ಶುಕ್ರವಾರ, ಮೇ 14, 2021
32 °C

ಇಟಲಿ ಪ್ರಜೆ ಬಿಡುಗಡೆ ಅನಿಶ್ಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ಮಾವೊವಾದಿಗಳು ಒಡಿಶಾ ಸರ್ಕಾರಕ್ಕೆ ಹೊಸ ಸಂದೇಶ ಕಳುಹಿಸುವುದರೊಂದಿಗೆ ಒತ್ತೆಯಾಳಾಗಿರುವ ಇಟಲಿ ಪ್ರಜೆ ಪಾಲೊ ಬೊಸಸ್ಕೊ ಬಿಡುಗಡೆ ಅನಿಶ್ಚಿತವಾಗಿದೆ.ಆತನ ಬದಲಾಗಿ ಎಷ್ಟು ಜನರನ್ನು ಬಿಡಲಾಗುವುದು ಹಾಗೂ ತಮ್ಮ 13 ಬೇಡಿಕೆಗಳಲ್ಲಿ ಎಷ್ಟನ್ನು ಈಡೇರಿಸಲಾಗುವುದು ಎಂದು ಮಾವೊವಾದಿಗಳು ಸರ್ಕಾರವನ್ನು ಪ್ರಶ್ನಿಸಿದ್ದಾರೆ.ಮಾವೊವಾದಿ ನಾಯಕ ಸವ್ಯಸಾಚಿ ಪಂಡಾ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಧ್ವನಿಮುದ್ರಿತ ಸಂದೇಶದಲ್ಲಿ, ನಾವು ಏಳು ಜನರನ್ನು ಬಿಡುಗಡೆ ಮಾಡುವಂತೆ ಕೇಳಿದ್ದೆವು. ಆದರೆ, ಸರ್ಕಾರ ಆರು ಜನರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿತ್ತು. ಆದರೆ, ನಿನ್ನೆ ಐದು ಜನರನ್ನು ಬಿಡುಗಡೆ ಮಾಡುವುದಾಗಿ ಹೇಳುತ್ತಿದೆ. ಇದರಿಂದ ಈಗ ಅನುಮಾನಗಳು ಎದ್ದಿವೆ. ಎಷ್ಟು ಜನ ಕೈದಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಅವರ ಹೆಸರಿನ ಜತೆ ಪ್ರಕಟಿಸಬೇಕು~ ಎಂದು ಹೇಳಿದ್ದಾರೆ.ಜನ ಸಂಘಟನೆಗಳ ಮೇಲೆ ಹೇರಿರುವ ನಿಷೇಧವನ್ನು ಸಹ ಅವರು ಪ್ರಶ್ನಿಸಿದ್ದಾರೆ. ಪಂಡಾ ಸಂದೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭುವನೇಶ್ವರದಲ್ಲಿ ಭಾನುವಾರ ತುರ್ತು ಸಭೆ ನಡೆಸಿದರು.

`ಸ್ವಲ್ಪ ಗೊಂದಲವಾದಂತೆ ಕಾಣುತ್ತದೆ. ಸರ್ಕಾರದ ಸಂಧಾನಕಾರರು ಹಾಗೂ ಮಾವೊವಾದಿಗಳು ನೇಮಿಸಿದ್ದ ಸಂಧಾನಕಾರರು ಶನಿವಾರ ಸ್ಪಷ್ಟ ಒಪ್ಪಂದಕ್ಕೆ ಬಂದಿದ್ದರು. ಅವರು ಶೀಘ್ರ ಗೊಂದಲ ಬಗೆಹರಿಸುತ್ತಾರೆ~ ಎಂದು ಸಭೆಯ ಬಳಿಕ ಪಟ್ನಾಯಕ್ ವರದಿಗಾರರ ಬಳಿ ಆಶಯ ವ್ಯಕ್ತಪಡಿಸಿದರು.ಇಟಲಿ ರಾಯಭಾರಿ ಗೈಕೊಮೊ ತಮಗೆ ಕರೆ ಮಾಡಿದ್ದು, ಬೊಸಸ್ಕೊ ಕುರಿತಾಗಿ ಆತಂಕ ವ್ಯಕ್ತಪಡಿಸಿದರು ಎಂದೂ ನವೀನ್ ತಿಳಿಸಿದರು.ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಒತ್ತೆಯಾಳಾಗಿಟ್ಟುಕೊಂಡಿರುವ ಮತ್ತೊಂದು ಮಾವೊವಾದಿ ಗುಂಪು ಇನ್ನೂ ಐದು ಜನರನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಮುಂದಿಟ್ಟಿರುವ ಬಗ್ಗೆ ಉತ್ತರಿಸಿದ ಅವರು, ಸರ್ಕಾರ ಈ ವಿಚಾರದಲ್ಲಿ ಕಾನೂನಿನ ತೊಡಕು ಪರಿಶೀಲಿಸುತ್ತಿದೆ ಎಂದು ಹೇಳಿದರು.ಶಾಸಕರನ್ನು ಅಪಹರಿಸಿರುವ ಗುಂಪು ತನ್ನ ಬೇಡಿಕೆಗಳ ಈಡೇರಿಕೆಗೆ ವಿಧಿಸಿದ್ದ ಕಾಲಮಿತಿಯನ್ನು ಏಪ್ರಿಲ್ 10ರವರೆಗೆ ವಿಸ್ತರಿಸಿದೆ. ಮಾನವೀಯ ಕಾರಣಗಳಿಗಾಗಿ ಸರ್ಕಾರ ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ಎರಡೂ ಮಾವೊವಾದಿ ಗುಂಪುಗಳು ಅದಕ್ಕೆ ಪ್ರತಿಸ್ಪಂದಿಸಿ ಶಾಸಕ ಹಿಕಾಕ ಹಾಗೂ ಬೊಸಸ್ಕೊ ಅವರನ್ನು ಬಿಡುಗಡೆ ಮಾಡಬೇಕು ಎಂದು ಪಟ್ನಾಯಕ್ ಆಗ್ರಹಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.