಿಕವಾಗಿ ಯಾವ ನಷ್ಟವನ್ನೂ ಅನುಭವಿಸುವುದಿಲ್ಲ. ಎಎಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ನೀರು ಮತ್ತು ವಿದ್ಯುತ್‌ನ ಭರ­ವಸೆ­ಯನ್ನು ಈಡೇರಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ.

ಒಂದು ವೇಳೆ ಈ ಭರವಸೆಗಳನ್ನು ಯಾವ ಮಟ್ಟದಲ್ಲಿ ಈಡೇರಿಸಲು ಸಾಧ್ಯ ಅಥವಾ ಸಾಧ್ಯವಿಲ್ಲ ಎಂಬುದರ ಕುರಿತಂತೆ ಪಕ್ಷ ಪಾರದರ್ಶಕವಾಗಿ ನಡೆದುಕೊಂಡರೆ ಜನರು ತೃಪ್ತರಾಗುತ್ತಾರೆ. ಕೆಂಪು ದೀಪದ ವಾಹನಗಳು, ಡೌಲಿನ ಭದ್ರತಾ ವ್ಯವಸ್ಥೆಯನ್ನು ನಿರಾಕರಿಸಿರುವುದು ಮತ್ತು ಸಚಿವರಿಗೆ ಐಷಾರಾಮಿ ಬಂಗಲೆಗಳು ಬೇಡ ಎಂದಿರುವುದು ಎಲ್ಲಾ ರಾಜಕೀಯ ಪಕ್ಷಗಳೂ ಸಹಜವಾಗಿಯೇ ತಳೆಯಬೇಕಾಗಿದ್ದ ನಿಲುವು. ಇಲ್ಲಿಯ­ತನಕ ಆಡಳಿತದ ಚುಕ್ಕಾಣಿ ಹಿಡಿದವರೆಲ್ಲರೂ ಹಿಂದಿನ ಆಳರಸ­ರಂತೆಯೇ ವರ್ತಿಸುತ್ತಿದ್ದುದರಿಂದ ಎಎಪಿಯ ನಿಲುವು ಹೊಸತೆಂಬಂತೆ ಕಾಣಿಸುತ್ತಿದೆ.

ಈ ನಿಲುವಿಗೆ ಅಂಟಿಕೊಂಡಿರುವ ಹೊಸತನದ ಪ್ರಭೆಯನ್ನು ಕಳಚಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತಾರೂಢ ರಾಜಕಾರಣಿ ಹೀಗಿರುವುದೇ ಸಹಜ ಎಂಬುದನ್ನು ಸಾಬೀತು ಮಾಡಬೇಕಾಗಿರುವ ಮಹತ್ತರ ಹೊಣೆಯೂ ಎಎಪಿಯ ಮೇಲಿದೆ. ಇದು ಸಾಧ್ಯವಾಗುವುದಕ್ಕೆ ಇರುವುದು ಒಂದೇ ದಾರಿ. ಆದರ್ಶ ಮತ್ತು ಅಧಿಕಾರಗಳ ನಡುವಣ ಆಯ್ಕೆ ಎದುರಾದಾಗ ಆದರ್ಶವನ್ನು ಆರಿಸಿಕೊಳ್ಳುವುದು ಮತ್ತು ಅದಕ್ಕೆ ಬೇಕಿರುವ ಇಚ್ಛಾಶಕ್ತಿಯನ್ನು  ಕಳೆದುಕೊಳ್ಳದೇ ಇರುವುದು.

ಪ್ರತಿಕ್ರಿಯಿಸಿ (+)